ಮಲೆನಾಡಿನ ಚಿತ್ರಗಳು : ಮನೆಯ ಶಾಲೆಯ ಐಗಳ ಮಾಲೆ

ಮನೆಯ ಶಾಲೆಯ ಐಗಳ ಮಾಲೆ
ನಾವು ತೀರ್ಥಹಳ್ಳಿಯ “ಸರ್ಕಾರೀ ಇಸ್ಕೂಲಿ”ಗೆ ಸೇರುವುದಕ್ಕಿಂತ ಮುಂಚೆ ಮನೆಮಹಡಿ ಕಾಲೇಜಿನಲ್ಲಿಯೆ ಪಾಂಡಿತ್ಯ ಸಂಪಾದನೆ ಮಾಡುತ್ತಿದ್ದುದು. ನಾವು ಅಂದರೆ ಯಾರು? ಸುಬ್ಬ, ಕಾಡು, ಓಬು, ತಿಮ್ಮು, ನಾನು. ಇವು ಮನೆಯ ಮುದ್ದಿನ ಹೆಸರುಗಳು. ಇವೇ ಸಂಪೂರ್ಣ ವಿಕಾಸ ಹೊಂದಿದರೆ, ಅಂದರೆ ವಸಂತ ಋತು ಹಿಡಿದುಕೊಂಡರೆ, ಸುಬ್ಬಯ್ಯ, ಕಾಡಣ್ಣ, ಓಬಯ್ಯ, ತಿಮ್ಮಯ್ಯ ಎಂದಾಗುವುವು. ‘ನಾನು’ ಮಾತ್ರ ‘ನಾನಯ್ಯ’ವಾಗುವುದಿಲ್ಲ. ಆದರೆ ಈ ಅರಳಿದ ದೊಡ್ಡ ಹೆಸರುಗಳು ಸ್ಕೂಲು ರಿಜಿಸ್ಟರುಗಳಿಗೂ ವಿವಾಹ ಪತ್ರಿಕೆಗಳಿಗೂ ಜೈಲುವಾರಂಟುಗಳಿಗೂ ಯೋಗ್ಯವಾದುವೆ ಹೊರತು ಬಡಪ್ರಬಂಧಗಳಿಗೆ ಯೋಗ್ಯವಾದುವಲ್ಲ ಎಂದು ನನ್ನ (ಜೀವಮಾನದಲ್ಲಿ ನನಗಿರುವ ಒಂದೇ!) ಮಹಾಭಿಪ್ರಾಯ.

ನಮ್ಮ ಮೊದಲನೆಯ ಐಗಳ ನಾಮಧೇನು ನನಗೆ ಮರೆತು ಹೋಗಿದೆ. ಮನಸ್ಸಿನ ದಿಗಂತದಲ್ಲಿ ಸ್ಮೃತಿ ಎಷ್ಟು ಅಲೆದಲೆದು ಅರಸಿದರೂ ಅವರ ಹೆಸರೇ ಅದಕ್ಕೆ ಸಿಕ್ಕುವುದಿಲ್ಲ. ಅಷ್ಟು ಪ್ರಾಮುಖ್ಯವಾದ ಹೆಸರು! ಅಂದರೆ ಇಷ್ಟು ಮಾತ್ರ ಚೆನ್ನಾಗಿ ಜ್ಞಾಪಕವಿದೆ. ಅವರು ಪಾತಾಳಲೋಕದವರು; ಅಂದರೆ ಕನ್ನಡಜಿಲ್ಲೆಯಿಂದ ಬಂದವರು ಎಂದರ್ಥ. ನಮ್ಮ ಕಡೆ ಕನ್ನಡಜಿಲ್ಲೆಯನ್ನು ಪಾತಾಳಲೋಕವೆಂದೂ, ಅಲ್ಲಿಂದ ಘಟ್ಟಹತ್ತಿ ಬರುವವರನ್ನೆಲ್ಲಾ ಪಾತಾಳಲೋಕದವರೆಂದೂ ಕರೆಯುವ ವಾಡಿಕೆ. ಈ ಹೆಸರು ಅವರಿಗೇಕೆ ಬಂತೆಂದರೆ, ಕನ್ನಡಜಿಲ್ಲೆಯಿಂದ ಕೂಲಿಯಾಳುಗಳನ್ನು ಮಲೆನಾಡಿಗೆ ಕರೆತುರವ ಸೇರೇಗಾರರು (ಮೇಸ್ತ್ರಿಗಳು) ಪ್ರಾಮಾಣಿಕತೆಯ ಪರಮಾವಧಿಯನ್ನು ಮುಟ್ಟಿದ ಆದರ್ಶಪ್ರಾಯರು! ಮರುವರ್ಷ ಕೂಲಿಯಾಳುಗಳನ್ನು ತರಲು ಮಲೆನಾಡಿನ ರೈತರು ಅವರಿಗೆ ಮುಂಗಡವಾಗಿ ಕೊಡುವ ಹಣಕ್ಕೆ ಯಾವಾಗಲೂ ಲೋಪವೇ! ಆದ್ದರಿಂದಲೆ ರೈತರು ಕನ್ನಡಜಿಲ್ಲೆಯವರನ್ನು ಮೋಸಗಾರರೆನ್ನುವ ಬದಲು ಪಾತಾಳಲೋಕದವರು ಎನ್ನುವುದು.

ನಮ್ಮ ಐಗಳು ವಿದ್ಯಾವಂತರಾಗಿದ್ದರಂತೆ. ಕಾಗದ ಬರೆಯುವುದಕ್ಕೆ ಕೂಡ ಬರುತ್ತಿತ್ತಂತೆ. ಅವರು ಯಾವಾಗಲೂ ಉಪ್ಪರಿಗೆ ಮೇಲಿನ ಮಳಿಗೆಯೊಳಗೆ ಮಲಗಿಯೇ ಇರುತ್ತಿದ್ದರು. ಈಗಾದರೆ ಶುದ್ಧಸೋಮಾರಿ ಎಂದುಬಿಡುತ್ತಿದ್ದೆವು; ಆಗ ನಮಗೆಲ್ಲಾ ಅವರನ್ನು ಕಂಡರೆ ತುಂಬಾ ‘ಗೌರವ’. ಹುಲಿ ಕಂಡಾಗ ಗೋವಿಗಿರುವ ‘ಗೌರವ’. ಅದೂ ಅಲ್ಲದೆ ಜ್ಞಾನದ ಪರಮಾವಧಿಯನ್ನು ಸೇರಿದ ನಮ್ಮ ಐಗಳಿಗೆ ಮಲಗುವುದೇ ಕರ್ತವ್ಯ ಎಂದು ಭಾವಿಸಿದ್ದ ನಮಗೆ ಅವರ ನಡತೆಯಲ್ಲಿ ಕುಂದೇನೂ ಕಂಡುಬರಲಿಲ್ಲ. ಅದೂ ಅಲ್ಲದೆ ಅವರ ಈ ತೆರನಾದ ದುರಭ್ಯಾಸ – ತಪ್ಪಾಯ್ತು! – ಒಳ್ಳೆಯ ಅಭ್ಯಾಸದಿಂದ ನಮಗೂ ಸ್ವಲ್ಪ ಉಪಯೋಗವಾಗುತ್ತಿತ್ತು.

ಉಪಯೋಗವೇನೂ ದೊಡ್ಡದಲ್ಲ. ಆದರೂ ಮಹತ್ತಾದದ್ದು. ಮಳಿಗೆಯ ಈಚೆಗೆ ನಾವು ಬರೆಯುವ ಶಾಲೆ – ನಮ್ಮ ಐಗಳ ಉಪನ್ಯಾಸ ಮಂದಿರ! ಆಗೇನು ಈಗಿನ ಹಾಗೆ ಸ್ಲೇಟು ಕಾಗದ ಮುಂತಾದ ಪರದೇಶದ ವಸ್ತುಗಳ ಮೇಲೆ ಬರೆಯುವ “ಕೆಟ್ಟ ಚಾಳಿ” ಇರಲಿಲ್ಲ. ದೇಶಾಭಿಮಾನ ಉಕ್ಕಿಹರಿಯುವ ಕಾಲ. ಆದ್ದರಿಂದಲೆ ನಾವೂ ಕೂಡ ಸ್ವದೇಶದ ವಸ್ತುವಾದ ಮರಳ ಮೇಲೆಯೆ ಅಕ್ಷರಾಭ್ಯಾಸ ಮಾಡಿದೆವು. (ಜೊತೆಗೆ ಗುರು ನಿಂದೆ ಮಾಡುವುದನ್ನೂ ಸ್ವಲ್ಪ ಅಭ್ಯಾಸ ಮಾಡಿದ್ದೆವು.)

ಒಬ್ಬೊಬ್ಬರಿಗೆ ಒಂದೊಂದು ಕಡೆ ಮರಳಿನ ಸ್ಲೇಟು! ನಮ್ಮ ಐಗಳು ಅ, ಆ, ಇ, ಈ, ಉ, ಊ, ಬರೆದುಕೊಟ್ಟು, ತಿದ್ದುವಾಗ ಕೈಬೆರಳುಗಳನ್ನು ಜೋಡಿಸುವ ರೀತಿಯನ್ನು ಕಾರ್ಯತಃ ತೋರಿಸಿಕೊಟ್ಟು, ಮರಳ ಮೇಲಿಟ್ಟು ಅದುಮಿ, ತಿಕ್ಕಿ, ಕಣ್ಣೀರುಬರಿಸಿ, ಎರಡು ಪೆಟ್ಟು ಕೊಟ್ಟು, ಚೆನ್ನಾಗಿ ಕೈತಿದ್ದಲು ಅಪ್ಪಣೆ ಕೊಟ್ಟು, ಮಳಿಗೆಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗುತ್ತಿದ್ದರು. ಇಷ್ಟೆಲ್ಲವನ್ನೂ ಅರೆನಿದ್ದೆಯಲ್ಲಿಯೇ ಮಾಡುತ್ತಿದ್ದರೋ ಏನೋ ಎಂದು ಈಗ ಸಂಶಯವಾಗುತ್ತದೆ.

ಒಂದು ದಿವಸ ಬೆಳಿಗ್ಗೆ, ಐಗಳ ಅಕ್ಷರಾಭ್ಯಾಸದ ಶಿಕ್ಷೆಗಳನ್ನೆಲ್ಲಾ ವಿಧಿಸಿ ಎಂದಿನಂತೆ ಕೋಣೆಗೆ ಹೋಗಿ ಮಲಗಿದರು. ಕಣ್ಣೀರು ಕರೆಯುತ್ತಾ, ಕೂದಲು ಕೆರೆಯುತ್ತಾ, ಮರಳಲ್ಲಿ ಬರೆಯುತ್ತಾ, ಬರೆದಿದ್ದನ್ನು ಮರೆಯುತ್ತಾ, ಕುಳಿತಿದ್ದ ಸುಬ್ಬು – ಅವನೇ ನಮ್ಮ ಮುಖಂಡ – ನಮ್ಮ ಕಡೆ ನೋಡಿ, ಕಣ್ಣು ಮಿಸುಕಿ ಸನ್ನೆ ಮಾಡಿದನು. ಸನ್ನೆಯ ಅರ್ಥ ಎಲ್ಲರಿಗೂ ಕರತಲಾಮಲಕವಾಗಿದ್ದಿತು. ನಾನುಮೆಲ್ಲಗೆ ತುದಿಗಾಲಿನಲ್ಲಿ ಶಬ್ದ ಮಾಡದಂತೆ ಎದ್ದುಹೋಗಿ ಮಳಿಗೆಬಾಗಿಲ ತೂತಿನಲ್ಲಿ ಒಳಗೆ ಇಣಿಕಿ ನೋಡಿದೆ. ಐಗಳು ಸಪ್ತಮ ಲೋಕದಲ್ಲಿ ಪಾಠ ಹೇಳುತ್ತಿದ್ದರು. ಗೊರಕೆ ಚೆನ್ನಾಗಿ ಕೇಳಿಸಿತು. ಹಿಂತಿರುಗಿ ಸನ್ನೇಮಾಡಿದೆ. ಎಲ್ಲರೂ ಮೆಲ್ಲಗೆ ಏಣಿಗಂಡಿ ಸೇರಿದೆವು. ಆ ಹಾಳು ಏಣಿ ಮೆಟ್ಟಲುಗಳು ಇಳಿಯುವಾಗ ಗಡ ಗಡ ಶಬ್ದ ಮಾಡುತ್ತಿದ್ದುವು! ಒಬ್ಬೊಬ್ಬರಾಗಿ, ಮೆಟ್ಟಲುಗಳು ಕಿರಿಚದ ರೀತಿಯಲ್ಲಿ ಇಳಿದೆವು. ಓಬುಇಳಿಯುವಾಗ ಮಾತ್ರ ಒಂದು ಮೆಟ್ಟಲು ಶಬ್ದಮಾಡಿತು. ಆದರೆ ಐಗಳು ದೇವರ ಕೃಪೆಯಿಂದ ಗಾಢನಿದ್ರೆಯಲ್ಲಿದ್ದರು. ಎಲ್ಲಾ ಇಳಿದ ಮೇಲೆ ಬಚ್ಚಿಟ್ಟಿದ್ದ ‘ನಾಗರಬಕ್ಕೆ’ ಹಲಸಿನ ಹಣ್ಣು ಪೂರೈಸಲೋಸ್ಕರ ಗಾಡಿಕೊಟ್ಟಿಗೆಗೆ ದಾಳಿಯಿಟ್ಟೆವು.

ನಾವು ಎರಡನೆಯ ತರಗತಿಗೆ ಬರುವಷ್ಟರಲ್ಲಿಯೆ ಸುಮಾರು ಹತ್ತು ಹದಿನೈದು ಜನ ಐಗಳ ಗುಂಪು ಬಂದುಹೋಗಿತ್ತು! ನಮ್ಮ ಉಪ್ಪರಿಗೆ ಕಾಲೇಜೇನು ಸಾಮಾನ್ಯವಾದುದೆ? ಅದರ ಪ್ರತಿಭಾಶಾಲಿಗಳಾದ ವಿದ್ಯಾರ್ಥಿಗಳು ನಾವೇನು ಪ್ರಾಕೃತರೆ? ಮೊದಲನೆಯ ಐಗಳು ಓಡಿಹೋದ ಮೇಲೆ ಮತ್ತೊಬ್ಬರು ಬಂದರು. ಸಾಧಾರವಾಗಿ ಐಗಳೆಲ್ಲಾ ಹೇಳದೆ ಕೇಳದೆ ಓಡಿ ಹೋಗುತ್ತಿದ್ದುದೆ ವಾಡಿಕೆ. ಎರಡನೆ ಐಗಳ ಹೆಸರು ಮಂಜಪ್ಪ ಐಗಳು ಅಂತ. ಸ್ವಲ್ಪ ಮುದುಕರು. ಅಂದರೆ ದೇವರ ದಯೆಯಿಂದ ಇನ್ನೂ ಅರವತ್ತು ವರ್ಷ ಆಗಿರಲಿಲ್ಲ. ಏಕೆಂದರೆ “ಅರವತ್ತು ವರ್ಷಕ್ಕೆ ಅರೆಮರಳು” ಎಂಬ ಗಾದೆ ಬಹು ಜನರ ವಿಷಯದಲ್ಲಿ ಸುಳ್ಳಾಗುವುದಿಲ್ಲ. ಮಂಜಪ್ಪ ಐಗಳು ನಮ್ಮ ಉಪ್ಪರಿಗೆ ಕಾಲೇಜಿಗೆ ಪ್ರೊಫೆಸರಾಗಿ ಬಂದವರು ಪುನಃ ಊರುಮುಖ ನೋಡಲೆ ಇಲ್ಲ. ನಮ್ಮ ಮನೆಯಲ್ಲಿಯೆ ರೇಷ್ಮೆ ಕಾಯಿಲೆಯಾಗಿ ಸತ್ತರು. ಅವರಿಗೆ ಕಾಯಿಲೆಯಾಗಿದ್ದಾಗ ನಮಗೆಲ್ಲಾ ರಜ. ಕಾಯಿಲೆ ಎಲ್ಲಿ ಬೇಗ ಗುಣವಾಗಿ ಬಿಡುವುದೊ ಎಂದು ನಮಗೆಲ್ಲಾ ಒಳಗೊಳಗೆ ಭಯ! ಇಂಥ ದುರಾಲೋಚನೆ ಬಹಳ ಪಾಪಕರವೆಂದು ಈಗ ತೋರುತ್ತದೆ. ಆಗ ಪಾಪದ ಆಲೋಚನೆಯೆ ತಲೆದೋರಿರಲಿಲ್ಲ: ನಮಗೆ ಮಂಜಪ್ಪ ಐಗಳ ಮೇಲೆ ಹೊಟ್ಟೆಕಿಚ್ಚು ಇರಲಿಲ್ಲ. ನಮಗೆ ಬೇಕಾಗಿದ್ದುದ ರಜ! ಐಗಳಿದ್ದರೆ ಸಜ; ಐಗಳೆದ್ದರೆ ರಜ! ಕಾಯಿಲೆ ಬಿದ್ದು ಹದಿನೈದು ದಿನಗಳೊಳಗಾಗಿ ಐಗಳು ಎದ್ದೇಬಿಟ್ಟರು. ಅವರ ಮರಣದಿಂದ ನಮಗೆಲ್ಲ ದುಃಖವಾಗದೆ ಇರಲಿಲ್ಲ.

ಒಂದು ದಿನ ಸಾಯಂಕಾಲ. ನಾವೆಲ್ಲಾ ಕಣದಲ್ಲಿ ಲಗ್ಗೆ ಆಟ ಆಡುತ್ತಿದ್ದೆವು. ನಮ್ಮ ತಂದೆ ಎಲ್ಲಿಗೋ ಹೊರಗೆ ಹೋಗಿದ್ದವರು ಬಂದರು. ಅವರ ಜೊತೆಗೆ ಇನ್ನೊಬ್ಬ ಹೊಸಬರನ್ನು ತಂದರು. ಯಾರೇ ಆಗಲಿ ಹೊಸಬರು ಮನೆಗೆ ಬಂದರೆ ನಮಗೆಲ್ಲಾ ದಿಗಿಲು! ಮತ್ತೊಬ್ಬ ಐಗಳು ಬಂದರೋ ಏನೋ ಎಂದು! ಒಂದು ದಿನ ಮನೆಗೆ ಒಬ್ಬ ಹೊಸ ಕೂಲಿಯಾಳು ಬಂದನು. ಅವನನ್ನು ಕಂಡು ತಿಮ್ಮು, ಅವನೇ ಐಗಳು ಎಂದು ಭಾವಿಸಿ, (ಐಗಳಿಗೂ ಆಳುಗಳಿಗೂ ಹೆಚ್ಚೇನೂ ಭೇಧವಿರುತ್ತಿರಲಿಲ್ಲ) ಒಂದು ಕತ್ತಲೆ ಕೋಣೆಯೊಳಗೆ ಬಾಗಿಲು ಹಾಕಿಕೊಂಡು ಅಡಗಿಬಿಟ್ಟಿದ್ದನು. ಅವನನ್ನು ಹುಡುಕುವುದೆ ಕಷ್ಟವಾಯ್ತು!

ಲಗ್ಗೆ ಆಟ ಬಹಳ ಜೋರಿಗೇರಿದ್ದಿತು. ಆಟದ ಯೋಚನೆ ಹೊರತು ಬೇರೆ ಯಾವುದೂ ನಮ್ಮ ತಲೆಯಲ್ಲಿರಲಿಲ್ಲ. ನಮ್ಮ ಮನಸ್ಸಿಗೆ ಲಗ್ಗೆ ಆಟ ಒಂದೇ ಜಗತ್ತಿನ ವ್ಯಾಪಾರವೆಂದು ತೋರಿದ್ದಿತು. ಅಷ್ಟು ಹೊತ್ತಿಗೆ ಹೊಸ ಐಗಳು ಬಂದಿದ್ದಾರೆ ಎಂಬ ಭೀಕರವಾರ್ತೆ ಬಂದು ಮುಟ್ಟಿತು. ನಮ್ಮ ಎದೆಗೆ ಸಿಡಿಲು ಬಡಿದಂತಾಯಿತು. ಕ್ಷಣಮಾತ್ರದಲ್ಲಿ ಅದುವರೆಗೆ ನಾವಿದ್ದ ಲೀಲಾ ಪ್ರಪಂಚ ಒಡೆದು ಚೂರಾಗಿ ಪ್ರಳಯದಲ್ಲಿ ಮುಳುಗಿಹೋಯಿತು! ಇದುವರೆಗೆ ರಜ, ನಾಳೆಯಿಂದ ಸಜ, ಉಪ್ಪರಿಗೆ ಜೈಲಿನಲ್ಲಿ! ತಿಮ್ಮು ಬಿಕ್ಕಿಬಿಕ್ಕಿ ಅತ್ತೇಬಿಟ್ಟನು. ಆಗ ನಮಗಾದ ದುಃಖವನ್ನು ಅಳೆಯುವವರಾರು? ಉಲ್ಲಾಸದಿಂದ ರಂಜಿಸುತ್ತಿದ್ದ ಮುಖ ಮಂಡಲಗಳು ಕಳೆಯಿಲ್ಲದಾಗಿ ಕಪ್ಪಗಾದುವು. ನಮ್ಮ ಗತಿ ಮುಗಿಯಿತೆಂದು ತಿಳಿದು ಹೊಸ ಐಗಳ ‘ಹಾಳುಮೋರೆ’ ನೋಡಲು ಮನೆಯೊಲಗೆ ಮೆಲ್ಲಗೆ ಜಾರಿದೆವು.

ಹೊಸ ಐಗಳ ಹೆಸರು ನಾಗಪ್ಪಶೆಟ್ಟಿ. ಅವರೂರು ಉಡುಪಿಯಂತೆ. ನಮ್ಮ ತಂದೆ ಅಲ್ಲಿಗೆ ಹೋದಾಗ ನಾಗಪ್ಪ ಶೆಟ್ಟರ ‘ಸುಖನಿವಾಸ’ದಲ್ಲಿಯೆ ಊಟ ತಿಂಡಿ ಎಲ್ಲಾ ಮಾಡಿದ್ದರಂತೆ. ಈಗ ಹೋಟಲು ಪಾಪರಾಗಿ, ‘ಶೆಟ್ಟರು ಐಗಳು ಕೆಲಸಕ್ಕೆ ಬಂದಿದ್ದರು! ನಾಗಪ್ಪಶೆಟ್ಟರ ಐಗಳತನ ಐದು ದಿವಸ ನಡೆಯಿತು. ಆರನೆಯ ದಿನ ಭಾನುವಾರ ಸಂತೆಗೆ ಹೋಗಿ ಬರುತ್ತೇನೆಂದು ಹೇಳಿ ಕೊಪ್ಪಕ್ಕೆ ಹೋದರು. ಹೋದವರು ಬರದಿದ್ದರೆ ಸಾಕಲ್ಲಾ ಎಂದು ನಾವೆಲ್ಲಾ ತೋಟದಾಚೆ ಭೂತನಿಗೆ ಹೇಳಿಕೊಂಡು, ಬಾಳೆತೋಟಕ್ಕೆ ಹೋಗಿ ಚೆನ್ನಾಗಿ ಬೆಳೆದ ಒಂದು ಕರಿಬಾಳೆ ಗೊನೆಗೆ ಎಳೆ (ಮುಡುಪು) ಕಟ್ಟಿದೆವು.

ಸೋಮವಾರವಾಯಿತು. ಐಗಳು ಬರಲೇ ಇಲ್ಲ. ಮಂಗಳವಾರವೂ ಕಳೆಯಿತು. ಐಗಳ ಮೋರೆಯೇ ಇಲ್ಲ. ಬುಧವಾರವೂ ಆಯಿತು; ಐಗಳು ಓಡಿ ಹೋದರೆಂದು ನಿರ್ಣಯವೂ ಆಯಿತು. ನಮ್ಮ ಹಾರೈಕೆಯೂ ಕೈಗೂಡಿತು. ಐಗಳು ಓಡಿಹೋದ ಸಮಾಚಾರವನ್ನು ಕೇಳಿ ನಾವೆಲ್ಲಾ ಹಿಗ್ಗಿ ಹಿಗ್ಗಿ ಕುಣಿದೆವು. ಮತ್ತೆ ಎಂದಿನಂತೆ ಉಲ್ಲಾಸದಿಂದ ಜೀವಿಸತೊಡಗಿದೆವು.

ಆದರೆ ಭೂತನಿಗೆ ಕಟ್ಟಿದ ಮುಡುಪನ್ನು ಮಾತ್ರ ಸಲ್ಲಿಸಲೆ ಇಲ್ಲ. ಸುಬ್ಬು ಚೆನ್ನಾಗಿ ಬೆಳೆದ ಕರಿಬಾಳೆಗೊನೆಯನ್ನು ನೋಡಿ “ಅಯ್ಯೋ, ಹೋಗ್ರೊ, ಭೂತಕ್ಕೆ ಯಾರು ಕೊಡುತ್ತಾರೆ, ಇಷ್ಟು ಚೆನ್ನಾಗಿ ಬೆಳೆದ ಗೊನೆಯನ್ನು? ಇದನ್ನು ನಾವೇ ಲಗಾಯಿಸಿಬಿಡೋಣ ಹಣ್ಣುಮಾಡಿಕೊಂಡು. ಭೂತಕ್ಕೆ ಬೇಕಾದರೆ ಇನ್ನೊಂದು ಗೊನೆಗೆ ಎಳೆಕಟ್ಟಿದರಾಯಿತು” ಎಂದನು. ತೋಟದಲ್ಲಿದ್ದ ಇನ್ನೊಂದು ಚಿಗುರು ಬಾಳೆಗೊನೆಗೆ ಎಳೆಕಟ್ಟಿದೆವು. ಎಳೆಕಟ್ಟುವುದೇನು ಬಹು ಸುಲಭ ಬಾಳೆಯ ಮರದಿಂದ ಒಣಗಿ ಜೋಲುಬಿದ್ದ ಎಲೆಗಳನ್ನು ಒಟ್ಟುಗೂಡಿಸಿ ಮರಕ್ಕೆ ದಟ್ಟಿ ಸುತ್ತಿದರಾಯಿತು! ಹೀಗೆಯೆ ಮರದಿಂದ ಮರಕ್ಕೆ ದಟ್ಟಿ ಬಿಗಿದೆವೆ ಹೊರತು, ಭೂತಕ್ಕೆ ಹರಕೆ ಒಪ್ಪಿಸಲೆ ಇಲ್ಲ. ಕರುಣಾಶಾಲಿಯಾದ ಭೂತ ಹುಡುಗರು ಎಂದು ಸುಮ್ಮನಾಯಿತೆಂದು ತೋರುತ್ತದೆ. ಅಥವಾ ಸುಬ್ಬು ಹೇಳಿದಹಾಗೆ ಕೈಯಲ್ಲಾಗಲಿಲ್ಲವೊ ಏನೊ, ಯಾರಿಗೆ ಗೊತ್ತು?

ಮುಮ್ಮಡಿ ಐಗಳು ಓಡಿಹೋಗಿ ನಾಲ್ವಡಿ ಐಗಳು ಬರುವಷ್ಟರಲ್ಲಿ ಮೂರು ತಿಂಗಳಾದುವು. ಈಅಂತರದಲ್ಲಿ ನಮ್ಮ ‘ಅಟಮಟ’ ಅತಿಯಾಯಿತು. ಮನೆಯಲ್ಲಿ ನಮ್ಮ ಕಿರುಕುಳ ತಡೆಯಲಾರದೆ ಹೋದರು. ನಮ್ಮ ಲೂಟಿಯೂ ಪುಂಡಾಟವೂ ಮಿತಿಮೀರಿದುವು.

ಸುಬ್ಬು, ಕಾಡು ಇಬ್ಬರಿಗೂ ನಶ್ಯಹಾಕುವ ಅಭ್ಯಾಸ. ದಿನವೂ ಅಜ್ಜಯ್ಯನ ಡಬ್ಬಿಯಿಂದ ನಶ್ಯ ಕುದಿಯುತ್ತಿದ್ದರು. ನಮ್ಮ ಅಜ್ಜಯ್ಯ ಹಾಕುತ್ತಿದ್ದುದು ಮಡ್ಡಿ ನಶ್ಯ ಅಂದರೆ ಉಂಡೆನಶ್ಯ. ಮಂಗಳೂರು, ಮದ್ರಾಸು ಈ ಊರುಗಳ ಪುಡಿನಶ್ಯವಲ್ಲ. ಅವರು ಸುಣ್ಣ, ಬೆಣ್ಣೆ ಎಲ್ಲಾ ಹಾಕಿ, ತಿಕ್ಕಿ, ನಶ್ಯದ ‘ಚುಟ್ಟ’ (ಚುಟಿಗೆ)ಗಳನ್ನು ಸಿದ್ಧಪಡಿಸಿ, ದಂತದ ಡಬ್ಬಿಯಲ್ಲಿ ಇಟ್ಟುಹೋಗುತ್ತಿದ್ದರು. ಆಗ ಇವರು ಮೆಲ್ಲಗೆ ಹೋಗಿ ಡಬ್ಬಿಯಿಂದ ಎರಡು ಮೂರು ‘ಚುಟ್ಟು’ಗಳನ್ನು ಹಾರಿಸಿಬಿಡುತ್ತಿದ್ದರು. ಅಜ್ಜಯ್ಯ ಮುದುಕರು. ಅಷ್ಟೇನು ಪರೀಕ್ಷೆ ಮಾಡಿ, ಲೆಕ್ಕ ನೋಡುತ್ತಿರಲಿಲ್ಲ. ಆದ್ದರಿಂದಲೇ ಕಳ್ಳರೂ ಸಿಕ್ಕಿಬೀಳುತ್ತಿರಲಿಲ್ಲ.

ಒಂದು ದಿವಸ ನಮಗೆ ಯಾರಿಗೂ ತಿಳಿಯದಂತೆ ಅಜ್ಜಯ್ಯನ ನಶ್ಯದ ಡಬ್ಬಿಯನ್ನೇ ಮಡ್ಡಿನಶ್ಯ ಸಮೇತ ಎಗರಿಸಿಬಿಟ್ಟರು. ಗುಲ್ಲು ಹಬ್ಬಿತು. ನಮ್ಮನ್ನೆಲ್ಲಾ ಕರೆದು ವಿಚಾರಣೆ ಮಾಡಿದರು. ನಾವೆಲ್ಲಾ “ನಮಗೆ ಗೊತ್ತೇ ಇಲ್ಲ” ಎಂದೆವು. ಕಾಡು, ಸುಬ್ಬು ಇಬ್ಬರೂ “ದೇವರಾಣೆಗೂ ತೆಗೆಯಲಿಲ್ಲ” ಎಂದುಬಿಟ್ಟರು. ಯಾರೋ ಆಳುಗಳು ಕದ್ದುಕೊಂಡಿರಬಹುದು ಎಂದು ನಮ್ಮನ್ನು ಪೊಲೀಸರು ವಿಚಾರಣೆಗೆ (ಅಂದರೆ ಹೊಡೆದು ಬಡಿದು ವಿಚಾರಿಸುವುದು) ಗುರಿ ಮಾಡಲಿಲ್ಲ. ಸುಬ್ಬು, ಕಾಡು ಇಬ್ಬರೂ ಮನದಲ್ಲಿಯೆ ಗೆದ್ದೆವಲ್ಲಾ ಎಂದು ಹಿಗ್ಗಿದರು. ಆಮೇಲೆ ನಮಗೆ ನಿಜಸ್ಥಿತಿಯನ್ನು ಗುಟ್ಟಾಗಿ ತಿಳಿಸಿದರು. ನಶ್ಯದ ಡಬ್ಬಿಯನ್ನು ತೋಟದ ಬಾಳೆ ಗಡ್ಡೆಯ ಬುಡದಲ್ಲಿ ಹುಗಿದು ಇಟ್ಟಿದ್ದರು. ಬೇಕಾದಾಗ ಯಾರೂ ಕಾಣದಂತೆ ಹೋಗಿ ನಶ್ಯ ತರುತ್ತಿದ್ದರು. ನಾನು ಸುಬ್ಬುವನ್ನು ಕುರಿತು “ಅಲ್ಲೋ ಸುಬ್ಬು, ‘ದೇವರಾಣೆಗೂ ಕದಿಯಲಿಲ್ಲ’ ಎಂದೆಯಲ್ಲೊ!” ಎಂದೆ; ಅದಕ್ಕೆ ಅವನು ಎಂದಿನಂತೆ ನಾಸ್ತಿಕನಾಗಿ “ಹೋಗೊ, ದೇವರಂತೆ, ಆಣೆಯಂತೆ. ಅದರಲ್ಲೆಲ್ಲಾ ಏನಿದೆಯೋ?” ಎಂದನು.

ಮತ್ತೊಂದು ದಿವಸ ಓಬು, ಒಳಗಿನ ಉಪ್ಪರಿಗೆಯಲ್ಲಿ ನಮಗೆಲ್ಲರಿಗೂ ಎಂದು ಬೆಲ್ಲ ಕದಿಯುತ್ತಿದ್ದವನು ಸಿಕ್ಕಿಬಿದ್ದ. ಆದರೆ ನಮ್ಮ ಪುಣ್ಯವಶದಿಂದಲೊ, ಅಥವಾ ದೇವರ ದಯದಿಂದಲೊ, ಅವನು ಆ ಪುಕಾರಿಗೆ ನಮ್ಮನ್ನೆಲ್ಲಾ ಸಿಕ್ಕಿಸಲಿಲ್ಲ. ಬೆನ್ನಮೇಲೆ ಒಂದಷ್ಟು ಕಡುಬು ಬಿದ್ದುವು. ಎಲ್ಲವನ್ನೂ ವೀರನಂತೆ ಸಹಿಸಿಯೆ ಬಿಟ್ಟ!

ಇನ್ನೊಂದು ದಿವಸ ನಾನು ಹಲಸಿನಮರ ಹತ್ತಿ ಕಾಲುತಪ್ಪಿ ಬಿದ್ದು ಮುಖ ಮೋರೆ ಒಡೆದುಕೊಂಡೆ. ಅದು ನನ್ನ ಅಜಾರಗಾರೂಕತೆಯಿಂದ ಆಗಲಿಲ್ಲ. ಆ ದೆವ್ವ ಹಲಸಿನಕಾಯಿಯಿಂದ ಆಗಿದ್ದು ತೊಟ್ಟು ಮುರಿಯಲು ನನ್ನ ಕಡೆಗೇ ಉರುಳಿ ಮೈಮೇಲೆ ಬಿದ್ದುಬಿಟ್ಟಿತು. ಭಾರ ತಡೆಯಲಾರದೆ ಕೆಳಗೆ ಬಿದ್ದೆ; ಹಲಸಿನ ಕಾಯಿಯೂ ನನ್ನನ್ನು ಹಿಂಬಾಲಿಸಿತು. ಆದರೆ ಮೈಮೇಲೆ ಬೀಳಲಿಲ್ಲ. ಬಿದ್ದಿದ್ದರೆ ನನ್ನ ಗತಿ ಮುಗಿಯುತ್ತಿತ್ತು.

ಹೀಗಾಗಿ ನಮ್ಮ ಹಾವಳಿ ತಡೆಯಲಾರದೆ, ಹುಡುಕಿ ಹುಡುಕಿ ಒಬ್ಬ ಐಗಳನ್ನು ತಂದರು. ಇವರು ಸ್ವಲ್ಪ ಸುಧಾರಿಸಿದವರಾದ್ದರಿಂದ ನಮಗೆಲ್ಲಾ “ಸಿಲೇಟು”, “ಸಿಲೇಟು ಕಡ್ಡಿ”ಗಳ ದರ್ಶನ ಮಾಡಿಸಿದರು. ಜೊತೆಗೆ ನಾವು ಎಂದೂ ಕಾಣದ ಬೀಡಿಗಳ ದರ್ಶನವನ್ನೂ ಮಾಡಿಸಿದರು. ಜೊತೆಗೆ ನಾವು ಎಂದೂ ಕಾಣದ ಬೀಡಿಗಳ ದರ್ಶನವನ್ನೂ ಮಾಡಿಸಿದರು! ಅವರು ಸೇದಿ ಬಿಸಾಡಿದ ಬೀಡಿತುಂಡುಗಳನ್ನು ನಾವು ಕ್ರಮೇಣ ಶೇಖರಿಸತೊಡಗಿದೆವು. ಅವರು ಅಕ್ಷರಗಳ ಜೊತೆಗೆ ಅಂಕಿಗಳನ್ನೂ ಹೇಳಿಕೊಟ್ಟರು; ನಶ್ಯಹಾಕುವುದರ ಜೊತೆಗೆ ಬೀಡಿಸೇದುವುದನ್ನೂ ಕಲಿಸಿಬಿಟ್ಟರು! ಒಂದು ದಿವಸ ಮಧ್ಯಾಹ್ನ, ಶೇಖರಿಸಿದ್ದ ಬಿಡಿತುಂಡುಗಳನ್ನೆಲ್ಲಾ ಸ್ನಾನದ ಮನೆಗೆ ತೆಗೆದುಕೊಂಡು ಹೋಗಿ ಹೊತ್ತಿಸಿ ಸೇದಿದೆವು. “ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗುತ್ತದೆ.” ಹೊಗೆ ಶ್ವಾಸಕೋಶಕ್ಕೆ ಹೋಗಿ ಎಲ್ಲರೂ ಗಟ್ಟಿಯಾಗಿ ಕೆಮ್ಮಲಾರಂಭಿಸಿದೆವು. ನಮ್ಮ ಕೆಮ್ಮುಗಳ ಆರ್ಭಟವನ್ನು ಆಲಿಸಿ, ಇದೇನು ಅವಾಂತರವೆಂದು ನೋಡಲು ನಮ್ಮ ಚಿಕ್ಕಯ್ಯ ಸ್ನಾನದ ಮನೆಗೆ ಬಂದರು. ಬೀಡಿ ತುಂಡುಗಳನ್ನೆಲ್ಲಾ ಒಲೆಗೆ ಹಾಕಿದರು. ನಮಗೆಲ್ಲಾ ಸರಿಯಾದ ಮರ್ಯಾದೆ ಆಯಿತು. ಐಗಳಿಗೂ ಆಯಿತೆಂದು ತೋರುತ್ತದೆ!

ನಮ್ಮ ನಾಲ್ವಡಿ ಐಗಳು ಬಹಳ ಗಟ್ಟಿಗರಾಗಿದ್ದರು. ರಾಮಾಯಣ ಭಾರತ ಚೆನ್ನಾಗಿ ಓದುತ್ತಿದ್ದರು; ಯಕ್ಷಗಾನ ಹಾಡುತ್ತಿದ್ದರು; “ಪ್ರಸಂಗ” ಮಾಡುತ್ತಿದ್ದರು; ಸಾರಾಯಿ ಕುಡಿಯುತ್ತಿದ್ದರು; ಜೂಜಾಡುತ್ತಿದ್ದರು. ನಮ್ಮ ಉಪ್ಪರಿಗೆ ಕಾಲೇಜಿನ ಯೋಗ್ಯತೆಗೆ ಅವರು ಮೀರಿದ್ದರಾದುದರಿಂದ ಅವರಿಗೆ ಬಹುಬೇಗ ರ್ಪೆರ್ಷ ಇಲ್ಲದೆ ರಿಟೈರಾಯಿತು.

ಹೀಗೆಯೆ ಕೆಲವು ಮಂದಿ ಐಗಳು ಬಂದುಹೋದರು. ನಮ್ಮ ವಿದ್ಯಾಭ್ಯಾಸ ಸಾಂಗವಾಗಿ ಸಾಗುತ್ತಿತ್ತು. ಕಡೆಗೆ ಮಂಗಳುರಿನಿಂದ ಆನಂದರಾಯರೆಂಬುವರು ಐಗಳಾಗಿ ಬಂದರು. ಅವರು ನವೀನ ವಿದ್ಯಾಭ್ಯಾಸ ಮಾಡಿದವರಾಗಿದ್ದರು. ಜಾತಿಯಲ್ಲಿ “ರೋಮನ್ ಕ್ಯಾಥೋಲಿಕ್” ರಾಗಿದ್ದರು. ಅವರೇ ನಮಗೆ “ಮೇಷ್ಟರು, ಸಾರ‍್” ಎಂಬ ಎರಡು ಪವಿತ್ರವಾದ ಇಂಗ್ಲೀಷು ಶಬ್ದಗಳನ್ನು ಉಪದೇಶಿಸಿ ನಮ್ಮನ್ನು ಆಧುನಿಕರನ್ನಾಗಿ ಮಾಡಿದ ಪುಣ್ಯಾತ್ಮರು! ಅವರು ಬಂದ ಮೇಲೆ ಐಗಳೆಲ್ಲಾ ಮೇಷ್ಟರಾದರು! ನಾವೆಲ್ಲಾ ಮ್ಲೇಚ್ಛರಾದೆವು. (?) ಅಂತೂ ಅವರನ್ನು ನಮ್ಮನಮ್ಮೊಳಗೆ ಮಾತಾಡಿಕೊಳ್ಳುವಾಗ ಮೇಷ್ಟೈಗಳು” ಎಂದೇ ಕರೆಯುತ್ತಿದ್ದೆವು. ಪ್ರಾಚೀನ ಆಧುನಿಕ ಎರಡೂ ಕೈಕೈ ಹಿಡಿದುಕೊಂಡೆ ಹೋಗಬೇಕಿಷ್ಟೆ? ಆ ನಿಯಮದ ಪ್ರಕಾರ “ಮೇಷ್ಟೈಗಳು” ಎಂಬುದು ತಪ್ಪಾಗುವುದೂ ಇಲ್ಲ; ಹಾಸ್ಯಾಸ್ಪದವಾಗುವುದೂ ಇಲ್ಲ.

ಆನಂದರಾಯರು ಭಗೀರಥ ಪ್ರಯತ್ನಮಾಡಿ ನಮಗೆಲ್ಲಾ ಪುಸ್ತಕಗಳ ಮುಖ ಸಂದರ್ಶನಮಾಡಿಸಿದರು. ಇಂಗ್ಲೀಷು ಅಕ್ಷರಮಾಲೆಯನ್ನು ಕಲಿಸಿದರು. ಇವರು ಇಂದಿನ ಐಗಳಂತೆ ಕಲ್ಲೆದೆಯ ಸೈತಾನರಾಗಿರಲಿಲ್ಲ. ಯದ್ವಾತದ್ವಾ ಹೊಡೆಯುತ್ತಿರಲಿಲ್ಲ. ಕಂಡಾಬಟ್ಟೆ ಬೈಯ್ಯುತ್ತಿರಲಿಲ್ಲ. ಇವರೇ ಮೊದಲು ನಮಗೆ ವಿದ್ಯಾಭ್ಯಾಸದಲ್ಲಿ ಆದರ, ಉತ್ಸಾಹ ಕುತೂಹಲ ಇವುಗಳನ್ನು ಹುಟ್ಟಿಸಿದ ಪ್ರಥಮ ಗುರುಗಳು. ಗಣಿತ ಹೇಳಿಕೊಟ್ಟರು. ಕಾಪೀಪುಸ್ತಕ ಕೊಂಡುಕೊಟ್ಟರು. ಆನಂದರಾಯರಲ್ಲಿ ನಮಗೆ ಆದರ ಹುಟ್ಟುವುದಕ್ಕೆ ಇನ್ನೊಂದು ಕಾರಣವುಂಟು. ಅದೇನೆಂದರೆ, ಅವರು ಪ್ರತಿದಿನವೂ ನಮಗೆ “ಯವನ ಯಾಮೀನಿಕಥೆ”ಗಳನ್ನು ಓದಿ ಹೇಳುತ್ತಿದ್ದರು. “ಯವನ ಯಾಮೀನಿ ಕಥೆ” ಗಳೆಂದರೆ ಆನಂದರಾಯರ ಬೈಬಲು! ಹಗಲೂ ರಾತ್ರಿ ಅವನ್ನು ಓದುತ್ತಿದ್ದರು. ಅವರಲ್ಲಿ ಇನ್ನೇನು ನವೀನತೆ ಇದ್ದಿತೆಂದರೆ ಅವರ “ಕ್ರಾಪು”. ನಾವು “ಹಳ್ಳಿಗಮಾರ” ಗಳಾಗಿದ್ದೆವು. “ಕ್ರಾಪು” ಕಂಡೂ ಇರಲಿಲ್ಲ, ಕೇಳಿಯೂ ಇರಲಿಲ್ಲ! ನಾವೆಲ್ಲ ಆಗ ಜುಟ್ಟಿನ ಜೆಟ್ಟಿಗಳಾಗಿದ್ದೆವು. ಜುಟ್ಟು ಕತ್ತರಿಸುವುದು ಪ್ರಾಯಶ್ಚಿತವೇ ಇಲ್ಲದ ಪಾಪದ ಕಾರ್ಯವೆಂದು ನಮ್ಮೂರಿನವರ ಭಾವನೆಯಾಗಿತ್ತು. “ಕ್ರಾಪು” ಬಿಟ್ಟವನು “ಕ್ರೈಸ್ತ”ನಾದನೆಂದು ತಿಳಿದಿದ್ದರು. ಈಗ ಮಾತ್ರ ಕ್ರಾಪಿನ ಪ್ರಭಾವ ಹೆಚ್ಚಿ ನಮ್ಮೂರಿನಲ್ಲಿ ಜುಟ್ಟಿಗೇ ಅಭಾವ!

ತಮ್ಮೂರಿನಲ್ಲೇನೋ ಕಷ್ಟಪ್ರಾಪ್ತಿ ಆದ್ದರಿಂದ ಆನಂದರಾಯರು ಮಂಗಳೂರಿಗೆ ಹೊರಟುಹೋದರು. ನಮಗೆ ಪುನಃ ರಜಾದಿನಗಳು ಬಂದುವು. ಆದರೆ ಈಗ ಹಿಂದಿನಂತೆ ರಜದಲ್ಲಿ ಅಷ್ಟುಅಭಿಲಾಷೆ ಇರಲಿಲ್ಲ. ಕೆಲವು ದಿನಗಳೊಳಗಾಗಿ ಬೆಂಗಳೂರಿನಲ್ಲಿ ಓದುತ್ತಿದ್ದ ನಮ್ಮ ಕಕ್ಕಯ್ಯ ಮತ್ತು ಅಣ್ಣಯ್ಯ ಇಬ್ಬರೂ ಬೇಸಿಗೆ ರಜಾಕ್ಕೆ ಮನೆಗೆ ಬಂದರು. ಅವರು ಬರುವಾಗ ಜೊತೆಯಲ್ಲಿ ವ್ಯಾಸರಾಯರೆಂಬುದವರನ್ನು ಕರೆತಂದರು. ಅವರು ಜಾತಿಯಲ್ಲಿ ಬ್ರಾಹ್ಮಣರಾಗಿದ್ದರು. ಅತಿ ಸಾಧುಗಳು. ತತ್ತ್ವಶಾಸ್ತ್ರದಲ್ಲಿ ಎಂ.ಎ. “ಡಿಗ್ರಿ” ಪಡೆದಿದ್ದರು. ಅಷ್ಟು ದೊಡ್ಡ ವಿದ್ವಾಮಸರು ನಮ್ಮ ಉಪ್ಪರಿಗೆ ಕಾಲೇಜಿಗೆ ಏಕೆ ಬಂದರೆಂಬ ರಹಸ್ಯ ಗೊತ್ತಾಗಲಿಲ್ಲ. ಎಲ್ಲಾ ಕೇಳಿ ತಿಳಿಯುವಾಗ ಅವರಿಗೆ ಸ್ವಲ್ಪ ಎಳಹುಚ್ಚು ಎಂದು ತಿಳಿಯಬಂದಿತು. “ಅತಿ ವಿದ್ಯೆ ಓದಿದರೆ ಅರೆ ಮರುಳಾಗುವರು” ಎಂಬ ನಮ್ಮೂರಿನವರಿಗಿದ್ದ ನಂಬಿಕೆ ಬಲವಾಗಿ ಬೇರೂರಿತು.

ವ್ಯಾಸರಾಯರು ನಿಜವಾಗಿಯೂ ಅರೆಮರುಳಾಗಿದ್ದರೆಂಬುದು ಮಾತ್ರ ಸಂದೇಹಾಸ್ಪದವಾದ ನಿರ್ಣಯ. ಪಾಯ, ತತ್ತ್ವಶಾಸ್ತ್ರವನ್ನು ಚೆನ್ನಾಗಿ ಓದಿ ಗ್ರಹಿಸಿದ್ದ ಅವರ ಆಚರಣೆ “ಹಳ್ಳಿಗಮಾರರಿಗೆ” ಹುಚ್ಚಿನಂತೆ ತೋರಿರಬಹುದು. ಹುಚ್ಚರೋ ಮರುಳರೋ ಏನೇ ಆಗಿರಲಿ ಅವರ ಸ್ಮರಣೆ ನನಗೆ ಈಗಲೂ ಆನಂದದಾಯಕ. ಅವರ ನೆನಪಾಯಿತೆಂದರೆ, ನನಗೆ ಏನೋ ಒಂದು ವಿಧವಾದ ಸಂತೋಷ; ಎದೆ ಭಕ್ತಿರಸ ಮಿಶ್ರವಾದ ಆದರದಿಂದ ಹಿಗ್ಗುತ್ತದೆ.

ಹುಚ್ಚೋ, ಮರುಳೋ, ಅಂತೂ ವ್ಯಾಸರಾಯರು ನಮಗೆ ಮೇಷ್ಟರಾದರು. ಅವರ ಐಗಳತನದಲ್ಲಿ ಆಡಿಕೆಗೂ ಓದಿಕೆಗೂ ಭೇದವೇ ತೋರಲಿಲ್ಲ. ಅವರಲ್ಲಿ ನಮಗೆ ಅತಿ ಸಲಿಗೆ; ಅವರೊಡನೆ ಯಾವಾಗಲೂ ನಮಗೆ ಹರಟೆ, ಆಟ; ಪಾಠದ ಮಾತೇ ಇಲ್ಲ. ತತ್ತ್ವಶಾಸ್ತ್ರದಲ್ಲಿ ಎಂ.ಎ. ಡಿಗ್ರಿ ಪಡೆದ ಆದರ್ಶಜೀವಿಯನ್ನು, ಒಂದನೇ ಎರಡನೇ ತರಗತಿಯಲ್ಲಿ ಒದ್ದಾಡುವ ಹಳ್ಳಿ ಹುಡುಗರಿಗೆ ಪಾಠ ಹೇಳಲು ಬಿಟ್ಟರೆ ಏನು ಪಾಠ ಹೇಳಿಯಾನು? ವ್ಯಾಸರಾಯರು ಸಿಗರೇಟು ಸೇದುತ್ತಿದ್ದರು. ನಾವು ತುಂಡುಗಳನ್ನು ಆಯ್ದು ಸೇದಿದೆವು. ಅವರಂತೂ ನಾವು ತುಂಡುಗಳನ್ನು ಆಯುವುದನ್ನು ಕಂಡರೂ ನಕ್ಕುಬಿಟ್ಟು ಸುಮ್ಮನಿರುತ್ತಿದ್ದರು. ನಮಗಂತೂ ಹಾರುವ ಮಂಗಕ್ಕೆ ಏಣಿ ಹಾಕಿಕೊಟ್ಟಂತಾಯಿತು! ಮೇಷ್ಟರು ದೊಡ್ಡ ದೊಡ್ಡ ಕೊಬ್ಬಿ ಬೊಜ್ಜು ಬೆಳೆದ ಗ್ರಂಥಗಳನ್ನು ಓದುತ್ತಾ ತಲ್ಲೀನರಾಗಿ ಬಿಡುತ್ತಿದ್ದರು. ಉಪ್ಪರಿಗೆಯಲ್ಲಿ ನಾವು ಮಾಡಿದ್ದೇ ಮಾಟ, ಆಡಿದ್ದೇ ಆಟ! ಹೆಚ್ಚೇನು? ವ್ಯಾಸರಾಯರ ಕಾಲದಲ್ಲಿ ಮಹಡಿಯ ಕಾಲೇಜೇ ಆಟದ ರಂಗವಾಯಿತು.! ಆಟವೇ ಪಾಠವಾಯಿತು! “ವ್ಯಾಸರಾಯರೇ ಯಾವಾಗಲೂ ಮೇಷ್ಟರಾಗಿರಲ್ಲಪ್ಪ” ಎಂದು ದಿನವೂ ನಾವು ದೇವರನ್ನು ಬೇಡುತ್ತಿದ್ದೆವು. ಈಗಲೂ ಕೂಡ ವ್ಯಾಸರಾಯರನ್ನು ಗುರುಗಳಾಗಿ ತೆಗೆದುಕೊಳ್ಳಲು ಸಿದ್ದನಾಗಿದ್ದೇನೆ. ಅದರಲ್ಲಿ ನನ್ನ ಗೌರವಕ್ಕೇನೂ ಕುಂದಿಲ್ಲ. ವ್ಯಾರಾಯರು ಎಲ್ಲಿಯೇ ಇರಲಿ, ಬದುಕಿರಲಿ, ಸತ್ತಿರಲಿ, ಇಹದಲ್ಲಿರಲಿ, ಪರದಲ್ಲಿರಲಿ, ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ಭಕ್ತಿಯಿಂದ ನಿವೇದಿಸುತ್ತೇನೆ. ಅವರು ಮಹನೀಯರು, ಜ್ಞಾನಿಗಳು, ಋಷಿಗಳು! ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ ಎಂಬಂತೆ “ಹಳ್ಳಿಗಮಾರರು” ವ್ಯಾಸರಾಯರ ಮಹಿಮೆ ಘನಶೀಲಗಳನ್ನು ಅರಿಯದೆ ಅವರನ್ನು ಅರೆಮರುಳರ ಗುಂಪಿಗೆ ಸೇರಿಸಿದ್ದರು. ಪಾಠಕಮಹಾಶಯ ಇಲ್ಲಿಗೆ ಐಗಳ ಮಾಲೆ ಮುಗಿಸುತ್ತೇನೆ. ನಿಮಗೂ ಬೇಸರವಾಗಿರಬಹುದು. ಒಂದು ವೇಳೆ ನಿಮಗಾಗದಿದ್ದರೂ ನನಗಾಗಿದೆ! ನಮಸ್ಕಾರ!

  ಮುಂದಿನ ಭಾಗ : http://kannadadeevige.blogspot.in/p/blog-page_87.html  ತೋಟದಾಚೆಯ ಭೂತ



**********

ಕಾಮೆಂಟ್‌ಗಳಿಲ್ಲ: