ಕಿಷ್ಕಿಂಧಾ ಸಂಪುಟಂ ಸಂಚಿಕೆ : ಸಂಚಿಕೆ 6 – ನೀಂ ಸತ್ಯವ್ರತನೆ ದಿಟಂ

ಮುಗಿದುದಾ ಮಂತ್ರಣದಿರುಳ್ ; ಇಂದ್ರ ದಿಙ್ನಯನಕ್ಕೆ
ನೀರುರ್ಕ್ಕಲೆಮೆದೆರೆದುದೊಯ್ಯನೆ ಉಷಃಕಾನ್ತಿ.
ಋಶ್ಯಮೂಕದ ಶಿಖರ ವೇದಿಕೆಯೊಳಿರ್ದರಿಗೆ
ತೋರ್ಪುದು ನಭಃಪಾರವಿಶ್ರಾಂತಮಾ ಗಿರಿಪಂಕ್ತಿ,
ತೆರೆಮೇಲೆ ತೆರೆಯೇರ್ದು ಪರ್ವಿದ ಸಮುದ್ರಮಂ
ಪ್ರತಿಕೃತಿಸುವಂತೆ. ತಣ್ಮಲೆಯೆಲರೊಳಲೆದುದಯ್
ಸಿಪಿಲೆವಕ್ಕಿಯ ಸಿಳ್ಳಿನಿಂಚರಂ !
“ಪೊಳ್ತೇರ್ವ
ಮುನ್ನಮಲ್ಲಿರ್ಪಮೆಂಬಾತನೇಕಿನ್ನೆಗಂ
ಬಾರನೈ, ಸೌಮಿತ್ರಿ ? ಮರ್ಕಟಧ್ವಜರಿವರ್
ವಾನರರ್ ! ಕಪಿಬುದ್ಧಿ ತಾನತಿಚಂಚಲಂ ! ಮತ್ತೆ         ೧೦
ಬೇರೊಂದನೇನಾನುಮಂ ನೆನೆದನೇಂ ರುಮಾ
ವಲ್ಲಭಂ ?”
ಕಿಷ್ಕಿಂಧೆಯತ್ತಣ್ಗೆ ಕಣ್ಣಾಗಿ,
ಬೇರೆ ತಾಂ ಮಣೆಯಾಗಿ ಮರದಡಿ ಕುಳಿತ ರಾಮಂಗೆ,
ಬಳಿ ನಿಂದು ನೋಡುತಿರ್ದವರಜಂ : “ಹೇ ಆರ್ಯ,
ಅನಾರ್ಯರಿವರಂ ನಂಬಿ ಆರ್ಯಕುಲದೇವಿಯಂ
ನಾಮೆಂದು ತಂದಪೆವೊ ನಾನರಿಯೆ ! ಇನ್ನೆಗಂ
ಹೆರರ ಕಯ್ ಹಾರೈಸದೆಮ್ಮಾರ್ಪನಾಂ ನೆಮ್ಮಿ
ಮುಂಬರಿದ ನಮಗೀಗಳೇಕೀ ಕಪಿಧ್ವಜರ
ಕಾಡದಟಿನೊಂದು ಹಂಗು ? ಇವರ ಮನೆಯಂ ತಿದ್ದಿ
ನಮ್ಮ ಕೊನೆಯಂ ಸಾಧಿಪನಿತರೊಳೆ ದೇವಿಗೇಂ         ೨೦
ಗತಿಯಹುದೊ ? ದೀರ್ಘಸೂತ್ರಿಗಳಿವರ ಸಂಗದಿಂ
ಕಿಡುವುದೆ ದಿಟಂ ನಮ್ಮ ಕಜ್ಜಂ !”
ಸಹೋದರನ
ಕಿಸುಗಣ್ಚಿದಾನನವನೀಕ್ಷಿಸುತೆ ರಾಘವಂ
ಸಂತೈಸಿದನು ಇಂತು : “ಊರ್ಮಿಳೇಶನೆ, ತಾಳ್ಮೆ ! ವಾನರರ್
ನೀನಾಡುವನಿತು ಕೀಳುಗಳಲ್ತು ;
ನಮ್ಮದಟು ನೀನೂಹಿಪನಿತು ಬಲ್ಲಿತುಮಲ್ತು.
ಕಿರಿದಲ್ತು ನಮ್ಮ ಮುಂದಿಹ ಕಜ್ಜದುಜ್ಜುಗಂ ;
ಮೇಣಲ್ಪಮೆಂದರಿಯದಿರ್ ದೈತ್ಯವಿಕ್ರಮಂ.
ನಿನಗಿನೇನಸಿಯಲ್ತು ನನ್ನ ಬಗೆಯುಬ್ಬೆಗಂ
ದೇವಿಯನ್ವೇಷಣೆಗೆ, ರಕ್ಷಣೆಗೆ, ರಾಕ್ಷಸರ ಮೇಣ್           ೩೦
ವಧೆಗೆ. ಲಕ್ಷ್ಮಣ, ನೀನು ಕಲಿಯಾದೊಡಂ ನಮಗೆ
ಬೇಳ್ಕುಮೀ ಮಲೆಯರ ನೆರಂ. ಕೆಳೆಯರೊಲ್ಮೆಯಂ
ಬಿಟ್ಟು ಕಳೆವುದು ಬರಿಯ ಬೆಳ್ತನಂ. ಮಹಿಮರಯ್
ಕಪಿಗಳೋರೊರ್ವರುಂ. ನಿನಗರಿವಹುದು ಮುಂದೆ.
ಕೈಕೊಳೆ ಮಹತ್ಕಾರ್ಯಮಂ, ಮಾನವನ ಮಹಿಮೆ
ಮೈದೋರ್ಪುದೈ …. ಪೂಣ್ದೆವಾ ರವಿತನೂಜನುಂ
ನಾನುಮಗ್ನಿಯೆ ಸಾಕ್ಷಿಯಾಗಿ ಮಿತ್ರತ್ವಮಂ.
ತಗದು ಮಿತ್ರದ್ರೋಹಮಿನಕುಲಕೆ.”
ಅಗ್ರಜಗೆ
ಮೌನದೊಪ್ಪಿಗೆಯಿತ್ತು ಸೌಮಿತ್ರಿ ರವಿಯುದಯ
ದೃಶ್ಯಮಂ ನಿಟ್ಟಿಸುತ್ತಿರೆ, ಕೇಳ್ದುದೊಂದದ್ಭುತಂ            ೪೦
ರಣಕಹಳೆ, ಬೆಳಗಿನ ಗಾಳಿ ತಲ್ಲಣಿಸಿ ಕಂಪಿಸಿರೆ,
ಸುಗ್ರೀವನೈತಂದನಾಂಜನೇಯಾದಿಗಳ
ಮುಂದೆ, ವಾನರಕುಲದ ಯುದ್ಧಪದ್ಧತಿಯಂತೆ
ಭೈರವಾಭೀಳವೇಷಿ ! ರಘುತನೂಜರ ಕಣ್ಗೆ
ಬೆಕ್ಕಸಮೆರಗಿದತ್ತು, ಹಿತಭಯಾನ್ವಿತಮಾಗಿ,
ಕಂಡಾ ವಿಚಿತ್ರ ಸಖನಂ : ರಕ್ತವರ್ಣಂಗಳಂ
ಪೊದೆದ ಸಂಧ್ಯಾ ಮೇಘವೋ, ಕೇಸುರಿಗಳಿಂ
ಪುದಿದ ಧೂಮದೇಹಾಗ್ನಿಯೋ, ವಿಪಿನ ಸುಂದರ
ಚೈತ್ರಮಾಸದ ಫುಲ್ಲ ಪುಷ್ಪಮಯ ಕಿಂಶುಕವೊ,
ಚಂದ್ರಾಂಬರಾ ನಿಶೀಥಿನಿಯೊ ಪೇಳೆಂಬಿನಂ   ೫೦
ರಕ್ತವಸ್ತ್ರಂಗಳಿಂ ರಕ್ತವರ್ಣಂಗಳಿಂ
ಕೆಂಬಣ್ಣವೂಗಳಿಂ ಕೆಂಬಕ್ಕಿಗರಿಗಳಿಂ
ವ್ಯೋಮಾಭ ರೋಮಮಯ ದೇಹಮನಲಂಕರಿಸಿ
ಭೀಕರಾಯುಧಿಯಾಗಿ ಕಪಿಕೇತನವ ತೂಗಿ
ಸುಗ್ರೀವನೈತಂದನೈ. ಸಮರ ಸಜ್ಜಿತಂ,
ದ್ವಂದ್ವ ಯುದ್ದ ವಿಶಾರದಂ ! ಕಂಡೊಡನೆ ಆ
ಕಪೀಂದ್ರನಂ, ಅಪ್ರತಿಮ ರಣಧೈರ್ಯ ಸಾಂದ್ರನಂ,
ತಲೆತಗ್ಗಿದುದು ಶಂಕೆ, ಸಪ್ರಾಣಿಸಿತ್ತಾಶೆ,
ಹೆಡೆಯೆತ್ತಿದುದು ನೆಚ್ಚು ಕೆಚ್ಚಿನೊಡನೆಣೆಯಾಡಿ
ರಘುಜರಾತ್ಮದಲಿ.
ಸಿಸುನೇಸರೆಳಗದಿರ್ಚವರಿ, ೬೦
ಪೊನ್ನೀರೊಳಳ್ದ ಕುಂಚದ ತೆರದಿ, ಕಾಂಚನದ
ಕಾನ್ತಿಯಂ ಸಿಂಚಿಸುತ್ತಿರೆ ಕಾನನದ ಮೆಯ್ಗೆ,
ತರತರ ಸರದ ಕೊರಲ ಬನವಕ್ಕಿಯಿಂಚರಂ
ಕರೆಯುತಿರಲಿಂಪುವೊನಲಂ ಕಿವಿಗೆ, ರಮಣೀಯಮಾ
ಕಾನನಗಿರಿಶ್ರೇಣಿ ಸುಗ್ರೀವ ರಾಮರಂ,
ಕಾನನಪ್ರಿಯರಿರ್ವರಂ, ಮುಗುಳ್ನಗೆವೆರಸಿ
ಪರಸುತಿರೆ, ಇಳಿದರವರಾ ಋಶ್ಯಶೃಂಗದಿಂ
ಕರುತ್ತು ಕಿಷ್ಕಿಂಧೆಯಂ. ಇಳಿದರೇರಿದರಂತೆ
ಸೇರಿದರ್ ವಾಲಿ ಪಾಲಿತ ದುರ್ಗ ನಗರಮಂ
ಸುತ್ತಿ ಮುತ್ತುತೆ ದಟ್ಟಮಿಡಿದೇರ್ದು ಪರ್ವಿದಾ   ೭೦
ಗಹನ ವನಮಂ. ಪಳುಮರೆಯೊಳಡಗಿ, ಪಣ್ಮರಕೆ
ಮರಸು ಕೂತವರಂತೆ, ಮೋನದಿಂದೆಳ್ಚರಿಂ
ರಾಮಾದಿಗಳ್ ನಿಟ್ಟಿಸಿರೆ ಕಾದು ಕಾತರಿಸಿ ;
ಸುಗ್ರೀವನೊರ್ವನೆಯೆ ಮುಂಬರಿಯುತೊಂದರೆಯ
ಬಂಡೆಯನಡರಿ, ನಿಮಿರ್ ನಿಂತು, ಕಾಡೆಲ್ಲಮಂ
ದಿಟ್ಟಿಸಿದನಾಲಿಯಿಂದಾಲಿಂಗಿಪಂದದೊಳ್
ತನ್ನೊಲಿದ ಬೀಡೆಲ್ಲಮಂ. ಆ ವನಪ್ರೇಮಿ
ವಿರಹ ರೋಷದಿ ಸುಯ್ದನೌಡುಗಚ್ಚಿದನೊಡನೆ
ಗರ್ಜಿಸಿದನಚಲವೃಷಭಗೆ ಮಲೆತು ಮೂದಲಿಸಿ
ಗುಟುರಿಕ್ಕುವಂತೆ. ಮಲೆ ಮಾರ್ಗುಡುಗಿತರೆಬಂಡೆಗಳ್  ೮೦
ನಡುಗಿದುವೆಡಕೆ ಬಲಕೆ ; ತೊನೆದುವು ಮರದ ಹಂತಿ ;
ಚೀರಿದುವಡವಿವಕ್ಕಿ ; ಚಕಿತವಾದುವು ಜಿಂಕೆ
ಕಾಳ್ಕೋಣ ಪಂದೆ ಪೆರ್ಬುಲಿ ಸಿಂಹಗಳ್ ದಂತಿ.
ತೆರೆತೆರೆಯುರುಳಿ ಪರಿದು ಆ ಗರ್ಜನೆಯ ಸಿಡಿಲ್
ಶಾಂತವಾಗಲ್, ಮರಳಿ ಹೆಪ್ಪಾದವೋಲಾದುದೈ
ದಟ್ಟಡವಿಮೋನದ ಕಡಲ್.
ಮೊನೆಯಾದುದುಬ್ಬೆಗಂ
ನೋಳ್ಪರ್ಗೆ. ಮುಟ್ಟಿ ಹಿಡಿವೋಲಾದುದಾರಣ್ಯ
ನೀರವತೆ : ಮರಗಳೊಳು ಗಾಳಿ ಸುಯ್ಯುವ ಸದ್ದು ;
ತರಗೆಲೆಗಳುದುರಿ ಬೀಳುವ ಸದ್ದು ; ಪೂವಕ್ಕಿಗಳ್
ಬಂಡುಂಡುಲಿವ ಸದ್ದು ; ಬಣಗು ಕಡ್ಡಿಗಳಲುಗಿ  ೯೦
ಮರಗೋಡಿನಿಂದುರುಳಿ ನೆಲಕೆ ಕೆಡೆಯುವ ಸದ್ದು ;
ಸಸ್ಯಂಗಳುಚ್ಛ್ವಾಸಿಸುವ ಸದ್ದು ; ಬೆಳೆವ ಪುಲ್ ;
ನಿದ್ದೆಗಲ್ : ಮುಟ್ಟಿ ಹಿಡಿವೋಲಾದುದಾರಣ್ಯ
ನೀರವತೆ ! ಮರಪಸುರ ಕಂಡಿಕಂಡಿಗಳಿಂದೆ
ಬಿಸಿಲಿಣುಕಿ ಶಿಶುವಿನೋಲಾಡಿದುದು ನೆಲದಲ್ಲಿ,
ಕಣ್ಣು ಕಣ್ಣಿನ ರಂಗವಲ್ಲಿಯ ವಿಲಾಸಮಂ
ಚೆಲ್ಲಿ !
ನೋಡುತ್ತಾಲಿಸಿರಲಿಂತು, ಕೇಳ್ದತ್ತು,
ಬೆಟ್ಟ ಬಂಡೆಗಳದಿರೆ, ಮರದ ಕೋಡುಗಳುದುರೆ,
ಸಿಡಿಲ ಪರೆಯೋಲ್ ಕೊಡಂಕೆಯನಿರಿದಲೆವ ಚಂಡೆ !
ಕೂಡೆ ಕೇಳ್ಪುದು ವಾಲಿಯಾರ್ಭಟಂ, ಚಂಡೆಯಂ         ೧೦೦
ಮೀರ್ದು, ಧಿಗಿಲೆಂದತ್ತು ರಾಮನೆರ್ದೆ ; ಹನುಮನಂ
ನೋಡಿದನು ಸೌಮಿತ್ರಿ ; ಮರದ ಮರೆವೊಕ್ಕಂತೆವೋಲ್
ಹದುಗಿ ನಿಂದುದು ನೀಲ ನಳ ಜಾಂಬವಪ್ರತತಿ !
ಬೆಟ್ಟ ಗುಡುಗಿತ್ತಲ್ಲಿ ! ಪಳು ನಡುಗಿತ್ತಲದೊ !
ಕಾಕು ಕೇಳಿಸಿತಲ್ತೆ ಆ ಪೆರ್ಬ್ಬಲಸಿನೆಡೆ ? ಇತ್ತ
ನೋಡಿತ್ತಲಾಲಿಸಾ ತರಗೆಲೆಯ ಸಪ್ಪುಳಂ !
ಕಾಣಲ್ಲಿ ಮುರಿಗೊಳ್ಳುತಿದೆ ಮರದ ತಲೆಸೊಪ್ಪು !
ಮತ್ತಮದೊ ಚಂಡೆದನಿ ! ವೀರಾಟ್ಟಹಾಸಮದೊ
ಮಾರುತ್ತರಂ ! ಮತ್ತೆ ಗರ್ಜಿಸಿದನದೊ ನಮ್ಮ
ಸುಗ್ರೀವ ! ಮತ್ತೆ ಅದೊ ಪ್ರತಿಗರ್ಜನಂ ! ದಿಟಂ,          ೧೧೦
ವಾಲಿಯೆ ದಿಟಂ ! ಎಲ್ಲಿ ? ನೋಡಲ್ಲಿ ; ಓ ಅಲ್ಲಿ !
ಅದೆ ವಾಲಿ !
ಸಿಂಹದೋಲಾರ್ಭಟಿಸಿ, ಪುಲಿಯವೋಲ್
ಚಿಮ್ಮಿದನ್ ಪಳುಗಬ್ಬದಿಂ ! ಚಿಮ್ಮಿ, ತಮ್ಮನಂ,
ರಣಾವೇಶಿ ರಣವೇಷಿಯಂ, ನೋಡಿದನ್ ವಾಲಿ !
ಕೆಂಪಾದುವಾಲಿ ; ರೌದ್ರತೆವೆತ್ತುದಾನನಂ ;
ಕೊಂಕುದುಟಿ ಮೇಲೆ ಕುಣಿದುವು ಮೀಸೆ. ಮತ್ತೊಮ್ಮೆ
ಮೇಲೆ ನಡುಗುವೋಲಬ್ಬರಿಸಿ ನುಗ್ಗಿದನ್ ಚಿಮ್ಮಿ
ಸುಗ್ರೀವನೆಡೆಗೆ ! ತನುಕಾಂತಿಯಿಂ, ವಸ್ತ್ರದಿಂ,
ವರ್ಣದಿಂ, ಮೇಣಲಂಕಾರದಿಂ ಸಮತೆವೆತ್ತಾ
ಸಮರ ಕಲಿಗಳೊಳ್, ಸುಗ್ರೀವನಾರ್ ವಾಲಿಯಾರ್     ೧೨೦
ತಿಳಿಯಲರಿಯದ ಬೆಮೆಯ ಬೆಳ್ಪಿಂದೆ, ಬಿಲ್ವೊತ್ತ
ದಾಶರಥಿ ಪಲ್ಗಚ್ಚಿದನ್ ; ಭೀಷ್ಮಪ್ರತಿಜ್ಞೆಯಂ
ನೆನೆನೆದು, ಸಿಗ್ಗಿಂದೆ ಬದ್ಧಭ್ರುಕುಟಿಯಿಂದೆ
ನೋಡುತಿರ್ದನ್ ಬಿಲ್ಲುಬೆರಗಾಗಿ, ಹೋರಾಡುತಿರೆ
ಹೋರಿಗಳೆರಡು, ಹೊಂಚುಹುಲಿ ದಿಟ್ಟಿಪೋಲಂತೆ !
ನುರ್ಗ್ಗಿ ಬರ್ಪತುಲ ಬಲಶಾಲಿಯಂ, ವಾಲಿಯಂ,
ಕಂಡು ತೆಕ್ಕನೆ ಕೆಲಕೆ ಸಿಡಿಯುತೆ ರುಮಾಪ್ರಿಯಂ
ಗುದ್ದಿದನ್ ನೆತ್ತಿಯಂ. ಕರ್ಗಲ್ಲು ನುರ್ಗುನುರಿ
ವೋಗುವಾ ಘಾತಕ್ಕೆ ಮೆದುಳ್ ಕದಡಿದೋಲಂತೆ
ತತ್ತರಿಸಿದಿಂದ್ರಜಂ, ಮತ್ತೆ ಚೇತರಿಸಿದನ್.
ಹತ್ತಿರಿರ್ದೊಂದರೆಯನೆತ್ತಿ ಸಿಡಿರೋಷದಿಂ
ಬಿಟ್ಟನ್ ಶತಘ್ನಿ ಗುಂಡಿಡುವಂತೆ. ಸತ್ತನೇ
ಸುಗ್ರೀವನೆಂಬನಿತರೊಳೆ, ಲಂಘಿಸಿ ಕೆಲಕ್ಕೆ,
ಗುರಿತಪ್ಪಿದಾ ಬಂಡೆ ಬಡಿದುದೊಂದವನಿಜದ
ಗೂನ್ಗಂಟೊರಟು ಬುಡಕೆ. ಬೇರುಗಳುಡಿಯೆ, ಕೊಂಬೆ
ಬರಲಾಗಲೆಲೆಯುದುರಿ, ಮರಮೊರಗಿದುದು ಲರಿಲ್
ಲರಿಲ್ಲರಿಲ್ಲೆಂದು, ಆ ವೃಕ್ಷಮನೆ ಗದೆಗೈದು
ಸುಗ್ರೀವನಪ್ಪಳಿಸುತಿರೆ ವಾಲಿಯಂ, ಅದಂ
ಕಪಿಮುಷ್ಟಿಯಿಂ ಪಿಡಿದು ಜಗ್ಗಿಸೆಳೆಯುತೆ ವಾಲಿ :
“ಕೇಳೆಲವೊ ಸುಗ್ರೀವ, ನೀಂ ತಮ್ಮನೆಂಬೊಲವರಕೆ,    ೧೪೦
ನಿನ್ನಾ ಪತಿವ್ರತಾ ಸತಿಯೈದೆತನಕಾಗಿ,
ದೇವಿ ತಾರೆಯ ವಚನಕಾಗಿ, ಪುಸಿಗಾಳೆಗಂ
ಗೊಟ್ಟೊಡತಿಮಲೆತು ಕೊಬ್ಬಿದೆಯೆಲಾ ? ಹಗೆತನಂ
ಬಾಡಿದೆನ್ನೆರ್ದೆಗೆ ನೇಹಂ ಮೂಡುತಿರ್ದಂದೆ,
ಕೂಡಿಕೊಂಡಾವನೋ ಬಣಗು ಬಡಗರಸನಂ,
ಕೆಣಕಿದಪೆ ಮತ್ತೆಯೆನ್ನಂ. ಮರುಳೆ, ಸಾಹಸದಿ
ವಾಲಿಯಂ ಗೆಲ್ದವರದಾರುಂಟೊ ? ರಾವಣನೆ
ಹೆದರಿ, ಮೈತ್ರಿಯನಾಶ್ರಯಿಸಿ ಬರ್ದುಕುತಿರ್ಪನೆನೆ
ಕಾವರಾರೈ ನಿನ್ನನೆನ್ನ ಕೋಪಪ್ರಳಯ
ಫಣಿಗರಳದಿಂ ?” ಎನುತೆ ತಮ್ಮನ ಕಯ್ಯ ಗದಾ          ೧೫೦
ವೃಕ್ಷಮಂ ಕಸಿದು ಬಿಸುಟನ್ ; ನೆಗೆದು ಮೇಲ್ವಾಯ್ದು,
ಬಿಗಿದಪ್ಪಿದನ್ ಭುಜದ ವಾಸುಕಿಯಿನವರಜನ
ಮೆಯ್ಯ ಮಂದರವನುರ್ವರೆಗಿರ್ವರುರುಳ್ವಂತೆ !
ತಿರೆಗುರುಳಿ ಹೊದೆಯ ಮರೆಯಲಿ ಹೋರುತಿರ್ದರಂ
ಕಾಣಲಾರದೆ ಕಾತರಿಸುತಿರೆ ವಿಯದ್ವರ್ಣಿ,
ಕೇಳಿಸಿತು ದಿಡ್ಡುದಿಡ್ಡೆಂಬ ಕೈಗುದ್ದುಗಳ
ಸದ್ದುಗಳ ಮೀರುತೇರ್ದಾರ್ತನಾದನಂ. ಒಡನೆ ಹಾ
ಓಡುತಿರ್ದಾ ರಾಮಮಿತ್ರನಂ ಬೆಂಬತ್ತಿ
ಕಾಣಿಸಿದನಟ್ಟುತಿರ್ದಾ ವಾಲಿ. ಮಿತ್ರನಾರ್
ಶತ್ರುವಾರೆಂಬನಿತರೊಳೆ ದಟ್ಟ ಪಳುವದೊಳ್ ೧೬೦
ಮರೆವೋದರಿರ್ವರುಂ.
ರಾಮನಂಬಿನ ನೆರಂ
ಬಿಸಿಲ್ಗುದುರೆಯಾದುದಂ ಕಂಡು ಸುಗ್ರೀವಂಗೆ
ನೆಚ್ಚುಗೆಡೆ, ವಾಲಿಮುಷ್ಟಿಯ ವಜ್ರಘಾತಕ್ಕೆ
ಮೈಮುರಿಯೆ, ಕೆನ್ನೀರುಮೊಕ್ಕಲೊಳಸೋರುತ್ತೆ
ಹಿಮ್ಮೆಟ್ಟಿದನ್ ಮತಂಗಾರಣ್ಯ ರಕ್ಷಣೆಗೆ.
ಋಷಿಶಾಪಮಂ ನೆನೆದು, ಬದುಕು ನಡೆ ಹೋಗೆಂದು
ಮುಳಿಸಂ ನುಡಿದು, ವಾಲಿ ಪಿಂತಿರುಗಿದನ್ ತನ್ನ
ಕಿಷ್ಕಿಂಧೆಗೆ.
ಇತ್ತ ರಾಮಾದಿಗಳುಮರಸುತ್ತ
ಬಂದು ಕಂಡರು ವೈರಿಮುಷ್ಟಿ ಪ್ರಹಾರದಿಂ
ಜರ್ಜರೀಕೃತದೇಹನಂ, ರುಧಿರ ಸಿಕ್ತಾಂಗನಂ, ೧೭೦
ಕ್ಲಾಂತ ಸುಗ್ರೀವನಂ. ಕಣ್ಬನಿವೆರಸಿ, ನಾಣ್ಚಿ,
ಬಾಗಿ, ನೆಲನಂ ನೋಡುತಾ ದೀನವಾನರಂ,
ಕೆಳೆಯನಿರ್ಕೆಯ ಕರುಣ ದುಃಸ್ಥಿತಿಗೆ ಮರುಗಿರ್ದ
ದಿನನಾಥಕುಲಸಂಭವಂಗೆ : “ನೀನಿಂತೇಕೆ
ನಂಬಿಸೆನ್ನಂ ಕೊಂದೆ, ಓ ಕರುಣಿ ! ವಾಲಿಗೇಂ
ಬೇಹುಗಾರನೊ ? ಕೊಲ್ಲಿಸಲ್ಕೆನ್ನನೆಂದಿಂತು
ಪುಸಿವೇಳುತಾರ್ಯನೀತಿಯ ಮೆರೆದೆಯಲ್ತೆ ? ನಾಂ
ಮುನ್ನಮೊರೆಯೆನೆ ವಾಲಿ ದುಸ್ಸಾಧ್ಯನೆಂಬುದಂ
ನಿನಗೆ ?” “ಮನ್ನಿಸು, ವಾನರೇಂದ್ರ, ಮನ್ನಿಸೆನ್ನನ್.
ಕೋಳುವೋದೆನ್ ರೂಪಸಾದೃಶ್ಯದಿಂ, ಗೆತ್ತು  ೧೮೦
ನಿನ್ನಣ್ಣನಂ ನಿನಗೆ. ಮೋಸವೋಗೆನೊ ಮರಳಿ.
ಏಳು, ನಡೆವಂ ಮತ್ತೆ ಕಿಷ್ಕಿಂಧೆಯತ್ತಣ್ಗೆ.
ಬೇಂಟೆಯೊಳ್ ಸೋವಿನವರೆಂತು ಪಳುವಂ ನುರ್ಗ್ಗಿ
ಬಿಲ್ಲಿರ್ಪೆಡೆಗೆ ತರುಬುತೆಳ್ಬುವರೊ ಹಕ್ಕೆಯ
ಮಿಗಂಗಳಂ, ನೀನಂತೆವೋಲ್ ಕರೆದು, ವಾಲಿಯಂ
ಪೊರಮಡಿಸವನ ಕೋಂಟೆಯಿಂ. ಕಾಂಬೆ ನೀನೊಡನೆ
ಬಾಣದೇರಿಗೆ ನೆತ್ತರಂ ಕಾರ್ದು ಕೆಡೆದಳಿವ
ಗೃಹವೈರಿಯಂ ! ಕುರುಪಿರ್ಕೆ ಈ ಪೂವಿಡಿದ ಬಳ್ಳಿ
ನಿನ್ನ ಕಂಠಕ್ಕೆ : ಜಯಮಾಲೆಯೆಂದೆಯೆ ತಿಳಿಯ
ನೀನಿದನ್ !” ತುಡಿಸಲ್ಕೆ ದಾಶರಥಿ ಹೂವಿಡಿದ            ೧೯೦
ಕಾಡುಬಳ್ಳಿಯನವನ ಕೊರಳಿನಲಿ, ಹಾಲ್ಗರಿಯ
ಬೆಳ್ವಕ್ಕಿ ಸಾಲ್ಗೊಂಡು ಮಾಲೆಗಟ್ಟಿದ ಬಯ್ಗು
ಮುಗಿಲಂತೆವೋಲೆಸೆದನಾ ವಾನರಂ !
ಮೇಲೆ, ಕೇಳ್,
ತೆರಳ್ದರವರಿನ್ನೊರ್ಮೆ ಕಿಷ್ಕಿಂಧೆಯತ್ತಣ್ಗೆ
ಸುಗ್ರೀವನಂ ಕೂಡಿದುನ್ಮೀಲಿತೋತ್ಸಾಹದಿಂ
ಪೆರ್ಚಿ.
ಅನ್ನೆಗಮತ್ತಲಾ ವಾಲಿ ತಮ್ಮನಂ
ದ್ವಂದ್ವಯುದ್ಧದಿ ಗೆಲ್ದು ಎಳ್ಬಟ್ಟಿದುರ್ಕಿನಿಂ
ಸೊರ್ಕಿ ಪೊಕ್ಕನ್ ತನ್ನ ಕಿಷ್ಕಿಂಧೆಯಂ. ತಾರೆ,
ಕೊಡಗಿನುಡುಗೆಯ ಸೀರೆ ಸಿಂಗರಿಸಿದಾ ನೀರೆ,
ಮರ್ದ್ದಿಕ್ಕುತೇರ್ಗಳ್ಗೆ, ಬಿಜ್ಜಣಿಕೆವೀಸುತ್ತೆ,          ೨೦೦
ಕೈಸೋಂಕಿನಮೃತದಿಂ ಬಳಲಿಕೆಯನಾರಿಸುತೆ
ಬೆಸಗೊಂಡಳೇರ್ವೆಸನದಾಗುವೋಗಂ. ಗೆಲ್ದು
ಬಂದಿರ್ದೊಡಂ ವಾಲಿ, ಖಿನ್ನಮುಖದಿಂ ಪ್ರಿಯೆಗೆ
ಸತಿಗೊರೆದನಿಂತು ಹದಿಬದೆಗೆ : “ನೀನೆಂದವೊಲೆ
ರುಮೆಯೈದೆತನಕೆ ಕೇಡಡಸದೋಲಾತನಂ
ಬಡಿದಟ್ಟಿ ಬಂದೆ …. ಮನಮೇಕೊ ಸಂತಪಿಸುತಿದೆ.
ಕಾರಣವನರಿಯೆ …. ಮೇಣರಿತ ಕತದಿಂದಿಂತದೇಂ
ತಪಿಸುತಿರ್ಪುದೊ ? …. ಗುಹೆಯೊಳೆನ್ನಂ ಮುಚ್ಚಿ, ತೊರೆದು
ಬಂದನೆಂಬಾಕ್ರೋಶದುಲ್ಬಣದೊಳಂದು ನಾಂ
ತಮ್ಮನ ವಿನಯಮಂ ಕಿವುಳ್ಗೇಳ್ದು, ಆತನಂ    ೨೧೦
ಪೆತ್ತಮ್ಮನೂರಿಂದೆ ಪೊರನೂಂಕಿದೆನ್, ತನ್ನುರುವ
ಕೆಳೆಯರ್ವೆರಸಿ ; ಬೇಯಿಸಿದೆನಾ ರುಮಾದೇವಿಯಂ
ಸಿರಿಮನೆ ಸೆರೆಯೊಳಿಟ್ಟು ; ಕಡೆಗಣ್ಣಿದೆನ್ ನನ್ನ
ಪೆಸರ ಪಳಿಯಂ, ನಿನ್ನ ಹಿತವಾಕ್ಯಮಂ …. ಮನಂ,
ಓರೊರ್ಮೆ, ಗೆಯ್ದನ್ನೆಯದ ಕಜ್ಜಮಂ ತಿರ್ದ್ದಿ,
ತಮ್ಮನಂ ತಾಯ್ನೆಲಕೆ ತರಲೆಳಸಿತಾದೊಡಂ,
ತಡೆಯಾಯ್ತು ಪುಸಿಬೀರದೊಂದು ಪುಸಿಲಜ್ಜೆ. ಮೇಣ್
ಆತನುಂ ಮರುಕಮಂ ಕರುಣೆಯಂ ಮೂಡಿಸುವ
ಮಾರ್ಗಮನುಳಿದು ಮುಯ್ಗೆಮುಯ್ಯಾಗಿ ಕೋಪಮನೆ
ಕೆಣಕಿದನ್ ; ಕದಡಿದನೆದೆಯ ರೋಷ ಸಾಗರದಿ           ೨೨೦
ಬಡಬಾಗ್ನಿಯಂ ….. ಈಗಳುಂ ರಾಮನೆಂಬೊನಂ
ಮರೆ ನೆರಂಬಡೆದು …. ನಾನಾತನೆರ್ದೆಯಂ ಪತ್ತಿ
ಗುರ್ದ್ದಿಕ್ಕುವಾಗಳವನಂ ಕರೆದನಾದೊಡಂ
ತೋರ್ದನಿಲ್ಲಾ ಬೀರನಾವೆಡೆಯೊಳಂ ……”
ಮಾತು
ಮುಗಿವನ್ನೆಗಂ, ಕೇಳ್ದುದೊಂದಾರ್ಭಟಂ, ನಡುಗೆ
ಕಿಷ್ಕಿಂಧೆ ! “ಸುಗ್ರೀವನದೊ ಮತ್ತೆ !” ಎಂದೌಡು
ಕಚ್ಚಿ, ಕರಿಘೀಂಕೃತಿಯನಾಲಿಸುವ ಸುಪ್ತೋತ್ಥ
ಹರ್ಯಕ್ಷನೋಲಾದನಾ ವಾಲಿ ತಾನಾಭೀಳ
ರಕ್ತೇಕ್ಷಣಂ. ಹುಬ್ಬುಗಂಟಿಕ್ಕಿ ನೆಗೆದೆದ್ದು,
ತಡೆವ ತಾರೆಯ ಕೈಯನೋಸರಿಸುತಿರೆ ಕೆಲಕೆ,           ೨೩೦
ದಿಂಡುರುಳಿದಳ್ ನೆಲಕೆ ; ಕಾಲ್ವಿಡಿದಳಾಣ್ಮನಂ
ಬೇಡಿದಳ್ ಕಣ್ಬನಿಯ ಜೇನಿಳಿವ ತಾವರೆಯ
ಚೆಲುವೆ ! “ಮಾಣ್, ಮನದನ್ನ, ಮಾಣ್ ; ಮಾರದಿರ್ ಚಲಕೆ
ಜೀವನಶ್ರೇಯಮಂ. ನೀನೀಗಳೆನ್ನೊಡನೆ
ನುಡಿಯುತಿರ್ದುದನೆ ಪಿಡಿ : ವೀರರೌದಾರ್ಯಮಂ !
ಪತಿವ್ರತಾ ರಮಣಿಯಂ ಆ ರುಮಾದೇವಿಯಂ
ನೆನೆ. ಪಡೆದ ತಾಯನಂತೆಯೆ ತಂದೆಯಂ ನೆನೆ ;
ಅಂತೆವೋಲ್ ನಿಮ್ಮಿವರೆಳೆತನದ ಲೀಲೆಯಂ,
ತಾರುಣ್ಯದೋಲದುಯ್ಯಾಲೆಯಂ ನೆನೆ. ಪಿಂತೆ
ನಿಮ್ಮೊಳಿರ್ದಳ್ಕರೆಯ ಸಗ್ಗಮಂ ನೆನೆ.” ತಾರೆ ತಾಂ      ೨೪೦
ನುಡಿದೋರೆ, ಮುಗ್ಧನಾದನೆ ವಚನ ಮಂತ್ರದಿಂ -
ದೆಂಬಂತೆ, ವಾಲಿಗೊದಗಿತು ಶಾನ್ತಿ ; ತಮ್ಮನಂ,
ಅಣ್ಣ ಬಾ ಬಾರೆಂದು ಜೊಲ್ಲ ತೊದಳಿಂ ಚೀರ್ವ
ಸಣ್ಣ ಸುಗ್ರೀವನಂ, ನೋಳ್ಪರಾ ಕಣ್ಮಣಿಯ
ಚಿಣ್ಣನಂ, ಕಂದ ಸುಗ್ರೀವನಂ, ತನ್ನೊಲಿದ
ಮುದ್ದು ಸುಗ್ರೀವನಂ ಬೆನ್ನಿನೊಳ್ ಪೊತ್ತು, ತಾಯ್
ಕಂದ ಬಾರೆನ್ನುತಿರೆ, “ಉಪ್ಪು ಬೇಕೇ ಉಪ್ಪು ?”
ಎನುತೆ ತಾಂ ಪರಿದಾಡುತನಿಬರಂ ನಗಿಸಿದಾ
ಚಿಕ್ಕಂದಿನೊಂದು ಚಿತ್ರಂ ಸ್ಮೃತಿಗೆ ಮೈದೋರೆ,
ರೋಷಚ್ಯುತಂ ವಾಲಿ ಶಾಂತನಾದನ್. ಮೈತ್ರಿ            ೨೫೦
ಸಂಚರಿಸಿದುದು ಮನದಿ, ವೈರಮಂ ಕೆಲಕ್ಕೊತ್ತಿ.
“ನೆರಪುವೆನ್, ತಾರೆ, ಸುಗ್ರೀವನಂ ತಂದಿಂದು
ರುಮೆಗೊಸಗೆಯಂ. ಸಿಂಗರಿಸು ನಡೆ ನಿನ್ನ ತಂಗಿಯಂ.
ಚಿಕ್ಕಂದು ನಾವಾಡಿದುಪ್ಪಾಟಮಂ ಮತ್ತಿಂದು
ತೋರಿದಪೆನೆನ್ನ ತಮ್ಮಂಗೆ. ನೀನನ್ಯಮಂ
ಚಿಂತಿಸದಿರಾಂ ಪೋಗಿ, ಕಾಳೆಗದ ನೆವದಿಂದೆ,
ಪೊತ್ತು ತಹೆ ರವಿಸೂನುವಂ !”
ನಿಲ್ಲದಲ್ಲಿಂದೆ
ಪ್ರೋಲ್ಲಾಸದಿಂ ಪರಿದನಾ ಬೃಹದ್ಬಲಶಾಲಿ
ವಾಲಿ. ಕಿಷ್ಕಿಂಧೆಯ ದಿವಾಕರಂ ನಡುವಗಲ
ಹೊಸ್ತಿಲಂ ದಾಂಟೆ, ಪೂರ್ವಾಚಲಕೆ ಯಾತ್ರೆಯಂ         ೨೬೦
ತೊಡಗಿರ್ದುದಾಗಳೆ ತರುಚ್ಛಾಯೆ. ಪಿಂದಿಕ್ಕಿ
ಕೋಂಟೆ ಪೆರ್ಬಾಗಿಲಂ ಹೊರವಳಯದಡವಿಗೈ -
ತರುತಿಂದ್ರಜಂ ಕಂಡನಾ ವಿಪಿನ ಪುಷ್ಪಲತೆ
ಗ್ರೈವೇಯಮಾಗಿರ್ದ ಸುಗ್ರೀವನಂ, ವೈರಂ
ವೈರಾಗ್ಯಮೊಂದಿರ್ದೆರ್ದೆಗೆ ಕರುಣೆಯುಕ್ಕುತಿರೆ
ಮುನ್ನುಗ್ಗಿದನೊ ಅಣ್ಣನಪ್ಪಲೆಂದಾ ತಮ್ಮನಂ.
ಅಗ್ರಜನ ಹೃದಯ ಪರಿವರ್ತನೆಯನರಿಯದಾ
ಸುಗ್ರೀವನಿಕ್ಕಿದರೆಬಂಡೆಗಳನಂಗೈಯ
ದಾಂಡಿನಿಂ ಪೊಡೆಸೆಂಡನಾಡುತೆ ಕೆಲಕ್ಕಣೆದು,
ಮಿಂಚುಜವದಿಂ ಬಳಿಗೆ ಪರಿದು, ಕಪಿಮುಷ್ಟಿಯಿಂ          ೨೭೦
ತುಡುಕಿ, ಶಾರ್ದೂಲಮಂ ಭೇರುಂಡನೆತ್ತುವೋಲ್
ತಮ್ಮನಂ ಪೊತ್ತು, ತಾಯೂರ್ಗೆ ಧಾವಿಸಿದನೈ
ದೇವಾಸುರರ ಮೀರ್ದ ದೈತ್ಯಬಲಶಾಲಿ, ಆ
ವಾಲಿ !
ನಿರ್ಲಕ್ಷಿಸುತೆ ದೈವಮಂ, ಪ್ರತಿಭಟಿಸಿ
ದೈವೀಪರಂಗಳಂ ಶಕ್ತಿಯಂ, ನೆಮ್ಮುತ್ತೆ
ತನ್ನಹಂಕಾರಮಂ ಸ್ವಬಲಮಂ ಸ್ವಾರ್ಥಮಂ,
ಚಲದಿಂ ವಿರೋಧಿಸಲ್ ವೈರಭಾವವನಾಂತ
ಆಸುರೀ ಸಾಧನೆಯ ದೈವೀವಿಮುಖಮಪ್ಪ
ಲೌಕಿಕ ಪರಾಕ್ರಮದ ಶಿಕ್ಷಾರಕ್ಷೆಗಿನ್ನಿಹುದೆ,
ಪೇಳ್, ಕೃಪಾಬಾಣಕ್ಕೆ ಬೆನ್ನಲ್ಲದನ್ಯಲಕ್ಷ್ಯಂ      ೨೮೦
ತುದಿಗೆ ?
ಸನ್ಮಿತ್ರನಂ ಪೊತ್ತೋಡುವಾತನಂ
ಕಂಡು ‘ಹಾ ಕೈಮೀರ್ದುದಾ’ ಎನುತೆ ಮುಂಗೆಟ್ಟು,
ಬೇರೆ ಬಟ್ಟೆಯ ಕಾಣದಯ್ಯಯ್ಯೊ ರಘುಕುಲದ
ಶುಭ್ರ ಕೀರ್ತಿಯ ದಾಶರಥಿ, ಕಣೆಯ ಬಟ್ಟೆಯನೆ
ಕೈಕೊಂಡನೆಚ್ಚನ್ ಕಠೋರ ಶರಮೃತ್ಯುವಂ
ವಾನರನ ಬೆನ್ಗೆ ! ಬಿದ್ದನ್ ವಾಲಿ, ಬಿದ್ದುದೆನೆ
ಕಲ್ಪದ್ರುಮಂ ವೆರಸಿ ಸಗ್ಗದೈರಾವತಂ
ನೆಲಕೆ : – ದೀವದ ಹೋರಿಯಂ ಕಟ್ಟಿ ಬೇಂಟೆಗಂ
ಮರಸು ಕುಳಿತಿರೆ ಮರದ ತುದಿ ಮಂಚಿಗೆಯ ಮೇಲೆ,
ಸೋವತವನರಸಿ ಬರ್ಪುದು ಪಸಿದ ಪುಲಿ. ಮುಂದೆ       ೨೯೦
ಕೊರ್ವಿದೆರೆಯಂ ಕಂಡದಂ ಕೊಳ್ವಲಂಪಿಂದೆ
ಹೊಂಚಿ ಮುಂಬರಿಯುತಿರಲೀಡೇಳುವುದು ಕೋವಿ.
ನೆರಕೆ ತಗುಲಿದ ಗುಂಡಿನೇರಿಂಗೊಡನೆ ಜೀವಿ
ಮೈಮರೆದುರುಳೆ, ಮರಸಿನಿಂದಿಳಿದುಬಂದು, ಆ
ಬೇಂಟೆಗಾರಂ ತನ್ನ ಬೇಂಟೆಯನೊಸೆದು ನೋಡಿ
ಮೆಚ್ಚುವನ್, ತನ್ನ ಬೀರದ ಬೆನ್ಗೆ ತಾನೆ ಕೈ
ಚಪ್ಪರಿಸಿ ! – ಓಡಿದರೊ ಬಿಳ್ದಿಂದ್ರಜನ ಬಳಿಗೆ
ರಾಮಾದಿಗಳುಮಂತೆ. ಸುಗ್ರೀವನಂ ತೆಗೆದು
ತಳ್ಕೈಸಿದರ್ ಉಘೇ ಎಂದು. ಸಂಭ್ರಮವಾರೆ
ನೋಡಿದರ್ ಪುರುಹೂತ ಜಾತನಂ, ಬಸವಳಿದು         ೩೦೦
ನೆತ್ತರ್ಗೆಸರೊಳಾಳ್ದು ತನ್ನಾಳ್ದಿಳೆಗುರುಳ್ದು
ಬಿಳ್ದಾತನಂ. ನೋಡೆ ನೋಡೆ, ಖಿನ್ನತೆ ಮೂಡಿ -
ತನಿಬರಿಗೆ. ಹಿರಿದಾದುದಳಿಯೆ, ಹಗೆಯಾದರೇಂ,
ಹಿರಿತನಕೆ ನೋವಾಗದುಂಟೆ ? ತಾನಾವನಂ
ದೂರದಿಂ ಕೇಳ್ದಿರ್ದನಾ ಪೊಳ್ತಿನನ್ನೆಗಂ ಮೇಣ್
ದೂರದಿಂದಲ್ಲದೆಯೆ ಕಂಡಿರ್ದನಿಲ್ಲ, ಆ
ವೀರನ ಶರೀರದೆಡೆ ನಿಂದು ಸೀತಾಸ್ವಾಮಿ
ಸುಯ್ದು, ತನ್ನೊಳಗೆ ತಾಂ ಬಯ್ದುಕೊಂಡನ್ ತನ್ನ
ಬಿಲ್ಜಾಣ್ಮೆಯಂ.
ತಣ್ಪುವೀಸುತ್ತಲೆವ ಮಲೆಯ
ಗಾಳಿಗೊಯ್ಯನೆ ವಾಲಿ, ಚೇತನ ಗವಾಕ್ಷಮಂ  ೩೧೦
ತೆರೆವಂತೆ ಕಣ್ದೆರೆದು, ಬಳಸಿರ್ದರೆಲ್ಲರಂ
ಗುರುತಿಸುವವೋಲ್ ನೋಡಿ : “ಏಂ ಗೈದೆ, ಸುಗ್ರೀವ !
ಮುದ್ದಾಡಲೆಂದು ಬಂದಳ್ಕರೆಯ ತೋಳ್ಗಳಂ
ಛಿದ್ರಿಸಿದೆಯಲ್ತೆ ! …. ಆಃ, ತೋರೆನಗೆ ಆ ವೀರನಂ,
ಬೆನ್ಗೆ ಬಾಣವನೆಚ್ಚ ಆ ನಿನ್ನ ಕಲಿ ರಾಮನಂ….
ನೀನಾರೆಲವೊ ವೀರವೇಷಿ ? ಬಿಲ್ವಿಡಿದಿರ್ಪೆ ;
ನೀನೆ ರಾಮನೆ ವಲಂ ! ವೀರ ಪಾರ್ಥಿವನಾಗಿಯುಂ
ಕೀಳ್ಮೆಗೇಕಯ್ ಕಯ್ಯನಿಟ್ಟೆ ? ಪೆತ್ತೂರೆಡೆಗೆ
ತಮ್ಮನಂ ಪೊತ್ತುಕೊಂಡುಯ್ವಣ್ಣನಂ ಬೆನ್ಗೆ
ಹಂದೆತನದಿಂದೆಚ್ಚು ಕೊಂದಯ್ ! ತಾರೆಯ ಬಾಳ್ಗೆ,     ೩೨೦
ನಿನ್ನನೆರ್ದೆಮುಟ್ಟಿ ಪೊಗಳುತ್ತಿರ್ದವಳ ಬಾಳ್ಗೆ, ಹಾ,
ಕಿಚ್ಚಿಟ್ಟೆಯೈ ! ಧಿಕ್ ನಿನ್ನ ಕಲಿತನಂ ! ಧಿಕ್ ನಿನ್ನ
ವೀರಪಾರ್ಥಿವ ಕೀರ್ತಿ ! ಹೇಡಿಯಂದದೊಳಡಗಿ
ದೂರದಿಂದುಗ್ರಬಾಣವನೆಚ್ಚು ಬರ್ದುಕಿದಯ್
ನೀಂ. ಕೆಣಕಿ ವಾಲಿಯಂ ಬರ್ದುಕಿದವರಾರುಂಟೊ
ಮೂಲೋಕದೊಳ್ ? ತನ್ನವಸರದ ಮೋಹಕುರುವರನ
ಬೇಳ್ವ ಕಣ್ಗೇಡಿ, ಹೆಂಬೇಡಿ ನೀಂ ! ಚಿಃ ಸುಡಲಿ
ನಿನ್ನ ಈ ಪೊಲೆಮಾಳ್ಕೆಯಾ ಕೊಲೆಯ ಬಾಳ್ಕೆಯಂ !”
ಬೆನ್ನ ಮರುಮೊನೆಗೊಂಡ ಸರಳ್, ಸುರಿವ ಕೆನ್ನೀರ್,
ಮಿಳ್ತುಮೊಗವಾದುಸಿರ ನಡುಕುದನಿ ಸರ್ವಮುಂ         ೩೩೦
ವಾಲಿಯ ಕಡೆಗೆ ನಿಂತು ವಾದಿಸುತೆ, ರಾಮನಂ
ನಿಂದಿಸುತ್ತಿರಲಾತನಿನಿತು ಗದ್ಗದದೊಡನೆ :
“ವಿಧಿಯ ವಿನ್ಯಾಸಮಂ ನಿಂದಿಸಿದೊಡೇಂ ಫಳಂ,
ಸುಗ್ರೀವನಗ್ರಜಾ ?”
ಕೊಂಕುನಗೆಯಿಂ ವಾಲಿ :
“ನಿನ್ನ ಮಡದಿಯನಸುರನುಯ್ದುದುಂ ವಿಧಿಲೀಲೆ !
ನೀನೇಕೆ ಪರಿತಪಿಸುತಿಹೆ ಮತ್ತೆ ?”
“ನಿನ್ನ ವಿಧಿ
ನಿನಗೆ. ರಾಕ್ಷಸನ ವಿಧಿ ರಾಕ್ಷಸಗೆ. ನಿನ್ನಂತೆ ಕೇಳ್,
ಹದಿಬದೆಗಳುಪಿದಸುರನುಂ ಕಡೆಯನೆಯ್ದುವಂ.”
“ಪುಸಿ, ಪುಸಿ, ಪುಸಿ !” ಎನುತ್ತೆ ಕಿವಿಮುಚ್ಚಿದನ್ ಮಹಾ
ವಾನರಂ “ಮಗಳೆನಗೆ ರುಮೆ ! ತಾರೆ ತಾಂ ಸಾಕ್ಷಿ !     ೩೪೦
ಹಂದೆತನಕಾ ಪುಸಿಪಳಿಯ ಬೆಸುಗೆಯೊಂದೇಕೊ ?”
“ವಿನಯದಿಂ ಬೇಡಿದೊಮೊಡವುಟ್ಟಿದಾತನಂ,
ನಿರ್ದೋಷಿಯಂ, ತನ್ನ ತಾಯಿನಾಡಿಂದಟ್ಟಿ,
ಕೆಳೆಯರ್ವೆರಸಿ ಕಳೆದೆಯಲ್ತೆ ? ಆ ಕೇಡಿಗಯ್
ಈ ಶಿಕ್ಷೆ !” “ತಳುವಿ ಬಂದಯ್ ದುಷ್ಟಶಿಕ್ಷಣೆಗೆ !
ನಾನೀಗಳಾ ಕೋಪಿಯಲ್ತಾ ಪಾಪಿಯಲ್ತು : ಮೇಣ್
ಪ್ರೀತಿ ಪಶ್ಚಾತ್ತಾಪದಿಂ ಭ್ರಾತೃ ಮೈತ್ರಿಯಿಂ
ಶುದ್ಧನೆಂ, ನಿರ್ವೈರನೆಂ…. ಹಂದೆತನದಿಂದಡಗಿ
ಕೊಂದೆಯೆಂದಾಡಿದೆನ್ ; ಬೇರೆ ಹಗೆತನಮಿಲ್ಲ
ನನಗೆ.”
ವಾಲಿಯ ಮುಖದ ಸತ್ವದಿಂದಾ ನುಡಿಯ       ೩೫೦
ತಥ್ಯಮಂ ಶಂಕಿಸದೆ, ತಿರುಗಿದನ್ ದಾಶರಥಿ
ಸುಗ್ರೀವ ಮುಖಕೆ. ಅಶ್ರುಮಲಿನಾಸ್ಯನಾತನುಂ
ನೆಲದಿಟ್ಟಿಯಾಗಿ “ನಾನರಿಯೆನೀತನ ಮನದ
ನೂತನತೆಯಂ.” ಎನಲ್, ಜಾಂಬವಂ : “ಬಲ್ಲೆನಾಂ ;
ಇಂದ್ರಜನ ಜಿಹ್ವೆ ಮಿಥ್ಯೆಯನರಿಯದೇಗಳುಂ….”
“ವಕ್ರವಿಧಿಗಾದನಾಹುತಿ ಶಕ್ರಸಂಭವಂ !”
ಎನುತೆ ಮಾರುತಿ ಮಣಿದನೆತ್ತಿದನ್ ವಾಲಿಯಂ
ಸಮನೆಲದ ತೃಣಶಯ್ಯಗೆ. ಬಿಳ್ದಂಗೆ ತೋಳ್ಗಳಂ
ತಲೆಗಿಂಬುಗೈಯುತಿರೆ ಸೌಮಿತ್ರಿ, ಕಣ್ಬನಿಯ
ಗದ್ಗದದ ರಾಮಚಂದ್ರಂ, ಧನುರ್ಬಾಣಮಂ     ೩೬೦
ತೂಣೀರಮಂ ಕೆಲಕ್ಕೆಸೆದು, ವಾಲಿಯ ಮೆಯ್ಗೆ
ಸೋಂಕಿ ಕುಸಿದನ್ ನೆಲಕೆ :
“ಮನ್ನಿಸೆನ್ನಂ, ಮಹಾ
ವೀರ ! ತಪ್ಪಿದೆನಯ್ಯೊ, ಬ್ರಹ್ಮವರದಾ ಬಲೆಗೆ
ಸಿಲ್ಕಿ. ನಿನಗಾ ವರವೆ ಶಾಪಮಾದುದೊ ! ಕೀರ್ತಿ
ಮಸುಳಿಸುವವೋಲೆನ್ನನಡಗಿಸಿತೊ ! ಮರೆವೊಕ್ಕೆನಾ
ಮರಕೆ ! ಮಾಡಿದ ತಪ್ಪನೊಪ್ಪಿಕೊಳ್ವುದೆ ಲೌಕಿಕದ
ಬೀರಕ್ಕೆ ಸಲ್ಲಕ್ಷಣಂ : ಅಯ್ಯೊ ಸೀತೆಯನಗಲ್ದು
ಪಗಲಿರುಳ್ ಪೊಗೆಯುತಿರ್ಪೀ ಬಗೆಯ ಕನ್ನಡಿಗೆ
ಮರ್ಬುಕರೆ ಮಂಕಡಸಿತಯ್. ಶೀಘ್ರಸೂತ್ರಕ್ಕೆ
ಬೇಳ್ದೆನಯ್ ಐಹಿಕದ ಕೀರ್ತಿಯನಂತೆ ಧರ್ಮಮಂ       ೩೭೦
ಮೇಣ್, ಕಪಿಕುಲ ಲಲಾಮ, ನಿನ್ನುಮಂ !”
ಬಳಿ ಕುಳ್ತು
ರೋದಿಸುವ ರಾಮನಂ ನೋಡಿದನ್, ಕಣ್‌ನಟ್ಟು,
ವಾನರೇಂದ್ರಂ, ಮೃತ್ಯುಮುಖಮಾದ ಜೀವಕ್ಕೆ
ಹತ್ತೆ ಸಾರುವುದೇನೊ ಸತ್ಯಮೆಂಬಂತೆವೋಲ್
ನೋವಿನ ನಡುವೆ ನಗೆಯನಲರಿಸಿ ನುಡಿದನಿಂತು :
“ಕೇಳ್ದಿರ್ದೆ ನಿನ್ನಾ ಮಹಾತ್ಯಾಗಮಂ, ಮತ್ತೆ
ಧೈರ್ಯಮಂ. ಕಣ್ಣಾರೆ ಕಾಣ್ಬ ಸಯ್ಪೆನಗೊದಗಿತಯ್
ಇಂದು. ನೀಂ ಸತ್ಯವ್ರತನೆ ದಿಟಂ. ಇಲ್ಲದಿರೆ
ಸೋಲ್ದುರುಳ್ದರಿಗೆ ತಪ್ಪೊಪ್ಪಿಕೊಳ್ಳುವರಿಹರೆ ?
ನನ್ನೆರ್ದೆಯೊಳಾದ ಪರಿವರ್ತನೆಯನರಿಯದೆಯೆ         ೩೮೦
ಇಂತಾದುದಯ್. ತಪ್ಪು ನಿನತೊರ್ವನದೆ ಅಲ್ತು….
ನೀನೆಂದವೊಲೆ ವಿಧಿಯ ವಿನ್ಯಾಸಮೇಂ ಬೇರೆ
ಪಾಂಗಿಹುದೊ ?…. ನಿನಗೆ ಮೇಣ್ ಸುಗ್ರೀವರಿರ್ವರ್ಗೆ
ಕಯ್ಗೂಡುತಿರ್ದತ್ತು ಬಯಕೆಯೊರ್ಮೆಯೆ ನನ್ನ
ಕೆಳೆಯಿಂದೆ…. ನೀವನಿಬರುಂ ಬಳಲಿ ಸಾಧಿಸುವ
ಕಜ್ಜಮಂ, ಲೀಲೆಯಿಂ ಸಾಧಿಸುತ್ತಿರ್ದೆನಾಂ….
ಆದರೇಂ ಬಿದಿಯ ಬಗೆ ಬೇರೆ ! ಕಳೆದುದಕೇಕೆ
ಕೊರಗು ?” ಎನುತೆನುತೆ ಉಬ್ಬಸವಾಯ್ತು ಮೇಲುಸಿರ್
ಕಪಿಕುಲೇಶಂಗೆ. ಸುಗ್ರೀವನಳತೊಡಗಿದನ್
ತನ್ನಣ್ಣನಡಿಗೆ ಹಣೆ ಚಾಚಿ. ವನ ನಿರ್ಝರದ
ನೀರಂ ಬೊಗಸೆತಂದು ನೀಲನೆರೆದನ್ ಬಾಯ್ಗೆ
ವಾಲಿಯಾ. ಬೀಸಿದನೆಲೆಯ ಗಾಳಿಯಂ ನಳಂ.
ಬೆಮರಿಳಿದ ಬಿಸಿಪಣೆಯ ತೊಯ್ದಂಟುಗೂದಲಂ
ಮೆಲ್ಲನೋಸರಿಸಿ ಸಂತೈಸಿದನ್ ಮರುಗೆರ್ದೆಯ
ರಾಘವೇಂದ್ರಂ. ಮತ್ತಮೊಯ್ಯನೆಯೆ ಶೂನ್ಯಮಂ
ನೋಳ್ಪಂತೆ ಕಣ್ದೆರೆದನಾ ಕೀಶವೀರಂ : “ತಾರೆ ಮೇಣ್
ಅಂಗದರಿಗೀ ವಾರ್ತೆ ಮುಟ್ಟಿದುದೆ ? ಕಣ್ ಬೆಳಕು
ಕಿಡುವ ಮೊದಲಾ ನನ್ನ ಬಾಳ್‌ಬೆಳಕನೀಕ್ಷಿಸಲ್
ಬಯಕೆ !” ಬೆಸಗೊಂಡ ವಾಲಿಗೆ ಮಾರುತಾತ್ಮಜಂ :
“ಪೋದುವಾಗಳೆ ಸುದ್ದಿ.” ಹನುಮನಕ್ಷಿಗೆ ತನ್ನ ೪೦೦
ನೋಟಂ ಪೆಣೆಯೆ ನೋಡಿ “ನೀನಾಂಜನೇಯನಯ್ ?”
ಎಂದಿಂದ್ರಜನ ಕಣ್ಣ ಸಂದೇಹಮಂ ಕಂಡು :
“ಅಹುದು. ಬೆಸೆನೇನಿಹುದೊ ಪೇಳಿಮ್” ಎನೆ ವಾಲಿ “ಮಗು
ಅಂಗದನ…. ಸುಗ್ರೀವನೆಲ್ಲಿ ?” “ಇಲ್ಲಿಹೆನಾರ್ಯ.”
ಎಂದಳುತ್ತಳುತೆ ಕಣ್ಗಿದಿರಾದನಂ ತಮ್ಮನಂ
ನಿರ್ವೈರದೃಷ್ಟಿಯಿಂದಳ್ಕರೊಳ್ಕುವ ತೆರದಿ
ನೋಡಿ : “ಮಾಣ್ ಅಳ್ಕೆಯಂ, ತಮ್ಮ. ವಾನರಕುಲದ
ಜಸದ ಹಬ್ಬುಗೆ ತಿರೆಯ ತಬ್ಬುವೋಲೀತಂಗೆ ನೀಂ
ನೆರವಾಗು, ನಮ್ಮತಿಥಿಯಾರ್ಯಂಗೆ…. ಏನಿದುಲಿ ?
ಸಗ್ಗದಿಂಚರಮಿಳೆಗೆ ದುಮ್ಮಿಕ್ಕುತಿದೆ ?” “ಅಯ್ಯೊ,         ೪೧೦
ಬಳಿಸಾರುತಿಹುದಣ್ಣ ಆ ರೋದಿಸುವ ಕಿಷ್ಕಿಂಧೆ !
“ಏನೆಂದೆ ? ಅಹುದಹುದು, ಬಳಿಸಾರುತಿದೆ ಸಂಧ್ಯೆ !
ಹಬ್ಬುತಿದೆ ಮಲೆಯ ಮೇಲೆನಿತು ಸುಂದರ ಸಂಧ್ಯೆ !
ಆಃ ನನ್ನ ಕಿಷ್ಕಿಂಧೆ !…. ತಾಯ್ತಂದೆಯರ ನಾಡೆ !
ತಾಯ್‌ನುಡಿಯ ಮಲೆಗುಡಿಯ ಬೆಟ್ಟದಡವಿಯ ಬೀಡೆ !
ತಾಯ್‌ವಸಿರ್ ನೀನಾದೆ ಪುಟ್ಟುವಾಗಳ್. ಮತ್ತೆ
ನಲ್ದೊಟ್ಟಿಲಾದೆ, ಜೋಗುಳವಾದೆಯೆಳೆಯಂಗೆ.
ತಾರುಣ್ಯಕುಯ್ಯಾಲೆಯಾದೆ. ಜೌವನಕಾದೆ
ಪೆಣ್ಣೊಲ್ಮೆ. ಮುಪ್ಪಿಂಗೆ ಧರ್ಮದಾಶ್ರಯಮಾಗಿ,
ತೀರುವೆಡೆ ಶಾಂತಿಯಾಗರಮಾಗುತಿರ್ದಳಂ  ೪೨೦
ನಿನ್ನನಾಂ ತೊರೆಯುತಿಹೆನೌ, ಮನ್ನಿಸಾ, ತಾಯಿ !
ಸೊಬಗು ನೆಲೆಗಳ್ ನಿನ್ನ ಮಲೆತುರ್ಕ್ಕಿ ತಲೆಯೆತ್ತಿ
ಮುಗಿಲಲೆವ ಸಾಲ್ಮಲೆಯ ಸಗ್ಗದೊಳಗೀ ವಾಲಿ
ಕಾಲಾಡನಿನ್. ಚೆಲ್ವುಚಿಪ್ಪೊಡೆಯೆ ಮುತ್ತುನೀರ್
ಬೆಳ್ಳಂಗೆಡೆಯುವರ್ಬ್ಬಿಯೊಳ್ ದುಮುಕಿ ಮೀಯದಯ್
ಈ ವಾಲಿ ಮೆಯ್ ಇನ್. ಈ ತೋಳ್ಗಳಾಟಕ್ಕೆ
ಪಣ್‌ಪೆತ್ತ ನಿನ್ನಡವಿ ಪೆರ್ಮರಗಳಿನ್ ಬಾಗಿ
ತೂಗವಯ್, ತೊನೆಯವಯ್, ಮುರಿಯವಯ್, ನಿನ್ನಗಲ
ಬಾಂದಳದ ಮೋಡಮಾಲೆಯ ಚಂದದಂದಮಮ್
ನೋಡದಿನ್ ವಾಲಿಯೀ ಕಣ್ಣಾಲಿ !…. ಸುಗ್ರೀವ,           ೪೩೦
ನಿನಗೀಜು ಕಲಿಪಂದು ನೀಂ ಪಂಪೆಯೊಳ್ ಮುಳುಗೆ,
ನಾಂ ಮುಳುಗಿ ಮೇಲೆತ್ತಿದಾ ಸೈಪಿನಾ ಸೊಗಂ
ನನಗೀಗಳರಿವಾಗುತಿದೆ ! ಆಂಜನೇಯ, ಆ
ಮರಕೋತಿಯಾಟಮಂ ಚಿಣ್ಣಿಕೋಲಾಟಮಂ
ಮರೆತೆಯೇನ್ ? ಮರೆಯದಿರ್ : ಬಾಳಂಚಿನೊಳ್ ನಿಂತು
ಪೇಳ್ವೆನೀ ನನ್ನಿಯಂ : ಆ ಜಳ್ಳೆ ಗಟ್ಟಿ ; ನಾಮ್
ಗಟ್ಟಿಯೆಂದರಿತುದೆಲ್ಲಂ ಜಳ್ಳು, ಬರಿ ಜಳ್ಳು !….
ಸಾವ್‌ಗಾಳಿ ತೂರಲರಿವಪ್ಪುದಯ್ !”
ಸುಯ್ದು ಕಣ್ಣಂ
ಮುಚ್ಚುತಿರೆ ವಾಲಿ, ಬಳಿಸಾರ್ದಳಾ ತಾರೆ
ಅಂಗದ ಕುಮಾರನೊಡಗೂಡಿ. ಆ ಗೋಳನೇಂ
ಬಣ್ಣಿಪಮ್ ? ಸಾವರಿತ ಲೋಕಕ್ಕೆ ಪೊಸತಹುದೆ ಪೇಳ್     ೪೪೦
ಪತಿಯಳಿದ ಸತಿರೋದನಂ ? ತಂದೆಯಳಿದಿರ್ಪ
ಸುತನ ಶೋಕಂ ? ಸ್ವಾಮಿಯಳಿದಿರ್ಪ ಪರಿಜನದ
ಹೃದಯ ವಿದ್ರಾವಕಂ ? ಪ್ರಾಣಮಿತ್ರಂ ತೀರ್ದ
ಸ್ನೇಹದತಿದಾರುಣದ ಸಂಕಟಂ ? ಜಸವೆತ್ತ
ಪಿರಿದಾದುದಾವುದಾಡೊಡಮಳಿಯೆ ದುಃಖಿಸುವ
ದೇಶ ಸಾಮಾನ್ಯ ಜನ ಮನ್ಯು ? ಆ ಗೋಳನೇಂ
ಬಣ್ಣಿಪೆಮ್ ? ಬಣಗು ಬಣ್ಣನೆ ಬೇಕೆ, ತಿಳಿಯಲ್ಕೆ
ಸಾಮಾನ್ಯಮಂ ? ರಸಮೊಳದೆ ಮಿಗಿಲ್, ಸಾಮಾನ್ಯಕಿಂ ?
ಅಂಗದಕುಮಾರನಂ ರುಮೆಗೆ ಕಯ್ಯೆಡೆ ಮಾಡಿ ;          ೪೫೦
ಕರುಣೆಯಂ ಬೇಡಿ, ಕನಿಕರಗೂಡಿ, ಮೈದುನನ
ಮೊಗನೋಡಿ ; ಮುಂದೊಳ್ಮೆ ಬರ್ಪುದೆಂದೊಳ್ವರಕೆಯಂ
ಪೇಳ್ದು, ಮೇಣಿಂದಾದುದಂ ಬಿದಿಯ ಹದನೆಂದು
ರಾಮನ ಮನಕೆ ಶಾಂತಿಯಪ್ಪಂತೆ ಸಂತಯ್ಸಿ,
ರಾಮನ ಮನದ ಮಹಿಮೆಯಂ ಕೊನೆದು ಕೊಂಡಾಡಿ ;
ದೈತ್ಯನೊಯ್ದಾ ರಾಮದಯಿತೆಯಂ ನೆನೆದು, ಮರುಗಿ,
ಬೇಗಮಾಕೆಗೆ ನೆರಂ ಪೋಗವೇಳ್ಕೆಂದಲ್ಲಿ
ನೆರೆದೆಲ್ಲರಿಗೆ ನೆರಂ ಪೋಗವೇಳ್ಕೆಂದಲ್ಲಿ
ನೆರೆದೆಲ್ಲರಿಗೆ ನುಡಿದು ; ಮತ್ತೆ ಮತ್ತಂಗದನ
ಮೈಯಪ್ಪುತಾತನಂ ರಾಮಸೇವೆಗೆ ಸಲಿಸಿ,
ತಂದೆಯ ಜಸಕ್ಕೆ ಕುಂದಾಗದೋಲೆಸಪಂತೆ   ೪೬೦
ಹರಕೆಯಂ ಬೆಸಸಿ ; ಬೀಳ್ಕೊಳುತ್ತನಿಬರಂ, ಸತಿ,
ತಾರೆ, ಚಿತೆಯೇರಿದಳ್ ಪತಿಯಾತ್ಮಮಂ ಸೇರೆ,
ಸದ್ಗತಿಗೆ ಸೈಪು ಜತೆವೋಪವೋಲ್. ಬಾಳ್‌ಕಯ್ಪೆ
ನೋವು ಸಾವುಗಳುರಿಗೆ ಕರ್ಪುಗಿಡೆ, ನೆನಹುಬೆಳ್
ಪಿಂತುಳಿವವೋಲೆಸೆದುದಾ ದಂಪತಿ ಚಿತಾ ಭೂತಿ !

ಕಿಷ್ಕಿಂಧಾ ಸಂಪುಟಂ ಸಂಚಿಕೆ : ಸಂಚಿಕೆ 5 – ಪೂಣ್ದೆನಗ್ನಿಯೆ ಸಾಕ್ಷಿ

ಬೀಳುಕೊಟ್ಟಳು ನಿಶೆಯನಾ ಸರೋವರ ಲಕ್ಷ್ಮಿ ತಾಂ
ಕುಮುದಮುಖದಿಂ ; ಕಮಲ ಕೋಮಲವದನೆಯಾಗಿ
ಮತ್ತಮೊಯ್ಯನೆ ತಿರುಗಿದನ್ ಸೊಗಂಬಯಸಲುಷೆಗೆ.
ಮೂಡುವೆಣ್ಣಿನ ನಿದ್ದೆಗಣ್ಣು ತನ್ನಿರುಳೆವೆಯ
ಕರ್ಪು ರೆಪ್ಪೆಯನರಳಿಸಲ್, ಬೆಸುಗೆ ಬಿರ್ಚಿದುದೊ
ಬಾನ್ ಬುವಿಗೆನಲ್, ಬಿರುಕುದೋರ್ದೊಳ್ಕಿದುದು ಪೊನಲ್
ಚೆಂಬಳದಿಯಾ. ಮತಂಗನ ಪೆಸರ ಮಡುವಿನೊಳ್
ನೀರು ಓಕುಳಿಯಾಯ್ತು. ಮಳಲದಿಣ್ಣೆಯ ಮೇಲೆ
ಕೊಡೆವಿಡಿದವೋಲೆದ್ದ ಬಂಡೆಯಡಿ ರಾತ್ರಿಯಂ
ಕಳೆದ ರಘುಜರ್, ಪ್ರಕೃತಿಕೃತ ಸಹಜಘಟ್ಟಮೆನೆ           10
ನೀರ್ಗೆ ನೀಡುಂ ಚಾಚಿ ಮಲಗಿರ್ದ ಪಾಸರೆಯ
ತುದಿಗೈದಿ, ಪ್ರಾಭಾತವಿಧಿಗಳಂ ಪೂರಯಿಸಿ,
ಋಶ್ಯಮೂಕದ ಕಡೆಗೆ ಮೊಗದಿರುಹಿ ಕುಳಿತರೈ,
ಗಗನ ನಗ ಕಾನನ ಸರೋವರಂಗಳನೊಂದೆ
ಕಣ್ಬೊಲಂಬಡೆದು.
ಒಯ್ಯೊಯ್ಯನೆ ದಿವಾಕರಂ
ತ್ರೈಲೋಕ್ಯ ಸೌಂದರ್ಯ ಸೌವರ್ಣ ಕಲಶಮೆನೆ
ಮೈದೋರಿ, ಮೇಲೇರಿ, ಕನಕಜಲ ಕಾನ್ತಿಯಂ
ಸಿಂಚನಂಗೈದು ಕಾಂಚನಿಸಿದನು ಕಾನನ
ಶ್ಯಾಮಾಂಬರಂ ಪೀತಮಪ್ಪಂತೆ. ವನಪಕ್ಷಿ
ಜಲಪಕ್ಷಿ ಕಂಠಕೃತ ತುಮುಲ ನಾನಾ ಸ್ವನಂ
ಬುಗ್ಗೆಯೋಲುಣ್ಮಿ ಪರಿದುದೊ ಸರೋವರಕೆನಲ್,         20
ನೀರು ತಾಂ ನೀರುಗಳಾಯ್ತು, ಬೇರೆ ಬೇರೆಯ ರಂಗು
ರಂಗಿಂದೆ : ಕರ್‌ನೀಲಿ ಬೆಳ್‌ನೀಲಿಯಾಯ್ತಿಲ್ಲಿ ;
ಬೆಳ್‌ನೀಲಿ ಹೂಹಳದಿಯಾಯ್ತಲ್ಲಿ. ಹೂಹಳದಿ
ಹೊನ್ನಾದುದಿಲ್ಲಿ ; ಹೊನ್ನಸುಗೆಗೆಂಪಾದುದದೊ
ಅಲ್ಲಿ. ಪಚ್ಚೆಯ ರಾಗಮೊಯ್ಯನೆಯೆ ಕಿಚ್ಚಾಯ್ತು ;
ಕಿಚ್ಚು ಕಣ್ಣಿಡೆ ತಿರುಗಿದುದು ಪುಷ್ಯರಾಗಕ್ಕೆ
ಮರಳಿ. ಅದೊ ಅಲ್ಲಿ ಗೋಮೇದಿಕಂ ; ನೋಡಲ್ಲಿ
ವೈಡೂರ್ಯಮತ್ತಲದೊ ವಿದ್ರುಮಂ ! ರವಿಶಿಲ್ಪಿ ತಾಂ
ಸಪ್ತರಾಗದ ಕಿರಣಟಂಕ ಕವಿಕರ್ಮದಿಂ                 30
ಕೆತ್ತಿ ಕಲ್ಪಿಸಿದನೊ ಅನೇಕ ರತ್ನಂಗಳಂ
ಪಂಪಾ ಸರೋವರದ ಬೃಹದೇಕ ನೀಲದಿಂ
ಪೇಳೆಂಬಿನಂ, ವಿವಿಧ ರಾಗ ರುಚಿರಂ ಹ್ರದಂ
ರಾರಾಜಿಸಿತು ರಾಮಹೃದಯಕೆ ವಿರಹದುರಿಯಂ
ಕೆರಳ್ವ ಕಾಮನ ಬಿಲ್ಲೆನೋಕುಳಿಯವೋಲ್ !
“ವತ್ಸ,
ಲಕ್ಷ್ಮಣಾ, ವೈವಾಹ ಮಂಟಪ ಸ್ಮರಣೆಯಂ
ಬಗೆಗೊಳಿಸುವೀ ಮನೋಹರ ಚಿತ್ರ ದೃಶ್ಯಮಂ
ನೋಳ್ಪೆನಗೆ ಬಾಳಿನುರಿ ನೂರ್ಮಡಿಸುತಿದೆ. ನಾಳ
ನಾಳದೊಳ್ ಜ್ವಾಳೆವರಿದಿದೆ ಮನ್ಮನೋಹರಿಯ
ಚಿಂತೆ. ಅದೊ ದಡದ ಮರದುಯ್ಯಾಲೆಯಿಂ ಗಾಳಿ       40
ಮಳೆಯೆರಚುತಿದೆ ಚಿನ್ನವೂಗಳಂ ; ಬಂಡೆಯುಂ,
ಪುಳಿನಮುಂ, ಶಿಖರಗೋಪುರದಂತೆ ನೀರಮೇಲ್
ನೀಳ್ದು ಮಲಗಿಹ ಬಂಡೆಕರ್ನೆಳಲುಮೆಸೆಯುತಿವೆ
ಸುಮರಂಗವಲ್ಲಿ ಚಿತ್ರಿತ ರತ್ನಕಂಬಳಿಯವೋಲ್ !
ಬಿರಿವ ನೀರ್ವೂಗಳೊಳ್ ಬಂಡುಣುವ ಪರಮೆ ಮೊರೆ
ನೀರ್ವಕ್ಕಿಗಳ ಬೇಟದಿಂಚರದೊಡನೆ ಹೊಂಚಿ
ನನ್ನನೇಳಿಪುದಲ್ತೆ ? ಅಃ ಆಲಿಸದೊ ಕೂಗುತಿದೆ,
ಆ ದರಿಯ ದುಮುಕುತಿಹ ವನನಿರ್ಝರದ ಮೊರೆಯ
ಮೀರಿ, ದಾತ್ಯೂಹಕಂ ! ವಿರಹದುಲಿ ! ಕರೆಯುತಿದೆ
ಪೆಣ್ವಕ್ಕಿಯಂ ! ಮೂದಲಿಸುತಿದೆ ನನ್ನನಯ್ಯೊ ಹಾ,      50
ಸೌಮಿತ್ರಿ : ಪಂಚವಟಿ ಪರ್ಣಶಾಲೆಯೊಳಂದು
ಈ ಉಲಿಯನಾಲಿಸಿದೊಡನೆ ದಯಿತೆ ತಾನುಮಾ
ಕೊರಳನನುಕರಿಸಿ, ಹಾ, ಕರೆಯುತಿರ್ದಳೊ ನಿನ್ನ
ಈ ನಿರ್ಭಾಗ್ಯನಂ …. ತಮ್ಮ, ಗತಿಶೂನ್ಯನಾದೆ !
ಮತಿಶೂನ್ಯನಾದೆನಗೆ ಸ್ಮೃತಿಯಲ್ಲದೆಯೆ ಬೇರೆ
ಸತಿಯಿಹಳೆ ? ಪೇಳಿಹಳೆ ? …. ಇನ್ನೆನಗೆ ವಿಸ್ಮೃತಿಯೆ
ಪರಮಾಶ್ರಯಂ, ಶಾಂತಿ, ಸದ್ಗತಿ, ಮಧುರ ಮೃತ್ಯು !”
ಲಕ್ಷ್ಮಣಂ ಕ್ಷಣಕಾಲಮುಂತಿರ್ದನಂತರಂ :
“ಅಜ್ಜಿ ಪೇಳ್ದಾ ಮಲೆ ಇದೆಂದೆ ತೋರ್ಪುದು ಕಣಾ
ಋಶ್ಯಮೂಕಂ. ದೂರದಿಲ್ಲಿಂದಮೆತ್ತರದ         60
ಆ ಬಂಡೆಮಂಡೆಯ ನೆತ್ತಿ ಮಲೆತಿರ್ಪುದೆಂತು
ಮುಗಿಲನಂಡಲೆದು ! ಪರ್ವತದ ಪಕ್ಷಿಯ ಕೊಕ್ಕು
ಕುಕ್ಕುತಿದೆ ನೀಲಾಂಡಮಂ ; ಮಲೆಯ ಗೂಳಿಯ ಕೋಡು
ಮಲೆತು ತಿವಿದಿದೆ ಮೋಡಡುಬ್ಬಮಂ ; ಗೂಳಿಯಾ
ಗುಟುರುಗಳೆ ಗುಂಡುಗುಂಡಾದಂತೆ ಹಿಂಡೆದ್ದು
ಮತ್ತೆ ಛಲದಿಂ ಲಗ್ಗೆಯೇರುವಂತಿವೆ ತಮ್ಮ
ಮೊದಲಿನುನ್ನತಿಗೆ ! ಏಂ ನಿಶ್ಚಲಂ ? ಏಂ ಛಲಂ ?
ಏಂ ಧೈರ್ಯಮೇಂ ಬಲಂ ? ಈ ಗಿರಿಯೊಳಾಂ ದಿಟಂ
ಪಡೆದಪೆವು ಛಲ ಬಲಾನ್ವಿತ ಮಹಾಧೈರ್ಯಯುತನಂ
ಸನ್ಮಿತ್ರನಂ, ದಿಟಂ !”
ವ್ಯಂಗ್ಯ ವಚನದಿ ತನಗೆ                   70
ಧೈರ್ಯಮಂ ಪೇಳ್ದಿಂಗಿತವನರಿತು ದಾಶರಥಿ
ತಾನಿನಿತು ನಾಣಿಂ ತಮ್ಮನಂ ನೋಡಿ, ದರಹಸಿತ
ಮುಖಿಯಾಗಿ, ಸುಯ್ದು, ಧ್ಯಾನಸ್ಥನಾದಂ, ಮರಳಿ
ಮಲೆನೆತ್ತಿಯಂತೆ ತಲೆಯೆತ್ತಿ. ಸರೋವರದಿಂದೆ,
ಮರಳ್ದಾಸೆಯುಸಿರವೊಲ್, ಏರ್ದುದಾವಿಯ ಮಂಜು,
ತೆಳ್ಳನೆ ಹೊಗೆಯ ಹೋಲಿ. ಬಂಡೆಗೋಪುರ ನೆಳಲ್,
ನೀರ ಮೇಲೊರಗಿರ್ದುದಾವಿಯ ಮೇಲೆ
ನೀಲಿರಂಗೋಲಿಯೋಲ್ ಚಿತ್ತಾರಮಂ ಮೆತ್ತಿ
ಕೆತ್ತಿ. ಮೇಣಲ್ಲಲ್ಲಿ ಮಂಜುಮೆಯ್ ರವಿಕಿರಣ
ರಾಗದಿಂ ಕಿಂಜಲ್ಕ ಪಿಂಜರಿತಮಾಯ್ತು. ಆ     80
ನೋಟಮಂ ನಿಡುವೊಳ್ತು ನೋಡುತಿರ್ದಿನಕುಲಗೆ
ಮನದೊಳೇನೊಂದಾಯ್ತೊ ! “ಆರಲ್ಲಿ, ಕಾಣ್ ಸೌಮಿತ್ರಿ ?”
ಬೆಸಗೊಳುತ್ತೆಳ್ದು ತೆಕ್ಕನೆ ಬಂಡೆ ಬಂಡೆಯೆಡೆ
ನುಸುಳತೊಡಗಿದನರಸುನೋಟದಿಂದಾರನೊ
ಹುಡುಕುವಂತೆ. “ಎಲ್ಲಿ ?” ಎನೆ ಲಕ್ಷ್ಮಣಂ “ಇಲ್ಲಿಯೋ
ಮೇಣೆಲ್ಲಿಯೋ ಅರಿಯೆನಾಂ, ವತ್ಸ ! ಕಾಣದು ಕಣ್ಗೆ ;
ಬಗೆಗೆ ಸುಳಿದಿದೆ ಬರವು ಬಾಳ್ಗೆಳೆಯನೊರ್ವನಾ !”
ಎನುತೆನುತೆ, ತನ್ನ ಬೆಳ್ಪಿಗೆ ತಾನೆ ಬೆರಗಾಗಿ,
ನಿಂದನು ಅನಾಥನೊಲ್ ಸೀತಾನಾಥ ದಾಶರಥಿ,
ಕಣ್‌ತೊಯ್ದು ಸುಯ್ದು. ನಿಂದಿರೆ, ಬಿಳ್ದುದೈ ದಿಟ್ಟಿ           90
ಮುಂದಿರ್ದೊಂದರೆಯ ಮೇಲೆ. ಆ ನಿಡುನೀಳ್ದ
ಪೇರಾನೆಯೊಡಲ ಬಂಡೆಯನಿರದೆ ನಿಟ್ಟಿಸುತೆ
ಇಂಗಿತವರಿತನಂತೆ, ಸೌಮಿತ್ರಿಯಂ ನೋಡಿ :
“ಕಂಡೆ ಕಂಡೆನೊ, ಕಂಡೆ ! ಬಂಡೆಯಂದದೊಳಿಂತು
ಕಂಡರಣೆಗೊಂಡ ಮಾತ್ರದೊಳೆನಗೆ ಕುರುಡಹುದೆ ?
ಏಳು, ಗೆಳೆಯನೆ, ಏಳು; ತಾಳು ನಿಜರೂಪಮಂ ;
ಸೀಳು, ಒಡೆ, ಬಾಳ್ಬಂಡೆಯಂ ; ಬುಗ್ಗೆಯುಕ್ಕುವೋಲ್
ಮೂಡಿ ನಿಲ್ ಕಣ್ಮುಂದೆ. ಕಿಳ್ತೆಸೆದು ಕಲ್ತನದ
ಈ ವೇಷಮಂ !”
ಮಾತು ಮುಗಿವನಿತರೊಳಗಾ ಬಂಡೆ
ಮಾತಾಡಿತೆಂಬವೊಲ್ ಕೇಳಿಸಿತ್ತೊಂದು ದನಿ.            100
ರಾಮಲಕ್ಷ್ಮಣರಿರ್ವರಚ್ಚರಿಯೊಳೀಕ್ಷಿಸಿರೆ,
ಋಶ್ಯಮೂಕ ಮಹತ್ತೆ ಮೈವೆತ್ತವೋಲಂತೆ,
ಪಳುವಪ್ಪಿದರೆಯ ನೆತ್ತಿಯನೇರಿ, ಬಾನ್ಪಟದಿ
ಮಸಿಯ ಚಿತ್ತಾರಮಂ ಕಂಡರಿಸಿದರೆನಲ್ಕೆ,
ಗೋಚರಿಸಿದನ್ ಬೃಹದ್ ಭವ್ಯನೊರ್ವಂ. ರಾಮಂಗೆ
ತನ್ನ ಗತಿಸಿದ ಧೈರ್ಯಮೈತಂದಿದಿರ್ ನಿಂದು
ಧೀರ ವಾಣಿಯೊಳಾರಿಪೋಲಾಗೆ, ಗುಡಿಗಟ್ಟಿ
ಕಿವಿಗೊಟ್ಟನಾ ಕಲಿ ಮಲೆಯನುಲಿಗೆ :
“ಗೆಲಮಕ್ಕೆ ;
ಸೊಗಮಕ್ಕೆ ; ನಿಮಗೆ ಮಂಗಳಮಕ್ಕೆ ! ನಿಮಗೆಮಗೆ
ಕೆಳೆಯಕ್ಕೆ ! ನಮ್ಮ ತೌರೀ ಮಲೆಗೆ ನಿಮಗಕ್ಕೆ         110
ನಲ್ಬರಂ ! ಸುಗ್ರೀವನನುಚರಂ ಹನುಮನೆಂ ;
ಮಾರುತನ ಮಗನಾಂಜನೇಯನೆಂ ! ನರವರಂ,
ವಾನರಂ, ಕಪಿಕೇತನರ ಕುಲಕೆ ಚೇತನಂ,
ದೇವ ಸುಗ್ರೀವನಟ್ಟಿದನೆನ್ನನೀಯೆಡೆಗೆ
ನಿಮಗೊಳ್ಪುವೇಳಲ್ಕೆ. ಶಬರಿಯಾಶ್ರಮಕೆ ನೀಂ
ಬಿಜಯಗೆಯ್ದುದನರಿತೆವಾವೆಮ್ಮ ಬೇಹಿಂದೆ.
ನಿಮ್ಮ ದುಃಖವನರಿತೆವಾವೆಮ್ಮ ದುಃಖಮುಂ
ಸದೃಶಮೆನೆ. ನೀಮೆಮಗೆ ನಾಂ ನಿಮಗೆ ನಂಟರಯ್ !
ರವಿಸುತಂ ನಮ್ಮೆರೆಯನಟ್ಟಿದನ್ ರವಿಕುಲದ
ನಿಮ್ಮ ಕೆಳೆಯಂ ಬಯಸಿ ಬೇಡಿ !”
ಆ ಮಲೆಯನಾ                                              120
ಕೊರಳ ಸಂಸ್ಕೃತಿಗೆ, ಮೆಯ್ಯಾಕೃತಿಗೆ, ಶಿತಮತಿಗೆ,
ಯೋಗ ನಯನದ್ಯುತಿಗೆ ಸೋಲ್ತನೈ ರಾಘವಂ :
ಮಲರಿಗೆರಗಿದ ಪರಮೆ ಬಂಡುಣುವ ಸೊಗಸಿಂಗೆ
ಮೊರೆಯಂ ಮರೆಯುವಂತೆ ರಾಮನೇನೊಂದುಮಂ
ನುಡಿಯಲಾರದೆ ನೋಡುತಿರ್ದನ್ ಮನೋಜ್ಞನಂ,
ವಾನರ ಮಹಾ ಪ್ರಾಜ್ಞನಂ ! ಸಮೀರಾತ್ಮಜಂ
ತಾನುಮಂತೆಯೆ ನೋಡುತಿರ್ದನ್ ಸಮುದ್ರಸಮ
ಗಂಭೀರನಂ, ನಭಃಸನ್ನಿಭ ಶರೀರನಂ, ಮೇಣ್
ಗಿರಿವನಪ್ರಿಯ ರಾಮಚಂದ್ರನಂ ! ನೆಲದರಿಕೆ
ವೆಸರ ಕಬ್ಬಿಗರಿರ್ವರೊರ್ವರೊರ್ವರನರಿತು          130
ಮೆಚ್ಚಿ ನೋಳ್ಪಂದದೊಳೆ ರಾಮಾಂಜನೇಯರುಂ
ದಿಟ್ಟಿಯಿಂದಪ್ಪುವೋಲೊರ್ವರೊರ್ವರನೊಪ್ಪಿ
ನಿಟ್ಟಿಸಿದರಲ್ಲಿ ನಿಬ್ಬೆರಗಾಗಿ ಲಕ್ಷ್ಮಣಗೆ !
ದೂರಾಂತರ ವಿಭಿನ್ನ ಗಿರಿಗಳಿಂದುದ್ಭವಿಸಿ,
ತಂತಮ್ಮ ಬೇರೆಬೇರೆಯ ಬಟ್ಟೆಯಂ ಪಿಡಿದು
ಪರಿದು, ಜೀವಿತ ಮಧ್ಯಮಾರ್ಗದೊಳೊಲಿದು ಕಲೆತು,
ಜೀವನೋದ್ದೇಶದಿಂದೈಕತಾ ಭಾವಮಂ
ತಳೆದು ಮುನ್ನಡೆವೆರಡು ಪೊಳೆವೊನಲ್ಗಳೋಲಂತೆ
ಲಕ್ಷ್ಮಣ ಸಹಿತ ರಾಮಾಂಜನೇಯಂ ವೆರಸಿ
ಏರ್ದನಾ ಋಶ್ಯಮೂಕಕ್ಕೆಡೆಗೆ ಸುಗ್ರೀವನಾ,           140
ಮಾರ್ಗಮೇರ್ವಾಗಳನಿಲಾತ್ಮಜಂ, ಮಿತಭಾಷಿ,
ವಾಕ್ಕೋವಿದಂ ಧನುರ್ಧ್ವನಿಯ ಗಾಂಭೀರ್ಯದಿಂ,
ಬ್ರಹ್ಮಚರ್ಯಜ ದೃಢಪ್ರತ್ಯಯ ಮಹೋದಾರ
ಶಾಂತಿಯಿಂ ಪರಿಚಯಿಸಿದನು ದಶರಥಾತ್ಮಜಗೆ
ಕಿಷ್ಕಿಂಧೆಯಂ, ಋಶ್ಯಮೂಕಮಂ, ವಾಲಿಯಂ,
ಸುಗ್ರೀವನಂ, ನೀಲ ನಳ ಜಾಂಬವಂತರಂ,
ವಾನರಕುಲದ ಕಥಾಮಹಿಮೆಯಂ, ಕೀರ್ತಿಯಂ,
ಮೇಣೊದಗಿದಪಕೀರ್ತಿಯಂ ! ಕೇಳ್ದು ರಾಘವಂ :
“ಅನಿಲಸುತ, ನೀಂ ಬಣ್ಣಿಸಿದ ಬಲ ಸಮುದ್ರರಾ
ಸೇನಾನಿಗಳ ನೇಹಮಿರ್ದೊಡಂ …… ವಾಲಿಯೇಂ    150
ಪಾಪದಿಂ ಕಲಿಯಾದನೇಂ ?” “ಪಾಪಮಂತಿರ್ಕೆ ;
ಕಲಿ ದಿಟಂ ! ವಾನರ ಕುಲಕೆ ಪೆರ್ಮೆಯಾತನಂ
ನಾಮೆಲ್ಲರಾರಾಧಿಸುತ್ತಿರ್ದೆವಯ್ ! ರವಿಸುತಂ
ಸುಗ್ರೀವನಖಿಲಮಂ ನಿಮಗೊರೆದಪಂ. ಲೋಕೈಕ
ವೀರನೆಂದೆನಿಸಿದಾ ದಶಕಂಠನುಂ ಬೆದರಿ
ದೂರಮಿರ್ದಂ ಬಳಿಗೆ ಬರಲಂಜಿ !” “ದುಷ್ಟಂಗೆ
ದುಷ್ಟನೆ ಭಯಂ ! ಶಿಷ್ಟ ಸಾತ್ವಿಕಕೆ ಸೆಡೆಯುವುದೆ
ಭ್ರಷ್ಟ ರಾಕ್ಷಸ ನೀತಿ ? ಕಣ್ಗೆ ಕಣ್, ಪಲ್ಗೆ ಪಲ್ ;
ದಂಡಮೇ ದಲ್ ಧರ್ಮಮಂತಪ್ಪ ನೀಚಕ್ಕೆ !”
ಸೇರಿದರು ಬಂಡೆಯಿಡುಕುರ್ ನಡುವೆ ನಡೆದೇರಿ         160
ಕಾಡುಬೀಡಿನ ಮಲೆಯ ನೆತ್ತಿಯ ಗುಹಾಮುಖದ
ನಿರ್ಜನಕೆ. ನಿಲ್ಲಿಮೆಂದೊರೆದುದೆ ತಡಂ, ಕಲ್ಲ
ಪೆರ್ದೆರೆಗಳೊಳ್ ಪೊಕ್ಕು ಮರೆಯಾದನಾಂಜನೇಯಂ.
ಬಿಸವಂದದಿಂದಮಾ ಸೌಮಿತ್ರಿ : “ಏಂ ನಿರ್ಜನಂ
ಈ ವನಂ ! ಶಂಕೆಗೆಡೆಯಾಗುತಿಹುದಣ್ಣ ! ಇದು
ವಾನರೇಶಂಗಿರ್ಕ್ಕೆಯಪ್ಪೊಡೇಕಿಂತು ಪಾಳ್
ಸುರಿಯುತಿದೆ ?” ಮಾತು ಮುಗಿವನಿತರೊಳೆ, ಆಲಿಸದೊ,
ನಾತಿದೂರದೊಳೊಂದು ಪೊಣ್ಮಿದುದು, ಸೀಳ್ವವೋಲ್
ವನ್ಯ ನಿಶ್ಶಬ್ದಮಂ, ದೀರ್ಘಶ್ರುತಿಯ ಶೀಳ್ !
ಬೆಚ್ಚಿ ಸುತ್ತುಂ ನಿಟ್ಟಿಸಿರೆ ರಾಮಲಕ್ಷ್ಮಣರ್                  170
ಸಿಲೆ ಬೆಸಲೆಯಾದುವೆನೆ, ಬಂಡೆಯೊಂದೊಂದರಿಂ
ಮೂಡಿದರ್ ವಾನರರ್ ಒಂದೆರಳ್ ಪತ್ತು ನೂರ್
ಲಕ್ಕಲೆಕ್ಕದ ಬೆಮೆಯನುಕ್ಕಿಸುತೆ ! ಬಳ್ಳಿ ವೂ
ನವಿಲ ಗರಿ ಕಯ್ಗಯ್ದ ತಲೆಯುಡೆಯ, ಪುಲಿ ಚಿರತೆ
ಮಿಗದ ತೋಲಂಗಿ ಸಿಂಗರಗೈದ ನವಿರಿಡಿದ
ಮೆಯ್ಯ, ಬಣ್ಣದ ನಾರ್ಗಳಿಂ ಸಮೆದ ವಸ್ತ್ರದಿಂ
ಶೋಭಿಸುವ ಮಲ್ಲಗಚ್ಚೆಯ ಕಟಿಯ ಆ ಮಲೆಯ
ಸಿಡಿಲಾಳ್ಗಳಂ ಮೆಚ್ಚಿ ನೋಡುತಿಹ ರಾಘವನ
ಬಳಿಗಾಂಜನೇಯನೈತಂದೊರೆದನಿಂತೆಂದು :
“ಸುಗ್ರೀವನಾಳ್ಗಳೀ ಕಾಣ್ಬರನಿಬರುಮ್. ಇದರ್ಕೆ        180
ನೂರುಮಡಿಯಿಹರಲ್ಲಿ ಕಿಷ್ಕಿಂಧೆಯೊಳ್. ವಾಲಿ
ಬಂಧಿಸಿಹನವರೆಲ್ಲರಂ ಭಯದ ಪಂಜರದ
ವಜ್ರದೊಳ್. ವಾಲಿಬೇಲಿಯ ಮುರಿಯೆ ನಮ್ಮದಯ್
ತೋಂಟಮನಿತುಂ ; ನಿನ್ನುದುಂ ಕಣಾ !” ಎನುತ್ತೆ ಕಯ್
ಸನ್ನೆಗೆಯ್ಯಲ್ಕೊಡನೆ ಮರೆಯಾದುದಾ ಸೇನೆ,
ಮಾಯವಾದಂತೆ ! ಮೂವರೆ ಪೊಕ್ಕರಾ ಗುಹಾ
ಕಿಷ್ಕಿಂಧೆಯಂ !
ಮರ್ಬಿನೊಳ್ ಚರಿಸಿ, ಕೆಲದೂರ
ನಡೆಯೆ, ತೋರ್ದುದು ರೂಕ್ಷತರ ಗುಹಾಮಂದಿರಂ.
ಕಂಡಿಕಂಡಿಗಳಿಂದೆ ಬಿಸಿಲ ಕೋಲುಗಳಿಳಿದು
ಪರ್ಬಿದತ್ತೊಂದು ಗುಹ್ಯತಾ ಕಾಂತಿ. ಅಲ್ಲಲ್ಲಿ              190
ಮಲಗಿದೊಲ್ ಕುಳಿತವೊಲ್ ನಿಂತವೊಲ್ ಕಲ್‌ಬಂಡೆ,
ರೂಪಾಂತರೆಂಬತ್ತು ಹೊಂಚಿರ್ಪ ಛದ್ಮನೆಯ
ಕಾಪಿನೋಲಂತೆ, ನಾನಾ ನ್ಯಾಸಮಂ ರಚಿಸಿ
ಚಿತ್ರಮಾದುವು ಕಣ್ಗೆ. ಗುಹೆಯ ಗೋಡೆಯ ಮೇಲೆ
ಮೆರೆದುವಾಯುಧ ಪಂಕ್ತಿ, ಫಣಿ ಭಯಂಕರಮಾದ
ಪುತ್ತುಮನಿಳಿಕೆಗೈದು ; ಮೇಣಂಗಣದ ನಡುವೆ
ದಂಡಾಗ್ರದೊಳ್ ಧೀರಮಿರ್ದತ್ತು ವಾನರರ
ಕೀರ್ತಿಯ ಕಪಿಪತಾಕೆ. ಅಲ್ಲಿ ಮಿತ್ರರ್ವೆರಸಿ
ಮಂತಣದೊಳಿರ್ದ ಸುಗ್ರೀವನುತ್ಸಾಹದಿಂ
ಮೇಲೆಳ್ದು, ಕೈಮುಗಿದತಿಥಿಗಳ್ಗೆ ಕಯ್ಮುಗಿದು,              200
ಸಾದರದಿ ಕೈವಿಡಿದು ತಳಿರ ತೊಂಗಲ್ ಮಣೆಗೆ
ಕರೆತಂದನವರ್ಗಳಂ ತುಂಬು ಗಾಂಭೀರ್ಯದಿಂ
ಶೋಭಿಪ ವಿನಯದಿಂದೆ. “ಧನ್ಯನಾಂ, ದಾಶರಥಿ,
ನಿನ್ನ ಕೆಳೆಯಂ ಪಡೆದೆನಿನ್ನೆನ್ನ ಬಾಳ್‌ಮರ್ಬ್ಬು
ಮಳ್ಗಿ ಬೆಳಗಾದತ್ತು ; ತೊಲಗಿತಿನ್ನಾಪತ್ತು,
ನನಗುಮೀ ನನ್ನ ನನಗಾಗಿ ನೆಲೆಗೆಟ್ಟಲೆವ
ನಳ ನೀಲ ಜಾಂಬವ ಹನುಮರಾದಿಯಾದೆಲ್ಲ
ಮಿತ್ರರ್ಗೆ. ನಾಂ ತಿಳಿದೆನಾಂಜನೇಯನ ಪೇಳ್ದ
ವಾರ್ತೆಯಿಂ ನಿಮ್ಮಖಿಲ ದುಃಖಕಥೆಯಂ. ನನ್ನ
ಪರಿಭವ ಪರಾಭವಂಗಳನೆಲ್ಲಮಂ ನಿಮಗೆ                   210
ತಿಳಿಪಿರ್ಪನೆನ್ನ ನಚ್ಚಿನ ಮಂತ್ರಿ. ಕಷ್ಟದಿಂ                  
ಮೇಣಿಷ್ಟಜನ ನಷ್ಟದಿಂದೆಮಗಿರ್ವರಿಗೆ ಸಮತೆ
ಸಮನಿಸಿದೆ. ದುಷ್ಟ ಸಂಹಾರಮುಂ ಸುವ್ರತಂ
ಇಲ್ಲಿ ನೆರೆದೆಮಗನಿಬರಿಗೆ. ಅಯೋಧ್ಯಾ ನಗರಿ
ಕಿಷ್ಕಿಂಧೆಗಕ್ಕೆಮ ಸಹೋದರಿ ! ರಘುಜ ಸೂನು, ಕೇಳ್,
ನಿನಗೆ ನಾಂ, ನನಗೆ ನೀಂ ! ಪೂಣ್ದೆನಗ್ನಿಯೆ ಸಾಕ್ಷಿ :
ನಿನ್ನರಸಿಯನ್ನರಸಿ ಕಳ್ದೊಯ್ದನನ್ನೊರಸಿ,
ಸಮೆಸುವೆನ್ ನಿನ್ನ ಸೇವೆಗೆ ನನ್ನ ಸರ್ವಮಂ ! -
ನನ್ನ ಸರ್ವಂ ? ಅಯ್ಯೊ, ನನ್ನ ಸರ್ವಮದೆಲ್ಲಿ ?
ಕಡವರವನೀವೆನೆಂಬುವ ಕಡು ಬಡವನಂತೆವೋಲ್     220
ಬರಿದೆ ಕೊಡುಗೆಯ ನುಡಿಯನಾಡುತಿಹೆನಾಂ !” ನಾಣ್ಚಿ
ತಲೆಬಾಗಿ ಕಣ್ಣೀರ್ಬಿಡುವ ಕಪಿಕುಲೇಂದ್ರಂಗೆ
ರಾಮಚಂದ್ರಂ : “ಪತ್ತುವಿಡು ಮನ್ಯುಮಂ ದೈನ್ಯಮಂ,
ವಾನರೇಂದ್ರ, ನಿನ್ನದೆಂದರಿ ಸಕಲ ಕಿಷ್ಕಿಂಧೆ !
ಪರಪತ್ನಿಗಳುಪಿದಾತಂ ಸತ್ತನೆಂದರಿ ದಿಟಂ !
ಪೂಣ್ದೆನಗ್ನಿಯೆ ಸಾಕ್ಷಿ !” ಒಡನೊಡನೆ ನಡುಗಿತಯ್
ನಾಲ್ವರ್ಗೆ ವಾಮನೇತ್ರಂ, ಕಾಮಿನಿಯರಿರ್ವರ್ಗೆ
ಮೇಣ್ ಕಾಮಾಂಧರಿರ್ವರಿಗೆ !
ಮಿಂದು ದೊಣೆನೀರ್ಗಳಂ,
ಪಣ್ಪಲಂ ಬೇರುಬಿಕ್ಕೆಗಳೌತಣವನುಂಡು,
ತುಸುವೊರಗಿ, ದಣಿದ ನಡುವಗಲಾಸರಂ ಕಳೆದು,       230
ಅನಂತರಂ ಕರೆದೊಯ್ದನತಿಥಿಗಳನಾ ಗಿರಿಧರಾ
ವ್ಯೂಹಮಂ ತೋರೆ. ಕಂದರದಾಳಮಂ, ವಿಪಿನ
ನಿಬಿಡತೆಯನದ್ರಿಯೌನ್ನತ್ಯಮಂ, ಕಡಿದಪ್ಪ
ಬಂಡೆ ನಿಂದಿಹ ತೆರನ ದುರ್ಗತೆಯನೆಲ್ಲಮಂ
ಪೇಳ್ದು, ಬಣ್ಣಿಸಿ, ತೋರ್ದು, ಕಿಷ್ಕಿಂಧೆಯಿರ್ದೆಡೆಗೆ
ಕಣ್ಣಾಗಿ ನಿಂದು ಸುಗ್ರೀವನಂ ಕಾಣುತಂ
ಕೌತುಕದೊಳಿರ್ದ ರಘುನಂದನನ ಕಿವಿಗಳ್ಗೆ
ಪರ್ಚಿದನನಿಲಜಾತನಿಂತೆಂದು : “ಅತ್ತಲಾ
ಕಿಷ್ಕಿಂಧೆಯಿರ್ಪುದಯ್, ಮಲೆಯ ತೋಳ್ ತಕ್ಕೆಯೊಳ್
ಪಟ್ಟವೋಲ್. ನೋಡು ಅದೆ ರುಮಾದೇವಿಯಂ ವಾಲಿ   240
ಸೆರೆಯೊಳಿಟ್ಟಚಲಚೂಡಂ ! ತನ್ನ ಅರ್ಧಾಂಗಿ
ನಮೆಯುತಿರ್ಪೆಡೆಯನವಲೋಕನಂಗೈದೆಮ್ಮ
ದೊರೆ ನಿಂದನೀ ಮಾಳ್ಕೆಯಿಂ ಸುಯ್ದು ……” ರಾಮಂಗೆ
ತನ್ನ ದಯಿತೆಯ ನೆನಹು ಮರುಕೊಳಿಸಿದಂತಾಗೆ :
“ಅಯ್ಯೊ, ಮರುತಾತ್ಮಜನೆ, ನನಗೆ ಆ ಪುಣ್ಯಮುಂ
ಇಲ್ಲಾಯ್ತಲಾ !” ಕೇಳ್ದದಂ ಮುದಿಯ ಜಾಂಬವಂ :
“ದೇವ, ನೀನಿಂತೇಕೆ ಮರುಗುತಿಹೆ ? ಸಂಪಾತಿ
ಸೋದರಂ ನಿನಗೊರೆದ ವಿತ್ತೇಶನವರಜಂ
ದಶಕಂಠ ಬಿರುದಿನಾ ಲಂಕೇಶ ರಾವಣನೆ
ದಿಟಂ ; ಭುವನದೊಳ್ ಬೇರೆ ಧೂರ್ತರಿನ್ನನ್ನರಂ          250
ಕಾಣೆನಾಂ. ಕೇಳ್ದುಮರಿಯೆಂ. ತಿಂಗಳಾಯಿತ್ತಿಲ್ಲ ;
ನಡೆದೊಂದಪೂರ್ವಮಂ ಪೇಳ್ವೆನ್. ಒರ್ಪಗಲೆಮ್ಮ
ವಾನರರ್, ಭಲ್ಲೂಕ ವಂಶಜರುಮಂತೆ ಕಪಿ
ವಂಶಜರುಮಾರಣ್ಯ ವ್ಯಾಯಾಮ ಸಕ್ರಿಯಿಂ
ವಿಹರಿಸುತ್ತಿರೆ, ಮೇಲೆ ಬಾಂದಳದಿ ಪಳಯಿಸುವ
ದನಿ ಕೇಳ್ದುದಂತೆ, ಕೊಂಚೆಗಳೆಂದು ಸರ್ವರುಂ
ತಲೆಯೆತ್ತಿ ನೋಡಲ್, ವಿಮಾನವೊಂದೆತ್ತರದಿ,
ಹತ್ತಿಮೋಡಗಳಾಚೆ, ಜವದಿಂ ಪರಿದು ನುಸುಳಿ
ಮರೆಯಾಯ್ತು. ಬಿಸವಂದದಿಂದೆಲ್ಲರೀಕ್ಷಿಸಿರೆ,
ಬೆರಗಿಗೆ ಬೆರಗನಿತ್ತು ಬಿಳ್ದತ್ತವನಿಗೊಂದು               260
ಪೊನ್ನೊಡವೆ.” ಸುಯ್ಪಿನುಬ್ಬೇಗದಿಂ ದಾಶರಥಿ :
“ನೋಳ್ಪಮೆಲ್ಲಿರ್ಪುದಾ ಬೀಳ್ಕೆ !” ಎನೆ ಜಾಂಬವಂ :
“ಬಿಳ್ದ ಬೇಗಕೆ ನುರ್ಗ್ಗುನುರಿಯಾದುದದರ ಕೃತಿ.
ನಿನಗವಿನ್ನಾಣಮಪ್ಪುದೆ ?” “ಸಾಲ್ಗುಮತಿ ಬುದ್ಧಿ !
ತೋರಯ್ಯ ತೋರೆನಗೆ ಬೇಗದಿಂ !” “ರವಿಸುತನ
ವಶಮಿರ್ಪುದವತಂಸಮ್.”
ಬರಿಸಿದನ್ ಬೇಗದಿಂ
ಪೊನ್ನೊಡವೆಯಂ. ನೀಡಿದನ್. ರಾಮನಾ ಕಯ್ಯ
ಕಂಪನಮೊಡನೆ ಬಿಸಿಯ ಸುಯ್ಲಾಯ್ತು. ಸುಯ್ಯೊಡನೆ
ಕಣ್ಣೀರವೊನಲಾಯ್ತು. ಮುಳುಗಿ ಕಣ್ಬನಿಯಲ್ಲಿ
ಮುಚ್ಚೆವೋದುದು ಮನಂ. ಹನುಮ ವಕ್ಷದೊಳೊರಗಿ    270
ಸೊರಗಿದುದು ರಾಮತನು, ಸೀತಾವಿರಹದುರಿಯ
ಹೊಯ್ಲಿನಲಿ. ಕಿರಿದು ಬೇಗದೊಳರಿವು ಮರಳಲ್ಕೆ,
ದುಃಖ ವಲ್ಮೀಕದಿಂ ರೋಷಫಣಿಯುರ್ಕ್ಕೇಳ್ವ
ತೆರದಿಂದೆ, ಸುಯ್ವೆಳ್ದನವನಿಜಾ ವಲ್ಲಭಂ :
“ಪೇಳೆಲೆ ಕಪಿಧ್ವಜ ಕುಲೇಂದ್ರ, ಹೇ ಸುಗ್ರೀವ,
ದೈತ್ಯನೆತ್ತಣ್ಗುಯ್ದನೆನ್ನುಸಿರ ದಯಿತೆಯಂ ?
ನಾಡೆಲ್ಲಿ ? ಬೀಡೆಲ್ಲಿ ? ನೆಲೆಯಾವುದಾತಂಗೆ ?
ತಡವೇಕೆ ? ಚಿಂತಿಸಿನಿಯಳ ಗತಿಯನೆಂತಿಂತು
ತಳ್ವುವೆನೊ ? ತೋರಾತನಿರ್ಪೆಡೆಯನೀಗಳೆಯೆ
ಮಿಳ್ತುವನೆವಾಗಿಲಂ ತೆರೆವೆನಾ ನೀಚಂಗೆ, -               280
ನುರ್ಗಾದ ನೀಂ ಪ್ರತಿಕೃತಿಯೆ ವಲಂ, ಪೊನ್ನೊಡವೆ,
ನನ್ನ ಸೀತಾ ಸ್ಥಿತಿಗೆ !” ಇಂತಿಂತು ಮೊದಲಾಗಿ
ಪಳಯಿಸುತ್ತಿರ್ದ ಮಳೆಮುಗಿಲ್ ಮೆಯ್ಯ ಬಣ್ಣಂಗೆ
ಸಮದುಃಖಿ ಸುಗ್ರೀವನಿಂತು : “ಹೇ ಅರಿಂದಮ,
ಮಸೆಯದಿರ್ ನೆನಹುಸಾಣೆಯೊಳಳಲ ಕತ್ತಿಯಂ.
ನೆನಹು ಹಿಂದಿಹುದಳುಕು ಮುಂದಿಹುದು; ಇರ್ಬ್ಬಾಯಿ
ನಿನ್ನ ಸಂಕಟದಸಿಗೆ. ತಾಳ್ಮೆಯೊರೆಗಿರುಕದೆಯೆ
ಬರಿದೆ ಬೀಸಿದರೆನ್ನ ಮೇಣ್ ನಿನ್ನ ಮೇಣಿವರೆಲ್ಲ
ಬಾಳ ಗೋನಾಳಿಯಂ ತರಿವುದೆ ದಿಟಂ. ಸೀತೆ ಮೇಣ್
ರುಮೆಯಿರ್ವರಿಗೆ ಸರ್ವನಾಶಮಪ್ಪುದೆ ಫಲಂ ! -          290
ನೀನಾರ್ಯನಾಂ ವಾನರಂ. ನನಗೆ ನಿನ್ನಂತೆವೋಲ್
ಮನೆ ಮಡದಿಗೆಟ್ಟ ಗತಿಯಿಪ್ಪುದಯ್ ….. ಧೈರ್ಯನಿಧಿ
ನೀನೆಲ್ಲರಾದರ್ಶಮಂತುಟೆ ಮಾರ್ಗದರ್ಶಿ.
ದೋಣಿ ಬಿರಿದರೆ ಪುಟ್ಟು ಪೊರೆಯುವುದೆ ? ನಿನ್ನೆರ್ದೆಯೆ
ನೆಚ್ಚಳಿದು ಕೆಚ್ಚುಗೆಟ್ಟರೆ ನಮ್ಮ ನೆಮ್ಮೆತ್ತಣಿಂ ? -
ಪೇಳ್ವೆನಾಂ ; ತಾಳ್ಮೆಯಿಂದಾಲಿಸಾ. ಕಳ್ದುಯ್ದ
ನೀಚಂ ದಶಗ್ರೀವನೆಂಬುದೆಮ್ಮೆಲ್ಲರೂಹೆ.
ಕೇಳಿ ಬಲ್ಲೆವು ಲಂಕೆಯಂ, ತೆಂಕಣದ ಕಡಲ
ನಡುವಣ ದೀವಿನಾಡಂ. ಆದೊಡಂ, ದಾಶರಥಿ,
ಸುಲಭಮಲ್ತಸುರಪುರಿ. ಕಳುಹುವೆನ್ ಕಲಿಗಳಂ,         300
ಗೂಢಚರ ವನಚರ ಸಮರ್ಥರಂ, ಪುಡುಕಲ್ಕೆ.
ತಡೆಯೆಮಗೆ ವಾಲಿಯಲ್ಲದೆ ರಾಕ್ಷಸೇಶ್ವರಂ
ತಾನಲ್ತು. ವಾಲಿಯ ತಡೆಯನಳಿಸುವುದೆ ತಡಂ ….”
“ಕಿಷ್ಕಿಂಧೆಯಂ ಮುತ್ತಿ ಲಗ್ಗೆಯೇರ್ವಂ ನಾಳೆ.
ತಡವೇಕೆ ?” ಎಂದ ಲಕ್ಷ್ಮಣಗೆ ಸುಗ್ರೀವಂ :
“ದಶ ದಶಗ್ರೀವರಾತಂಗೊಂದು ಸೀರ್ಪುಲ್ಗೆ
ಸಾಟಿ, ಶತಕೋಟಿ ಬಲಶಾಲಿ ವಾಲಿಗೆ ಕಣಾ !
ಸಮ್ಮುಖ ಸಮರನೀತಿಯಿಂದಾತನಂ ಜಯಿಸೆ
ಶತಮಾನಗಳೆವೇಳ್ಕುಮಯ್. ಪಿಂತೆ ನಾಮೆನಿತೊ
ಸೂಳ್ ಕಂಡಿರ್ಪೆವಾತನ ಚಂಡ ವಿಕ್ರಮದ             310
ದುರ್ದಮತೆಯಂ. ಬ್ರಹ್ಮವರಬಲಮಿರ್ಪುದೈ.
ಮಾರಾಂತು ನಿಲ್ವ ವೈರಿಯ ಬಲದೊಳರ್ಧಮಂ,
ಕಂಡೊಡನೆ, ಕೊಳ್ಗೆ ನಿನ್ನದಟೆಂದು. ಇಂದ್ರನುಂ
ಕರುಣಿಸಿ ಕುಮಾರಂಗೆ ಕೊಟ್ಟಿಹನು ರಕ್ಷೆಯಂ
ವಜ್ರವರ್ಮೋಪಮಂ. ಹಿಂದೆ ದುಂದುಭಿವೆಸರ
ದೈತ್ಯಂ, ಸಮುದ್ರಮಂ ಗಗನಮಂ ಗಿರಿವರ
ಹಿಮಾದ್ರಿಯಂ ಕೆಣಕಿ ಕಾಳೆಗಕೆ ಸೆಣಸಿದ ಮಹಾ
ಧೂರ್ತದೈತ್ಯಂ, ಬೃಹನ್ಮಹಿಷರೂಪವನಾಂತು
ಮಲೆತು ಗರ್ಜಿಸಿ ವಾಲಿಯಂ ಕಾಲ್ಕೆರೆಯೆ, – ಪೇಳ್ವೆನೇಂ ?
ಸಾಕ್ಷಿಯಿವರೆಲ್ಲರುಂ – ಧಂ ಧಂ ಧಮೆಂಬುವಾ            320
ಭೇರಿ ದುಂದುಭಿ ರವಕೆ ನಡುಗೆ ಗಿರಿವನ ಗುಹಾ
ಕಿಷ್ಕಿಂಧೆ, ಪೂಡಿತೈ ದ್ವಂದ್ವಯುದ್ಧಂ ಭಯಂ
ಕರಂ ಕಲಿಗಳಿರ್ವರಿಗೆ ! ಆ ಭೀಮ ಕರ್ಮಿಯಾ
ಎರ್ಮೆವೋರಿಯ ಮೆಯ್ಯ ರಕ್ಕಸನ ಶಿಖರಸಮ
ಕೋಡೆರಡನಿರ್ಕಯ್ಗಳಿಂದಡಸಿ ಪಿಡಿದೊತ್ತಿ,
ತಿರ್ರನೆ ತಿರುಪ್ಪಿ, ನೆತ್ತರ್ ಕಾರಿ ಗೋಣ್ಮುರಿಯೆ,
ತೆಗೆದೊಗೆದನೈ ಮುಗಿಲ ಮೊಗಕೆ ! ಬಿಳ್ದತ್ತು ಆ
ರಕ್ಕಸವೆಣಂ ಮತಂಗನ ವನವನುತ್ತರಿಸಿ
ಯೋಜನದತ್ತ ದೂರಕ್ಕೆ. ಬಿಸುಟ ಶವದಿಂದೆ
ಮುದ್ದೆಮುದ್ದೆಯೆ ನೆತ್ತರೊಳ್ಕಿ ಮುನಿಯಾಶ್ರಮದಿ         330
ಬೀಳೆ, ಶಪಿಸಿದನು ಋಷಿ, ಆ ಶಾಪಭೀತಿಯಿಂ
ವಾಲಿಯೈತರನಿಲ್ಲಿಗದರಿಂದೆಮಗೆ ರಕ್ಷೆ ! -
ಭೀಮಬಲವೊಂದೆಯಲ್ತಾತಂಗೆ, ಸಿದ್ಧಿಸಿದೆ
ಬಿಲ್ಬಲ್ಮೆಯುಂ. ಅಲ್ಲಿ, ಪಂಪಾ ಸರಸ್ತಟದಿ
ಬಲ್ಬೆಳೆದ ತಾಲತರವೊಂದೊಂದುಮವನೊಂದೆ
ಬಾಣದಿಂ ಜಜ್ಜರಿತಮಾಗಿ ಕೆಡೆವುವು ಕಣಾ ! -
ಸಮ್ಮುಖ ಸಮರ ನೀತಿಯಿಂದಾತನಂ ಜಯಿಸೆ
ಶತಮಾನಗಳೆವೇಳ್ಕುಮದು ದಿಟಂ !”
ಕೆಟ್ಟಾಸೆ
ನಿಟ್ಟುಸಿರನೆಳೆದ ಸುಗ್ರೀವನಂ ನೋಡುತ್ತಿನಿತು
ಕಿನಿಸಿಂ ಧನುರ್ಧರ ವರೇಣ್ಯಮ್ : “ವಾನರೇಂದ್ರ,      340
ಬಾಯ್‌ತುಂಬಿ ಬಣ್ಣಿಸಿರ್ಪಯ್ ನಿನ್ನಣ್ಣನಣ್ಮಮ್.
ನೀಂ ಗುಣಗ್ರಾಹಿಯೆ ವಲಂ ! ಕಂಡ ಬಲ್ಮೆಯಂ
ಕೊಂಡಾಡುವುದೆ ಬೀರರಿಗೆ ತಗುವ ಸಿರಿಗೆಯ್ಮೆ.
ಕಾಣದುದನಿಳಿಕೆಗೆಯ್ವುದುಮಂತೆ ಕೀಳ್‌ಗೆಯ್ಮೆ.
ನಮ್ಮ ಬಲ್ಮೆಯನರಿಯದಾಡುತಿಹೆ. ನಿನ್ನೆರ್ದೆಯ
ಶಂಕೆ ಬಯಲಪ್ಪವೊಲ್ ತೋರ್ಪೆನೆನ್ನಣ್ಮುಮಂ, ಮೇಣ್
ಬಿಲ್‌ಜಾಣ್ಮೆಯಂ.” ಬಾಗಿ ನಾಣ್ಚುತ್ತಿನಾತ್ಮಜಂ
ಕಯ್ಮುಗಿದೊರೆದನಿಂತು : “ಮನ್ನಿಸೆನ್ನಂ, ದೇವ,
ನಿನ್ನ ಜಸಮಂ ಕೇಳ್ದೆನಾದೊಡಂ ಬಗೆಯಳ್ಕು
ನುಡಿಸಿತ್ತು. ವಾಲಿಯಿಂದೆನಿತೊ ಸೂಳಾಂ ಸೋಲ್ತು     350
ಮಯ್‌ಮುರಿಸಿಕೊಂಡಿರ್ಪೆನದರಿಂದೆ ಮತ್ತೊರ್ಮೆ
ಪುಸಿಬಲ್ಮೆಯಂ ನೆಚ್ಚಿ ಮಾರಾಂಪಲೊಲ್ಲೆನಯ್
ಮಿಳ್ತುವಿಗೆಣೆಯ ಬೀರಂಗೆ !” “ನಾನೇನನೆಸಗೆ ಪೇಳ್
ನಿಶ್ಶಂಕಿ ನೀಂ ?” “ಮೈಬಲ್ಮೆ ಬಿಲ್ಜಾಣ್ಮೆಗಳ್ ಮೆರೆಯೆ
ವಾಲಿಯಂ ಮೀರ್ದಂತೆ ತೋರ್ !” “ತೋರ್ಪೆನೇಳಂಜದಿರ್ !”
ಪರಿಪಡುವವೋಲ್ ನುಡಿದು, ಕೋದಂಡಮಂ ಪಿಡಿದು
ಮೇಲೆಳ್ದನಾ ಮಿತ್ರವತ್ಸಲಂ. ತಾಮೊಡನೊಡನೆ
ಮೇಲೆಳ್ದರಿತರರುಂ. ಮಲೆಯನಿಳಿದರ್ ಕುರಿತು
ಪಂಪಾ ಸರಸ್ತೀರ ತಾಲವನಮಂ. ನಡೆಯೆ,
ದಾರಿಯೆಡೆ ನಿರ್ಮಾಂಸದಸ್ಥಿಪಂಜರಮಾಗಿ               360
ಕೆಡೆದಿರ್ದುದಚಲೋಪಮಂ ದುಂದುಭಿಯ ಶವಂ.
ಕಂಕಾಲ ಭೀಕರಮದಂ ಕಂಡು ಸೌಮಿತ್ರಿ :
“ನೀಂ ಪೇಳ್ದುದಿದೆ ಕಣಾ ನಿನ್ನಗ್ರಜಂ ಕೊಂದು
ಬಿಸುಟ ದುಂದುಭಿ ? ರಾಮಚಂದ್ರಂಗೆ ಕಿರಿಯನೆಂ !”
ತನ್ನಣ್ಣನಾರ್ಪನಾಶಂಕಿಸಿದ ವಾನರನ
ಕೀಳ್ಮೆಗವಹೇಳನಂ ಮಾಳ್ಪವೋಲ್, ಲಕ್ಷ್ಮಣಂ
ಕೊಂಕುನುಡಿಯಿಂದಿರಿದು ಕಿರುನಗುತ್ತಶ್ರಮದಿ
ಬಿಲ್ಲ ಕೊಪ್ಪಿಂ ಚಿಮ್ಮಿದನ್ ಕಳೇಬರ ಗಿರಿಯ
ಭಾರಮಂ. ಸದ್ದೊಡನೆ ಧೂಳಿ ಗಾಳಿಗಳೇಳೆ
ಕವಣೆಗಲ್ಲೆಸೆದಂತೆ ರೊಂಯ್ಯನೆದ್ದಾ ಪೆಣಂ               370
ತೂಂತಿಟ್ಟುದು ಮುಗಿಲ್ಗೆ ; ಮತ್ತೆ ತಿರ್ರನೆ ತಿರುಗಿ
ಪತ್ತು ಯೋಜನದಾಚೆ ಬಿಳ್ದತ್ತು ! ಕಂಡದಂ
ವಾನರರ್ಗಚ್ಚರಿಯುಮಾನಂದಮಾದೊಡಂ
ಮೃದುಹಾಸ್ಯಕೆಂಬಂತೆ ಸೂರ್ಯಸೂನು : “ತಿಳಿಯಯ್ಯ :
ಮಾಂಸಲಂ ರಕ್ತಾರ್ದ್ರಮಾಗಿರ್ದುದಾ ಶವಂ
ವಾಲಿ ಬಿಸುಟಂದು !” ನಗುತಿರೆ ರಾಮನೊಡಗೂಡಿ
ನಳ ನೀಲ ಜಾಂಬವರ್, ಹನುಮನೆಂದನ್ ಹಸನ್
ಮುಖಿ : “ಸುಮಿತ್ರಾತ್ಮಜನೆ, ನಮ್ಮ ವಾನರಬಲಕೆ
ಹೆಣದ ಹೊರೆ ಹಿರಿದಲ್ತು ! ನೀಂ ಗೈದ ಕಜ್ಜಮಂ
ಕಿರುಳರೆಸಗುವರೆಮ್ಮ ಸೇನೆಯಲಿ !” ನೆರೆನಾಣ್ವಿ       380
ನಸುಮುನಿದು ಕೆಂಪೇರ್ದ ತಮ್ಮನಂ ಮೊಗಂನೋಡಿ
ರಾಘವಂ : “ಸೋದರನೆ, ಕಪಿಗಳಿವರಸಾಮಾನ್ಯರ್,
ಇವರ ಕೆಳೆಯಿಂದೊಳ್ಪು ಕಯ್ಗೂಡಿದಪುದೆಮಗೆ.
ಬಿನದದಿಂ ಕಾಣ್ ಇವರ ಸರಳ ಸೌಜನ್ಯಮಂ.”
ಹಂಪೆಯ ಸರೋವರಂ ಪೆಂಪಿನೋಕುಳಿಯಾಗೆ
ಕೆಂಪೆರಚಿದುದು ಸಂಜೆ. ನಿಂದುದಪ್ರತಿಹತಂ
ತೀರರುಹ ದೈತ್ಯಗಾತ್ರದ ತಾಳತರುಪಂಕ್ತಿ.
ಬೈಗುವಿಸಿಲಾನ್ತದರ ನೆತ್ತಿಯ ನೆಳಲ ನೀಳ್ದು
ಜಂಗಮತೆವೆತ್ತಿರ್ದುದಯಗಿರಿ ಯಾತ್ರಿ : ಹಾ
ಭಂಗವಾದುದೆ ಯಾತ್ರೆ ? ಕಳ್ತರಿಸಿದಂತೆವೋಲ್        390
ಒರ್ಮೊದಲ್ ಕುನಿದುದು ತರುಚ್ಛಾಯೆ ! ಮರಮುಡಿಯ
ಗೂಡು ಗೊತ್ತುಗಳಿಂದೆ ಪಾರ್ದಾರ್ದ ಪಕ್ಕಿಗುಂಪಂ
ಕೇಳೊರೆವುದಾ ನಡೆದುದಂ : ಕಾರ್ಮುಕಪ್ರಳಯದೊಲ್
ಜ್ಯಾಜಿಹ್ವೆಯಿಂದುಜ್ಜ್ವಲಂ ಪೊಣ್ಮಿದುದೆ ತಡಂ, ಕೇಳ್,
ರಾಮನೆಚ್ಚಂಬು ತಾಂ, ದೆಸೆದೆಸೆ ನಡುಗೆ, ಪಡಿಗುಡುಗೆ
ಬೆಟ್ಟ ದರಿ ಕಾಡುಗಳ್, ತಲ್ಲಣಿಸಿ ಕಿಷ್ಕಿಂಧೆಯುಂ,
ಪಗಲುಳ್ಕೆವೋಲ್ ಮಿಳ್ತುಬೇಗದಿಂ ಪರಿತಂದು
ತುಂಡಿಸಿತು ಒಂದೆರಡು ಮೂರು ನಾಲ್ಕೈದಾರು
ಏಳಿಣಿಕೆಯಿಂ ಸಾಲುಗೊಂಡಿರ್ದ ತಾಳತರು
ಷಂಡಮಂ, ಕರಡಮಂ ಕುಡುಗೋಲ್ ಸವರುವಂತೆ !   400
ಮುಂಡಗಳುಡಿಯೆ ಪರ್ಣಚಂಡಿಕೆವೆರಸಿ ಕೆಡೆದವಂ
ತಾಳತರು ಸಪ್ತರುಂಡಂಗಳಂ ಕಂಡು ಕಪಿಕುಲ
ಪುಂಗವಂ ನಾಣ್ವೆರೆದ ಮೆಚ್ಚಿಂ ಮುದಂಗೊಂಡು :
“ನಿನ್ನುರ್ಕನ್ ಆಶಂಕಿಸಿದೆನಲ್ಪಬುದ್ಧಿಯೆಂ ;
ಮನ್ನಿಸಯ್, ಹೇ ಸೂರ್ಯತೇಜಸ್ವಿ.” ಎನುತೆ ಕಯ್
ಮುಗಿದೆರಗಿದನ್ ಕೊರಳ ಸರಮಿಳೆಗೆಳಲ್ವವೋಲ್.
ಮಲೆಮುಡಿಯ ಮರೆಗೊಂಡು ಮುಳುಗಿದುದು ಪೊಳ್ತು, ಮೇಣ್
ಬಾನ್‌ತಲೆಗೆ ಮಲರಿದುವರಿಲ್. ಹಾಡುವಕ್ಕಿಯ ಕೊರಲ್
ನಿದ್ದೆಗೈದುದು ತಿಪ್ಪುಳಿರ್ಕ್ಕೆಯೊಳ್. ಬಂಡೆಯೆಡೆ,
ಮರಗಳೆಡೆ, ಪಳುವಿನೆಡೆ, ಮೆಳೆಗಳೆಡೆ, ಗವಿಗಳೆಡೆ      410
ಹನುಮ ಜಾಂಬವ ನೀಲ ನಳ ರಾಮ ಸುಗ್ರೀವ
ಲಕ್ಷ್ಮಣರ ಮಂತ್ರಣ ರಹಸ್ಯವನುಸಿರ್ವವೋಲ್
ಮೆಲ್ಲಮೆಲ್ಲನೆ ಸುಯ್ದು ಹೊಂಚಿ ತೀಡಿತ್ತೆರಲ್,
ವೈರಿ ವಾಲಿಯ ಬೇಹುವೋಲಂತೆ. ನಿಂದುದಯ್
ವಿಶ್ವಧರ್ಮ ಸಹಸ್ರಾಕ್ಷ ಸಾಕ್ಷಿಯೆಂಬಂತೆವೋಲ್
ನಾಕ ಚುಂಬಿತ ಋಶ್ಯಮೂಕದ ಮೂಕರಾತ್ರಿ !

ಕಿಷ್ಕಿಂಧಾ ಸಂಪುಟಂ ಸಂಚಿಕೆ : ಸಂಚಿಕೆ 4 – ಅತ್ತಲಾ ಕಿಷ್ಕಿಂಧೆಯೊಳ್

ಏಕಳುವೆ, ತೇಜಸ್ವಿ ? ಕಲ್ಪನೆಯೆರಂಕೆಯಂ
ಏರಿ ಬಾ ನನ್ನೊಡನೆ : ಕಾಣ್ಬುದೇನದೊ ಅಲ್ಲಿ
ಕಿಷ್ಕಿಂಧ ಗಿರಿವನ ಗುಹಾದ್ವಾರದೆಡೆಯಲ್ಲಿ ?
ನಿಂದಿರ್ಪನೋರ್ವ ಹರ್ಯಕ್ಷ ವಕ್ಷಾನ್ವಿತಂ
ವೃಷಭ ಸನ್ನಿಭ ಗಮನನಿಭಸಮ ದೃಢ ಶರೀರಿ !
ಮತ್ತೆ ಶತಪಥಮಲೆವನೇಕವಂ, ಏಕಾಂಗಿ ?
ಬಾಹುದಂಡದಿ ಗದಾದಂಡಮಂ ಪೊತ್ತೇಕೆ, ಪೇಳ್,
ಪುಲ್ಮೀಸೆ ಕವಿದಿರ್ಪ ಗವಿಯ ಬಾಯನೆ ನೋಡುವನ್ ;
ಸುಯ್ವನಾಳೋಚಿಸುವನೊಯ್ಯನೆ ಗದೆಯನಿಳಿಸಿ
ತಳ್ಪಲಡವಿಯನೊರ್ಮೆ. ಬೆಟ್ಟನೆತ್ತಿಯನೊರ್ಮೆ,           10
ನೋಡದೆಯೆ ನೋಡಿ ? ವಾನರ ಕುಲಂ, ನರವರಂ,
ವಾಲಿಯ ಸಹೋದರಂ ಸುಗ್ರೀವನಲ್ತೆ ಆ
ಓಜೋನ್ವಿತಂ ? ಬಿಲಮುಖದೊಳೇಂ ತಪಂಗೆಯ್ವನೇಂ ?
ಕಳೆದತ್ತು ಶತದಿನಂ. ಕಳೆದತ್ತು ಶತರಾತ್ರಿ.
ದೀರ್ಘ ದಶದಶ ದಿನಂ. ದೀರ್ಘ ದಶದಶ ರಾತ್ರಿ.
ದಿನರಾತ್ರಿ ರಾತ್ರಿದಿನಮನಿಶಂ ಗುಹಾಮುಖದಿ
ವಾಲಿಯನುಜಂಗದೇನಾ ಪರಿವ್ರಾಜನಂ ?
ಧವಳಿಸಿತವುಂಚಿ ಕೌಮುದಿ ಧೌತ ಧಾತ್ರಿಯಂ
ಸುಪ್ತಜನ ರಾತ್ರಿ. ನಿಶ್ಶಬ್ದಾಬ್ಧಿಯಾಳಕ್ಕೆ
ಕಂತಿರ್ದುದೈ ಕಿಷ್ಕಿಂಧೆ. ಇರ್ದಕಿರ್ದಂತೊಂದು            20
ವೈರಭೈರವ ಅಟ್ಟಹಾಸಂ ಕೊಡಂಕೆಯಂ
ಇರಿದುದು ; ಕಲಂಕಿದುದು ಪುರಮೌನಮಂ. ಕಿವಿಗೆ
ಕೆಪ್ಪುಮಂತೆಯೆ ಬಗೆಗೆ ಬೆಪ್ಪುಮೊದವಿರೆ ಜನಕೆ,
ಬಂದನು ಜನೇಂದ್ರನಾ ರಿಪುನಿಷೂದನ ವಾಲಿ
ತನ್ನರಮನೆಯನುಳಿದು. ತನ್ನ ತಂದೆಯ ಕೊಂದ
ಮುನ್ನಿನ ಹಗೆಗೆ ತನ್ನನೊಕ್ಕುವ ಬಗೆಗೆ ಸೊಕ್ಕಿ
ಗರ್ಜಿಪಸುರನನರಿತನಾ ದುಂದುಭಿಯ ಮಗಂ
ಮಾಯಾವಿಯೆಂದು. ದುಂದುಭಿಯ ದುಷ್ಕೃತಿಯಲಾ
ನೀನೆಂದು ಪ್ರತ್ಯಟ್ಟಹಾಸಮಂ ಗರ್ಜಿಸುತೆ
ಬೆನ್ನಟ್ಟಿದನ್ ಯಮೋಪಮಂ, ಶಿಖರೋಪಮದ           30
ಬಂಡೆ ಮಂಡೆಯ ಗದೆಯನೆತ್ತಿ. ಬೆನ್ಬಲಮಾಗಿ
ತನ್ನಣ್ಣನೊಡಲೆಯೆನೆ ಚರಿಸಿದನ್ ಸುಗ್ರೀವನುಂ.
ಕಾಣಲಿರ್ವರನೆಳೆತಟ ಮಾಡಿ ನೆಲೆಗೊಯ್ದು
ಕೊಲ್ಲಿಸುವೆನೆನ್ನವರ ಕೈಯಿಂದಮೀ ಮಹಾ
ಕಪಿಕೇತನರನೆಂದು, ಓಡಿದನ್ ಮಾಯಾವಿ,
ಬೆಳ್ದಿಂಗಳಿರುಳಿನೊಳ್ ನೆಳಲ ಕರ್ದಿಂಗಳಂ
ಮೆಯ್ಯ ಕರ್ದಿಂಗಳಿನಿಳಿಕೆಗೈದು. ಅರೆಯಟ್ಟಿದನ್
ರೋಷವಶನಿಂದ್ರಸಂಭವಂ, ವಾಲಿ ; ಬೆಂಬಲಂ
ಸಂಚಲಿಸಿದನ್ ಸೂರ್ಯಸಂಭವಂ, ಸುಗ್ರೀವ.
ಓಡುತಾ ಮಾಯಾವಿ ತಾಂ ಮೆಯ್ಗರೆದನೊಯ್ಕನೆಯೆ   40
ನುರ್ಗ್ಗಿ ತೃಣಸಂಛನ್ನ ಧರಣಿಯ ಮಹಾ ಗುಹಾ
ವಿವರಮಂ. “ನಿಲಿಲ್ಲಿ, ಸುಗ್ರೀವ, ಅಸುರನಂ
ಒಕ್ಕಿ ಬಹೆನನ್ನೆಗಂ ಬಿಲದ ಬಾಯೆಡೆಯಿರ್ದು
ಕಾಯುತಿರ್ !” ಇಂತಾಣತಿಯನೊದರಿ ಆ ವಾಲಿ
ವಾನರ ಮಹಾವೀರನಿರದೆ ನೆಗೆದನ್ ಬಿಲ
ರಸಾತಲಕೆ ! ಕಾಯುತಿಹನಣ್ಣನಾಣತಿಯಂತೆ
ಸುಗ್ರೀವನಾ ಬಿಲದ್ವಾರಮಂ. ನೂರ್ಪಗಲ್
ನೂರಿರುಳ್ ಉರುಳ್ದುವಾದೊಡಮಯ್ಯೊ ಅಣ್ಣನಂ
ಕಾಣದೆಯೆ ಕಾತರಿಸುತಿರ್ಪನದೊ ನೋಡಲ್ಲಿ
ಕಿಷ್ಕಿಂಧ ಗಿರಿವನ ಗುಹಾದ್ವಾರದೆಡೆಯಲ್ಲಿ !          50
ಕಳೆದತ್ತು ಶತದಿನಂ. ಗತಿಸಿತೈ ಶತರಾತ್ರಿ.
ದೀರ್ಘ ದಶದಶ ದಿನಂ. ದೀರ್ಘ ದಶದಶ ರಾತ್ರಿ.
ದಿನರಾತ್ರಿ ರಾತ್ರಿದಿನಮನಿಶಂ ಗುಹಾಮುಖದಿ
ವಾಲಿಯನುಜಂ ಕಾಯ್ದನಣ್ಣನಳಿವಂ ಮನದಿ
ಶಂಕಿಸುತೆ. ನಿಶ್ಚಯಿಸುತಿರೆ, ನೊರೆಯ ನೆತ್ತರಂ
ಕಾರ್ದುದೈ ಗುಹೆಯ ಬಾಯ್ ! ಭೂಗರ್ಭದಾಳದಿಂ
ಕೇಳ್ದುದಾರ್ಭಟೆ, ನಿರಾಕಾರದೂಹೆಗೆ ಕಣ್ಣು
ಕೈ ಕಾಲುದಿಸುವಂತೆ ! ವಾಲಿ ಮರಣಂ ಗೆತ್ತು,
ಪೆಣದಿನಿಗಳಳಿಗೆಂದು, ಬಿಲದ ಬಾಯಿಗೆ ಗಿರಿಯ
ಗುಂಡು ಹೆಬ್ಬಂಡೆಯನಿಡಿದು, ಜಡಿದು, ಬಲಿದಡಕಿ,       60
ಮರಳಿದನ್ ಕಿಷ್ಕಿಂಧೆಗೆ …. ಮೇಲೆ ಕಟ್ಟಳೆಯಂತೆ
ಸುಗ್ರೀವನೆರೆಯನಾದನ್ ಕಪಿಧ್ವಜಕುಲಕೆ
ಮತ್ತೆ ಮೇದಿನಿಗೆ.
ಅತ್ತಲಾ ರಿಪುಭೈರವಂ,
ವಾಲಿ, ಕದನದೊಳೊತ್ತಿ ಮುರಿದು ಮಾಯಾವಿಯಂ
ಮತ್ತಿತ್ತಲಿಳೆಯತ್ತಲೈದಿದನ್, ಗೆಲ್ಸಿರಿಗೆ
ತನ್ನ ತೋಳೊಡ್ಯಾಣಮಂ ಮಾಡಿ ಪೊತ್ತುಯ್ವ
ಮತ್ತ ಚಿತ್ತೋತ್ಸಾಹದಿಂ. ಬಂದನಾದೊಡೇಂ ?
ಸುತ್ತಲೆತ್ತೆತ್ತಲುಂ ಕೆತ್ತ ಕಲ್ಗತ್ತಲೆಗೆ
ಕಣ್ ಬತ್ತಲಾದತ್ತು. ಬಟ್ಟೆಗಾಣದೆ ಕಿನಿಸಿ
ಹುಡುಕಿದನು ವಾನರಂ. ಹುಡುಕಿ ತಡವಿದೊಡಹಾ       70
ಬಂಡೆಗಳನೆಡವಿದನ್. ತೋರದಾದುದು ಹಾದಿ
ಬಿಲದಾದಿ. ಕೂಗಿದನ್ ಮುನಿದು ಕೆಚ್ಚನೆ ಕೆಚ್ಚು
ಕಿಚ್ಚುರಿದು ಸುಗ್ರೀವನಂ, ಗವಿಯದುರುವಂತೆ.
ಮಾರೊರಲ್ದತ್ತು ತಾರಗ್ರೀವದಿಂ ಗುಹೆಯ
ಗೋನಾಳಿ. ಸುಗ್ರೀವನುತ್ತರವನಾಲಿಸದೆ
ಮತ್ತೆಮತ್ತೊರಲಿದನ್, ರವದ ರೌದ್ರಕೆ ಗುಹಾ
ತಾಲವ್ಯದಿಂ ಭೀತಿಶಿಥಿಲಂ ಜಗಳ್ದುವೆನೆ
ಮೃಚ್ಛಿಲಾರೂಪುವೆತ್ತಕ್ಷರಗಳೆಂಬಿನಂ
ಕಲ್ಲು ಮಣ್ಣಕ್ಷತೆಯನೆರಚಿದತ್ತಣಕದಿಂ
ವಾಲಿಯ ತಲೆಯ ಮೇಲೆ ! ಮದಹಸ್ತಿ ಬಲಯುತಂ       80
ಹಸ್ತದಿಂ ಮಸ್ತಕದಿನಂತೆ ಪದಗದೆಯಿಂದೆ
ತಳ್ಳಿದನ್, ನೂಂಕಿದನ್, ಕುಟ್ಟಿದನ್, ಗುದ್ದಿದನ್,
ಬೈದನೊದೆದನ್, ಕರೆದನುರಿದನ್, ತಪಿಸಿ, ಶಪಿಸಿ,
ಬಲಶಾಲಿ ವಾಲಿ. ಕಂಬನಿಗರೆದನೈ ಕಡೆಗೆ,
ತಾರೆಯಂ, ತನ್ನೊಲಿದ ಹದಿಬದೆಯ ನೀರೆಯಂ,
ನೆನೆದು. ನೆನೆದುದೆ ತಡಂ, ಸಂಚರಿಸಿದುದು ಮಿಂಚು
ಧಮನಿಧಮನಿಯೊಳುಜ್ವಲಂ ಪರಿದು ! ಕಪಿಕುಲಂ
ಚಿಮ್ಮೆಳ್ದನತಿಬಲಂ ! ರುದ್ರಾಟ್ಟಹಾಸದಿಂ
ಕೂಗಿ ಗರ್ಜಿಸಿ ನುಗ್ಗಿದನ್ ತಳ್ಳಿ ! ಶೀಶೆಯಂ
ಕಾಯಿಸೆ ತಟಿಲ್ಲೆಂದು ಮುಚ್ಚಳಂ ಸಿಡಿವವೋಲ್           90
ಚಂಡವಾನರ ಗಂಡುಗಂಡಕೆ ಸಿಡಿಲ್ದುದಾ
ಬಂಡೆ; ತೋರ್ದುದಾ ಕಂಡಿ ; ಅದೊ ಕಂಡುದಾಕಾಶ !
ಹೊರಹೊಮ್ಮಿದನೊ ವಾಲಿ ! ಸುಗ್ರೀವನಂ ಹುಡುಕಿ,
ಕಾಣದೆಯೆ, ತುಟಿಗಚ್ಚಿದನ್ ರಕ್ತ ಸೋರ್ವಂತೆ.
ಗಿರಿ ನಡುಗೆ ಗರ್ಜನೆಗೆ, ಧರೆ ನಡುಗೆ ಪದಹತಿಗೆ,
ಸಿಡಿಲುಳ್ಕೆಯಾಗಿ ಹೊಕ್ಕನ್ ವಾಲಿ ಬಿದಿಗೆಟ್ಟ
ಕಿಷ್ಕಿಂಧೆಗೆ. ತನ್ನರಸಿ ತಾರೆಯನರಸಿದನ್. ತಪಂ
ಬಡುತಿರ್ದಳಂ ಕಂಡನರಿತನ್ ಕುಮಾರನಿಂ
ಸುಗ್ರೀವನರಸುಗೆಯ್ವಂದಮಂ. ಕರೆಸಿದನ್
ತನ್ನವರನೆಲ್ಲರಂ. ಹೇಳಿದನು ತಾಂ ಪಟ್ಟುದಂ          100
ಪಾಡೆಲ್ಲಮಂ, ಕರುಣೆ ಕಿಡಿದೋರೆ ಕೇಳ್ದರಿಗೆ.
ಸಾರಿದನು ಸೋದರದ್ರೋಹಿಯೆಂದನುಜನಂ ;
ಹೊರಿಸಿದನು ರಾಜ ವಿದ್ರೋಹದಪರಾಧಮಂ ;
ರೋಷಪ್ರತೀಕಾರ ಛಲ ಬಲಾನ್ವಿತನಾಗಿ
ನಡೆದನೋಲಗಕೆ ಸುಗ್ರೀವನಾ ! ಸಾತ್ವಿಕಂ
ಸುಗ್ರೀವನತಿಹರ್ಷ ವಿಸ್ಮಿತಂ ವಾಲಿಯಂ
ಕಂಡೊಡನೆ ಸಿಂಹಾಸನವನೊದ್ದು ಬಿಸುಟೆದ್ದು
ಬಂದಪ್ಪಿದನ್ ‘ಬಂದೆಯಾ’ ಎನುತೆ, ಪ್ರೀತಿಯಂ
ತೊದಲು ತೊದಲಾಡಿ. ಕೆಲಂ ತಳ್ಳಿದನ್ ತಮ್ಮನಂ
ವಾಲಿ: “ನೀಚನೆ, ಕಪಟಿ, ಸೋದರದ್ರೋಹದಿಂ       110
ರಾಜ ವಿದ್ರೋಹದಿಂ ಪತಿತನಾಗಿಹ ಪಾಪಿ,
ಮರಣಮೆ ನಿನಗೆ ಶಿಕ್ಷೆ. ಮೇಣ್, ಕ್ಷಮೆಗೇಳ್ದೊಡಂ,
ದೇಶಚ್ಯುತಿಯೆ ಭಿಕ್ಷೆ !” ನಡೆದ ದಿಟವೊರೆಯಲ್ಕೆ
ಸುಗ್ರೀವನೆಳಸುತಿರೆ “ಎಲವೆಲವೊ ಸಾಲ್ಗುಮೀ
ಕಥೆಯ ಕಪಟಂ. ಕೇಳ್ದೆನೆಲ್ಲಮಂ ….” ರವಿಸುತಂ
ನೋಡಿದನು ಸನ್ಮಿತ್ರನಂ ಅಂಜನಾಪುತ್ರನಂ.
ಕಾರ್ಯಪಟು, ಮಿತಭಾಷಿ, ವಾಕ್ಯಕೋವಿದನವಂ
ವಾಲಿಯಂ ಕುರಿತು : “ಹೇ ಕಪಿವೀರ, ವೈರದಿಂ
ಧರ್ಮಸಾಧನೆಯಾಗದೈ. ನಂಬು ಸೋದರನ
ನುಡಿಗಳಂ. ನೀನಳಿದೆಯೆಂದಂತು ಕಲ್ಮುಚ್ಚಿ      120
ಬಂದನಲ್ಲದೆ ಬೇರೆ ಬಗೆಯೇನುಮಂ ಕಾಣೆ.
ನನ್ನಿಗೆ ಬಲಮೆ ಸಾಕ್ಷಿಯೆಂಬುದಾಗಿರೆ ನಿನ್ನ
ಮತಮೆನಗದುಂ ಸಮ್ಮತಂ. ನೋಳ್ಪಮ್.” ಎನೆ ಕೇಳ್ದು
ಸುಗ್ರೀವನ್ “ಆಗದಾಗದು, ಸಮೀರ ಕುಮಾರ,
ತಗದೆನಗೆ ಭ್ರಾತೃಕಲಹಂ ತಾಂ ದೇಶನಾಶಕಂ !”
ಕೇಳ್ದನಾ ಕ್ರೋಧಾಂಧ ವಾಲಿ. ಸುಗ್ರೀವನಂ
ಮೇಣವನ ಕೆಳೆಯರಂ ನಾಡಿನಾಚೆಗೆ ನೂಂಕಿ
ಬಲ್ಮೆಯಿಂದಟ್ಟಿದನ್. ಒಡವೋಗಲೀಯದೆಯೆ
ಸೆರೆಯಿಟ್ಟನನುಜಸತಿ ರುಮೆಯಂ. ಪ್ರತೀಕಾರ
ಬುದ್ಧಿಗೆಲ್ಲಿಹುದೆಲ್ಲೆ ? ಪುಣ್ಯರೇಖೆಯ ಕೊಂಕಿ      130
ಪುಟ್ಟಿತೆನೆ ಪಾಪಚಕ್ರದ ವಕ್ರತಾ ದ್ರುತಂ,
ಇಂದೊ ನಾಳೆಯೊ ಎಂದೊ ಗೆಲ್ಲದಿರ್ಪುದೆ ಋತಂ
ತನ್ನ ಮುನ್ನಿನ ಋಜುತೆವೆತ್ತು ?
ರಾಜ್ಯಚ್ಯುತಂ,
ನೆಲವನುಳಿದೊಡಮೊಲವನುಳಿಯಲಾರದೆ, ವಿರಹಿ
ಸುಗ್ರೀವನೆಂತಾದೊಡಂ ರುಮೆಯನುಯ್ಯಲ್ಕೆ
ಗೆಯ್ದ ಸಾಸಂ ವಿಫಳಮಾದುದಲ್ಲದೆ ವಾಲಿ
ಬೇಂಟೆಯಾಡಿದನವನನೆಲ್ಲಿಯುಂ ನಿಲಗೊಡದೆ.
ಕಡೆಗೋಡಿದನ್ ಋಶ್ಯಮೂಕಕೆ, ಮತಂಗಮುನಿ
ಶಾಪದಿಂ ವಾಲಿದುರ್ಗಮವಾದ ಮಾತಂಗ
ವನ ಮೇಖಲಾ ಶೈಲ ಶೃಂಗಕ್ಕೆ. ಆ ಮಲೆಯ     140
ಮುಗಿಲಪ್ಪಿದಡವಿ ಮುತ್ತಿದ ತಲೆಯ ಕೋಡಿನ
ತಪಸ್ವಿಯೋಲಿರ್ದ ಬಂಡೆಯ ಜಟಾಜೂಟದಿಂ
ನೋಡೆ ಕಾಣ್ಬುದು ಅನಂತತೆಯ ಬಿತ್ತರದೊಂದು
ಕಣ್ಬೊಲಂ : ಸುತ್ತುಂ ಮತಂಗವನಮತ್ತಲಾ
ಪರ್ವತ ತರಂಗಕೃತ ರಂಗ ವಿರಚಿತ ರಮ್ಯ
ಕಂದರದಿ ಪರಿದುದು ತರಂಗಿಣಿ ತುಂಗಭದ್ರೆ.
ಪರಿಯುತಿರಲದ್ರಿಬಾಹುವ ಪರಿಷ್ವಂಗದಿಂ
ತಡೆದು ತುಂಬುತ್ತುಬ್ಬಿಹಬ್ಬುತೆ, ಗಿರೀಶಂಗೆ
ಹಡೆದ ಹಂಪೆಯ ಸರೋವರ ಸುಂದರಿಯನಿತ್ತು,
ನೃಪ ಸಮುದ್ರನ ನೆರೆಯ ನಡೆದರ್ ನದಿಯ ವನಿತೆ.     150
ಸಹ್ಯಾದ್ರಿ ಕಾನನ ಕ್ಲೇಶ ಯಾತ್ರೆಗೆ ದಣಿದ
ತುಂಗಭದ್ರೆಯ ನೀರ ನಿದ್ರೆಗೆ ನಿಸರ್ಗರಮೆ ತಾಂ
ಮಾರ್ಗ ಸತ್ರದಿ ಸಮೆದ ವಿಶ್ರಾಂತಿ ಮಂಚಮೆನೆ
ಶೋಭಿಸಿತು. ಬೆಟ್ಟದಡವಿಯ ಕಣಿವೆತಳ್ಪಿಲಿನ
ತುಂಬುಗಣ್ಣೆಂಬಿನಂ, ಕಣ್ತುಂಬೆ ತುಂಬಿದಾ
ಪಂಪಾ ಸರೋವರದ ಸಲಿಲದರ್ಪಣ ದೀರ್ಘ
ವಿಸ್ತಾರ ಸರ್ಪಶೈಲಿ. ಕೊಲ್ಲಿಕೊಲ್ಲಿಗಳಾಗಿ
ಕಳ್ತರಿಸಿದಾ ಸರಸ್ತೀರದಿಂದಲ್ಲಲ್ಲಿ,
ಮೊದಮೊದಲ್ ತೆಳುವಾಗಿ, ಮೇಲೆ ದಟ್ಟಿತ್ತಾಗಿ,
ಬರಬರುತೆ ಕಡಿದಾಗಿ, ಮತ್ತೆ ತೆರೆತೆರೆಯಾಗಿ,    160
ಕೆಳಗಿಳಿದು, ಮೇಲೆರಿ, ದುಮುಕಿ, ನೆಗೆಯುತೆ, ಹಾರಿ,
ಹಜ್ಜೆಹಜ್ಜೆಗೆ ಹೋರಿ ಲಗ್ಗೆಯೇರ್ದುದು ಕಾಡು,
ಹಗೆಯ ಕೋಂಟೆಗೆ ಮುಗ್ಗುವರಿಸೇನೆಯೋಲಂತೆ :
ಗಜಸೇನೆಯೆನೆ ಬಂಡೆವಿಂಡು ; ರಥಸೇನೆಯೆನೆ
ತುಮುಲ ತರುಪಂಕ್ತಿ ; ಕಾಲಾಳ್ಗಳೆನೆ ಹಿಣಿಲಾಗಿ
ಹೆಣೆಗೊಂಡ ಕುರುಚುಪಳು ; ಬೆಳ್ಗೊಡೆಗಳೋಲ್ ಮುಗಿಲ
ತುಂಡು ; ಸಿಡಿಮದ್ದಿನಿಂದೇಳ್ವ ಹೊಗೆಯೆನಲಿಲ್ಲಿ
ಅಲ್ಲಿ ಧರಿ ಫೂತ್ಕರಿಸುವುಸಿರಾವಿಯೋಲುಣ್ಣೆ
ಮಂಜು !
ವಾನರ ಕಲಿಗಳಾ ದೃಶ್ಯಮಹಿಮೆಯಿಂ
ದಿನದಿನಕೆ ಮಹಿಮರಾದರ್ ತಪಶ್ಚರಣೆಯಿಂ.          170
ಅವರೊಳಾ ಪ್ರಾಣದೇವನ ಸುತಂ ತಾನಾಜನ್ಮ
ಬ್ರಹ್ಮಚರ್ಯದಿ ಸಹಜಯೋಗಿ, ಅಂಜನಾದ್ರಿಯೆ
ತವರುಮನೆಯಾದಾಂಜನೇಯಂಗೆ, ಕೇಳ್, ಲಭಿಸಿತೈ
ಸಿದ್ಧಿಗಳಲೌಕನಿಧಿ. ಬಹಿರಂಗ ಸಾಮಾನ್ಯನ್
ಅಂತರಂಗದಿ ದೇವಮಾನ್ಯನಾದಾತನ್ ಆ
ಮಲೆಯ ನೆತ್ತಿಯೊಳೊರ್ದಿನಂ ಬೈಗುವೊಳ್ತಿನೊಳ್
ಧ್ಯಾನನೇತ್ರಂಗಳಂ ತೆರೆದು ತನ್ನೆದುರಾಗಿ
ಕೆಳಗೆ ಪರ್ವಿರ್ದ ಚೇತೋಹಾರಿ ದೃಶ್ಯಮಂ
ದರ್ಶಿಸುತ್ತಿರೆ, ಅಮೃತ ರಚಿತ ವಿಹಗಾಕೃತಿಯ
ಉಲ್ಕಮೆನೆ, ಬೆಳ್ವಕ್ಕಿಯೊಂದು ಪಸುರೆದುರಾಗಿ           180
ಪಾರಿಬಂದಿಳಿದೇರ್ದು ತೇಲ್ದು ಸುತ್ತುತ್ತೊಯ್ಯ -
ನೆರಗಿತು ಸರೋವರಕೆ. ಮರೆಯಾದುದಾ ಖಗಂ
ಸಂಜೆ ಹೊನ್ನೆರಚಿರ್ದ ನೀರ್ಬಣ್ಣಗಳ ಮಧ್ಯೆ :
ಮತ್ತೇನೊ ಮರೆದುದು ಮರುತ್ಸುತಗೆ : ದೂರದೊಳ್,
ಪಂಪಾ ಸರೋವರದ ತೀರದೊಳ್, ಬೈಗಿರುಳ್
ಮರ್ಬಿನೊಳ್, ನಡೆಯುವ ನರಾಕೃತಿಗಳೆಂಬಿನಂ
ಮೊಳೆತುದಾಶಂಕೆ ! ತಿಳಿಯಲ್ಕೆಳಸುತಿರೆ, ಮಸಿಯಿರುಳ್
ಸೆರಗುವೀಸಿತು ಕರ್ಪನಿಳೆಬಾನ್ ಮಸುಳ್‌ವಂತೆ.

ಕಿಷ್ಕಿಂಧಾ ಸಂಪುಟಂ ಸಂಚಿಕೆ : ಸಂಚಿಕೆ 3 – ಶಬರಿಗಾದನು ಅತಿಥಿ ದಾಶರಥಿ

ತೊಲಗಿತಾ ಓ ಲಕ್ಷ್ಮಣಾ ದಿನಂ ; ಕಳೆದುದಾ
ಓ ಲಕ್ಷ್ಮಣಾ ರಾತ್ರಿ ; ಮರುದಿನಂ ಬಿಟ್ಟರಾ
ಓ ಲಕ್ಷ್ಮಣಾ ಸ್ಮೃತಿಯ ಪಂಚವಟಿ ಧಾತ್ರಿಯಂ.
ಶಕುನಿ ವಾಣಿಯ ಶಕುನವಲ್ತೆ ? ನಡೆದರೊ ನೆಮ್ಮಿ
ನೈರುತ್ಯಮಂ. ನಡೆಯೆ, ಪಳು ನಿಬಿಡಮಾದತ್ತು ;
ಕಾಡುಗಳ್ತಲೆ ಕರಂಗಿದತ್ತು ; ಪಟುವಾದುದಯ್
ಝಿಲ್ಲಿಕಾ ಕಂಠಕೃತಿಕರ್ಕಶಂ ; ಬೆಬ್ಬಳಿಸಿ
ಬೆದರೆ ಕಿವಿ, ಘೂಗೈದುದಡವಿಯಂ ರವವಿಕೃತಿ
ಮಂಗಟ್ಟೆವಕ್ಕಿಯಾ. ಇದು ನಿರ್ಜನತೆಯಲ್ತು :
ನೈರುಶ್ಯದಾಕಳಿಕೆ ! ಇದು ಮೌನಮಲ್ತಲ್ತು :    10
ರವಶವಂ ! ಎನಲ್ ರಾಮಂಗೆ ತನ್ನ ಅಂತಃಸ್ಥಿತಿಯ
ರಣರಣಕಮಲ್ಲಿ ಬಹಿರಂಗವಾದಂತಾಗಿ
ಕಡಿದು ಕುಳಿತನ್ ಹತಾಶೆಯ ಮಂಕು ಬಡಿದಂತೆ :
“ಏತಕೆಲ್ಲಿಗೆ ಎತ್ತ ಹೋಗುತಿಹೆವಾವಿಂತು,
ಸೌಮಿತ್ರಿ ?” “ದೇವಿಯನ್ವೇಷಣೆಗೆ !” “ಆರವಳ್
ಆ ದೇವಿ ?” ಎನುತ್ತೆ ನಗೆದೋರ್ದಣ್ಣನಕ್ಷಿಯೊಳ್
ಬೆಳ್ಪನಲ್ಲದೆ ಮತ್ತೆ ಬೇರೇನುಮಂ ಕಾಣದಾ
ಲಕ್ಷ್ಮಣಂ : “ಬೇಡ, ಬೇಡಣ್ಣಯ್ಯ ; ನಿನ್ನಚಲ
ಧೈರ್ಯಮಂ ನೈರುಶ್ಯಕೌತಣಂಗೆಯ್ಯದಿರ್.
ನೆನೆ ಭರದ್ವಾಜ ಋಷ್ಯಾಶ್ರಮದ ದೃಶ್ಯಮಂ ;  20
ವಜ್ರರೋಮನ ಚಿತ್ರಕೂಟಮಂ ; ಅತ್ರಿಯಂ,
ಅನಸೂಯೆಯಂ ; ನೆನೆ ಅಗಸ್ತ್ಯ ಗುರುದೇವನಂ ;
ಬಗೆಗೆ ತಾರಯ್ಯ ವಿಶ್ವಾಮಿತ್ರ ಮಂತ್ರಮಂ !
ನಿನ್ನ ಮೈಮೆಯ ನೀನೆ ಮರೆವೆಯೇನ್ ? ತನಗೆ ತಾಂ
ನಿಂದೆಯಪ್ಪುದೆ ಕೊಂದುಕೊಂಡಂತೆ ; ನನ್ನನುಂ
ಕೊಂದಂತೆ ! ನಿನ್ನ ಮಹಿಮೆಯ ನೆನಹೆ ನನಗಿಂತು
ವಜ್ರ ಚಿತ್ತವನಿತ್ತು ಹೊರೆಯುತಿರೆ, ನೀನಿಂತು
ಕಳವಳಿಸುತಾಸೆಗೇಡಿನ ಕಿಬ್ಬಿಗುರುಳುವೆಯ,
ಚಂದ್ರಚೂಡನ ರುಂದ್ರ ಕೋದಂಡಮಂ ಮುರಿದು
ಮೈಥಿಲಿಯನೊಲಿದ ಜಗದೇಕೈಕವೀರ, ಹೇ    30
ಲೋಕ ಸಂಗ್ರಹ ಶಕ್ತಿಯವತಾರ ?”
ಲಕ್ಷ್ಮಣಂ
ನುಡಿಯುತಿರಲಿಂತು, ರಾಮಂಗಾದುದನುಭವಂ
ಮಾನಸಿಕದೊಂದದ್ಭುತಂ : ತುಂಬಿದುದು ಮಂಜು
ಕಾಡೆಲ್ಲಮಂ. ಸೃಷ್ಟಿಯಸ್ಫುಟಮಾಯ್ತು. ಭೀತಿ,
ಆಕಾರವಾಧಾರವೊಂದನರಿಯದ ಭೀತಿ ತಾಂ
ಛಾಯೆ ಛಾಯೆಗಳಾಗಿ ರಾಹುವೋಲಲೆದತ್ತು
ಕುಳಿರ್ಚಳಿಗಳಂ ಸುಯ್ದು. ನೋಡುತಿರೆ ರಾಘವಂ,
ಮೂಡಿತೊಂದಕಶೇರು ಕಶ್ಮಲ ಸರೀಸೃಪಂ,
ಮಂಜೆ ಮೈಗೊಂಡಂತೆವೋಲ್. ಶ್ಲೇಷ್ಮಚರ್ಮದಿಂ
ಭೀಕರತೆವೆತ್ತುದಾ ವಿಕೃತ ತಿರ್ಯಗ್ಯೋನಿ,     40
ಕುಕ್ಷಿಗಂ, ವ್ಯಾಳಾಕೃತಿಯ ರಾಕ್ಷಸಂ : ಇಲ್ಲ ಕಯ್,
ಇಲ್ಲ ಕಾಲ್, ಎಲ್ಲ ಮೆಯ್ ! ಹೊಟ್ಟೆ ತಾನದೆ ಮಂಡೆ !
ಕಾಲುಗಳೊ ? ತೋಳುಗಳೊ ? ಕಿವಿಗಳಿರ್ಪೆಡೆಯಿಂದೆ
ಚಾಚಿದವು ಯೋಜನಂ, ಪಂಚ ನಖ ನಿಶಿತಾಗ್ರಗಳ್
ದೀರ್ಘ ಬಾಹುದ್ವಯಂ ! ಹೊಟ್ಟೆ ಮಂಡೆಯ ಮಧ್ಯೆ
ಭೀತಿ ಭೂತಗಳೆರಡು ತೂನ್ತಿನವತಾರಮಂ
ನೋಂತುವೆನಲಾಭೀಳಮಾದುವು ಮಹಾ ಗುಹಾ
ಕುಕ್ಷಿ ಕುಹರಾಕ್ಷಿ ! ತನ್ನಾ ನಿರಾಶೆಯೆ ತನಗೆ
ಕಾಣಸಿತೆನಲ್ಕಾ ಕಬಂಧನಂ ಕಂಡೊಡನೆ
ನಡುಗಿದುದು ತನು ತಪನಕುಲಗೆ. ಹದುಗಿತು ಬಲ್ಮೆ.    50
ಹಿಮ್ಮೆಟ್ಟಿದುದು ಹೆಮ್ಮೆ ; ಹೆಡೆಮುಚ್ಚಿ ಸೆಡೆತುದಯ್
ಪೌರುಷದ ಫಣಿ. ಪಲಾಯನ ತೇಜಿಯನ್ನೇರಲ್ಕೆ
ತವಕಿಸಿತು ಜೀವಮಾ ಜಾನಕಿ ಜೀವಿತೇಶ್ವರಗೆ !
ಓಡಲೆಳಸಿದನಾದೊಡೇಂ ? ಕಾಲ್ ಕೀಳಲಾರದೆ
ಕೆಡೆದುರುಳ್ದನು ಬಡಿದು ಭಯಮೂರ್ಛೆ. ಮೌನದಿಂ
ದೃಢತೆಯಿಂದೆರೆಗೊಳ್ವ ರಾಹುಛಾಯೋರಗಂ
ತೆವಳಿಕೊಂಡುರುಳಿದುದು ಹೊಡೆಗಾಲಿ ತೇರಂತೆ,
ಹೆಬ್ಬಂಡೆಯಂತೆ, ದುಶ್ಶಕುನ ಕೇತುವಿನವೋಲ್.
ನೈರಾಶ್ಯರಾಕ್ಷಸ ಕಬಂಧನೊಯ್ಯನೆ ಮುಂದು
ಮುಂದಕ್ಕೆ ಗಮಿಸಿದನ್ ; ಮೊನೆಯುಗುರ್ ಬೆರಳ್ಗಳಾ   60
ತೋಳ್ಗಳಿಂದಾಕ್ರಮಿಸಿದನ್ ದಶರಥನ ಸುತನ
ದೇವ ಗಾತ್ರವನಂತೆ ಕೌಸಲೆಯ ಕಂದನಾ
ಕೋಮಲ ಶರೀರಮಂ :
“ಕೆಟ್ಟೆನಯ್, ಲಕ್ಷ್ಮಣಾ !
ಪಿಡಿದನಸುರಂ. ಕೈಯೆ ಬಾರದಯ್. ನೆಗಹಲೆಳಸಲ್
ಮೇಲೇಳದಿದೆ ಕತ್ತಿ. ಓಡಲುಮಾರೆನಯ್ಯಯ್ಯೊ
ಕೆಟ್ಟುದಯ್ ಕಾಲ್ ಬಲಂ. ದೂರ ಸಾರ್, ದೂರ ಸಾರ್ ;
ಬಾರದಿರೆನಗೆ ಹತ್ತೆ. ನಿನ್ನನುಂ ಪಿಡಿವನೀ
ರಾಕ್ಷಸಂ. ನೀನಾದಡಂ ಪೋಗಯೋಧ್ಯೆಯಂ
ಸೇರಯ್ಯ. ಸಂತಯ್ಸು ಭರತನಂ. ಮಾತೆಯಂ.
ನನಗಿದೆ ವಲಂ ಒಲಿದ ಗತಿ. ಮೈಥಿಲಿಯನುಳಿದು         70
ನನಗಿನ್ನಯೋಧ್ಯೆಯೇಂ ಮರಣಮೇಂ ? ಸಾವೆ ದಲ್
ದಿಟಮೆನಗೆ ಬಾಳ್ಕೆ !” ರಘುವರನೊರಲುತಿರಲಿಂತು
ಮೇಲ್ವಾಯ್ದನೂರ್ಮಿಳಾವಲ್ಲಭಂ. ಖಡ್ಗದಿಂ
ಕಡಿಯತೊಡಗಿದನಸುರ ಬಾಹುವಂ. ಕತ್ತರಿಸೆ
ತೋಳ್, ಇರಿದನಕ್ಷಿಯಂ, ಕುಕ್ಷಿಯಂ. ನೋಡುತಿರೆ
ರಾಮನಾ ರಕ್ಕಸಂ ಮಾಯವಾದನು ಬಿರಿದ
ದುಃಸ್ವಪ್ನದಂತೆ. ನೈರಾಶ್ಯದಿಂದುದ್ಭವಿಸಿ
ತೋರ್ಪವೋಲಾಶಾಮರೀಚಿ ತಾಂ, ಬೃಂದಾರಕಂ
ಮೈದೋರ್ದನೊರ್ವನ್ ; ಮತ್ತೆ ಕೈದೋರಿದನ್, ಶಬರಿ
ಕಾಯುತಿರ್ದಾಶ್ರಮ ದಿಶಾಶಾ ದಿಗಂತಕ್ಕೆ !    80
ಬೆಮರ್ದು ನೆಗೆದೆಳ್ದನ್ ರಘೂದ್ವಹಂ ಕಣ್ದೆರೆದು,
ಮೈತಿಳಿದಂ ಭಯಮೂರ್ಛೆಯಿಂ. ಸುಯ್ದನಿಂತೆಂದು :
“ಬದುಕಿದೆನೊ ನಿನ್ನಿಂದೆ, ಸೌಮಿತ್ರಿ.” “ತಿಳಿದವಂ
ತನ್ನ ನೆರಳಿಗೆ ತಾನೆ ಹೆದರುವನೆ” “ತಿಳಿದವಂ !
ತಿಳಿದ ಮೇಲಲ್ತೆ ?” “ಪೃಥ್ವಿಗೆ ರಾಹು ಬೇರೆಯೇಂ
ತನ್ನ ನೆಳಲಲ್ಲದೆಯೆ” “ಅದ್ರಿಯಾದೊಡಮೊರ್ಮೆ
ಭೂಮಿ ಕಂಪಿಸೆ ದೃಢತೆ ಹಿಂಗದಿರ್ಪುದೆ ? ಅಂತೆ ತಾಂ
ನಡುಗುತಿದೆ ರಾಮಧೈರ್ಯಂ, ತಮ್ಮ, ಆ ಭೂಮಿ
ಸುತೆಗಾಗಿ. ನಿಲ್ಲುವುದು ನಿನ್ನ ನೆಮ್ಮಿರಲದ್ರಿ, ಕೇಳ್,
ಸುಸ್ಥಿರಂ. ನಿನ್ನಿಂದೆ ಸತ್ತನೊ ನಿಶಾಚರಂ ;     90
ಕೊಂದೆನೊ ನಿರಾಶೆಯಂ ; ಗೆಲ್ದೆನೊ ಕಬಂಧನಂ ;
ಹತವಾದುದೊ ಹತಾಶೆ. ಕಿರಣದೋರಿದುದಾಶೆ.
ಬಾ, ನಡೆವಮಿಲ್ಲಿಂದೆ ; ಬಲ್‌ಗಜ್ಜಮಿದಿರಿರ್ಪುದಯ್
ಮುಂದೆ, ಸೌಮಿತ್ರಿ !” ಎಂದಪ್ಪಿದಣ್ಣನಪ್ಪಿದನ್ ;
ಸಂತೈಸಿದನ್ ಲಕ್ಷ್ಮಣಂ. ಮೇಲೆ ಮುಂಬರಿದು
ತೆರಳ್ದರವರಿರ್ವರುಂ, ಮೂಡಿದಾಸೆಗಳವಳಿ
ಜೋಡಿ ನಡೆವಂತೆ :
ಆ ಬೆಳ್ದಿಂಗಳಿರುಳಿನೊಳ್
ಮುಪ್ಪು ಜೌವನಗನಸು ಕಾಣ್ಬೊಂದು ಮಾಳ್ಕೆಯಿಂ
ಮುದುಕೆ ಕಂಡಳ್ ಕನಸನಾ ಶಬರಿ. ನಡುರಾತ್ರಿ
ಮುಗುಳುನಗುತೆದ್ದು ಕುಳಿತಳ್ ತನ್ನ ಮಲಗಿರ್ದ          100
ಪುಲ್ವಾಸಗೆಯ ಮೇಲೆ. ಗಗನ ನೀಲಾಭನಂ
ಮರಳಿ ಚಿತ್ರಿಸಿಕೊಂಡಳಾ ಸ್ವಪ್ನದರ್ಶನದ
ಶ್ರೀಮೂರ್ತಿಯಂ. ತುಂಬಿ ತುಳುಕಿತೆರ್ದೆ ಮುದಿಯಳ್ಗೆ.
ಹರಿಸವುಕ್ಕುವ ಮೊಗಕೆ ಸುಕ್ಕು ತೆರೆತೆರೆಯಾಗೆ
ಪುಂಡಿನಾರಿನ ತೆರನ ಬೆಳ್ನರೆ ನವಿರ್ದಲೆಯ,
ಬಚ್ಚು ಪಲ್ಲಿಲಿವಾಯ, ಕುಡುಬೆನ್ನ ಹಣ್ಮುದುಕಿ
ಶಬರಜ್ಜಿ ನಡುಗಿ ನಡೆದಳ್ ; ಗುಡಿಯ ಬಾಗಿಲಂ
ತೆರೆದು ನೋಡಿದಳು : ಆ ಚಂದ್ರಸುಂದರ ರಾತ್ರಿ
ಮುದುಕಿಯಂ ಕಂಡು ಕನಿಕರದಿಂದೆ ಕರಗಿತೆನೆ
ತಿಂಗಳ್ ಬೆಳಕು ಚೆಲ್ಲಿ, ಶಬರಿಯ ಕುಟೀರಮಂ            110
ಸುತ್ತಲೆತ್ತೆತ್ತಲುಂ ಹಸರಿ ಹಬ್ಬಿದ ಹಸಲೆ
ರಾಜಿಸಿತು ಮುದುಕಿಯ ತಲೆಯವೋಲೆ, ತೃಣಮೌನಿ
ತಾನಾಗಿ. ತೃಷಿತ ದೃಷ್ಟಿಯನಟ್ಟಿ, ನಿಸ್ಸೀಮ
ಘಾಸ ಸೀಮಾರ್ಣವದ ವಿಸ್ತೀರ್ಣದೊಳ್ ಮನಂ
ಲಯಮಾಗೆ ನೋಡಿ, ನಿಡುಸುಯ್ದು, ತನ್ನೊಳಗೆ ತಾಂ
ಶಬರಿ : “ನೀನೆಂದಿಗೆ ಬರುವೆಯಯ್ಯ, ಓ ನನ್ನಯ್ಯ,
ಕಂದಯ್ಯ, ರಾಮಚಂದ್ರಯ್ಯ ? ಗುರುದೇವನಾ
ಮುನಿ ಮತಂಗನ ಮಾತು ಬೀತಪುದೆ ? ನಿನಗಾಗಿ
ಕಾದಿರುವೆನೀರೈದು ವತ್ಸರಗಳಿಂ, ವತ್ಸ.
ಪಣ್ಛಲಂಗಳನೆಲ್ಲ ಬಿತ್ತಿ ಬೆಳೆದಣಿಮಾಡಿ           120
ಕಾಯುತಿಹುದೆನ್ನಾಶ್ರಮಂ. ನೋಯುತಿದೆ ಮನಂ,
ನನ್ನ ಓ ಇಷ್ಟಮೂರ್ತಿ, ನೀಂ ಬರ್ಪ ಮುನ್ನಮೆಯೆ
ಕಾಯವಳಿವಳ್ಕಿಂದೆ. ಹಣ್ಣುಹಣ್ಣಾದ ಈ
ಮುಪ್ಪಿನೊಡಲಿನ್ನೆನಿತು ತಾಳುವುದೊ ? ಬಾಳುವುದೊ ?
ಬಾಳ್ದೊಡೇನೀ ಒಡಲ್ ? ಕಣ್ಣಾಗಳೆಯೆ ಮಬ್ಬಾಗಿ,
ಮಂಜಾಗಿ, ಹಿಂಜರಿಯುತಿದೆ ದಿಟ್ಟಿ ! ಕಣ್ಣಳಿದ
ಮೇಲೆ ನೀ ಬಂದರಯ್ಯಯ್ಯೊ, ಕಣ್ಣಾರ್ವಿನಂ
ನಿನ್ನನೆಂತಯ್ ನೋಳ್ಪೆ ? ಕೈಯಿಂದ ಮೈಯೆಳವಿ
ಸಂತಸಂಬಡುವೆನಾದೊಡಮೆಂತು ತಣಿಸುವೆನೊ ಪೇಳ್
ಕಣ್ಗಳೀ ನೀರಳ್ಕೆಯಂ ? ಬಾರ, ಓ ಕಂದಯ್ಯ,  130
ಕಣ್ಕಿಡುವ ಮೊದಲೆ ; ಬಾರಯ್ಯ, ಈ ಬಾಳ್ಕೆಡುವ
ಮುನ್ನಮೆನ್ನೆರ್ದೆಗೆ ತಾರಯ್ಯ ನಿನ್ನಾ ಶಾಂತಿಯಂ !”
ನಿಶೆಯ ನಿಃಶಬ್ದತೆಗೆ ಭಂಗ ಬಾರದ ತೆರದಿ
ತನ್ನೊಳಾಳಾಪಿಸುತೆ ಗುಡಿಸಿಲೊಳಗಾದಳಾ
ಶಬರಜ್ಜಿ, ಬೇಡಿತಿ, ಮತಂಗಮುನಿವರ ಶಿಷ್ಯೆ.
ಇರುಳಳಿದುದುಷೆ ಮೂಡಿತೊಯ್ಯನೆಯೆ ಬೆಳಗಾಯ್ತು.
ಬಿಲ್ಲೆತ್ತರದ ಕರಡವುಲ್ ಬಿತ್ತರದ ಬಯಲ್
ಮಿಳಿರ್ದತ್ತು ಕುಳಿರ್ಪನಿಗಳಿಂದೆ, ತುರುಗೆಮೆಗಳಂ
ಪೋಲ್ದು. ಮಾತಂಗಿಯೊಲೆ ಪಸಲೆಯುಂ ಪಾರ್ದುದೆನೆ
ನಿಡುಬಯಸಿ, ನಿಡುಸುಯ್ದರಿರ್ವರುಮೊಂದುಗೂಡಿ.       140
ಮುದುಕಿಗೇಂ ಕಳವಳಂ? ಏಕೆ ತಲ್ಲಣಮೇಕೆ
ಉಲ್ಲಸಂ ? ಒಳವೊಗುವಳೆಲೆವನೆಗೆ. ಒಯ್ಯನೆಯೆ
ಹೊರಚಿಮ್ಮಿ ನಿಂತು ನೋಡುವಳೆನಿತೊ ಕಾಲಮಾ
ಬುವಿಯ ಬಯ್ತಲೆಯಂತೆ ಬಯಲ ನಡು ನಿಡುಪರಿದು
ಸಮೆದ ಕಾಲ್ದಾರಿ ಕೀಳ್ವಟ್ಟೆಯಂ. ತನ್ನೊಳಗೆ
ಗೊಣಗುವಳ್ ; ಗುಣಿಸುವಳ್ ; ಮತ್ತೆ ಮತ್ತೊಳವೊಕ್ಕು,
ತೆಂಗಿನ ಗರಿಯ ಪೊರಕೆಯಂ ತಂದು, ಮನೆ ಮುಂದೆ
ಗೋಮಯಂ ಬಳಿದ ಜಗಲಿಯ ತರಗು ಸದೆ ಗುಡಿಸಿ,
ಸೊಂಟಗೈಯಾಗಿ ನಿಲ್ವಳ್. ಮತ್ತೆ ನಿಡುನಟ್ಟು
ನಿಟ್ಟಿಪಳ್ ದೂರ ವನ ಸೀಮಾನ್ತ ಸೀಮಂತ    150
ರೇಖೆಯೆನಲೊಪ್ಪುವಾ ಬಟ್ಟ ಬಯಲ್ವಟ್ಟೆಯಂ.
ಶಬರಿಗಿಂತಿರೆ ನಿರೀಕ್ಷಣೆಯ ನೋಂಪಿ, ಪೊಳ್ತೇರ್ದು
ಪಗಲಾಯ್ತು. ಬಾನ್ಗಾವಲಿಯ ಮಧ್ಯೆ ಕಿರಣರವಿ ತಾಂ
ಬೆಳ್ಳಿಹನಿಯಾಗಿ ಕರೆದುದು ಬಿಸಿಲ ಕೆಂಬೇಗೆಯಂ.
ಪುಲ್ಗಾವಲಿನ ನಡುವೆ ಮುದುಕಿಯ ಕಣ್ಣಿಗಾರೊ
ಬರ್ಪವೊಲ್ ಭ್ರಾಂತಿ ! ನಿಂತಳ್ ಶಬರಿ ಡೊಂಕಾಗಿ !
ಕಟಿಗೊಂದು ಕೈಯಾಗೆ, ಪಣೆಗೊಂದು ಕೈಯೆತ್ತಿ,
ಸುರ್ಕ್ಕು ತಾಂ ಪುರ್ಬ್ಬಿನ ತೋಲ್ಗೆ ತೆರೆಗಳನೊಡರ್ಚಲ್ಕೆ
ನೋಡಿದಳ್ …. ನೋಡಿದಳ್ …. ಕಣ್ಮೊಳೆಯ ಕೀಲ್ಮಾಡಿ
ದೇಶದೇಹವನಂತೆ ತನ್ನ ಸಂದೇಹಮಂ         160
ಕೊರೆದಳ್, ತಿರುಪ್ಪಿ ಕೊರೆದಳ್, ಮರಳಿಮರಳಿ ! ಹಾ,
ಕಂಡರಿವಳೇಂ ಶಬರಿ ರಾಮಲಕ್ಷ್ಮಣರನಾ
ದುಃಸ್ಥಿತಿಯ ವೇಷದಲಿ ?
ಭಗವದಾಗಮನಮೇಂ
ಭಕ್ತನ ನಿರೀಕ್ಷಿಸಿದ ರೂಪದಿಂ ಬಂದಪುದೆ ?
ಸುಖದವೋಲಾಶಿಸಲ್ ದುಃಖದೊಲ್ ಮೈದೋರಿ,
ಭಕ್ತನಿತಂ ಸುಲಿದು ನೈವೇದ್ಯಮಂ ಕೊಳದೆ
ಪೇಳ್ ಅಹಂಕಾರಮಂ ದಿವ್ಯಶೂನ್ಯತೆಗದ್ದುವೊರ್
ಸಂಪೂರ್ಣತಾ ಸಿದ್ಧಿಯೋಲ್ !
ಹೊದೆಹೊದೆಗೆದರ್ದ ತಲೆ,
ಕೊಳೆ ಬೆವರ್ ಪತ್ತಿದುಡೆ, ತೇಜಂ ಮಸುಳ್ದ ಮೊಗಂ,
ಖಿನ್ನತೆಯ ಕೋರೆಯುತ್ತಿದ ಕಪೋಲದ ಪೊಲಂ           170
ದಯಿತಾ ವಿಯೋಗಾಗ್ನಿಯಿಂಧನ ಶರೀರನಂ,
ರೂಕ್ಷರೂಪದ ರಾಮನಂ ಕಂಡು ಮಂದಾಕ್ಷಿ,
ಶಬರಿ, ಬೇಡಂಗೆತ್ತಳೆನೆ, ಮೈಥಿಲೀಪ್ರಿಯನ
ದಾರುಣ ಸ್ಥಿತಿಗೇತಕಿನ್ ಬೇರೆ ಸಾಕ್ಷಿ ? ಆ
ಬಿಲ್ವೊತ್ತರಂ ತನ್ನ ಬಿಯದ ನಂಟರ್ಗೆತ್ತು,
ಕೋಗಿಲೆಯ ಮರಿಯೆಂದು ತುಡುಕಿದರೆ ಕಾಗೆಮರಿ
ಕೂಗಿದವೊಲಾಯ್ತೆಂದು ಬಗೆಯುಲ್ಲಸಂ ಕುಗ್ಗಿ,
ಮುದುಕಿ ಆ ಬಂದರಂ ಭೀಕರಾಕಾರರಂ
ನೋಡುತಿರೆ, ಲಕ್ಷ್ಮಣಂ :
“ದಣಿದು ಬಂದಿಹೆವಜ್ಜಿ ;
ಬಿಸಿಲಳುರುತಿದೆ ; ಗುಡಿಸಲೊಳಗಿನಿತು ತಾವಿತ್ತು,       180
ತಿನಲಿತ್ತು, ಕರುಣಿಸೈ ನಿನ್ನ ಈ ಪರದೇಶಿ
ಕಂದರಂ ಚಿರಋಣಿಗಳಂ !”
“ಕಂಡವರ್ಗೆಲ್ಲ,
ಬರ್ಪ ಬೇಡರ್ಗೆಲ್ಲಮುಣಿಸಿತ್ತು, ಬೀಡಿತ್ತು,
ಮೆಲ್ವಾಸನೀಯೆ ನಾನೇತು ಅಡುಗೂಳಜ್ಜಿ
ಅಲ್ಲ ಕಾಣಯ್ಯ !” ಇಂತು ನಿಷ್ಠುರವೆಂದೊಡಂ
“ಬಡವಳಿದ್ದುದನೀವೆ : ಬನ್ನಿಂ !” ಎನುತ್ತಾ ಅಜ್ಜಿ
ನಡೆದಳೊಳಯಿಂಕೆ. ಲಕ್ಷ್ಮಣನಣ್ಣನಂ ನೋಡಿ
ನಸುನಕ್ಕನಿರ್ವರುಂ ಮುದುಕಿಗೆ ಮನಂ ಕರಗಿ
ಪದೆದು ಪೊಕ್ಕರು ಪರ್ಣಶಾಲೆಯಂ.
ಉರಿಬಿಸಿಲ
ಝಳದಿಂ ಗುಡಿಸಲೊಳಗೆ ಬಂದಿನಿತನಂತರಂ            190
ಕಣ್‌ತಂಪು ಶಾಂತಿಯಂ ಪಡೆದ ಬೇಡಿತಿ ಮರಳಿ
ನೋಡಿದಳ್ ಬಂದತಿಥಿ ಮಕ್ಕಳಂ ; ಮೇಣ್ ಶಂಕೆಯಿಂ :
“ನೀಮೆತ್ತಣಿಂದಮೈತಂದಿರಯ್ ? ನೀಮಾರೊ,
ಕಂದರಿರ ? ನನ್ನ ಈ ಕಣ್ ಮಬ್ಬು ; ಬಗೆ ಮಂಜು ;
ತಿಳಿಯೆನೇನೊಂದುಮಂ.”
ಊರ್ಮಿಳೇಶಂ : “ಅಜ್ಜಿ,
ಮನೆಯಿಲ್ಲ ಮಾರಿಲ್ಲ ; ಮನೆಗೆಟ್ಟು ನೆಲೆಗೆಟ್ಟು
ಕಾಡು ಬೀಡಾದರೆಂ …. ಮೀಹಕೇಂ ಕೊಳಮಿಹುದೆ
ಇಲ್ಲೆಲ್ಲಿಯಾದೊಡಂ, ತಾಯಿ ?”
ಅಚ್ಚರಿವಡುತೆ
ಶಬರಿ : “ಮೀಹಕ್ಕೆ ? (ಬೇಡರಿಗೇಕೊ ಮಜ್ಜನಂ !)
ಕೊಳಮಿರ್ಪುದಲ್ಲಿ ಆ ಪೇರಿಳೆಯ ಮರದ ಅಡಿ. -          200
ನಿಮ್ಮಂತೆ ಮನೆಗೆಟ್ಟು ನೆಲೆಗೆಟ್ಟು ತೊಳಲುವರ್
ಈ ನಾಡೊಳೆನಿಬರೋ ? ಏಂ ಕೇಡುಗಾಲಮೋ ?
ಅರಗುಲಿಗಳೊರ್ವನ ಸತಿಗೆ ಮತ್ತೊರ್ವನಳಪುವಂ !”
ಬೆಚ್ಚಿ ನುಡಿದನ್ ದಾಶರಥಿ ಮೊಳಗು ದನಿಯಿಂದೆ :
“ಆರ ಸತಿಗಾರಳುಪಿದರು, ಅಜ್ಜಿ ?”
“ಹೋಗು, ಮಗು,
ಮಿಂದು ಬಾ. ಕತೆವೇಳ್ವೆನುಂಡಮೇಲಾ ಹೊಲಸು
ವಾರ್ತೆಯಂ”
ಮೀಯಲೈದಲ್ಕಿರ್ವರುಂ ಕೊಳಕೆ,
ಮುದುಕಿ ಕೌತುಕಕಾಗಿ ಮುಟ್ಟಿ ನೋಡಿದಳವರ    
ಪಿಟಕಮಂ, ಬಿಲ್ಗಳಂ, ಬತ್ತಳಿಕೆಯಂ, ಮತ್ತೆ
ನಾರುಡೆಗಳಂ. ವಸ್ತುವೊಂದೊಂದರಿಂದಾಕೆ     210
ಬೆಚ್ಚುತಚ್ಚರಿವಟ್ಟಳಾದೊಡಂ, ತನ್ನೂಹೆ
ರಚಿಸಿರ್ದ ರಾಮನಂ ಕಂಡಳಿಲ್ಲಾ ಬಂದ
ಕೈರಾತ ರೂಕ್ಷಾವತಾರರಲಿ.
ಅನಿತರೊಳ್
ಮಿಂದು ಬಂದರು ರಾಮ ಸೌಮಿತ್ರಿ. ಕರ್ಪ್ಪಿರ್ದ
ಕನಕಮಂ ಕೂರ್ಚಿಸಿದವೋಲಾಗೆ, ಸೋಜಿಗದ
ಸೂಜಿಮೊನೆ ಏರಿದತ್ತಜ್ಜಿಯ ಕುತೂಹಲಂ.
ಬೇಡರ್ಗದೆತ್ತಣಿಂದಾ ತೇಜಮಾಳ್ತನಂ, ಮೇಣ್
ನುಣ್ಪುನುಡಿ, ನಯದ ನಡೆ ? ದೊರೆಮಕ್ಕಳಿರವೇಳ್ಕುಮ್
ಎಂದಾ ಮತಂಗಮುನಿ ಶಿಷ್ಯೆ, (ಸೀತೆಯನುಳಿದು
ಬಂದನೀತಂ ರಾಮನಲ್ಲೆಂದು ತರಿಸಂದು,)         220
ನಳನಳಿಪ ಸುಳಿದಳಿರ ಕುಡಿವಾಳೆಯಂ ಪಾಸಿ ;
ಗೀಕುಚಾಪೆಯ ಮಣೆಗಳನು ಕುಳಿತುಕೊಳಲಿಕ್ಕಿ ;
ಪಸುರ್ದೊನ್ನೆಗಳಲಿ ತಿಳಿನೀರ್ಗಳಂ, ಸಸಿಯಡಕೆ
ಹೊಂಬಾಳೆಗಳಲಿ ಕೆನೆವಾಲ್ಗಳಂ ಜೇನ್ತುಪ್ಪಮಂ
ತಂದಿಟ್ಟು ; ನೂಲೆಗೆಣಸಂ, ಬಾಳೆವಣ್ಗಳಂ,
ಕಂದಮೂಲಂಗಳಂ, ಹಣ್ಣುಹಂಪಲ್ಗಳಂ,
ಸೌತೆ ಪಚ್ಚಡಿಗಳಂ, ಮಣಿಹೆಂಬೆಯಂ, ಮತ್ತೆ
ಹಚ್ಚನಕ್ಕಿಯ ಬೆಚ್ಚನನ್ನಮಂ ಮೊಸರುಮಂ
ಬೆಲ್ಲಮಂ ಬೆಣ್ಣೆಯಂ ಬಡಿಸಿ, ಸವಿನುಡಿ ನುಡಿಸಿ,
ಮುಗುಳುನಗುತೆಂದಳಿಂತು :
“ಆರ ಸಂಪದಮಾರ್ಗೊ ?                230
ನಿಮ್ಮ ಸಯ್ಪಿದನವರಿಗಾಂ ಬಡಿಸಲೇನಳವೆ ?
ತಣಿಯುಂಡು ತಣಿಯಿರಯ್, ಮಗುಗಳಿರ. ಬಂದತಿಥಿ
ಯಾರಾದರೇನಂತೆ ?”
“ಆರ ಸಂಪದಮಾರ್ಗೆ
ಹೇಳಜ್ಜಿ ? ನಾವುಣುತ್ತಿರ್ಪ ಈ ಸಯ್ಪಾರ್ಗೆ
ಮೀಸಲಾಗಿರ್ದತ್ತು ? ಪುಣ್ಯವಂತನೆ ವಲಂ
ನಿನ್ನರಕೆಯಾ ಅತಿಥಿ !”
“ದಶರಥ ಕುಮಾರನಯ್ !”
ರಾಮಲಕ್ಷ್ಮಣರೊರ್ವರೊರ್ವರಂ ದೃಷ್ಟಿಸುತೆ
ಮುದುಕಿಯಂ ನೋಡುತಿರೆ :
“ಲಕ್ಷ್ಮಣಾಗ್ರಜನವಂ
ನೆಲವೆಣ್ಮಗಳಿಗಿನಿಯನಯ್ !”
ಅತ್ತಳಾ ಶಬರಿ
ಹೆಸರ ಹೇಳುವ ಹರುಷಕುಕ್ಕಿಬರಲುಮ್ಮಳಂ :     240
“ಕಾಯುತಿಹೆನೀರೈದು ವತ್ಸರಗಳಿಂ, ಕಂದರಿರ,
ರಾಮಲಕ್ಷ್ಮಣಸೀತೆಯರಿಗಾಗಿ, ನಿಚ್ಚಮುಂ
ನಿಮಗಿಕ್ಕಿದುಣಿಸನಣಿಮಾಡಿ. ಗುರುವಾಣಿಯುಂ
ಪುಸಿಯಪ್ಪುದೇಂ ?” ಹೇಳಿದಳು ಮತ್ತೆ ಮಾತಂಗಿ
ಮುನಿ ಮತಂಗನ ಪೇಳ್ದ ರಾಮಾಗಮನ ಪುಣ್ಯಮಂ
ವಾರ್ತಾ ಭವಿಷ್ಯಮಂ. ಕೇಳಿದಳು : “ನೀವಾರೊ
ಬಡಗರಂದದಿ ತೋರುತಿರುವಿರಿ, ಕುಮಾರರಿರ ;
ಕಂಡಿರೇ, ಕೇಳ್ದಿರೇ, ರಾಮನೆಲ್ಲಿದನೆಂದು,
ಎಂದಿಗೈತಹನೆಂದು ? ಬಾಳ್ಪಯಣಮಂ ಮುಗಿಸಿ
ಹೋಹ ಮುನ್ನಮದೊರ್ಮೆಯಾದೊಡಂ ರಾಮನಾ        250
ದೊರೆಕೊಳ್ಳದಿಹುದೆ ಸಿರಿಮೊಗದ ಸಂದರ್ಶನಂ ?
ಶಾಂತಿನಿಧಿಯಾತನಂ ಕಾಣ್ಬುದೆ ಪರಮಶಾಂತಿ !”
ಸಜಲ ನಯನಂ ರಾಮನಾಲಿಸಿದನಜ್ಜಿಯಂ.
ನುಡಿದನು ಸಗದ್ಗದಂ :
“ಶಾಂತಿನಿಧಿಯಾತಂಗೆ
ಶಾಂತಿಯಿಲ್ಲದೆ ತೊಳಲುತಿಹನಲ್ತೆ ? ಮನೆಗೆಟ್ಟು
ಹೇರಡವಿ ಮನೆಯಾದನಂ ಶಾಂತಿನಿಧಿಯೆಂದು
ಬರಿದೆ ಬಣ್ಣಿಪೆಯೇಕೆ, ತಾಯಿ ? ಸಾಮಾನ್ಯನಂ
ದೇವಮಾನ್ಯಂಗೆತ್ತುದಜ್ಜಿ, ನಿನ್ನಳ್ಕರೂಹೆ !”
“ತೆಗೆ ತೆಗೆ ! ಮಹಾತ್ಮನಂ ತೆಗಳದಿರ್ !”
“ಬಲ್ಲೆನಾಂ
ರಾಮನಂ !”
“ನೀನರಿಯೆಯಾತನಂ !
“ನಾನರಿಯೆನೇಂ ?                              260
ನನ್ನನಾನರಿಯೆನೆಂದಾಡುತಿಹೆ !”
ಶಬರಜ್ಜಿ,
ಬೆರಗುಹೊಡೆದಂತೆ, ರಾಮನ ಕಣ್ಗೆ ಕಣ್ಣಿಟ್ಟು
ನೋಡಿದಳ್. ರಾಮನೊಯ್ಯನೆ ಮೊಗವನಿಳುಹುತ್ತೆ,
ಕಣ್ಣೆತ್ತದುಣತೊಡಗಿದನ್ ಮತ್ತೆ. ಮುಕ್ತಾಶ್ರುಗಳ್
ಕೈ ತುತ್ತಿಗುದುರಿದುವೆ ? ಕಾಣ್ಕೆಯೋ ? ಕಲ್ಪನೆಯೊ ?
ಮಾತನುಳಿದಳ್ ಮುದುಕಿ : ತನಗರಿಯದರ್ಥದಿಂ
ಕಾಣ್ಬುದೆಂತಿತ್ಯರ್ಥಮಂ ?
ತಣಿದನಂತರಂ
ದಣಿವಾರೆ ಮಲಗಿದರ್ ಮಧ್ಯಾಹ್ನ ವಿಶ್ರಾಂತಿಯಂ.
ಬಿಳಿಮೆಯ್ಯನೆಳ್ಚತ್ತು ಹೊರಗೆ ಹೋಗಿರೆ, ನೀಲಿ
ಮೆಯ್ಯವಂ ಕನವರಿಸಿದನ್ ‘ಸೀತೆ, ಬಾ ಇಲ್ಲಿ ;    270
ಬಾ, ಪ್ರಿಯೆ, ಜನಕಜಾತೆ !’ ಗುಡಿಸಲೊಳಗಾ ಬಳಿಯೆ
ಬೆಲ್ಲ ಬೇಲದ ಪಣ್ಗಳಂ ಬೆರಸಿ ಪಾನಕಂ
ಗೆಯ್ಯುತಿರ್ದಜ್ಜಿ ಬಂದಳು ಓಡಿ. ಸಜ್ಜೆಯೆಡೆ
ನಟ್ಟು ನಿಂತವಧರಿಸಿದಳ್ ದೇವಗಾತ್ರನಂ,
ಕನಸಿನಲ್ಲಿಯೆ ಮುಗುಳುನಗುತಿರ್ದನಂ. ನೋಡಿ
ಬಗೆಯಿಂಪನನುಭವಿಸಿದಳ್ : ತನ್ನಾ ಸೌಮ್ಯನಂ
ಕಂಡರಿತಳಾ ಮಂದಹಸಿತ ಮುಖಕಮಲದೊಳ್ !
ಆದೊಡೇನದು ಮತ್ತೆ ? ನೋಡುತಿರೆ, ಹಿಂಗಿತಾ
ಮುಖಸೌಮ್ಯತಾ ಮುದ್ರೆ ! ಸಂಕ್ಷೋಭಿಸಿತೆ ನಿದ್ರೆ ?
ವೈರದಿಂ ವಿಕಟ ಕರ್ಕಶಮಾಗೆ, ಕೋಪದಿಂ           280
ಕಾಕು ಕೂಗಿದನಳ್ಕಿ ಸರಿವಂತೆ ಶಬರಿ : ‘ನಿಲ್, ನಿಲ್,
ರಾಕ್ಷಸಾಧಮ, ನಿಲ್ ! ಪೇಳೆಲ್ಲಿಗುಯ್ದಪಯ್
ನನ್ನ ಸೀತೆಯನೆಲವೊ ನೀಚ !’ ಬದ್ಧಭ್ರುಕುಟಿ,
ಸೆರೆ ಬಿಗಿಯುವೋಲೌಡುಗಚ್ಚಿ, ನಿದ್ದೆಯನೊದ್ದು,
ಸೀಳ್ದು ದುಃಸ್ವಪ್ನಮಂ, ಕುಳಿತೆದ್ದನಬ್ಬರಿಸಿ,
ತನ್ನ ಸುತ್ತಂ ನೋಡಿ ಬೆಬ್ಬಳಿಸಿ. ಬೆದರೆದೆಯ
ಶಬರಜ್ಜಿ ಕಾಣಲೊಡಮಿಳುಹಿದನ್ ಮೋರೆಯಂ,
ನಾಣ್ಚಿ : “ತಪ್ಪಿದೆನಜ್ಜಿ. ಕಂಡ ಕನಸಂ ನನಸು
ಗೆತ್ತು, ಕೆಮ್ಮನೆ ನಿನ್ನನಂಜಿಸಿದೆ.” ದೊಪ್ಪನೆಯೆ
ಮುದುಕಿ ಬಿಳ್ದಪ್ಪಿದಳ್ ರಾಮನಂ : “ದಮ್ಮಯ್ಯ,        290
ಸಾಕಿನ್ನು, ಮರೆಮಾಡಬೇಡಯ್ಯ, ಓ ನನ್ನ
ಕಂದಯ್ಯ, ರಾಮಚಂದ್ರಯ್ಯ ! ಏನಾಯ್ತಯ್ಯ
ನನ್ನ ಮಗಳಿಗೆ ? ಹೇಳು ! ಸೀತೆ ಎಲ್ಲಿಹಳೆಲ್ಲಿ
ಕೇಡಾಯಿತೇನಾಯಿತಯ್ಯಯ್ಯೊ, ನನ್ನ ಈ
ಪಾಳ್ಗಣ್ಗಳರಿಯಲಾರದೆ ಹೋದುವಯ್ ! ಅಯ್ಯೊ,
ನಾನಾಗಳೆಯೆ ನಿನ್ನ ತೆರೆದ ಪಿಟಕದೊಳೊಂದು
ಸೀರೆಯಂ ಕಂಡೆನಾದೊಡಮರಿವುದೆಂತಯ್ಯ, ಪೇಳ್,
ಈ ಮುಪ್ಪುಬೆಪ್ಪು ?” ತಾಯಪ್ಪುಗೆಯ ತೊಟ್ಟಿಲೊಳ್
ಸಿಸುವಾಗುತಾ ರಾಮನಿಂತು : “ನಿರ್ಭಾಗ್ಯನೆಂ ;
ರಾಮನಾಂ ! ಸೀತೆಯನಸುರನುಯ್ದನಾಕೆಯಂ         300
ಹುಡುಕಲೆಂದಲೆಯುತಿಹೆನಜ್ಜಿ, ಲಕ್ಷ್ಮಣನೊಡನೆ
ತೊಳಲಿ !” ಶಬರಿಯ ತೋಳ್ಗಳಪ್ಪಿರ್ದ ತಳ್ಕೆಯೊಳ್
ಆ ದುಃಖ ಬಿಕ್ಕಿ ಬಿಕ್ಕಳ್ತನತಿ ದೈನ್ಯದಿಂ : ಕೇಳ್,
ತಾಯ್ಮಡಿಲೊಳಾರಾದೊಡೇಂ ತಾಂ ಬರಿ ಶಿಶುಗಳಲ್ತೆ !
ತಾಳಲಾರದ ಶೋಕಭಾರದಿಂ ದಾಶರಥಿ
ಏಳಲಾರದೆ ಶಯ್ಯೆಯಿಂ ಶಬರಿಶುಶ್ರೂಷೆಯಂ
ಬೇಳ್ಪತಿಥಿಯಾದನ್. ಪೇಳಲೇಂ ? ಮನೋರೋಗಕಾ
ಪ್ರೇಮವೆ ಭಿಷಗ್ವರಂ. ಪ್ರಾಣದೇರ್ಗಾ ಪ್ರೀತಿ ತಾಂ
ಪರಮೌಷಧಮೆನಲ್ಕೆ, ಪ್ರೀತಿಯಲ್ಲದೆ ಬೇರೆ
ಭೇಷಜಂ ಪೋ ಭ್ರಾಂತಿಯೆಂಬಿನಂ, ಕೇಳಾರೈಕೆ       310
ಮಾಡಿದಳೊ ತನ್ನಿಷ್ಪದೇವತಾ ಮೂರುತಿಗೆ
ಆ ತಪಸ್ವಿನಿ ಶಬರಿ. ಹಗಲೆನ್ನದಿರುಳೆನ್ನದೆಯೆ
ಮೇಣೆಚ್ಚರೆನ್ನದೆ ನಿದ್ದೆಯೆನ್ನದೆ ನಿರಂತರಂ
ರಾಮಸೇವಾ ಸಾಧನೆಗೆ ಸವೆಸಿದಳ್ ಮುದುಕಿ
ತನ್ನಾಯುವಂ. ಕೇಳುವಳು, ಹಾಸಗೆಯ ಬಳಿಯೆ
ಕುಳಿತು, ರಾಮನ ಮೆಯ್ಯನೆಳಪುತ್ತೆ, ವನವಾಸದಾ
ಕಥೆಯೆಲ್ಲಮಂ ; ಅಂತೆ ಸಂತೈಸುವಳು ಮನೋ
ವ್ಯಥೆಯೆಲ್ಲಮಂ ಧೈರ್ಯವಾಕ್ಯಂಗಳಿಂ. ಮತ್ತೆ
ಹೇಳುವಳು ತನ್ನ ಬಾಳಿನ ಕತೆಯ ವಿವರಮಂ,
ಕೇಳ್ವಗೆ ಕುತೂಹಲಂ ಖೇದವನಳಿಸುವಂತೆ.          320
ಹಿಂಗಲೊಲ್ಲದೆ ಹೋಯ್ತು ರಾಮನ ವಿಚಿತ್ರರುಜೆ.
ತೇಜಂ ಮಸುಳಿದತ್ತು. ಭೀಮವಪು ಕೃಶವಾಯ್ತು.
ದಿನದಿನಕೆ ರಾವಣನ ರಾಜತಂತ್ರದ ಬಯಕೆ
ಕೈಗೂಡಿದತ್ತೆಂಬಿನಂ ಮುರುಟಿದುದು ಮನದ
ಕೆಚ್ಚು ; ಮೊಗಂಬಾಡಿ ಬಿಳ್ದುದು ನೆಚ್ಚು. ಒರ್ದಿನಂ
ಕರ್ದಿಂಗಳಿರುಳಲ್ಲಿ ಲಕ್ಷ್ಮಣನೊರ್ವನೆಯೆ ಹೊರಗೆ
ನಡೆಯುತೊಂದರೆಯಗ್ರದೊಳ್ ಸುಯ್ದುಸುಯ್ದಳ್ತಳ್ತು
ಕುಳ್ತು, ಸಪ್ತರ್ಷಿಮಂಡಲಮೊಯ್ಯನೇಳ್ವುದಂ
ನೋಡುತಿರೆ, ಬೆನ್ಗಡೆಯೊಳಾರೊ ಬಂದಂತಾಯ್ತು !
ಕತ್ತಲೊಳ್ ಕಣ್ಣರಿಯದಿರ್ದೊಡಂ ಶಬರಿಯಂ        330
ತಿಳಿದನವಳುಂ ಕೈಯನಿಟ್ಟಳ್ ಪೆಗಲ್ಗೆ : “ಇದೇನ್,
ಕಂದ, ಲಕ್ಷ್ಮಣ, ನೀನುಮಿಂತೇಕೆ ಪೇಳೆರ್ದೆಗೆಟ್ಟು
ಕೊರಗುತಿಹೆ ?” ಗದ್ಗದಿಸುತೆಂದನ್ ಸುಮಿತ್ರಾತ್ಮಜಂ :
“ಅಜ್ಜಿ, ಅತ್ತಿಗೆಗಂತು ಪಾಡಾಯ್ತು. ಅಣ್ಣಂಗೆ ….
ಅಣ್ಣಂಗೆ …. ಅಣ್ಣನುಂ ….” ರೋದಿಸುವನಂ ತಡೆದು
ಕಣ್ಬನಿಯನೊರಸಿ : “ಬಾ ಒಳಗೆ, ಬಿಡು ದುಃಖಮಂ,
ಸೌಮಿತ್ರಿ. ನಿನ್ನಣ್ಣನುಸಿರಿಗಾಂ ಹೊಣೆಗಾರ್ತಿ.
ನನ್ನ ಗುರುಕೃಪೆಯಿಂದೆ ರಾಮನ ರುಜೆಯನೆಲ್ಲಮಂ
ಹೀರಿ ಬಿಸುಡುವೆ, ನೋಡು, ಬಾ !” ನಡೆದರಿರ್ವರುಂ
ಒಳಗೆ. ತೋಲೆಲ್ವುಗೂಡಾಗಿ ಸಜ್ಜೆಯ ಮೇಲೆ             340
ಮಲಗಿರ್ದ ಮೂರ್ತಿಯಂ ಬಲಗೊಂಡಳಾ ಮುದುಕಿ,
ಧ್ಯಾನಿಸುತೆ ತನ್ನ ಗುರುವಂ. ತನ್ನ ಮೋಕ್ಷಕ್ಕೆ
ತನ್ನ ದೇವತೆಯಂ ಪ್ರದಕ್ಷಿಣಾಪೂರ್ವಕಂ
ಪ್ರಾರ್ಥಿಸುವಳೆಂಬಂತೆ ಮಂತ್ರಘೋಷಂ ಗೈದು
ಕೈಮುಗಿದಳಡ್ಡಬಿದ್ದಳ್ ರಾಮನಂಘ್ರಿಯಂ
ಮುಟ್ಟಿ. ಲಕ್ಷ್ಮಣನೆಡೆಗೆ ತಿರುಗಿದಳ್. ಬೆರಗಾಗಿ
ನೋಡುತಿರ್ದಾತಂಗೆ ನುಡಿದಳ್ ನಗುತೆ : “ವತ್ಸ,
ರಾಮನಿಲ್ ಸುಕ್ಷೇಮನಯ್ ! ಪತ್ತುವಿಡು ನಿನ್ನ
ದುಕ್ಕಮಂ !” ಮರುದಿನಂ ಬೆಳಗಾಗಲೇನೆಂಬೆ ?
ರಾಮನೆದ್ದನ್ ಸುದೃಢಕಾಯದಾರೋಗ್ಯದಿಂ :             350
ಉಜ್ವಲ ಲಸನ್ನೇತ್ರನಂ, ಸುಪ್ರಸನ್ನಾನನಂ
ಶೋಭಿಸುವಮಲ ಗಾತ್ರನಂ ಕಂಡು ಸೌಮಿತ್ರಿ
ಕೆಡೆದನೊ ಕೃತಜ್ಞತೆಗೆ ಶಬರಿಯ ಚರಣತಲಕೆ !
ಹಾಸಗೆ ಹಿಡಿದಳಾ ದಿನವೆ ಶಬರಿಯುಂ. ತನ್ನ
ಶುಶ್ರೂಷೆಯಿಂ ನಿದ್ದೆಗೆಟ್ಟಳಂ, ದಣಿದಳಂ,
ಬೆಂಡಾದಳಂ ರಾಮನುಪಚರಿಸಿದನ್, ಮರೆತು
ತನ್ನಳಲಂ. “ಮಗುವೆ, ಮರುಗದಿರೆನಗೆ. ಪಸುರೆಲೆಗೆ
ವೇಳ್ಕುಮುಪಚರ್ಯೆ ; ಪಣ್ಣೆಲೆಗೇಕೆ ?” ಮಾತಂಗಿ
ಸಂತವಿಟ್ಟಳ್ “ಧನ್ಯೆಯಾಂ, ರಾಮಚಂದ್ರ, ನೀಂ
ಪ್ರೀತಿ ಪರಿಚರ್ಯೆಗೆಯ್ಯುತಿರಲಾಂ ಶಾಂತಿಯಿಂ          360
ಸೇರಿದಪೆನಧ್ಯಾತ್ಮಮಂ. ಮಿಗಿಲಿದಕೆ ಸಯ್ಪು ತಾಂ
ಬೇರೇನೊಳದೆ ? – ಮಾಳ್ಪ ಕಜ್ಜಂ ನಿನಗೆ ಮುಂದೆ
ಬೆಟ್ಟವಿದೆ : ಬೆಟ್ಟಿತಾಗಿದೆ. ಕನಸನಾಂ ಕಂಡೆ, ಕೇಳ್ :
ವಿತ್ತೇಶನವರಜನ ದಶಕಂಠ ರಾವಣನ
ಲಂಕೆಯುದ್ಯಾನದೊಳ್ ಸಿತೆ ಸೊರಗಿರ್ದಳಯ್,
ಮರುಗಿರ್ದಳಯ್. ಕಂದ, ನಿನಗಂದು ಪೇಳ್ದೆನಾಂ
ನಿನ್ನಂತೆ ಮನೆಮಡದಿಗೆಟ್ಟು ಕೆಳೆಯರ್ವೆರಸಿ
ಕಾಡುಪಾಲಾದನಂ ಸುಗ್ರೀವನಂ. ನೋಡು,
ಓ ಅಲ್ಲಿ, ದಿಙ್ಮೀಖಲಾ ರೇಖೆಗಿದಿರೆದ್ದು ಕಾಣ್
ಭವ್ಯಮಾಗಿಹುದೆಂತು ಋಶ್ಯಮೂಕಂ, ದಿವ್ಯಮಾ          370
ಪರ್ವತಂ ! ತಳ್ಪಲದಕಿರ್ಪುದು ಮತಂಗಮುನಿ
ಕಾನನಂ. ರಂಜಿಸುವುದಡವಿಯಂಚಿಂದಲ್ಲಿ
ಪಂಪಾ ಸರೋವರಂ. ತುಂಗಭದ್ರೆಯ ಮೇಲೆ
ಬಳಿಯೊಳಿದೆ ಕಿಷ್ಕಿಂಧೆ, ವಾನರ ರಾಜಧಾನಿ.
ವಾಲಿಯದನಾಳ್ವನವನಿಂದೆ ನಿರಸನವೊಂದಿ
ನೆಲೆಗೆಟ್ಟ ಸುಗ್ರೀವನಿಹನೈ, ಗುಹಾವಾಸಿ
ತಾನಾಗಿ, ಗುರು ಮತಂಗನ ಶಾಪರಕ್ಷೆಯಾ
ವಾಲಿ ದುರ್ಗಮ ಋಶ್ಯಮೂಕದಲಿ. ಪೋಗಿ ನೀಂ
ಪಡೆಯವನ ಸಖ್ಯಮಂ. ದುಃಖಿಗೆ ನೆರಂ ದುಃಖಿ.
ಗೆಲ್ಗೆ ದೈವೇಚ್ಛೆ ; ನಿನ್ನಿಚ್ಛೆಯುಂ ಸಲ್ಗೆ !” ಕೇಳ್,        380
ನುಡಿ ನುಡಿಯುತತಿಹರ್ಷಮುಖಿಯಾಗಿ, ಸೌಮಿತ್ರಿ
ರಾಮರಂ ಸುಖಬಾಷ್ಪನೇತ್ರದಿಂ ನೋಡುತ್ತೆ
ನೋಡುತ್ತೆ, ಕಣ್ಮುಚ್ಚಿದಳ್ ಆ ಅಮರ ಸನ್ಮಾನ್ಯೆ,
ದೇವ ಸೀತಾನಾಥ ದಿವ್ಯಾಶ್ರು ತೀರ್ಥಜಲ
ಸಂಸ್ನಾತೆ, ಸಂಪೂತೆ, ಮೇಣ್ ಶಿವಕಳೇಬರೆ, ಧನ್ಯೆ !

ಕಿಷ್ಕಿಂಧಾ ಸಂಪುಟಂ ಸಂಚಿಕೆ : ಸಂಚಿಕೆ 2 – ಓ ಲಕ್ಷ್ಮಣಾ !

“ಟುವ್ವಿ ಮಾಗಿಗೆ ಟುವ್ವಿ ! ಸುವ್ವಿ ಸುಗ್ಗಿಗೆ ಸುವ್ವಿ !”
ಪಂಚವಟಿಗೈತಂದು ಪರ್ಣಕುಟಿಯಂ ಕಟ್ಟುವಾ
ಪೊಳ್ತಂದು ಸೀತಾರಮಣಿ ನಟ್ಟು, ಕಟ್ಟೊಲ್ಮೆಯಿಂ
ನೀರ್ವೊಯ್ದು ನಡಪಿದಳ್ಕರೆಗುರ್ಬ್ಬಿ ಪರ್ವುತಾ
ಪನ್ನಗುಡಿಯಂ ತಳ್ಬಿದೋಲಂತೆ ಸುತ್ತಣಿಂ
ಮುತ್ತಿ ಮುತ್ತೊತ್ತುದಿರ್ದಡವಿವಳ್ಳಿಯ ಮಲರ್ದ
ಹೊದರೆದೆಯೊಳುಲಿಯತೊಡಗಿತು ಚುಕ್ಕಿವೂವಕ್ಕಿ :
“ಟುವ್ವಿ ಮಾಗಿಗೆ ಟುವ್ವಿ ! ಸುವ್ವಿ ಸುಗ್ಗಿಗೆ ಸುವ್ವಿ !”
ಮಂಜು ಹಿಂಜರಿದತ್ತು ; ಮಾಗಿಯ ಚಳಿಯುಸಿರ್ಗೆ
ತಾನಳಿಯುವಳಲಿಂದಮೆನೆ ತೋರಿದುದು ಕಾಯ್ಪು,     ೧೦
ಬಿಸುಸುಯ್ಯೆನಲ್ಕೆ. ಬೇರಿಂದೇರಿದುದೊ ಮರದ
ಕೊಮ್ಬೆಗೆ ವಸಂತನಾವೇಶಮೆನೆ, ಕೊನೆಗೆ ನನೆ
ಕೊನರಿದುದು. ಹಂತಿಗೊಂಡಂದಂ ಗಗನ ನೀಲಿಮೆಯ
ನುಣ್‌ಜಗಲಿಯೊಳ್ ನೀರ್ವೊರೆಗಳೆದ ಬೆಳ್ಳಿಯುಣ್ಣೆಯಾ
ಮುಗಿಲ ಹಗುರಂ, ಕೋಗಿಲೆಯ ಕೊರಳ ತೂರ್ಯಂ
ಮರುದನಿಯನೇರಿ ಅಲೆದುದು, ಮಲಗನೆಳ್ಚರಿಸಿ,
ಅಡವಿಯಿಂದಡವಿದೊಟ್ಟಿಲಿಗೆ. ಮರಗಬ್ಬದಿಂ
ಹರೆಯ ತಾಯ್ತೊಡೆಗಿಳಿದ ಮೊಗ್ಗೆಯ ಪಸುಳೆನಿದ್ದೆ
ಕಣ್ದೆರೆದುದಲರ ಬೆಳ್ನಗೆ ಬಿರಿಯೆ, ಪೊಸಗಂಪು
ಪರಮೆಮೊರೆಯಂ ಬಳಿಗೆ ಕರೆಯೆ. ಗರಿಪುಕ್ಕಮಂ         ೨೦
ಕುಣಿಕುಣಿಸಿ ಸಿಳ್ಳನೂದಿತು ಸಿಪಿಲೆ. ಮಿಗಗಳಿಗೆ
ಸುಖದಮಾದುದು ನದಿಯ ಮುಳುಗುಮೀಹಂ. ಮಾಗಿ
ಪೋಗಿ ಮೈದೋರಿದುದು ಹಕ್ಕಿ ಹೂಗಳ ಸುಗ್ಗಿ
ಹಿಗ್ಗಿ !
ನಿಚ್ಚಯಿಸಿದರು ರಾಮ ಲಕ್ಷ್ಮಣ ಸೀತೆಯರ್
ಮರಳಲ್ಕಯೋಧ್ಯೆಯಂ. ತೆಂಗಾಳಿ ಕಮ್ಮನೆಯೆ
ಕೇದಗೆಯ ಹೊಂದೂಳಿಯಂ ದೆಸೆದೆಸೆಗೆ ಚೆಲ್ಲಿ
ಮೆಳೆಯ ಗರಿಚವರಿಯಂ ಬೀಸೆ, ಪಿಕಳಾರ
ಕಾಜಾಣ ಕಾಮಳ್ಳಿ ಗಿಳಿವಿಂಡುಗಳ ಕೊರಳ
ಕೈವಾರಮುಲಿಯೆ, ಪಗಲಾಣ್ಮನೊಡನೊಡನೆಳ್ದು
ಗೋದಾವರಿಯ ಮಿಂದರರ್ಘ್ಯಮೆತ್ತಿದರಿನಗೆ,  ೩೦
ವಂಶಾಧಿದೇವತಾ ಪ್ರತಿಮನಿಗೆ. ಮೇಣಂತೆ
ಬೀಳ್ಕೊಂಡರಾ ಪರಿಚಯದ ವನಸ್ಥಲಿಗಳಂ,
ಪುಲಿನಸ್ಥಲಿಗಳಂ, ಜಲಸ್ಥಲಿಗಳಂ ; ಮತ್ತೆ
ಪರ್ಣಶಾಲೆಗೆ ವಂದ ಕಿತ್ತಡಿಗಳಂ ; ಪಕ್ಷಿ
ವರ್ಯಂಗೆ ಪೇಳ್ದರ್ ಜಟಾಯು ಮಿತ್ರಂಗೆ. ಮೇಣ್
ಪಂಚವಟ್ಯಾರಣ್ಯದೊಳ್ ಸಂಗ್ರಹಂಗೈದಿರ್ದ
ಪುಲಿಯ ಪಲ್ಲಂ, ಪಂದಿಕೋರೆಯಂ, ಪೇರಾನೆ
ದಂತಮಂ, ನಖಗಳಂ, ಚರ್ಮಂಗಳಂ, ವಿಪಿನ
ಜೀವನ ವಿಶೇಷಂಗಳಂ ಮೂವರುಂ, ತಂತಮಗೆ
ಸವಡಿಗಟ್ಟಿದರರ್ತಿಯಿಂ ತನಗೆ ಬೇಳ್ಪನಿತುಮಂ.         ೪೦
ಕಟ್ಟಿದಳು ಬುತ್ತಿಯಂ ಸೀತೆ, ತದನಂತರಂ
ಮುಡಿಗಟ್ಟಿದಳು ಮಂಡೆಯಂ, ಬಾಚಿ ಹೆರಳಿಕ್ಕಿ.
ಮುಡಿವಾಸೆಯಿಂದೆ ಪೂದಿರಿಯಲೆಂದೆಲೆವನೆಯ
ಮುಳ್ಳಿನೊಡ್ಡಂ ದಾಂಟುತಲ್ಲಿ ಬೇಲಿಯ ಮೇಲೆ
ಹರಹಿದೊಂದೊದ್ದೆಮಡಿಯಂ ನೋಡಿ ಕೂಗಿದಳ್
ಸೌಮಿತ್ರಿಯಂ ; “ನಾರುಡೆಯಿದಾರದಯ್ ? ಹೋಹ
ಹೊಂಗಿಂದಿದಂ ಮರೆದಿರೇಂ ?” ಹೊರಗೆ ತಲೆಯಿಣಿಕಿ
ನೋಡಿ ಕಂಡೂರ್ಮಿಳೇಶಂ : “ಅಯ್ಯೊ ಮರೆವೆನೇಂ ?
ಛಿದ್ರಮಾದೊಡಮದಂ ಕೊಟ್ಟವಂ ಮುನಿಯಲ್ತೆ ?
ಖರನ ಕೊಲುವಂದದನೆ ಮೈಜೋಡನೆಸಗಿರ್ದೆನಾಂ.   ೫೦
ಶೂರ್ಪಣಖಿಯಿಂ ಪೊರೆದ ಬನದ ಬಾಳ್ಕೆಯ ಶುಚಿಯ
ಕಾಣ್ಕೆಯೆಂದದನೀವೆನೆನ್ನಾ ತಪಸ್ವಿನಿಗೆ ! ……..
ಒಣಗಿರ್ಪುದೇನ್ ಒದ್ದೆ ?” “ಏಂ ಜಾಣನಯ್ ? ತಣ್ಪಲೊಳ್
ಪರಪಿದೊಡೆ ಬೇಗಮಾರುವುದಲ್ತೆ ಪೇಳೊಲ್ಲಣಿಗೆ ?”
“ಆಗಳಿರ್ದತ್ತಲ್ಲಿ ಬಿಸಿಲ್. “ಇದೇನಯ್ ಇಂದು
ಎಂದಿಲ್ಲದೀ ಮೋಡವೀ ಪಚ್ಚೆಬಾಂಬೊಚ್ಚದೊಳ್ ?”
ಸೀತೆ ಕಣ್ಣಾದೆಡೆಗೆ ಮೊಗಮೆತ್ತಿ ಲಕ್ಷ್ಮಣಂ
ನೋಡೆ, ಮುಗಿಲಿನ್ನೆಲ್ಲಿಯುಂ ಸುಳಿಯದಾಗಸದ
ನೀಲ ನೀರಧಿಯೊಳಾ ಏಕಾಕಿ ನೀರದಂ
ನೇರ್ಗೆ ನಿಂದುದು ನೇಸರಂ ಮುಚ್ಚಿ. ಪಂಚವಟಿ           ೬೦
ಧರೆಯೆಲ್ಲಮಂ ಪರ್ವಿರಲ್ಕದರ ದುಶ್ಯಕುನ
ಸೂಚಕ ಬೃಹಚ್ಛಾಯೆ, ರಾಕ್ಷಸ ರುಧಿರ ಸಿಕ್ತ
ವಲ್ಕಲವನಾರಿಸಲ್ಕೆಲ್ಲಿ ಪೇಳ್ ಸೂರ್ಯಾತಪಂ ?
ಲಕ್ಷ್ಮಣನೊಳಗೆವೋದನವನಿಜಾತೆಯುಮಲ್ಲಿ
ತಿರುಗತೊಡಗಿದಳಲರನರಸುತ್ತಾ. ನಿಂತುದಾ
ಜೀಮೂತಛದ್ಮನೆಯನಾಂತ ರಾವಣರಥಂ
ನಿಶ್ಚಲಂ, ಕೆರೆಯ ಮೇಲ್ಗಡೆ ನಭದಿ ಹಾರಿಯುಂ
ಮೀನಿಗೆರಗುವ ಮುನ್ನ ನಿಲ್ಲುವ ಕುರರಿಯಂತೆ !
ಮೇಘರೂಪಂಬೆತ್ತು ನಿಂದ ಪುಷ್ಪಕದ ಆ
ನೆಳಲೆ ಸೇತುವೆಯಾಗೆ, ಕಾಮಧನು ತನುವಾಗೆ,         ೭೦
ರಾಮಸತಿಯಲರ್ಗೊಯ್ಯುತಿರ್ದಡವಿಗಿಳಿದನಾ
ಮಾರೀಚನುಪಮಾತೀತ ಕಾಮರೂಪಿ. ಪೇಳ್,
ಏನೆಂಬೆನದ್ಭುತಂ ! ಛಾಯಾ ರಚಿತ ರಾತ್ರಿ
ತಾನಾಯ್ತೊ ಚಂದ್ರೋದಯೋಜ್ವಲಿತಮೆಂಬವೋಲ್
ಭೋಂಕನೆಯೆ ವಿಸ್ಫುಲಿಂಗಿಸಿದುದು ವನಧರಿತ್ರಿ.
ನೋಡುತಿರಲರಳುಗಣ್ಣಾಗಿ ವಿಸ್ಮಿತೆ ಧರಾ
ಸುತೆ, ಲೋಕಲಾವಣ್ಯವೇ ಮೂರ್ತವಾದುದೋ
ಎನೆ ತರುನಿಚಯ ಮಧ್ಯೆ ಸುಳಿದಾಡಿದತ್ತೊಂದು
ರಂಕು ರೂಪದ ಕನಕ ಕಾನ್ತಿ. ಕರ್ದ್ದಿಂಗಳಂ
ಬೆನ್ಗೆ ಬೆಳ್ದಿಂಗಳಂ ಪೊಡೆಗಜಿನಮಂ ಮಾಡಿ     ೮೦
ತಿಂಗಳ್ಮನೆಯ ಮಿಗಮೆ ದಂಡಕಾಟವಿಯಲ್ಲಿ
ದಾರಿತಪ್ಪುತ್ತಲೆದು ಬರುತಿರೆ, ಧರಾತ್ಮಜಾ
ವದನಮಂ ತನ್ನ ಸದನಂಗೆತ್ತು, ಶಂಕೆಯಿಂ
ಪಿಂತೆ ಮುಂತೆ ತೊಳಲ್ವವೋಲಾಡಿತಾ ಜಿಂಕೆ.
ಇರುಳ ಬಾನಿನೊಳೆಸೆವ ಚಿನ್ನ ಚುಕ್ಕಿಗಳಂತೆ,
ಕುರುಡುಗಳ್ತಲೆಯ ಕಲ್‌ಮೆಯ್ಗೆ ಕಿಡಿಕಿಡಿ ನವಿರ್
ಕೆತ್ತಿಸುವ ಮಿಂಚುಂಬುಳುಗಳಂತೆ, ಚರ್ಮಮಂ
ಸಿಂಗರಿಸಿದುವು ರುಕ್ಮಬಿಂದೂತ್ಕರಂ, ಕೋಟಿ
ಕೋಟಿ. ಮಾಗಿಗೆ ಬರಲುವೋದ ಬೂರುಗಮರಂ
ಕೋಡುಕೋಡಿನ ಕವಲ್ಗಣೆಗಳಿಂ ಮಲೆತಲೆಗೆ   ೯೦
ಕೋಡುಮೂಡಿದ ತೆರನ ತೋರ್ಪಂತೆ, ನಿಡು ಸೊರ್ಕ್ಕಿ
ಮಲೆತು ನಿಮಿರಿದುವದರ ಹೇಮರತ್ನಪ್ರಭೆಯ
ಚಾರು ಶೃಂಗದ್ವಯಂ, ತರುವರಸ್ಪರ್ಧಿಗಳ್
ತಾಮೆಂಬವೋಲ್. ಕಿವಿಯ ಕುಣಿಸುತ್ತೆ, ಕಣ್ಮಲರ
ಮಿಂಚಿಸುತೆ, ಪೊಳೆವ ಕೊಳಗಿನ ಜಾನುಜಂಘೆಯಂ
ತೆಗೆತೆಗೆದಿಡುತೆ ನಲಿದು ನರ್ತಿಸುತೆ, ಕೊಂಕಿಸುತೆ
ಕೊರಳ ಬಿಂಕವನಕ್ಷಿಯಕ್ಷಿಣಿಯ ಬೇಟದಿಂ
ಬನಮೆಲ್ಲಮಂ ಗೋರಿಗೊಳ್ಳುತೆ ಕುರಂಗತನು
ಮಾರೀಚನಭಿನಯಿಸಿದನು ತನ್ನ ಪಾತ್ರಮಂ :
ಸೂರೆಗೊಂಡನು ನೋಳ್ಪರಿರ್ವರಾ ನೇತ್ರಂಗಳಂ         ೧೦೦
ಲಂಕೇಶ್ವರನ ಮತ್ತೆ ಜಾನಕಿಯಾ. ವಾಸಂತ
ಕಾಂತಾರ ರಂಗಮಂ ಶೃಂಗಾರಗೈಯಲ್ಕೆ
ಬಂಗಾರದಂಗದಾ ಶೃಂಗಿ, ಕೋಳುಹೋದಳೆ,
ಹಾ, ದಶರಥನ ಸುತನ ತನ್ವಂಗಿ, ರಾವಣನ
ಬಾಳ್ದಿಟ್ಟಿ ಮೈಥಿಲಿಯ ಬೈತಲೆಯ ಬಟ್ಟೆಯೊಳ್
ಕಣ್ಗೆಟ್ಟವೋಲ್, ನೋಡಿ ನೋಡಿ !
ಸಾರ್ದುದು ಹತ್ತೆ ;
ದೂರವೋಡಿತು ಮತ್ತೆ. ಮೋರೆಯನಿಳೆಗೆ ಸಾರ್ಚಿ
ಮೇದುದು ಪಸುರನೊರ್ಮೆ ; ಪಿಂಗಾಲ್ಗಳಿಂ ನಿಂತು
ಮುಂಗಾಲ್ಗಳಿಂದಡರಿ, ಕವಲೊಡೆದ ಕೊಂಬುಗಳ್
ಬರಿಗಳಂ ಕೀಸುವೋಲ್ ಬೆನ್ನಿನಿರ್ಕೆಲದೊಳುಂ            ೧೧೦
ಚೆಲ್ವಾಗೆ, ಮೊಗಮೆತ್ತಿ ಚೆನ್ನಾಲಗೆಯ ಚಾಚಿ
ಮೇದುದು ಮರನ ನಳನಳಿಪ ಪೊಸ ತಳಿರನೊರ್ಮೆ.
ಕುಣಿಸಿದತ್ತಲ್ಪಲಾಂಗೂಲಮಂ ಶಕ್ರಧನು
ರಮಣೀಯಮಂ, ವಿಸ್ಮಯೋತ್ಫುಲ್ಲಮಾಗಲ್ಕೆ
ರುಚಿರಾನನಾ ರಾಮದಯಿತೆಯಾ ಮದಿರೇಕ್ಷಣಂ.
ಸೀತಾಪ್ರಲೋಭನಂ ದೀಪಿಸುವ ಮಾಳ್ಕೆಯಿಂ
ಕಕ್ಕೆವೂಗೊಂಚಲಡಿ ಮೈನೆಕ್ಕಿಕೊಳ್ಳುತ್ತೆ
ತೋರಿದತ್ತೊಮ್ಮೆ ; ಕಣ್ಮರೆಯಾದುದಿನ್ನೊಮ್ಮೆ
ನೀರೆಯ ಬಯಕೆ ನೀರಡಿಸಿ ಕಳವಳಿಸುವಂತೆ.
ಕುಸುಮಿತ ಲತಾವಿತಾನಂಬೊಕ್ಕು, ಅದೊ ಮತ್ತೆ         ೧೨೦
ಮೂಡಿದುದೆನಲ್ಕೆ ಮೈದೋರಿದುದು, ಶೃಂಗಾಗ್ರಮಂ
ಸುತ್ತಿದುಗನಿಯ ಬಳ್ಳಿ ಮಾಲೆ ಸೂಡಿದವೋಲೆ
ಜೋಲೆ. ಮರುಳಾದಳಾ ಬಾಲೆ, ರಸರುಚಿ ಶೀಲೆ,
ಸೌಂದರ್ಯ ಲಾವಣ್ಯಲೋಲೆ. ಇಂತಿಂತಿಂತು,
ಗಮಕಿವರ್ಯನ ವೇಣುವಾಣಿಗೆ ಕಲಾರಮಣಿ
ವರ್ಣ ಲಯ ರಾಗಮಯ ನವರಸಾವೇಶದಿಂ
ಮಮಕಾವ್ಯ ವೇದಿಕೆಯನೇರಿ ನರ್ತಿಸುವಂತೆ
ನಲಿದುದಾ ಪೊನ್ಮಿಗಂ, ಸೀತಾಮನಂ ಮುಳುಗೆ
ಮೋಹದೋಕುಳಿಗೆ !
ಕೈತವವರಿಯದಾ ದೇವಿ
ಸಾಧುಮೃಗಮಂ ಪಿಡಿಯಲೆಳಸಿ ಮುಂಬರಿಯಲಾ
ಪ್ರಾಣಿ ವಂಚಿಸಿತಾಡಿತಲ್ಲಲ್ಲಿ. ತಳ್ವಿದೊಡೆ
ನುಸುಳಿ ಓಡುವುದೆಂದು ಬೆದರಿ ಕರೆದಳ್ ಕೂಗಿ
ಕೂಗಿ, ಕಂಪಿಸಲಟವಿ ವನಿತೆ : “ಓ ಲಕ್ಷ್ಮಣಾ,
ಓ ಬಾರ ! ತಾರ ಬಿಲ್‌ಬಾಣಮಂ ; ನೋಡ ಆ
ಏಣಮಂ ! ಹಿಡಿಯ, ಬಾ ; ಬಾ, ಬೇಗ, ಓ ಲಕ್ಷ್ಮಣಾ !”
ಮೆಯ್ಗೆ ಕುದಿನೀರೆರಚಿದಂತಾಗೆ, ರಾಮನುಂ
ಲಕ್ಷ್ಮಣನುಮೆದ್ದೋಡಿ ಬಿದ್ದು ಬಂದರು ದುಡುಕಿ,
ಶರಧನುಗಳಂ ತುಡುಕಿ. ಸುರಧೀರ ವಪುಗಳಂ
ಸುರಚಾಪ ಸಮ ಧನುರ್ಧರ ರಿಪುಗಳಂ ಕಂಡು
ಚಂಡದೋರ್ದಂಡ ಬಲಿ ರಾಕ್ಷಸೇಂದ್ರಂಗೆ ಮೆಯ್         ೧೪೦
ಪುಲಕಿಸಿತು. ಮೆಚ್ಚಿದನ್ ; ಬೆಚ್ಚಿದನ್ ; ಕಿಚ್ಚೆದ್ದು
ತುಟಿಗಚ್ಚಿದನ್, ತರತರದ ಭಾವಜಟಿಲತೆಯ
ಜಾಲಜೇಡನ ಕುಟಿಲದೊಳ್ ಜೀವಪುಳು ಸಿಲ್ಕಿದೋಲ್ !
“ದಿಟಮಲಾ ನೀನೊರೆದುದೆಲೆ ತಂಗೆ, ಚಂದ್ರನಖಿ !”
ಎನುತೆ ತನ್ನೊಳಗುಸುರಿಕೊಳುತೆ, ಕಿವಿಗೊಟ್ಟನಾ
ನೆಲದೆಡೆಯ ಮಾತಿನೌತಣಕೆ.
ತನ್ನತ್ತಿಗೆಯ
ಕೋರಿಕೆಯ ಕೇಳ್ದು ಮಾರುತ್ತರಿಸಿದನ್ ನಗುತೆ
ಊರ್ಮಿಳೇಶಂ : “ಕೋಳುಹೋಹರೆ, ಅತ್ತಿಗೆ ಈ
ಕಾಳ್ಮಿಗದ ಕಾಂಚನ ಕೈತವತೆಗೆ ? ಕಾಣಿರೇಂ
ಕೃತಕಮಂ ? ಕನಕ ರಚಿತಂ ರತ್ನಖಚಿತಮೀ   ೧೫೦
ಮಿಗದವೋಲೆಲ್ಲಿಯಾದೊಡಮಿರ್ಪುದೇಂ ಸಹಜ
ಸೃಷ್ಟಿ ? ಸಂಧ್ಯಾಶಿಲ್ಪಿ ಬಾನ್‌ಪಟದಿ ಕಲ್ಪಿಸುವ
ಸುಂದರ ಜಲದಕೃತಿಯ ಗಂಧರ್ವ ನಗರಮೆನೆ
ಸಲಸಲಕೆ ಸಂಚಲಿಸುವಾಕೃತಿಯ ಈ ಮೃಗಂ
ಮಾರೀಚ ಮಾಯೆಯೆ ದಿಟಂ. ಕಾಮರೂಪಿಯಾ
ಕಿತವಕಲಿ ಕೋಣಪನ ಕೂಟಯಂತ್ರಕೆ ಸಿಲ್ಕಿ
ಕೋಳುವೋಗಿಹರಾರ್ಯರೆನಿತೆನಿತೊ. ಕಾಣಿಮದೊ
ದಿಟದ ಮೃಗತತಿಯದರ ಬಳಿ ಸುಳಿಯಲೆಂತಂಜಿ
ಹಿಂಜರಿದು ಮೂಗಾಳಿವಿಡಿದು ನಿಂತಿಹವಲ್ಲಿ
ಸಾಲ್ಗೊಂಡು ಬೆರ್ಚಿ ಗಾರಾಗಿ !”
ಮೈದುನನಿಂತು   ೧೬೦
ನುಡಿಯಲದನವಚತ್ತು ಸೀತೆ ಕಾಂತನ ಕಡೆಗೆ
ತಿರುಗಿದಳು ; ಮರುಗಿದಳು ; ಕಾಡಿದಳು ; ಬೇಡಿದಳು ;
ಮಾರ್ನುಡಿಯನಿಚ್ಛಿಸದಲಂಪಿನಿಂ ನೋಡಿದಳು
ರಾಮಚಂದ್ರನ ಮನಂ ತನ್ನ ಮನಮಪ್ಪುವೋಲ್ !
ತಿರುಗಿ ನೋಡಿದನನುಜನಂ ; ನುಡಿದನಿಂತೆಂದು :
“ಪೊರಮಡುವೆವಾವಿಂದೆ, ಸೌಮಿತ್ರಿ. ದೇವಿಯೀ
ಕೊನೆವಯಕೆಯಂ ತೀರ್ಚಿದಪ್ಪೆನಶ್ರಮದಿನಾಂ
ಶೀಘ್ರದಿಂ. ಮುಗ್ಧೆಯೀ ಮುಗ್ಧಕಾಂಕ್ಷೆಗೆ ಭಯದ
ವಿಘ್ನಮೇತಕೆಮಗೆ ? ನಗರದೊಳದಂ ತೋರ್ದು
ಸೊಗಯಿಸುವೆನೆಂಬುದಾಗಿರಲಾಸೆ, ನಮ್ಮಿಂದೆ           ೧೭೦
ತಡೆಯೇತಕದಕೆ ? ನೀನೆಂದಂತೆ ರಕ್ಕಸನೆ
ಮೃಗರೂಪಿಯಾಗಿರ್ದೊಡಾತನಂ ಕೊಲ್ವುದುಂ
ಕರ್ತವ್ಯಮಲ್ತೆ ? ಪಿಡಿದಪೆನಲ್ಲದಿರೆ ಕೊಂದೆ
ತಂದಪೆನ್. ನೀಂ ನಡೆಯಿಮಾಶ್ರಮಕೆ. ಚಚ್ಚರಿಂ
ಬರ್ಪೆನಾನಿತುವೊಳ್ತಿನೊಳೆ. ನೀನೆಚ್ಚರದಿ
ಕಾಯುತಿರ್ ಜನಕಸುತೆಯಂ !”
ಮಲ್ಲಗಚ್ಚೆಯಂ
ಕಟ್ಟಿ, ಆ ಸಿಡಿಲಾಳ್, ಧನುರ್ಬಾಣ ಪಾಣಿಯುಂ
ಕಟಿಖಳ್ಗ ಭೀಕರನುಮಾಗಿ, ಮೃಗನೀಚನಂ
ಬೆಂಬತ್ತಿದನು ದೈತ್ಯ ಮಾರೀಚನಂ. ಪಳುವದೊಳ್
ಮರೆಯಾಗೆ ರಘುಕುಲ ಯಶಶ್ಚಂದ್ರಶೇಖರಂ  ೧೮೦
ನಡೆದಳೆಲೆವನೆಗೆ ಮೈಥಿಲಿ ಮೈದುನನ ಮುಂದೆ,
ಲಂಕೇಶ್ವರನ ಶಂಕೆ ಸುಯ್ವಂತೆ :
ಬೇಂಟೆಯಂ
ಬಣ್ಣಿಪನೆ ಕವಿ, ಕಲಿ ದಿಲೀಪಕುಲತಿಲಕನಾ ?
ಬೇಂಟೆಗಾರನುಮಂತೆ ಬೇಂಟೆಮಿಗಮುಂ ದಿಟಂ
ಮಹೋದ್ದಾಮರೆನೆ, ನೋಟಮಾಗದೆ ದೇವದೇವರಿಗೆ
ಆ ಮೃಗಯೆ ? ರಾವಣನುಮಾ ಲಸದ್ದೃಶ್ಯಮಂ
ನೋಡದಿರಲಾಪನೇಂ ? ನೋಡಿದನ್, ಮೆಯ್‌ನವಿರ್
ನಿಮಿರಿ !
ಪೊಂಬಿಡಿಯಸಿಯನಿರುಕಿ ಕಟಿಕೋಶದೊಳ್,
ನಿಶಿತ ನಾರಾಚಮಯ ತೂಣೀರಮಂ ಧರಿಸಿ
ಬೆನ್ನೊಳಾ ಸದೃಢ ಜಂಘೆಯ ನಡೆಯ ಕಲಿಧನ್ವಿ           ೧೯೦
ಹಳುವ ಹೊಕ್ಕನು ಹೊಮ್ಮರೆಯ ಹಿಂದೆ. ಮೃಗವೇಷಿ
ಮಾರೀಚನಾಕರ್ಷಿಸುತ್ತಾ ವನಪ್ರೇಮಿಯಂ
ಸೆಳೆದನು ಮುಂದೆ ಮುಂದೆ ; ಒಮ್ಮೆ ತೋರಿದುದಿಲ್ಲಿ ;
ಒಮ್ಮೆ ತೋರಿದುದಲ್ಲಿ, ಮರೆಯಾದುದೇನಿಲ್ಲಿ ?
ಎಂಬನಿತರೊಳೆ ಹೊಳೆದುದಲ್ಲಿ ! ಕಣ್ಣೊಳೆ ಮುಂದೆ
ಹೊದರಿನಲಿ ಹೊಕ್ಕು ಜುಣುಗಿದುದೆಂದು ನೋಡುತಿರೆ,
ಏನೊ ಬೆನ್ನೆಡೆ ಸದ್ದು ? ತಿರುಗಿ ನೋಡಿದರೆ, ಅದೊ
ಪಸುರ ಗಬ್ಬದಿನುಣ್ಮೆ ಚಿಮ್ಮುತಿದೆ ! ಮರೆಯಾದುದೀ
ಕುತ್ತುರ್ ಮರೆಯೊಳಡಗಿ ಎಂದೆಚ್ಚರಿಕೆವೆರಸಿ
ತುದಿವೆರಳ ತವಕದುಬ್ಬೇಗದಿಂ ನಡೆನಡೆದು,  ೨೦೦
ಸುತ್ತಿ, ಹತ್ತಿರೆ ಸಾರಿ, ಕಣ್ಣಿಟ್ಟು, ಕೈನೀಡಿ,
ಪಿಡಿವ ಚಾತುರ್ಯದಿಂದಿರೆ, ಚೆಂಗನೆಯ ಚಿಮ್ಮಿ
ದಡದಡನೆ ಪೊದೆ ನಡಗುವಂದದೊಳಿಳೆಯನೊದ್ದು
ನೆಗೆದೋಡೆ, ಬೆಚ್ಚಿ ಸುಯ್ದಟ್ಟುವನ್ ಬೇಂಟೆಗಂ
ಬಿಡದೆ ಬೆಂಬತ್ತಿ ! ಇಳಿದುದೆ ತಗ್ಗನಾ ಮಿಗಂ ?
ರಾಮನುಮಿಳಿದನದಂ ! ಉಬ್ಬನೇರ್ದುದೆ ಜಿಂಕೆ ?
ಕೂಡೆ ಏರಿದನದಂ ! ದರಿಯಾಳದಗಲಮಂ
ನೆಗೆದುದೆ ಕುರಂಗಂ ತುರಂಗದೋಪಾದಿಯಿಂ
ನೆಗೆದನಂತುಟೆ ತಾನುಮಾ ವಿಹಂಗಮ ಕುಲಂ !
ಮಲೆಯ ಗೋಡೆಯೊ ಎನಲ್ ಕಡಿದಾಗಿ ಮೇಲೆಳ್ದ        ೨೧೦
ಗುಲ್ಮ ಶೋಭಿತ ಸಾನುದೇಶಮಂ ನೋಡು ಅದೊ
ಏರುತಿಹುದೆಂತು ! ಮುದುರುತಿದೆ, ನೀಳುತಿದೆ ಮೆಯ್.
ಒಮ್ಮೆಯೆದ್ದಂತೊಮ್ಮೆ ಬಿದ್ದಂತೆ ತೋರುತಿವೆ
ಶೃಂಗದ್ವಯಂ. ಖುರಪುಟಾಘಾತದಿಂದುಣ್ಮಿ
ಸಿಡಿಯುತಿವೆ ಪುಲ್‌ಮಣ್‌ಗಳಟ್ಟಿ ಬೆಂಬರ್ಪಂಗೆ
ಕಣ್ಗೆ ದೂಳಿಕ್ಕುವೋಲ್. ಜೊಲ್ ಸೋರ್ವ ಜಿಹ್ವೆಯಂ
ಜೋಲ್ದೇದುತಿರ್ದಪುದಳ್ಳೆ ತಿದಿಯೊತ್ತುವೋಲ್ ;
ಆ ಹಿಡಿವನಾ ಹಿಡಿದನದರ ಹಿಂಗಾಲನೆನೆ
ದಾಶರಥಿ ತೋಳ್‌ನೀಡಿ ತುಡುಕಲೆರಗಲ್ಕಯ್ಯೊ
ವ್ಯರ್ಥಮಾದುದು ಶೂನ್ಯತಾ ಮುಷ್ಟಿ ! ಪೊನ್ಮಿಗಂ         ೨೨೦
ಪೊಕ್ಕನೆ ಕೆಲಕ್ಕೆ ಪೊರಳ್ದಕ್ಕಟ ಪೆಡಂಮೆಟ್ಟಿ
ಧಾವಿಸಿತು ಪಳುವಿಡಿದ ಕಿಬ್ಬಿಯಿಳಿಜಾರಿಗದೊ,
ದುಮುಕಿತೆನೆ ಮಳೆಯ ಬಿಲ್ಲಿನ ನೀರಿನರ್ಬ್ಬಿ. ಹಾ,
ತೊಯ್ದು ನಾರುಡೆಯಂಗಿ ನಿಂತನಾ ರಾಘವಂ
ಪಲ್ಗಚ್ಚಿ ನೋಡಿ; ಮಿಂಚಿತ್ತೋಡಿತಾ ಶೃಂಗಿ.
ಮುಗಿಲೊಳಗಡಗಿ ತೋರಿ ತಿಂಗಳೋಡುವವೋಲೆ
ಪಳುಗಾಡಿನೊಳಗೋಡುತಿರೆ ಮೃಗಂ, ಬಾಳ್ವೆರಸಿ
ಹಿಡಿವ ಹಂಬಲನುಳಿದು ಬಿಲ್ಲೆತ್ತಿದನ್ ಬಾಣ
ಪಾಣಿ, ಮುಕ್ತಿಗೆ ಸೇರ್ದುದೆನೆ ರಾಕ್ಷಸಪ್ರಾಣಿ !
ತೆಕ್ಕನೆಯೆ ಬಿಲ್ಲಿಳುಹಿದನ್ : ಮುಂದೆ ಕಂಡುದಾ           ೨೩೦
ಗೋದಾವರಿಯ ಬಿತ್ತರದ ಪೊನಲಡ್ಡಗಟ್ಟುವೋಲ್ !
“ನದಿಯನೀಸಲೆವೇಳ್ಕುಮಾ ಜಂತು. ಆ ದಡಕೆ
ಹಾಯ್ವ ಮುನ್ನಮೆ ಹಿಡಿವೆನೆಂತಾದೊಡಂ ದಿಟಂ !”
ಮತ್ತೆ ಬೆಂಬತ್ತಿದನ್ ರವಿವಂಶಜಂ. ಜಿಂಕೆ
ದುಮುಕಿತು ದುಢುಮ್ಮನೆ, ನದೀಜಲಂ ಮುತ್ತೆಳ್ದು
ಸಿಡಿಯೆ. ಬೆನ್ನೊಳೆ ದುಮುಕಿದನ್ ರಾಮನಾ ಹೊಳೆಗೆ
ನೀರ್ನವಿರ್ಗಳೇಳ್ವಂತೆ ! ಮುಂದೆ ಸಾಗಿತು ಮಿಗಂ
ಕೊಂಬೆಕೊಂಬೆಯ ಕೊಂಬಿನಿಂಬಿನ ಮೊಗಂ ಮಾತ್ರ
ತಾನಾಗಿ ತೇಲಿ. ಹಾಯ್ದನು ಹಿಂದೆ ಕೌಸಲೆಯ
ಸೀತಾಪ್ರಿಯಂ ಬೀಸುಗೈವೀಸಿ, ತಲೆಯೆತ್ತಿ,     ೨೪೦
ಪೊತ್ತ ಬಿಲ್ ಬತ್ತಳಿಕೆ ಕತ್ತಿಗಳನೊಂದುಮಂ
ಬಗೆಗೊಳ್ಳದಾಕ್ರಮಣ ಬುದ್ಧಿಯೊಂದನೆ ಪಿಡಿದು,
ನೀರೆರ್ದೆಯನಿರದೆ ಸೀಳ್ದೀಸಿ ! ಮಾಯೆಯನೆಂತು
ಸಂಹರಿಸದೆಯೆ ಪಿಡಿವುದಯ್ ನನ್ನಿ ? ಅಕ್ಕಟಾ,
ದಡವೇರ್ದುದಾ ಚತುಷ್ಪಾದಿ ; ನುರ್ಗ್ಗಿತ್ತೋಡಿ
ಮತ್ತೆ ದಟ್ಟಡವಿಯಂ. ಮೈಗಂಟಿದೊದ್ದೆಯಿಂ
ರಾಮನಟ್ಟಿದನು ಪೌರುಷ ರೋಷವೇಗದಿಂ.
ಓಡಿದನು ಮಾರೀಚನಟ್ಟಿದನು ದಾಶರಥಿ ;
ಮುಟ್ಟಿದರು ನೀರದಾಕೃತಿವೆತ್ತ ಪುಷ್ಪಕಜಮಂ
ಛಾಯಾ ವಲಯ ನೇಮಿಯಂ. ದಾಂಟಿದಂದೆ ತಡಂ     ೨೫೦
ಕಾಂತಿ ಸುರಿದುದು ಸೂರ್ಯನಾ : ರಕ್ಕಸಂ ಬೆಚ್ಚಿ
ಒಳಸೋರುತಲ್ಲಿಂ ತಿರಿಕ್ಕನೆ ಪೆಡಂಚಿಮ್ಮಿ
ನೆಗೆಯುತಿರೆ ಕರ್‌ನೆಳಲ ಮರೆಗೆಳಸಿ, ರವಿವಂಶಜಂ
ಕಣೆಯನೆಳೆದನು ಕೈಗೆ ; ಹೂಡಿದನದಂ ಹೆದೆಗೆ ;
ವ್ಯಾಕರಣ ಛಂದಸ್ಸಲಂಕಾರ ಸೂತ್ರಂಗಳಿಂ
ಕಬ್ಬವೆಣ್ಣಂ ಕಟ್ಟುವೆಗ್ಗತನಮಂ ಬಿಟ್ಟು
ಹೃದಯದಾವೇಶಮನೆ ನೆಚ್ಚುವ ಮಹಾಕವಿಯ
ಮಾರ್ಗದಿಂ, ಮಾರ್ಗಣವನೆಚ್ಚನೇಣನ ಮೆಯ್ಗೆ,
ಗೋಣ್ತಿರಿದು ಪಲವುರುಳುರುಳಿ ಬೀಳುವೋಲಂತೆ !
ಶಾಶ್ವತವನರಿಯಲ್ಕೆ ನಶ್ವರದ ಹೃದಯಮಂ  ೨೬೦
ಭೇದಿಸುವ ಕವಿಯ ದರ್ಶನದಂತೆ, ಖರಶರಂ
ಛಿದ್ರಿಸಲ್ಕಾ ಕಿತವ ಪಶುಕಳೇಬರದಿಂದೆ
ಜಗುಳ್ದುದು ನಿಶಾಚರಾಕೃತಿ, ಮಿಥ್ಯೆ ಬಿರಿಯಲ್ಕೆ
ಸತ್ಯಂ ಪ್ರತ್ಯಕ್ಷಮಪ್ಪಂತೆವೋಲ್. ಕಣ್ ಬೆರ್ಚ್ಚಿ
ನೋಡುತಿರಲಾಯ್ತು ಕಿವಿಯುಂ ಬೆರ್ಚ್ಚುವಂತೆ : “ಓ
ಲಕ್ಷ್ಮಣಾ ! ಓ ಲಕ್ಷ್ಮಣಾ ! ಓ ಲಕ್ಷ್ಮಣಾ, ಓ !”
ಎಂಬಾ ಮಹಾಧ್ವಾನಮಸುರನುಸಿರಿಂದುರ್ಕ್ಕಿ
ರೋದಿಸಿತು. ಗಗನಗಿರಿವನ ಗುಹಾಮುಖಂಗಳಿಂ
ಪ್ರತಿರಣಿತಮಾಗಿ ! ಧಿಗಿಲೆಂದುದೆದೆ ರಾಮಂಗೆ.
“ಓ! ಲಕ್ಷ್ಮಣಾ, ಲಕ್ಷ್ಮಣಾ, ಲಕ್ಷ್ಮಣಾ, ಓ !”        ೨೭೦
ಕೂಗನಾಲಿಸಿ ನಡುಗಿದಳ್ ಪೃಥ್ವಿ; ತರುಶಿಲಾ
ಗರ್ಭಂಗಳುಂ ತಲ್ಲಣಂಗೊಂಡುವಾ ಕರೆಯ
ಮೊರೆಗೇಳ್ದು ; ನಿಲ್ಲಿಸಿದುವುಲಿಗಳಂ ಚಕಿತ ಖಗ
ಸಂಕುಲಂ ; ಮಧ್ಯಾಹ್ನಮಾಲಿಸಿತು ನಿಶ್ಶಬ್ದ
ವಿಸ್ಮಯಭ್ರೂಮುದ್ರೆಯಿಂ ; ಆ ತೆರೆತೆರೆಯ ನಡೆಯ
ದನಿಗುದುರೆ ಮುಟ್ಟಿತೆಲೆವನೆಗೆ, ನೆಗೆನೆಗೆದೋಡಿ
ಕೊನೆಗೆ : ಓ ಲಕ್ಷ್ಮಣಾ ಲಕ್ಷ್ಮಣಾ ಲಕ್ಷ್ಮಣಾ ಓ !
ಪಗಲೆನಿತ್ತೇರ್ದೊಡಂ ಪೊಳ್ತೆನಿತೊ ಮೀರ್ದೊಡಂ
ಪಿಂತಿರುಗದಿರೆ ರಾಘವಂ, ಜಾನಕಿಗೆ ಚಿಂತೆ
ತೊಡಗಿದುದು. ನಾನಾ ದುರಂತಮಂ ನೆನೆನೆನೆದು      ೨೮೦
ವಿಹ್ವಲಿಸಿದುದು ಮನಂ ತನ್ನಿಚ್ಚೆಯಂ ಮೀರ್ದು.
ಮೈದುನಂಗರುಹಲಾರದೆ ತನ್ನ ಕುದಿಹಮಂ,
ನಿಶ್ಶಂಕಿ ವೀರನಾತನ ನಗೆಗೆ ನಾಣ್ಚಿಯುಂ,
ಮರೆಸಲಾರದೆ ತನ್ನೆರ್ದೆಯ ಭೀತಿಯಂ, ಭೀರು,
ಕೋಮಲೆ, ಅಬಲೆ, ಸೀತೆ ತಾನೆಲೆಮನೆಯ ಹೊರಗೊಳಗೆ
ನಿಂತಲ್ಲಿ ನಿಲ್ಲಲಾರದೆ ಹಿಂದು ಮುಂದಕ್ಕೆ
ಪರಿದಾಡುತೊಣಗುತುಟಿಯಂ ಮತ್ತೆ ಮತ್ತೆಯುಂ
ನಾಲಗೆಯ ನೀರಿಂದೆ ಸವರಿಕೊಳುತಿರೆ, ಕಂಡು,
ಪಯಣದವಸರಕಾಗಿ ಪಿಂಡಿಗಟ್ಟುತ್ತಿರ್ದ್ದ
ಲಕ್ಷ್ಮಣಂ : “ತವಕಿಸುವುದೇಕಿಂತು ? ಬಿಟ್ಟದಂ ೨೯೦
ಬಂದಪನೆ ? ಪಿಡಿವನಲ್ಲದೊಡದರ ಚರ್ಮಮಂ
ತಂದಪನ್ ಕೊಂದಾದೊಡಂ. ಪಿಡಿವ ಸಾಹಸದಿ
ತೊಡಗಿರ್ಪನೆಂದೆ ತೋರ್ಪುದು. ಕೊಂದು ತರ್ಪುದಕೆ
ಪೊಳ್ತಿನಿತ್ತೇತಕಣ್ಣನ ಬಾಣವೇಗಕ್ಕೆ ?”
ಎನುತ್ತೆ ಕೈಗಜ್ಜಮಂ ಮುಂಬರಿಸಿದನು ಮತ್ತೆ
ಪಿಂಡಿಗಟ್ಟುತ್ತೆ. ಲಕ್ಷ್ಮಣನೆಂದುದಕೆ ಮರಳಿ
ನುಡಿಯದೆಯೆ, ನಡೆಯುತೆಲೆವನೆಯಂಗಳಕ್ಕಲ್ಲಿ
ನಿಂದಳು ಧರಣಿಜಾತೆ. ನೋಡಿದಳು ಕಾತರಿಸಿ
ಪಳುವನಿನಿಯಂ ಪೊಕ್ಕ ದೆಸೆಯ ಬನವಟ್ಟೆಯಂ :
ದಟ್ಟಯಿಸಿದಡವಿಮಲೆ ದೂರಕಲೆಯಲೆಯಾಗಿ ೩೦೦
ಪರ್ವಿರ್ದುದಕ್ಷಿಯಲೆವನ್ನೆಗಂ. ಗಗನದೊಳ್
ನಿಂದಿರ್ದುದಾ ಮುಗಿಲ್ಬಿತ್ತರಂ, ನೇಸರ್ಗೆ
ಕಣ್ಕಟ್ಟಿದಂತೆ. ಆ ಮ್ಲಾನ ಮಧ್ಯಾಹ್ನದಾ
ಮೌನ ಭಾರಕ್ಕೇದುತಿರೆ ಖಿನ್ನಮುಖಿಯಾಗಿ
ಶ್ರೀರಾಮಭಾರ್ಯೆ, ನಿಶ್ಶಬ್ದತಾ ನಿದ್ರೆಯಂ
ಹರಿದು ಹೊಡೆದೆಬ್ಬಿಪೋಲೆದ್ದುದೊಂದೋವೋ ಸದ್ದು,
ಕಾಡೊರಲ್ದವೋಲ್ : “ಓ ಲಕ್ಷ್ಮಣಾ ! ಓ ಲಕ್ಷ್ಮಣಾ !
ಓ ಲಕ್ಷ್ಮಣಾ ಓ !” ಎಂದು ಲೋಕಶೋಕವನೆಲ್ಲ
ಕರೆವಂತೆ ಸಂಪ್ಲವಿಸಿತಾ ರೋದನಂ, ವಿಪಿನಜಂ
ಬಹುದೂರದಾ !
ಬೆಚ್ಚಿದಳ್ ; ಬೆವರಿದಳ್ ; ಹಲುಬಿದಳ್ ;         ೩೧೦
ಹಾರಿ ಹಮ್ಮೈಸಿದಳು ಸೀತೆ. ಮೈದುನನೆಡೆಗೆ
ತತ್ತರಿಸುತಿರೆ, ಕಂಡಳಾತನಂ, ಬಾಗಿಲಿಂ
ಪೊರಮಡುತ್ತಿರ್ದನಂ. ಸನ್ನೆಯಿಂ ಕೆಮ್ಮನಿಸಿ,
ಕಿವಿಗೊಟ್ಟನಾತನುಂ. ಕೇಳ್ದರಾಯಿರ್ವರುಂ
ನೀಳ್ದ ಗೋಳ್ದನಿಯನೋ ಲಕ್ಷ್ಮಣೋ ಲಕ್ಷ್ಮಣೋ
ಲಕ್ಷ್ಮಣೋ ಎಂದಲೆದುದಂ. ಕೇಳ್ದಂಗೆ ಲಕ್ಷ್ಮಣಗೆ
ಮುಖವಿಸ್ಮಯಂ ಮಾಣ್ದು ಮೆಯ್ದೋರುತಿರಲೊಂದು
ಮಂದಸ್ಮಿತಂ, ಭೀತಿ ಬೆಳ್ಪಂಬಡಿದ ಮೊಗದ
ಮೈಥಿಲಿ ಗದ್ಗದಿಸಿ ನುಡಿದಳಿಂತು : “ಅಯ್ಯಯ್ಯೊ
ಕೆಟ್ಟೆನಯ್, ಲಕ್ಷ್ಮಣಾ ! ಕೇಡಾಯ್ತು ಆರ್ಯಂಗೆ !           ೩೨೦
ಓಡು, ನಡೆ ! ನಡೆ ಬೇಗ ! ನೆರವಾಗು, ನಡೆ, ಹೋಗು !
ರಾಘವಂಗೇನಾಯ್ತೊ ಕಾಣೆನಾನಯ್ಯಯ್ಯೊ !”
ಅತ್ತಿಗೆಯ ದುಃಸ್ಥಿತಿಗಿನಿತು ಕಿನಿಸಿ ಮೈದುನಂ :
“ತಾಳ್ಮೆ, ತಾಯೀ, ತಾಳ್ಮೆ. ರಕ್ಕಸನಸುರ ಮಾಯೆ
ಕೂಗುತಿದೆ ; ಅಗ್ರಜಧ್ವನಿ ಅದಲ್ತು. ಭ್ರಾಂತಿಯಿಂ
ನಡೆಯದಿರಿತರೆಯಂತೆ.” “ಅಯ್ಯಯ್ಯೊ, ಆಲಿಸದೊ ;
ನಿನ್ನಣ್ಣನುಲಿಹವೆ ದಿಟಂ. ನಿನ್ನನೆ ಪೆಸರ್ವಿಡಿದೆ
ಕೂಗುತಿಹುದಾಲಿಸಾ ! ಕಿವಿಗೆಟ್ಟುದೇಂ ; ನಿನಗೆ
ಮತಿಗೆಟ್ಟುದೇಂ ? ಓಡು, ನೆರವಾಗು, ನಡೆ, ಹೋಗು ;
ದಮ್ಮಯ್ಯ, ಹೋಗು !” “ಅಣ್ಣನ ಆಜ್ಞೆ, ನಿಮ್ಮಡಿಯ       ೩೩೦
ರಕ್ಷಣೆಗೆ ನನ್ನನಿಲ್ಲಿಟ್ಟು ಹೋಗಿಹನದಂ
ಮೀರಿ ನಡೆಯಲ್ಕೆನಗೆ ಬಾರದು ಮನಂ.” “ಕರುಳೆನಗೆ
ಬೇಯುತಿಹುದೆನ್ನಾತ್ಮ ಸೀಯುತಿಹುದಯ್ಯಯ್ಯೊ
ದಮ್ಮಯ್ಯ, ಲಕ್ಷ್ಮಣಾ, ಕಾಲ್ವಿಡಿವೆನೋಡು ನಡೆ ;
ರಕ್ಷಿಸೆನ್ನಿನಿಯನಂ, ಪ್ರಾಣಸರ್ವಸ್ವನಂ,
ಕೌಸಲೆಯ ಕಂದನಂ, ಕೋಸಲಾನಂದನಂ,
ನಿನ್ನಣ್ಣನಂ !” ಸಿಟ್ಟುರಿದುದೂರ್ಮಿಳೇಶನಿಗೆ.
“ಹೆಣ್ಣಿನ ಹಣೆಯ ಬರಹಮಿಂತುಟೆ ವಲಂ !” ಎನುತೆ
ತನ್ನೊಳಗೆ ತಾನಾಡಿಕೊಂಡು, ನುಡಿದನು ಮರಳಿ
ಸಂತೈಕೆಯಂ : “ದೇವಿ ರಾಮನಪ್ರಾಕೃತಂ !  ೩೪೦
ರಾಮನಕ್ಷಯ ಮಹಿಮನಾತಂಗೆ ಪೇಳೆಣೆಯೆ
ದೇವರ್ಕಳುಂ ? ದನುಜರಾವ ಹೊಯಿಕೈ ? ತಮ್ಮ
ನಿಧಿಯ ಬೆಲೆ ತಮಗರಿಯದವರವೋಲಾಡುವಿರಿ !
ಸಾಲ್ಗುಮೀ ಕಳವಳಂ ; ಮಾಣ್ಬುದಾಶಂಕೆಯಂ ;
ಬಿಡಿಮನ್ನೆಯದ ಭೀತಿಯಂ.” ಎನುತ್ತಿರೆ ಮತ್ತೆ
ಚೀರ್ದುದಾ ನೀಳುದನಿ ಕೇಳ್ದೆರ್ದೆಸೀಳುವಂತೆ : “ಓ
ಲಕ್ಷ್ಮಣಾ ! ಓ ಲಕ್ಷ್ಮಣಾ ! ಓ ಲಕ್ಷ್ಮಣಾ ಓ !”
ಕೇಳ್ದದಂ ಲಕ್ಷ್ಮಣನೆ ಬೆಬ್ಬಳಿಸಿದನೆನಲ್ಕೆ
ಸೀತೆಗಿನ್ ಗತಿಯುಂಟೆ ? ಮತಿಯುಂಟೆ ? ಹಾಯೆನುತೆ
ಹೌಹಾರಿ ಹಮ್ಮೈಸಿದಳು ; ಹೆಪ್ಪುಗಟ್ಟಿದುದೊ   ೩೫೦
ಮೆಯ್ ನೆತ್ತರೆನಲು ನಿಂದಳು ಮರಂಬಟ್ಟವೋಲ್ ;
ಮರಳಿ ಸಂಜ್ಞಾಲಬ್ಧೆಯಾಗಿಯುಂ, ಕಣ್ಕೆರಳಿ,
ವಿಕಟಮುಖಿಯಾಗಿ, ಭೂತಿನಿಯಂತೆ
ಸೌಮಿತ್ರಿಯಂ ನೋಡಿ : “ಭ್ರಾತೃಘಾತಕ ಪಾಪಿ,
ಸಾಯಿ, ನಡೆ, ತೊಲಗು ಕಣ್ಬೊಲದಿಂ ! ಸುಮಿತ್ರಾತ್ಮ
ಜಾತ ಪಾತಕವೊ ನೀಂ ! ಗೋಮುಖವ್ಯಾಘ್ರನೊಲ್
ಬಂದೆಯೆಮ್ಮೊಡಗೂಡಿ, ಪೂರ್ವಜನ್ಮದ ಪಾಪದಾ
ಕರ್ಮಪಾಕಂ ಬರ್ಪವೋಲ್ !” ಎನುತ್ತಿರೆ ಸೀತೆ,
ಮುಂದೆ ಮಾತಾಡಲೀಯದೆ ಸದೃಢಬುದ್ಧಿಯಿಂ
ರಾಮಾನುಜಂ : “ಸಾಲ್ಗುಮೀ ನಿಂದೆ, ರಾಜರ್ಷಿ           ೩೬೦
ಜನಕಸುತೆ !” ಎನುತಾಕೆಯಂ ದುರದುರನೆ ನೋಡಿ
ನಿಡುಸುಯ್ಲವೊಯ್ಲಿಂದಮೇದುತಿರಲೆರ್ದೆಯಳ್ಳೆ :
“ನೀಮಣ್ಣನಂ ಪ್ರೀತಿಸುವ ಮೊದಲೆ ಪ್ರೀತಿಸಿದೆ
ನಾನಾತನಂ ! ಪೊಲ್ಲನುಡಿಗೆಡೆಗೊಟ್ಟರೀಗಳಾ
ಬಳಿಕ್ಕೆ ನೀಂ ನೋವನುಣ್ಬಿರಿ ……” “ಎಲವೊ ಲಕ್ಷ್ಮಣಾ,
ಎಳೆಯ ಮುಳ್ ಚುಚ್ಚಲ್ಕೆ ನೋವಲ್ತದುವೆ ಮೆಚ್ಚು ;
ಬೆಳೆದರಾ ಮುಳ್, ಅದರ ಕಚ್ಚು ಮುತ್ತಹುದೆ ಪೇಳ್ ?
ಎಳೆಯ ಕರು ಬೆಳೆದ ಮೇಲದರ ತಾಯನೆ ಬೆದೆಗೆ
ಬಯಸಿದಪುದಯ್ಯೊ ! …… ಮನದನ್ನ, ನಿನ್ನಂ ನಾನೆ
ಕೊಲಿಸಿದೆನೆ ? ತನ್ನೈದೆದಾಳಿಯಂ ತನ್ನ ಕಯ್            ೩೭೦
ಕಿತ್ತೆಸೆದುದಯ್ಯಯ್ಯೊ !” ಬಾಯ್ಬಡಿದುಕೊಳ್ವಳಂ
ಮತಿವಿಕಲೆಯಂ ಕಂಡು ತತ್ತರಿಸಿದುದು ಬುದ್ಧಿ
ಲಕ್ಷ್ಮಣಗೆ. ಹಾ ಬೇರ್ಗೊಯ್ದುದತ್ತಿಗೆಯ ಬಾಯ್ಗತ್ತಿ
ಊರ್ಮಿಳಾ ಪ್ರಿಯನ ನಿಶ್ಚಲತೆಯಂ ! “ಪೆಣ್ತನದ
ಕಲ್ತನಕ್ಕೆಲ್ಲೆ ಮೇಣೆಣೆಯುಂಟೆ ? – ಹೇ ದೇವಿ,
ಹೇ, ಮಾತೆ, ಮನ್ನಿಸೆನ್ನಂ. ರಾಮನಾಣೆಯಂ
ಮೀರಲಾರದೆ ಪೇಳ್ದೆನಾದೊಡಂ, ನಿಮ್ಮಾಣೆ !
ಹೋಗಿ ಬರುವೆನು ಬೇಗದಿಂ ; ನಡೆಯಿಮೆಲೆವನೆಗೆ !”
ಹಿಂದುಹಿಂದಕೆ ನೋಡುತೋಡಿದನ್. ಕಾಡಿನೊಳ್
ಮರೆಯಾಯ್ತು ಮೈದುನನ ಮೂರ್ತಿ. ಏಕಾಂತಮಂ     ೩೮೦
ನೆನೆದು ತನು ಕಂಪಿಸಿತು ಜಾನಕಿಗೆ. ನಿಂದಳಾ
ಮುಳ್ಳುಬೇಲಿಯ ತಡಬೆಯಂ ನೆಮ್ಮಿ, ಶೂನ್ಯಮಂ
ತನ್ನ ಬಾಳಡವಿವಟ್ಟೆಯ ಪಾಳನೀಕ್ಷಿಸುವವೋಲ್ !
ವ್ಯೋಮಗಸ್ಯಂದನದೊಳಡಗಿ ರಥಿ ರಾವಣಂ
ನೋಡಿದನು ಮನ್ಮಥ ಸತಿಯ ರತಿಯ ಹೆಗಲೆಣೆಯ
ದಶರಥ ಸುತನ ಸತಿಯನೋರ್ವಳಂ. ಚಾತಕಂ
ಮಳೆಗೆ ಕಾತರಿಪಂತೆ, ಸೀತೆಯ ಚೆಲುವನೀಂಟೆ
ತವಕಿಸಿತಸುರನಕ್ಷಿಪಕ್ಷಿ. ಬನದಿಳೆಗಿಳಿಯೆ
ಹವಣಿಸಿದಮರವೈರಿ ದಶಶಿರಂಗೇನಾಯ್ತೊ ?
ತಾನೆಂದುಮನುಭವಿಸದೊಂದೇನೊ ಕಳವಳಂ
ಕ್ರಮಿಸಿದತ್ತಾಂತರ್ಯಮಂ : ಯತ್ನದಿಂದದಂ
ತುಳಿದೊತ್ತಿ, ನೆಲಕಿಳಿದನೊಂದು ಸುಟ್ಟುರೆಯಾಗಿ
ತಿರ್ರನೆ ಸುಳಿದು ಸುತ್ತಿ. ನೋಡಿದಳವನಿಜಾತೆ
ತನ್ನ ಕಣ್ಬೊಲದ ಕಾಡಿನೊಳಿದ್ದಕಿದ್ದಂತೆ
ತರಗೆಲೆಯ ಸದ್ದುಗೈದೆದ್ದನಿಲನೂರ್ಧ್ವಗಮ
ಸರ್ಪೋಪಮಾವರ್ತಮಂ. ಭೂತನರ್ತನಂ
ತಾನೆನಲ್ಕಾವರ್ತಿಸಿತು ಗಾಳಿ. ಕುಣಿದಿಲ್ಲಿ,
ನೆಗೆದಲ್ಲಿ, ಹಾರುತ್ತಮೋಡುತ್ತಮಾಡುತಂ,
ನಿಲುತೊಮ್ಮೆ ಹೆಡೆಯೆತ್ತಿ ನಾಗರದವೋಲಾಡಿ,
ಮತ್ತೊಮ್ಮೆ ನಡುಬಳುಕಿ ನಟಿಯಂತೆವೋಲಾಡಿ,         ೪೦೦
ಒಮ್ಮೆ ತುಂಬುರುಗೊಳ್ಳಿಯೆನೆ ಚಿಮ್ಮಿ, ಮತ್ತಂತೆ
ಗಣಬಂದವನ ತೆರದಿ ರಿಂಗಣಗುಣಿದು ಹೊಮ್ಮಿ
ರಯ್ಯನೊಯ್ಯನೆ ಹತ್ತೆ ಹರಿತಂದುದಾ ಗಾಳಿ,
ಸೀತೆಯೊಡಲಿನ ನಾಳನಾಳದಲಿ ಹೆದರಿಕೆಯ
ಚಳಿ ಹರಿಯುವಂತೆ. “ಏನಿದು ದುರ್ದಿನವೊ ನನಗೆ !”
ಎನುತೆನುತೆ ಜನಕಸುತೆ ಎಲೆವನೆಯನೊಳವೋಗೆ
ಬಾಗಿಲಿಗೆ ನಡೆದಳಾಗಳೆ ಪಜ್ಜೆಸಪ್ಪುಳಂ
ಕೇಳ್ದವೋಲಾಗಿ ತಿರುಗಿದಳಯ್ಯೊ ತನ್ನವರೆ
ಬಂದರೆಂಬೊಂದತಿಯ ಹರ್ಷಧೃತಿಯಿಂದೆ : ಹಾ         ೪೧೦
ಕಂಡಳಿನ್ನೊರ್ವನಂ, ಸುಪವಿತ್ರವೇಷನಂ,
ಮುನಿವರ್ಯನಾ !
ಜಟಾಧಾರಿಯಂ ಕಾವಿಯಂ
ಕಂಡೊಡನೆ ಮನಕೆ ನೆಮ್ಮದಿಯಾಗಿ, ಚಂದ್ರಮುಖಿ
ನಿಂತು ಸಂವೀಕ್ಷಿಸಿದಳಾ ತನ್ನೆಡೆಗೆ ಬರ್ಪ
ಸಂನ್ಯಾಸಿಯಂ. ಮತ್ತಮೊಡನೆಯೆ ಭಯಾಶಂಕೆ
ತಗುಳಿದತ್ತಾತ್ಮಕ್ಕೆ ; ಗರ್ವಮಯಮಾ ನಡೆಗೆ
ಯತಿ ಗತಿ ವಿನಯಮಿಲ್ಲ ; ಮುನಿಯ ನಿಲವಿನ ಭಂಗಿ ತಾಂ
ನೃಪದರ್ಪ ಸಂಗಿ ; ಕೊಡೆಯುಂ ಕಮಂಡಲುಮೇಕೊ
ಪರಿಚಿತ ಪದಾರ್ಥಂಗಳಂತಿಲ್ಲ ; ಅಪರಿಚಿತನ್
ಆ ಮುನಿ ಜನಸ್ಥಾನದವನಲ್ಲ ; ನೋಡುತಿರೆ
ಬಳಿಸಾರ್ದುನುಣುಗೋಲ್ಗಳಂ ಕೆಲಕ್ಕೊತ್ತರಿಸಿ
ದಾಂಟಿದನೊಳಗೆ ಬೇಲಿಯಂ. ಮಂತ್ರಘೋಷಮಂ
ತೊಡಗಿದನ್. ಗೀರ್ವಾಣಭಾಷೆಯೊಳೆ ಸ್ವಸ್ತಿಯಂ
ವಾಚಿಸಿದನೋಂಕಾರವೆರಸಿ. ಬಕಧ್ಯಾನಮಂ
ನಿಂದಿಪೋಲಲ್ಲೆ ನಿಂದನು, ಬಗೆಯ ಬಾವಿಯಂ
ರೆಪ್ಪೆವುಲ್ಲಿಂದಡಕಿ ಮುಚ್ಚಿ. – ಏನಿದು ಕಮ್ಪು
ಯತಿಗುಚಿತಮಲ್ಲದುದು ? ಎಂದು ಸಂಶಯಭೀತೆ
ಸುತ್ತೆತ್ತಲುಂ ನೋಡಿ ಪೆಳ್ಪಳಿಸುತಿರೆ ಸೀತೆ
ಕಣ್ದೆರೆದನಾ ರಸಿಕ ರಾಕ್ಷಸಂ. ಪರವಧೂ
ಪ್ರೇಮಿ ಆ ಚೆಲ್ವಿಯಂ ನೋಡಿದನು, ನೋಟದಿಂ
ಬೇಟಮಂ ಸಾರ್ವವೋಲ್, ಪೀರ್ವವೋಲ್. ಆ ಕಣ್ಗೆ      ೪೩೦
ನಡನಡನೆ ನಡುಗಿ, ಮರವಟ್ಟಂತೆ, ನಟ್ಟಂತೆ,
ತಾಂ ನಟ್ಟು ನಡಪಿದಾ ಬಳ್ಳಿಯನಿರದೆ ನೆಮ್ಮಿ
ತಳ್ಕಯಿಸಿ ನಿಂದಳು ಲತಾಂಗಿ.
ನಿಂತುದು ಗಾಳಿ
ಬೆದರಿ, ಗೋದಾವರಿಯ ಹೊನಲ ನಡೆ ಹೆಪ್ಪಾಯ್ತು.
ಚಲನೆಗಳನುಡುಗಿದುವು ಮರಬಳ್ಳಿಗಳ್. ಖಗಗಳಿಗೆ
ಮಳ್ಗಿದತ್ತಿಂಚರಂ. ಪರ್ವತಾರಣ್ಯಗಳ್
ಸ್ತಬ್ಧಮಾದುವು ರೌದ್ರಮಾ ದೈತ್ಯ ದೃಷ್ಟಿಯ ಭೀತಿ
ಬಡಿದಂತೆ. ನಿಂದಳಯ್ ಪ್ರಕೃತಿ ತಾಂ ಜನಕಜಾ
ಹೃತ್ಕೃತಿಯೆನಲ್ ಪ್ರತಿಯೆನಲ್ ಚೇತನಂಗೆಟ್ಟು !
ಬೆದರಿದೋಲಿದೆ ಭದ್ರೆ, ನಿನ್ನಂಗಮುದ್ರೆ. ಭಯಂ           ೪೪೦
ನಿಷ್ಕಾರಣಂ. ಮಂಗಳಾಂಗಿ, (ನವನೀತ ನವ
ಕೋಮಲಾಂಗಿಯೆನಲ್ಕೆ ನನ್ನುಡೆಯದೊಂದೆ ತಡೆ !)
ನಿನ್ನವೋಲತನು ಮೋಹನ ನಿತಂಬಿನಿಯಿಂತು
ನಿರ್ಜನಾಟವಿಯೊಳೆಂತೊರ್ವಳೆಯೆ ಬರ್ದುಕುತಿಹೆ ?
ರಕ್ಷೆಯಿಲ್ಲವೆ ನಿನಗೆ ? ……” ಕಪಟವನರಿತು ಸುದತಿ
“ಅಕಟಕಟ ಕೆಟ್ಟೆನಿವನಾರೊ ಮಾಯಾವಿ ಯತಿ !
ಕೆಟ್ಟುದನೆಣಿಸಿ ಬಂದಿಹನು ದಿಟಂ. ಪತಿಯೊಡನೆ
ಮೈದುನಂ ಬರ್ಪನ್ನೆವರಮೀತನಂ ನುಡಿಯ
ನೆವವೊಡ್ಡಿ ತಡೆದಪೆನದುವೆ ನೀತಿ !” ಬಗೆದಿಂತು
ನಗೆಗೂಡಿ ನುಡಿದೋರಿದಳು, ರಾವಣನ ಮನಕೆ
ರಾಗಮುರ್ಕನುರಾಗದೋಕುಳಿಯೆರಚುವಂತೆ.
“ಸಂಕಟದ ಸಮಯಕ್ಕೆ ಬಂಧುವೋಲೈತಂದೆ,
ಯತಿವರ್ಯ. ರಾಜರ್ಷಿ ಜನಕಂಗೆ ಕುಮಾರಿಯಂ ;
ಸೊಸೆ ದಶರಥಂಗೆ.” ಎಂದಿಂತು ಮೊದಲಾಗಿ ತಾಂ
ಬನಕೆ ಬಂದಾ ಕಥೆಯನಾದ್ಯಂತವಾಗೊರೆಯ
ತೊಡಗಿದಳು. ನಡುನಡುವೆಯಡಿಗಡಿಗೆ ಕಣ್ಬೆರ್ಚಿ
ಹಾದಿನೋಡುತ್ತಿರ್ದಳಯ್ ಕಾಡುದಾರಿಯಂ,
ಕೈತವಕ್ಕುಚಿತವಲ್ಲದವೋಲೆ, ಕವಡರಿಯದಾ
ಮುಗುದೆ ಬಾಲೆ. ತಿಳಿದದಂ ಮುಗ್ಧೆಯಾ ತಂತ್ರಮಂ
ಮುಗುಳುನಗೆ ನಕ್ಕನು ವಿದಗ್ಧ ಲಂಕೇಶ್ವರಂ.   ೪೬೦
ಕಾಲವಂಚನ ಚಂಚಲಾಕೇಕರಾಕಕ್ಷಿಯಂ
ಕುರಿತೆಂದನಿಂತು : “ಏಣಾಕ್ಷಿ, ನಿನ್ನನ್ನರಂ
ವಂಚಿಪುದುಚಿತಮಲ್ತು. ನಿನಗಮೀ ಕೀಲಣೆ
ತಗದು, ರಮಣಿ. ನಾಂ ಲಂಕೆಗಧಿಪಂ ; ದಶಗ್ರೀವ
ಬಿರುದುವೊತ್ತಂ ; ನೆಗಳ್ದ ರಾವಣಂ ; ದಶರಥನ
ಸುತನಿಗಿಂ ಮೊದಲೆ ನಿನ್ನಂ ಮೆಚ್ಚಿ ಬಂದವಂ !
ಬಿಲ್ಮುರಿವ ಬಲ್ಮೆಯಂ ಪಡೆದು ಬರ್ಪನಿತರೊಳೆ
ನಿನ್ನ ಪಿತೃವಿಂದೆ ವಂಚಿತನಾದೆನಲ್ಲದಿರೆ,
ಜನಕಸುತೆ, ನೀನಿಂದರಸಿಯೆನಗೆ ! ನನ್ನಳಂ,
ಮೋಸದಿಂ ರಾಮನೊಯ್ದೆನ್ನಾಕೆಯಂ, ಮರಳಿ ೪೭೦
ನಾನುಯ್ಯಲೈತಂದಿಹೆನು, ಸೀತೆ. ಭಿಕ್ಷುಕಂ
ವೇಷದೊಲುಮಾವೇಶದೊಳುಮಾಂ ; ನಿತಂಬಿನಿಯೆ,
ಕೃಪೆಗೈದೆನಗೆ ಲಂಕೆಗೆನ್ನೊಡನೆ ಬಾ. ಮರೆವೆ ನೀಂ
ರಾಮನಂ ಮರುದಿನಮೆ !”
ಇಂತೆಂದು ದಶಶಿರಂ
ತೋರಿದನು ಲೋಕವೈಭವಮೆಲ್ಲ ಮೆಯ್‌ವೊತ್ತ
ನಿಜರೂಪಮಂ. ಪೇಸಿ ಮೊಗದಿರುಹಿದಳು ಯುವತಿ.
ಭೀತಿ ಮರೆಯಾಯಿತುರಿದುದು ಕೋಪನಜ್ವಾಲೆ
ಪಾರ್ಥಿವಾಂಗನೆಗೆ :
“ಮಾಣ್, ಆಡದಿರಸಹ್ಯಮಂ,
ನಿಶಾಚರ ಕುಲೇಶ್ವರ. ಸೊಲ್ಲದಿರಧರ್ಮಮಂ,
ಕೋಣಪ ಕುಲಕುಠಾರ ಸ್ವಾನಮೈರಾವತಕೆ    ೪೮೦
ಮಲೆವವೋಲೆನ್ನ ಮನದನ್ನಂಗೆ ಕರುಬುತಿಹೆ
ನೀನ್. ಲೇಪಿಸಿದ ಜೇನಿನಾಸೆಗಸಿಧಾರೆಯಂ
ನೆಕ್ಕಲೆಳಸುತಿಹೆ. ಕಾಮಿಸಿದೆ ನರಿ ಕೇಸರಿಯ
ಪೆಣ್ಗೆ ; ನವಿಲಿನ ಸಂಗಸುಖಕೆಳಸುತಿದೆ ಹದ್ದು.
ಪೊನ್ನೆನ್ನ ಮನದನ್ನನಯ್ ; ನೀನೊ ಕರ್ಬ್ಬುನಂ.
ಶ್ರೀಗಂಧದನುಲೇಪನಕ್ಕೆಣೆ ರಘೂದ್ವಹಂ ;
ಹೊಲೆಗೆಸರಿಗೆಣೆ ನೀನ್ !”
ತಿರಸ್ಕೃತಿಯ ಕೈದುವಂ
ಸಮ್ಮಾರ್ಜನಂಗೆಯ್ಯುತಿರ್ದೊಡಂ ನಡನಡನೆ
ನಡುಗುತಿರ್ದಾ ಬೆರ್ಚ್ಚುಗಣ್ಣಬಲೆಯಂ ಹುಬ್ಬು
ಗಂಟಿಕ್ಕಿ ನೋಡಿದನ್ ಸಂರಕ್ತಲೋಚನ         ೪೯೦
ನಿಶಾಚರೇಂದ್ರಂ : “ಮಾಣ್, ಎಲೌ ಮುಗ್ಧೆ, ಸಾಲ್ಗುಮಾ
ನಿನ್ನ ಉಪಮಾ ಪ್ರತಾಪಂ ! ಪೆಣ್ಗೆ ಬೈಗುಳಮಲ್ತೆ
ಪೇಳ್ ವಿಕ್ರಮಂ ? ಚುಂಬನಕ್ಕೆಣೆ ಉಪಾಲಂಭಮುಂ -
ಪ್ರಣಯಪ್ರಸಂಗದೊಳೆನಲ್ಕೆ, ವರವರ್ಣಿನಿಯೆ,
ಮುನಿಯೆನಾಂ ನಿನ್ನ ಕೊರಳಿನ ಸುಧೆಯ ಗರಳಕ್ಕೆ.
ನಲ್ಲೆಯೊಪ್ಪಿಗೆ ‘ಒಲ್ಲೆ’ – ಎಂಬ ನಾಣ್ಣುಡಿಯಂತೆ,
ನಿನ್ನ ತುಟಿ ನಿನ್ನೆರ್ದೆಯನಾಡುತಿರ್ಪುದು, ನಟಿಸಿ
ನಿಂದೆಯಂ. ಬೇಟಕೆ ಬಲಾತ್ಕಾರಮೋರೊರ್ಮೆ
ಇಷ್ಟಸತ್ಕಾರಮೆಂಬರೆಲೆ ಯೌವಲಾವಣ್ಯೆ.
ವಂದಿಸುವೆ ನೀನೆನ್ನನೀ ದಿನದ ಕೃತಿಗಾಗಿ       ೫೦೦
ಮುಂದೆ, ಬಾ, ನನ್ನ ಲಂಕಾಲಕ್ಷ್ಮಿ, ಬಾ !” ಎನುತೆ
ಪಾಪಕೆ ಲಸತ್ಕೃತಿಯ ಲೇಪಮಂ ಬಳಿಯುತಾ
ಮಾಯಾವಿ ಚಪ್ಪಳಿಸಿದನ್ ಕೈಗೆ ಕಯ್ ತಟ್ಟಿ ! ಪೇಳ್
ಏನೆಂಬೆನದ್ಭುತಂ? ಕೈಕುಟ್ಟಿದುದೆ ತಡಂ
ಪುಟ್ಟಿದತ್ತೊಂದು ಮಂಜಿನ ಮೋಡಮೆತ್ತಲುಂ
ದಟ್ಟೈಸಿ. ತೇಲುಗಣ್ಣಾದುದಾ ಕೋಮಲೆಗೆ.
ಕಾಣದೇನೊಂದುಮಂ ತಬ್ಬಿದಳು ಬೆಬ್ಬಳಿಸಿ
ಪರ್ಣಶಾಲೆಯ ಲತಾಭಗಿನಿಯಂ ! ಹೇ ಹತಭಾಗ್ಯೆ,
ಲಕ್ಷ್ಮಣ ಮಹಾಬಾಹು ರಕ್ಷೆಯಂ ನೂಂಕಿದಾ
ನಿನಗೆ ಪೇಳೆಂತು ರಕ್ಷಣೆ ಬಳ್ಳಿತೋಳಯ್ಯೊ     ೫೧೦
ಕೈಲಾಸಮಂ ನೆಗಹಿ ತೂಗಿತೊನೆದಾ ಬಾಹು
ರಾಹುವೋಲೆಳೆಯೆ ? ಪರಪರಪರನೆ ಪರಿದುವಾ
ಮಾಡನಪ್ಪಿರ್ದ ಬಳ್ಳಿಯ ಕೈಗಳೊಲ್ಮೆಯಂ
ನಲ್ಮೆಯಪ್ಪುಗೆಯಿಂದೆ ಬಿರುಬಿಂದಗಲ್ಚುವೋಲ್.
ಬಳ್ಳಿಯಪ್ಪಿದ ಬಳ್ಳಿಯಂ ಮತ್ತ ವಾರಣಂ
ಸೊಂಡಿಲಿಂದೆಳೆವವೋಲ್ ಅಲರ್ವಳ್ಳಿಯಂ ವೆರಸಿ
ಮತ್ತಕಾಶಿನಿಯನೆಳೆದುನ್ಮತ್ತ ರಾವಣಂ
ನೆಗೆದನಂಬರಕೆ. ಬಿಳ್ದುದು ಬಳ್ಳಿಯಂಗಳಕೆ,
ಮುಳುವೇಲಿಯುಂ ಬರಂ ನೀಳ್ದು !
“ಓ ಲಕ್ಷ್ಮಣಾ !
ಲಕ್ಷ್ಮಣಾ ! ಲಕ್ಷ್ಮಣಾ ! ಲಕ್ಷ್ಮಣಾ ಓ !” ಎಂದೆಂದು          ೫೨೦
ಬಗ್ಗನಿಂ ಪಿಡಿಗೊಂಡೆರಳೆವೆಣ್ಣೊರಲ್‌ವಂತೆವೋಲ್
ಹೊಮ್ಮಿತುಕ್ಕಿತು ಹರಿದು ಹಬ್ಬಿತಾಕ್ರಂದನಂ
ದೇವಿಯ ಕೊರಲ್‌ಬುಗ್ಗೆಯಿಂ ನೆತ್ತರೋಲಂತೆ
ಚಿಮ್ಮಿ. ಲೆಕ್ಕಿಪನೆ ಲಂಕೇಶ್ವರಂ ? ಝಗಝಗಿಪ
ಕೆಂಡದುರಿಚೆಲ್ವಿಗೆ ಮರುಳುಗೊಳುತ್ತದನೋತು
ಸೆರಗಿನೊಳಿರುಂಕಿ ಕದ್ದೋಡುವಣುಗಿಯ ತೆರದಿ
ಹಾರಿದನು ಬಾನ್ದೇರನೇರಿ. ಬಿಸಿಲೆಸೆದತ್ತು
ಪಂಚವಟಿ ಧಾತ್ರಿಯಂ ಪರ್ಣಕುಟಿ ಶೂನ್ಯಮಂ
ಗೋದಾವರಿಯ ತೀರ್ಥವೈಶಾಲ್ಯಮಂ ಮರಳಿ
ಬೆಳಗಿ.
ಕೇಳ್ದಳ್ ವಿಪಿನವನಿತೆ ; ಖಳ ಕಾರ್ಯಮಂ      ೫೩೦
ಕಂಡು ಹಮ್ಮೈಸಿದಳ್ ; ಹೆದರಿ ದಿಗ್ಭ್ರಮೆಯಾಗಿ
ಕೂಗಿದಳದ್ರಿದೇವನಂ. ಪರ್ವತೇಂದ್ರನುಂ
ತಲ್ಲಣಿಸಿ ಬೊಬ್ಬೆಯಿಟ್ಟಬ್ಬರಿಸಿದನ್ ; ಕೂಗಿ
ಕರೆದನಾಕಾಶಮನಖಿಲಲೋಕಸಾಕ್ಷಿಯಂ.
ಕೂಗಿದುವು ಕಾಡು ಮಲೆ ಬಾನೆಲ್ಲಮೊಕ್ಕೊರಲ್
ಓ ಲಕ್ಷ್ಮಣಾ ಲಕ್ಷ್ಮಣಾ ಲಕ್ಷ್ಮಣಾ ಓಒ
ಓ ಎಂದು ! ಕೇಳಿದನು ದೂರದ ಮರದ ಮಂಚದೊಳ್
ಹಗಲುನಿದ್ದೆಯೊಳಿದ್ದುಮೆದ್ದಾ ಜಟಾಯು ಆ
ಪ್ರಕೃತಿ ರೋದನ ತೂರ್ಯಮಂ. ಕುಳಿತ ಪೆರ್ಮರಂ
ನಡುಗೆ. ಪಕ್ಷಧ್ವನಿಗೆ ಗಿರಿಗಹ್ವರಂ ಗುಡುಗೆ,
ಚೀರ್ದನಿಗೆ ಮಾರ್ದನಿಸೆ ಪುಷ್ಪಕಾಭ್ಯಂತರಂ   ೫೪೦
ಹಾರಿದನು ಭೀಮಚಂಚೂಪುಟಂ ಭಯಂಕರಂ :
ಖಗರಥವನರೆಯಟ್ಟಿದನ್ ಭೀಷಣಾಭೀಳ ಖರ
ನಖ ಕಲಿ ಜಟಾಯು ! ಬಿರುಗಾಳಿಯುರುಬೇಗದಿಂ
ಬೆಂಬತ್ತಿ, ಮುಂಚುವ ವಿಮಾನಮಂ ಮುಸಲಸಮ
ಪದಗದಾಘಾತದಿಂದಪ್ಪಳಿಸಿದನ್, ರಪ್ಪ
ರಪ್ಪನೆ, ಒರ್ಮೆ ಇರ್ಮೆ : ಒದೆ ಬೀಳಲೊರಲಿದುದೊ
ಪುಷ್ಪಕಮೆನಲ್ಕೆ ಘೈಲೆಂದುದೊರ್ಮೊದಲುಲಿದ
ಲಘುಘಂಟಿಕಾ ಶ್ರೇಣಿ. ಎರಗಿದುರುಬೆಗೆ ತೇರ್
ತತ್ತರಿಸಿ ಉಲ್ಲೋಲಿಸಿತು ; ಇಳೆಗುರುಳಿತೆನಲ್           ೫೫೦
ಕೆಳಕೆಳಕೆಳಗೆ ಬೀಳುತೊಯ್ಯನೆಯೆ ನಿತ್ತರಿಸಿ,
ಮತ್ತೆ ರೊಯ್ಯನೆ ರಯದಿನೇರ್ದುದು ವಿಯತ್ತಳಕೆ
ಸರಳ ಸೂಟಿಯಲಿ. ಹೊರಸಿಗೆ ಡೇಗೆಯೆರಗಲ್ಕೆ
ಪರಿತಿಪ್ಪುಳುದುರ್ವವೋಲುದುರಿತು ವಿಮಾನದಿಂ
ಕಲೆಯ ಕಾಳಸೆ ಕೆಟ್ಟುಕೆದರಿ !
ಜನಕಾತ್ಮಜೆಗೆ
ಹರಣ ಮರಳಿತು ಹೃದಯವರಳಿ, ದೈತ್ಯೇಂದ್ರಂಗೆ
ಬೆಕ್ಕಸಂ ಮೂಡಿ ಕೆರಳಿದನೊಡನೆ ಕಟಿಯಸಿಗೆ
ಕೈ ತುಡುಕಿ ಬೀಸಿದನ್. ತಪ್ಪಿ ಚಿಮ್ಮಿ ಜಟಾಯು
ಸಿಡಿದನು ಕೆಲಕ್ಕೆ. ಮತ್ತೆರಗಿದನು ನಖಗಳಿಂ
ರಕ್ಕಸನ ಮಂಡೆಯಂ ಜರ್ಕ್ಕಿ. ರತ್ನವ್ರಾತ       ೫೬೦
ರಾಜಿತ ಪುಲಸ್ತ್ಯಜ ಕೀರೀಟಸ್ಥ ಮಣಿಗಣಂ
ಸಿಡಿದುರುಳ್ದುವು ಕಿಡಿಗಳಂ ಕಾರಿ. ದಾನವನ
ದೀರ್ಘ ಸುಂದರ ನೀಲ ದೇಹದಿಂದೊಸರ್ದತ್ತು
ಕೆನ್ನೆತ್ತರೊಳ್ಕು. ಸಳವಂ ಕುಟುರವಕ್ಕಿಯಂ
ಬಿಡದಿರದೆ ಬೆಂಬತ್ತುತೆಳ್ಪಟ್ಟುತೊದೆವಂತೆ,
ಮತ್ತೆ ಮತ್ತಪ್ಪಳಿಸಿದನು ಆ ನಭೋನೌಕೆ,
ಪಕ್ಷ ಸಂಜಾತ ಝಂಝಾವಾತ ಗರ್ತಕ್ಕೆ
ಸಿಲ್ಕಿ, ತಿರ್ರನೆ ಪುರ್ಚ್ಚುತಿರುಗಂ ತಿರುಗುವಂತೆ.
ತಲೆಗೆದರೆ, ತೊಡವುಗಳುದುರೆ, ಪರಿಯಲುಟ್ಟುಡುಗೆ
“ಲಘುವೆಣಿಸಿ ಗುರುವಾಯ್ತಲಾ ! ಹಾಳಿದೆಲ್ಲಿಯ ಹದ್ದು ? ೫೭೦
ಕೊಲ್ವೆನೊರ್ಕಡಿತದಿಂ”ದೆನುತೆ, ವಾಸಿಯನೊದರಿ,
ರಾಮನ ಸುವಾಸಿನಿಯನೊರ್ಕಯ್ಯೊಳವುಂಚಿಟ್ಟು,
ಘೋರ ವಿಷ ವಜ್ರಾಸಿಯಂ ಕೊಂಡು ಖೇಚರಂ
ಪಾಯ್ದನ್ ವಿಹಂಗೇಶನಂ. ಬೆದರಿದಳ್ ಸೀತೆ ;
ಚೀತ್ಕರಿಸಿದಳ್ ಭೀತೆ ! “ರಕ್ಷೆಯಾದಳೆ ದೇವಿ
ರಾಕ್ಷಸಗೆ ? ಹಾ” ಎನುತೆ ಸಂಪಾತಿಯವರಜಂ
ಸಡಿಲಿಸಿರೆ ಸಿಡಿಲಂದದುಗುರು ಕೊಕ್ಕಿನ ಮಿಳ್ತುಗಯ್
ವೊಯ್ಲನಯ್ಯಯ್ಯೊ, ಕಾಣ್, ಆ ಕತ್ತರಿಸಿದುದು ಕತ್ತಿ
ಎರಂಕೆಯಂ ! ಕಣ್ಮುಚ್ಚಿ ಗೋಳಿಡುತ್ತಿರ್ದಳಾ
ಜಾನಕಿಯುಮಾಲಿಸಿದಳಾ ಬಿದ್ದ ಸದ್ದನೆನೆ       ೫೮೦
ಮರಂ ಮುರಿದು, ಪಳು ನಡುನಡುಗಿ, ಕಾಡುಗೋಳಾಗಿ
ಬಿದ್ದನು ಜಟಾಯು, ರಾವಣನಾಯು ಬೀಳ್ವಂತೆ !
ಇತ್ತಲೋಡಿತು ಪುಷ್ಪಕಂ. ಅತ್ತಲಾ ಸೌಮಿತ್ರಿ
ಓಡಿದನರಸಿ ಜನಕಜಾನಾಥನಂ ಕೂಗಿ
ಕರೆದು. ಮಲೆಯಿಂದಲೆದು ಮಲೆಗೆ. ಪೊಳ್ತೇರಲೊಡಮ್
ಅತ್ತಿಗೆಯ ಕ್ಷೇಮಕ್ಕೆ ಪಿಂತಿರುಗಲೆಳಸಿಯುಂ
ಅಣ್ಣನಂ ಕಾಣದೆಯೆ ಮರಳಲಂಜುತೆ, ನಿಂತು
ನಿಂತು ಓ ಲಕ್ಷ್ಮಣಾ ಕೊರಲೊರಲ್ ಕೇಳ್ದೆಡೆಯನ್
ಊಹೆಯಿಂ ಗೊತ್ತುಹಚ್ಚುತೆ, ಮತ್ತೆ ಮುಂದೋಡಿ
ಪರಿದು, ಶಂಕಿಸಿ ನಿಂದು ಕರೆದು, ಮನದೊಳಗೇನೊ     ೫೯೦
ಮಹದ್‌ಭೀತಿ ಚರಿಸೆ, ಕಂಪಿತ ಗಾತ್ರನೂರ್ಮಿಳೆಯ
ಕಾನ್ತನುಕ್ಕುವ ದುಕ್ಕದಿಂದೆ ‘ಓ ಲಕ್ಷ್ಮಣಾ !’
ಎಂಬ ಪೆಸರಿಂ ತಾನೆ ಶಪಿಸಿಕೊಂಡನು, ತನ್ನ
ಹಣೆಯ ಬರಹವ ಬಯ್ವ ತೆರದಿಂದೆ ! ಅನಿತರೊಳ್
ತನ್ನ ದನಿಯೆಂದೆ ಸೌಮಿತ್ರಿಯಂ ಕರೆದೊರಲಿ
ಮಾರೀಚನಳಿಯೆ, ಗತಿಯೇನಿದಂ ಕೇಳ್ದೊಡಾ
ಲಲನೆ ಲಕ್ಷ್ಮಣರೆಂದು ರಾಕ್ಷಸ ಮಾಯೆಗಳುಕಿ,
ಕೇಡಿಂಗೆ ಕಳವಳಿಸಿ, ಕೇಡಡಸುವಾ ಮೊದಲೆ
ಪರ್ಣಶಾಲೆಗೆ ಹೋಹೆನೆಂದಾಸರಂ ಅಣಂ
ಲೆಕ್ಕಿಸದೆ ಓಡೋಡಿ ಬರುತಿರ್ದ ರಾಘವಂ      ೬೦೦
ತಮ್ಮನ ಕರೆವ ದನಿಯನಾಲಿಸಿದನು : “ಅಕ್ಕಟಾ
ಕೇಡಾಯಿತಯ್ಯಯ್ಯೊ ! ಕೋಳುಹೋದಳೆ ಲಲನೆ
ಮೋಸವೋದನೆ ಮಹಾಮತಿ ಊರ್ಮಿಳೇಶನುಂ ?”
ಎನುತೈದುತಿರೆ, ಮರಳಿ ಕೇಳ್ದುದೇನೆಂಬೆನಾ
ದುಶ್ಶಕುನದೋಲಕ್ಷ್ಮಣಂ ! ಮತ್ತಿದೇನಿದು ಮಾಯೆ ?
ನೋಳ್ಪೆನೆಂದೋಡಿದನ್, ಓ ಲಕ್ಷ್ಮಣಾ ಎಂದು
ಕೂಗಿದನು ತಮ್ಮನಂ. ಓಕೊಂಡನಾತನುಂ
ಪಳುಗಾಡಾಳೋಡೋಡಿ ಬರುತೆ. “ಓ ಲಕ್ಷ್ಮಣಾ.
ಕೇಡಾಯ್ತಲಾ ! ದೇವಿಯೊರ್ವಳಂ ಬಿಟ್ಟೇಕೆ
ಬಂದೆ ? ಕೊರಳಂ ಕೊಯ್ದೆ ! ಹಾ ಕೊಂದೆ ನೀ ಕೊಂದೆ !            ೬೧೦
ಪಿಂತಿರುಗು ; ನಡೆ ಬೇಗಮೆಲೆವನೆಗೆ ! ಶಿವ ಶಿವಾ
ಸೂರೆವೋದೆವೊ ನಾಂ ನಿಶಾಚರರ ಕೈತವಕೆ !”
ಶೀಘ್ರ ಸಂಕ್ಷೇಪದಿಂ ತಂತಮ್ಮ ನಡೆದುದಂ
ಮಾತಾಡುತಿರ್ವರುಂ ಧಾವಿಸಿದರತಿಜವದಿ
ಪಂಚವಟಿ ಪರ್ಣಕುಟಿಗೆ :
“ಕೂಗಿದುದು ನೀನಲ್ತೆ ?”
“ಸತ್ತನಾ ರಾಕ್ಷಸಂ !”
“ಅದು ನಿಶಾಚರ ಮಾಯೆ
ಎಂದು ನಾನೆಂತೆಂತು ಪೇಳ್ದೊಡಂ…..”
“ಅಂತಾಡಿ
ನಿನ್ನನೆಳ್ಬಿದಳೆ ?”
“ಅಲ್ಲದಾನಿಂತು ಬಂದಪೆನೆ ?”
“ಎಂತಾದೊಡಂ ತಪ್ಪಿ ನಡೆದೆ. ಪೆಣ್ಣೆಂದುದಕೆ
ಮುನಿದೆ ; ನನ್ನಾಣೆಯಂ ಮೀರ್ದೆ.”
“ಅಹುದಣ್ಣಯ್ಯ.    ೬೨೦
ತಪ್ಪಾಯ್ತು. ಬಗೆಯಂ ಕದಡಿತತ್ತಿಗೆಯ ನುಡಿಯ
ಕೂರ್ಪು.”
“ಕೌಸಲ್ಯೆಯಾಶೀರ್ವಾದಮಿರ್ಕೆಮಗೆ !
ಸತಿಗೆ ಕೇಡಾಗದಿರ್ಕೆ !”
“ಅಣ್ಣಾ, ಜಟಾಯುವಿರೆ
ರಕ್ಷೆಗೆಮಗೇವುದಯ್ ಭೀತಿ ?”
“ಆದೊಡಮೇಕೊ,
ಸೌಮಿತ್ರಿ, ನಾನೆಂದುಮನುಭವಿಸದೊಂದಳ್ಕು
ಕರುಳ ಕಿಮುಳ್ಚುತಿದೆ !”
“ನನಗುಮಂತೆಯೆ ಭಯಂ !”
“ಸದ್ದದೇನದು, ತಮ್ಮ ?”
“ಭೋರ್ಗರೆಯುತಿದೆ ದೂರ
ಬಿರುಗಾಳಿ !”
“ಚೀತ್ಕಾರಮಾಯ್ತಲ್ತೆ ?”
“ಅಲ್ತಲ್ತು,
ಕೊಂಬೆಗುಜ್ಜಿತು ಕೊಂಬೆ !”
“ಆರೊ ಕರೆದಂತಾಯ್ತು !”
“ಮಂಗಟ್ಟೆವಕ್ಕಿ ಕೂಗಿತು ; ಬೇರೆಯೇನಲ್ಲಯ್ !”          ೬೩೦
“ಆಗಳಿರದಾತಪಂ ಈಗಳೆಂತಳುರುತಿದೆ !
ಏಂ ಸೇದೆ !”
“ಪಾಳ್ದಿನಂ !”
“ಊರ್ಗೆ ಮರಳುವ ದಿನಮೆ
ಏಂ ಕಷ್ಟಮೊದಗಿತಯ್ !”….
“ಬಳಿಸಾರ್ದುದಾಶ್ರಮಂ !”
“ಪೆರ್ಚುತಿಹುದೆನ್ನೆರ್ದೆಯ ಕಳವಳಂ !”….
“ಅದೊ ಅಲ್ಲಿ !
ಶಾಂತಿಯಿಂದಿಹುದೆಂತು ಪರ್ಣಕುಟಿ ! ಸಾಲ್ಗುಮಾ
ದುಃಸ್ವಪ್ನಮ್ ; ಇನ್ನೆಂದುಮುಲ್ಲಂಘಿಸೆನ್ ನಿನ್ನ
ಕಟ್ಟಾಣೆಯಂ ! ಇದುವೆ ಮೊದಲ್ ; ಇದುವೆ ಕೊನೆ !”
“ದೇವಿ
ಕಾಣಿಸಳೆ !”
“ಒಳಗಿರಲ್ ಪೇಳ್ದು ಬಂದೆನ್.”
“ಅದೇಕೆ ? …..”
“ಏನು ?”
“ನೋಡಲ್ಲಿ ಆ ಬಳ್ಳಿ !”
ರಾಘವನಿಂತು
ಕಣ್‌ಪೆಳರಿ ಪೇಳೆ, ಲಕ್ಷ್ಮಣನತ್ತ ನೋಡಲಾ     ೬೪೦
ಕಾಣಿಸಿತು ಪರಿಗೊಂಡ ಪರ್ಣಶಾಲೆಯ ಲತಾ
ಭಗಿನಿ ! ಪರಿದೋಡಿದರ್, ಕಂಡರುಣುಗೋಲನದೊ
ತೆರೆದುದಂ ! ದಾಂಟುತುಬ್ಬೇಗದಿಂ ತಡಬೆಯಂ,
ಕಂಡರಂಗಳದುದ್ದಮಾ ಬೇಲಿಯನ್ನೆಗಂ
ದಿಂಡುರುಳಿ, ಪರಿದೆಲೆ ತರಂಟಾಗಿ, ನಿಡುಚಾಚಿ
ಕೆಡೆದಿರ್ದ ಬಳ್ಳಿತೋಳಿನ ಬೆರ್ಚುಸಾಕ್ಷಿಯಂ !
ನೀರಡಿಕೆ ಪಸಿವು ಬಳಲಿಕೆ ಚಿಂತೆಯಿಂ ಮೊದಲೆ
ತತ್ತರಿಸುತಿರ್ದಂತೆ ತಲ್ಲಣಿಸಲೆರ್ದೆ ಹಾರಿ
ಹೆಪ್ಪುಗಟ್ಟಿತು ನೆತ್ತರಾ ಕ್ಷಾತ್ರವೀರಂಗೆ :
ಜಗುಳ್ದುದಯ್ ರಘುರಾಮ ಧೈರ್ಯಮುಂ ! ಹಮ್ಮೈಸಿ   ೬೫೦
ಕರೆಯುತೋಡಿದನೊಳಗೆ ‘ಹಾ ಸೀತೆ ! ಹಾ ಸೀತೆ !
ಹಾ ಸೀತೆ !’ ಎಂದೆಂದು ಸುಯ್ದು. ಮಾರುತ್ತರಂ
ರಣರಣಕದಾ ಶೂನ್ಯದಿಂದೆ ಮಾರ್ದನಿಯಾಗಿ
ಬಂದುದಲ್ಲದೆ ದೇವಿ ಓಕೊಂಡಳಿಲ್ಲ. ಮೂಲೆ
ಮೂಲೆಯನರಸಿ ನೋಡಿದನು. ಬೆಳ್ಪರೋಲಂತೆ
ಸಂಧಿ ಸಂಧಿಯೊಳಿಣಿಕಿ, ಚಾಪೆ ಮಣೆಗಳನೆತ್ತಿ,
ನಿಂದನೇನೊಂದುಮಂ ಕಾಣದರಿಯದೆ, ಪುರ್ಚು
ಮೂರ್ಛೆಗೆ ಸಂದನಂತೆ. ಬೆದರಿದನು ಲಕ್ಷ್ಮಣಂ
ತನ್ನಣ್ಣನಾ ರುದ್ರ ದುಃಸ್ಥಿತಿಗೆ : “ತಾಳ್ಮೆ ತಾಳ್ಮೆ,
ಹೇ ಆರ್ಯ ! ದೇವಿ ಗೋದಾವರಿಗೆ ….” ಎನ್ನುತಿರೆ       ೬೬೦
“ಗೋದಾವರಿಗೆ ದಿಟಂ ! ಗೋದಾವರಿಗೆ ದಿಟಂ !”
ಎಂದು ಕುಣಿಕುಣಿದಟ್ಟಹಾಸಮಂ ಗೆಯ್ಯುತ್ತೆ
ಧಾವಿಸಿದನನುಜನೆಂದುದನಿನಿತು ಗಮನಿಸದೆ,
ತಗ್ಗುಬ್ಬುಗಳನೆಡವಿ, ಮರಮಂ ಪಾಯ್ದು, ಬಳ್ಳಿ
ತೊಡರ್ದುದಂ ಲೆಕ್ಕಿಸದೆ, ಮುಳ್ಳು ನಾಂಟಿರ್ದೊಡಂ
ಕಿಳ್ತೆಸೆಯದಾನಂದದುನ್ಮಾದದಿಂದೆ ಆ
ರಮಣೀಯ ಗೋದಾವರಿಯ ಪುಳಿನಮಯ ಶುಭ್ರ
ತಟಿಗೆ. “ಓ ಸೀತೆ ! ಓ ಸೀತೆ ! ಓ ಸೀತೆ ! ಓ
ಓ ಸೀತೆ !” ರಾಮನ ಕೊರಲ ಕೂಗನಾಲಿಸುತೆ
ನೆರವೀಯಲೆಂದು ವಿಶ್ವವೆ ಜನಕಜಾತೆಯಂ   ೬೭೦
ಪೆಸರ್ವಿಡಿದು ಕರೆದುದೆನೆ, ಮರುದನಿಗಳೆದ್ದುವಯ್
ಮರದಿಂದೆ ಗಿಡದಿಂದೆ ಲತೆಯಿಂದೆ ನದಿಯಿಂದೆ
ಪರ್ವತಾರಣ್ಯಂಗಳಿಂದೆ. ದಶದಶ ಕೋಟಿ
ಕಂಠಂಗಳಿಂದೆ ದೆಸೆದೆಸೆ ತಲ್ಲಣಿಸುವಂತೆ
ಕೂಗಿತನುಕಂಪದಿಂ ಸೃಷ್ಟಿ, ದಶಕಂಠಂಗೆ
ಮೃತ್ಯು ಡಿಂಡಿಮ ಭೇರಿಯಂ ಪೊಯ್ವವೋಲಿಂತು :
“ಓ ಸೀತೆ ! ಓ ಸೀತೆ ! ಓ ಸೀತೆ ! ಓ ಸೀತೆ ! ಓ !”
ಕಿವಿಗೊಟ್ಟದಂ, ಸತಿಯ ಮಾರುತ್ತರಂ ಗೆತ್ತು,
ತಾಳಿದನು ಮುದಮಂ ! ಅರಣ್ಯದತ್ತಂ ಪರಿದು
ಹುಡುಕತೊಡಗಿದನಿಣುಕುತಲ್ಲಿಲ್ಲಿ. ಕಾಣದಿರೆ    ೬೮೦
ತಮ್ಮಗೊರೆದನು ಸನ್ನೆಗಣ್ಮಾಡಿ : “ಕಂಡೆಯಾ
ಸೌಮಿತ್ರಿ, ಮೈಥಿಲಿಯ ಮಾಯೆಯಂ ? ಪುಸಿಯಲ್ತು
ದಿಟಮಾಕೆ ಭೂಮಿಜಾತೆಯೆ ವಲಂ ! ತಾಯ್ಮರೆಗೆ
ಮಗು ನಿಂತು ಕಣ್ಣುಮುಚ್ಚಾಲೆಯಾಡುವವೋಲೆ
ನಮ್ಮೊಡನಣಕವಾಡುತಿಹಳಲ್ತೆ ? ಶೈಲಗತೆ
ತಾನೊರ್ಮೆ, ಕಾಂತಾರಗತೆಯೊರ್ಮೆ, ತರುಗತೆಯೊರ್ಮೆ ;
ಒರ್ಮೆ ಖಗಗತೆ, ಒರ್ಮೆ ಮೃಗಗತೆ, ತರಂಗಗತೆ
ಇನ್ನೊರ್ಮೆ ! ಒರ್ಮೆ ಖಂಜನ ಪಕ್ಷಿಕೂಜಿತಳ್ ;
ಒರ್ಮೆ ಕೋಕಿಲ ಕಂಠ ಭಾಷಿತಳ್. ಅದೊ ಅಲ್ಲಿ
ಸುಸಮೀರ ಲೋಲ ಕುಸುಮಿತ ಲತಾ ರಾಜಿತಳ್ ;      ೬೯೦
ಇದೊ ಇಲ್ಲಿ …. ಕಣ್ಬನಿಗರೆವೆಯೇಕೆ, ಲಕ್ಷ್ಮಣಾ ?”
ರಘುವರನ ಲಘುವರ್ತನೋನ್ಮಾದಮಂ ನೋಡಿ
ಗದ್ಗದಿಸುತೂರ್ಮಿಳೇಶಂ : “ಇದೇನಣ್ಣಯ್ಯ,
ಮತಿವಿಕಲರಂತಾಡುತಿಹೆ ? ವಿಷಮ ಸಮಯದೊಳ್
ಸಮತೆಗೆಟ್ಟುದೆ ನಿನ್ನ ಮೇರುಸಮ ಸುಸ್ಥಿರತೆ ?
ದೇವಿ ತಾನೆಲ್ಲಿರ್ದಳೇನಾದಳೆಂದರಿವುದಂ
ಮಾಣ್ದಿಂತು ಕಾಲಹರಣಂ ಗೆಯ್ವುದನುಚಿತಂ
ಭಾವಜಭ್ರಾಂತಿಗೆ ಮಾರುವೋಗಿ.” ನೆನೆವವೋಲ್
ಪೋದ ಭವಮಂ, ನಿಂತು ಜಾನಿಸಿದನಾ ರಾಮನೊರ್
ಕರುವಿಟ್ಟ ವಿಗ್ರಹಂಬೋಲ್. ಮೌನದಿಂದಿರ್ದು,            ೭೦೦
ಇರ್ದಂತೆ, ಚೀರ್ದೊರಲಿದನ್ ತಾರ ನಿಸ್ವನದಿ :
“ಅಯ್ಯೊ ಓ ಲಕ್ಷ್ಮಣಾ ! ಏನು ಮಾಡಿದೆಯಯ್ಯ ?
ನನ್ನ ಸೀತೆಯನಯ್ಯೊ ಏನು ಮಾಡಿದೆಯಯ್ಯ ?
ಎಲ್ಲಿ ಬೈತಿಟ್ಟೆಯಯ್ ? ಹೇಳಯ್ಯ, ದಮ್ಮಯ್ಯ,
ಓ ನನ್ನ ಲಕ್ಷ್ಮಣಾ ! ನಿನಗೆ ಕೈಯೆಡೆ ಮಾಡಿ,
ನಿನ್ನ ರಕ್ಷೆಯೊಳಿಟ್ಟು ಹೋದೆನೆಲ್ಲಿಹಳೊರೆಯೊ
ನನ್ನ ಮನದನ್ನೆ ? ಕೊಂದರೊ ಕೋಮಲಾಂಗಿಯಂ ?
ತಿಂದರೊ ನಿಶಾಚರರ್ ? ಹಾ ಸೀತೆ ! ಹಾ ಸೀತೆ !
ಹೋದೆಯೆಲ್ಲಿಗೆ ತೊರೆಯುತೆನ್ನಂ ?” ಎನುತ್ತೆನುತೆ
ಬಿಳ್ದನವನಿಗೆ ಶಿಶುವಿನೋಲಳುತೆ. ಸಂತಪಿಸಿ  ೭೧೦
ಪಿಡಿದೆತ್ತಿ ಸೋದರಂ ಕೊಂಡೊಯ್ದನೆಂತಾನುಮಾ
ಕುಟೀರಕೆ. ಶಿಶಿರೋಪಚಾರ ಶುಶ್ರೂಷೆಯಿಂ
ಚೇತರಿಸಿದಾತಂಗೆ : “ಶಾಂತಿ, ಹೇ ಧೀರಮತಿ !
ಕಾತರಿಸದಿರೊ, ದಾಶರಥಿ ! ವಿಹಂಗೇಂದ್ರನಿಂ
ದೇವಿ ಎಲ್ಲಿಹಳೆತ್ತಲೈದಿದಳೆನಿಪ್ಪುದಂ
ತಿಳಿವಮಲ್ಲಿಂ ಬಳಿಕಮೇಂ ಕಜ್ಜಮೆಂಬುದಂ
ನಿಚ್ಚಯಿಸುವಂ. ಬರಿದೆ ಪಲವಂ ಪಲುಂಬಿದೊಡೆ.
ಫಲವೇನ್ ? “ತಮ್ಮನೊಳ್ನುಡಿಗೇಳ್ದು ಪೊಸ ನೆಚ್ಚು
ಮಲರಿದತ್ತಣ್ಣಂಗೆ. ತೆಕ್ಕನೆಯ ನೆಗೆದೆಳ್ದು
ಧಾವಿಸಿದನಂಗಳಕೆ. ತಲೆಗೆದರಿ, ಮೊಗಮೆತ್ತಿ, ೭೨೦
ಪಂಚವಟ ಕುಟಜರಾಜಿಯ ನೆತ್ತಿಯಂ ನೋಡಿ
ಕೊರಳೆತ್ತಿ ಕೂಗಿದನ್, ದಿಗ್ದಗಂತೋದ್ಭವಂ
ಮರುದನಿ ಮೊಳಗುವಂತೆ : “ಜಟಾಯೂ ! ಜಟಾಯೂ !
ಓ ಜಟಾಯೂ !” ಕರೆದೊನುಸಿರು ಮೇಲುಸಿರಾಗಿ
ಖಗವೀರನಂ. ಕಂಡನಿಲ್ಲೋಕೊಂಡನಿಲ್ಲವಂ.
ಕೆಂಡವಾದನು ದಂಡಧರನಂತೆ ಕೋದಂಡ
ಪಾಣಿ : “ಲಕ್ಷ್ಮಣ, ತಿಳಿಯಿತೀಗಳಾ ಖಳಖಗಮೆ
ಕಾರಣಂ ಸತಿಯಿಲ್ಲಮೆಗೆ.” “ಅಯ್ಯೊ, ಅಣ್ಣಯ್ಯ,
ಏನ್ಮಾತನಾಡುತಿಹೆ ?” “ಸಾಕು ಬಿಡು, ಸೌಮಿತ್ರಿ,
ಜಗಮನಿತುಮಾ ಕೈಕೆ ! ಕೈತವಮದರ ಹೃದಯಂ !     ೭೩೦
ಪಸುಮೊಗದ ಬಗ್ಗನಾ ಖೂಳನಾತನ ಕುಲಕೆ
ತಕ್ಕುದನೆ ನೆಗಳ್ದುದಾ ರಣಹದ್ದು ! ಅಯ್ಯೊ ಹಾ
ದುರುಳ ಪರ್ದ್ದಿಗೆ ಮರುಳುವೋದಳೆ ದಿಲೀಪಕುಲ
ಸಂಭವನ ಸತಿ ? ಕೊಲ್ವೆನಾತನಂ ; ನೀಚನಂ,
ಮಾರೀಚಗಿಂ ಮಿಗಿಲ್ ಪಾಪಿಯಂ, ಜವನೆಡೆಗೆ
ಜವದಿಂದೆ ಕಳುಹದಿರೆ ಸುಡಲಿ ನನ್ನೀ ಬಾಳ್ಕೆ.
ಓ ಬಾರ ಲಕ್ಷ್ಮಣಾ ; ಈ ಮಹದ್ವಿಪಿನಮಂ
ಸೋದಿಸುವಮೆಲ್ಲೆಲ್ಲಿಯುಂ. ಕಂಡೊಡನೆ ಪರ್ದ್ದು
ಗಂಟಲಂ ಮುರಿದು, ಕಾಲಂ ತಿರುಪಿ ತಿಪ್ಪುಳಂ
ಪರಿದು, ಬರಿಯಂ ಬಗಿದು, ಮೂಳೆಯಂ ನುರಿಗೆಯ್ದು,    ೭೪೦
ಕ್ರಿಮಿಕೀಟಕಂಗಳಿಗೆ ಬಿರ್ದ್ದಿಕ್ಕುವೆನ್, ಬಸಿದು
ಕೆನ್ನತ್ತರಂ !” ಎಂದ ಕ್ರೋಧಾಂಧ ಸೋದರನ
ಭೀಷಣ ಮನಃಸ್ಥಿತಿಯನಳುಕಿ, ಪಡಿವೇಳದಾ
ಕಿರಿಯನಣ್ಣನ ಹಿಂದೆ ಪೊರಮಟ್ಟನೆಂತಾದೊಡಂ
ಕೋಸಲದ ರಾಣಿಯನರಸಲೆಂದು,
ಇಳಿವಗಲ್ ;
ಸುಡುವಿಸಿಲ್ ; ಆಳ್ಗೇಡಿ ಕಾಡೊಳಲೆದಿರ್ವರುಂ
ಕರೆಕರೆದು ಹುಡುಕಿದರು ಸೀತೆಯಂ, ಮೇಣಾ
ಜಟಾಯುವಂ. ಪರಿಚಿತಸ್ಥಾನಂಗಳಂ, ಮತ್ತೆ
ವಿಶ್ರುತಗಳಂ, ಶ್ರುತಗಳಂ, ಮತ್ತಮನ್ನೆಗಂ
ಪಿಂತೆ ಕಂಡರಿಯದೆಡೆಗಳನಂತೆ ದೂರಮಂ   ೭೫೦
ನಿಕಟಮಂ, ಮೇಣಂತೆ ಪೂವೆಡೆಗಳಂ ಮತ್ತೆ
ಪಣ್ಣೆಡೆಗಳಂ ಪುಡುಕಿದರ್ ಕುದಿವೆದೆಯೊಳಲೆದು
ತೊಳಲಿ. ರಾಮನ ಶೋಕವಳುರಿತೊ ಅರಣ್ಯಮಂ ?
ಮತ್ತೆ ರಾಮನ ಕೋಪವಳುರಿತೊ ಜಟಾಯುವಂ ?
ಎಂಬವೋಲಿಳಿನೇಸರಿಳಿಯೆ ಬೈಗಿನ ಕೆಂಪು
ಪರ್ವಿತೆರಚಿತು ಚೆಲ್ಲಿತುರಿನೀರಿನೋಕುಳಿಯ !
ಬರುತಲಿರೆಯಿರೆ ಕಂಡರಾಯಿರ್ವರುಂ : ಅನತಿ
ದೂರದ ಗಿರಿನಿತಂಬ ಸದೃಶದೊಂದೆಳ್ತರದಿ,
ವೈಡೂರ್ಯ ಸಮ ಶಾದ್ವಲದ ಮೇಲೆ, ಪರಪಿದರೊ
ವಜ್ರಗಳನೆನೆ ತಪನ ಕೋಟೀರ ಕಾಂತಿಯೊಳ್
ಕಿಡಿಕಿಡಿ ಪೊಳೆದುದೇನೊ ಕೌತುಕಂ ! ಓಡಿದರ್ ;
ನೋಡಿದರ್ : ಕಂಡರು ಜಟಾಯು ನಖಘಾತಕ್ಕೆ
ಕೆದರಿ ಚೆಲ್ಲಿದ ಮಣಿಯಲಂಕೃತಿಯನಾ ರಾವಣ
ವಿಮಾನದಾ. ಲಲನೆಯ ನೆಲೆಗೆ ಮೊದಲ ಸಾಕ್ಷಿ ತಾಂ
ದಿಟಮೈಸೆ ಲಭಿಸಿತೆಂಬೂಹೆಯಿಂ, ನೆಚ್ಚುದಿಸಿ
ಮುಂಬರಿದರದೊ ಮತ್ತೆ ! ಓಡಿದರ್ ; ನೋಡಿದರ್ :
ಕಂಡರು ಜಟಾಯು ಪದಗದೆಯ ಘಾತಕೆ ಕೆಡೆದ
ಪುಷ್ಪಕದ ಕನಕ ಲಘುಘಂಟಿಕಾ ಸ್ತಬಕಮಂ,
ಮತ್ತಂತೆ ಗುರುಗಾತ್ರದೊಂದೆರಳ್ ಮೂರ್ ನಾಲ್ಕು
ಐದಾರು ಗರಿಗಳಂ ! “ಏನಿದಯ್, ಸೌಮಿತ್ರಿ ?            ೭೭೦
ಸಾಹಸಿ ಜಟಾಯುವಂ ಬಯ್ದುದನ್ನೆಯವೆಂದು
ತೋರುತಿದೆ !” ರಾಮನಂತಾಡುತಿರೆ ಮುಂಬರಿದ
ಲಕ್ಷ್ಮಣಂ ಚೀತ್ಕರಿಸಿದನ್ “ಅಯ್ಯೊ ಅಣ್ಣಯ್ಯ !”
ಓಡಿದರ್, ನೋಡಿದರ್ : ಕಂಡರು ಜಟಾಯುವಂ,
ಮಡುಗಟ್ಟಿ ನಿಂದ ಕೆನ್ನೀರ ಕೆಸರೊಳ್ ಮಿಂದ
ಕಡಿದೆರಂಕೆಯ ಪರಿದ ತಿಪ್ಪುಳ ಗತಾಯುವಂ !
ಕೋಪಮನಿತುಂ ರಾಮಗನುತಾಪಮಪ್ಪಂತೆ
ಕರುಳಿರಿದುದಾ ಘೋರದರ್ಶನಂ : ಸಹ್ಯಾದ್ರಿ
ಶಿಖರ ವಿಸ್ತೃತ ವಿಪಿನ ಮಧ್ಯೆ, ಶತಮಾನ ತತಿ
ಮೆಯ್ತೊಂಡು ಮೂಡಿತೆನೆ, ಗುರುಗಾತ್ರ ಭವ್ಯದಿಂ          ೭೮೦
ಪರ್ವತ ಸಹೋದರತೆಯಾಂತುದು ವಿಯಚ್ಚುಂಬಿ
ಭೈರವ ಬೃಹತ್ತರುವರಂ. ಆ ವನಸ್ಪತಿಗೆ
ಗೌರವಂದೋರ್ದು ಬೆಸಗೆಯ್ವಳಾರಣ್ಯಸತಿ,
ನಾಗರಿಕ ನಗರಂ ಮಹಾಕವಿಯನೋಲೈಸಿ
ಮನ್ನಣೆಯನೀವಂತೆವೋಲ್. ವಿಹರಿಸಿದರೆನಿತೆನಿತೊ
ಸಾರಿ ; ತಣಿಯದೆ ಬಂದು ವಿಹರಿಸುವರಿಂದುಮಾ
ತರುಶಿರದಮರ ನಂದನದಿ ನಿಂದು ರವಿ ಇಂದು
ಉದಯಾಸ್ತ ಸಂಧ್ಯೆ. ಚೈತ್ರರುಮೆನಿತೊ ಬಂದಲ್ಲಿ
ನೀಡಿಹರು ಶುಕ ಚಂಚರೀಕ ಪಿಕದಿಂಚರದ
ನೈವೇದ್ಯಮಂ. ವರ್ಷಶತರಲ್ಲಿಗೈತಂದು
ಮಿಂಚುದೀವಿಗೆವಿಡಿದು, ಸಿಡಿಲ ತಂಬಟೆ ಬಡಿದು,
ಮೇಘ ಕುಂಭಂಗಳಿಂದಭಿಷೇಕಮಂ ಗೈದರಾ
ಭೂರುಹ ನೃಪೇಂದ್ರಂಗೆ. ಹೇಮಂತ ಶಿಶಿರರುಂ
ಶ್ವೇತ ಛತ್ರಿಯನೆತ್ತಿ, ಶ್ವೇತಾಂಬರಂ ಸುತ್ತಿ,
ಶ್ವೇತ ಚಾಮರವೀಸಿ, ಮಂಜಿನಿರ್ಬ್ಬನಿ ಮಣಿಯ
ಶ್ವೇತ ಮುತ್ತಿನ ತಾರಹಾರದಿಂ ಸಿಂಗರಿಸಿ
ಸೇವಿಸಿಹರಾ ತರು ಮಹಾರಾಜನಂ. ಪ್ರಕೃತಿ
ದೇವಿಯುಂ ಗ್ರೀಷ್ಮದಾತಪ ತಾಪಮಂ ಕಳೆಯೆ,
ತಾಂಡವಂ ಕುಣಿವ ಭೈರವ ಭುಜಾದಂಡಸಮ
ಬಾಹು ಶಾಖೆಯ ತಳಿರಿನುಯ್ಯಾಲೆಯಂ ಏರಿ  ೮೦೦
ರಮಿಸುವಳ್ ಮಂದಮಾರುತ ಭೋಗಮಂ. ಇಂತು
ಸಹ್ಯರಸಋಷಿ ದೃಷ್ಟಿಸೃಷ್ಟಿಯೆ ಬೃಹತ್ತಾಗಿ
ನಿಂತಾ ಮಹದ್ ವೃಕ್ಷಮಂ ದುರ್ಗದರಮನೆಯ
ಪೆರ್ಗಡೆಯ ನೇಮಿಸಿದ ಪರಶುಧರರೈತಂದು
ಕಡಿಯಲನುಗೈದಪರ್. ವಸಂತರವಿ ಮೂಡುತಿರೆ
ನೆತ್ತಿಗೊಂಬೆಯನೇರಿ ಕಾಜಾಣಮುಲಿಯುತಿರೆ,
ಬೆಚ್ಚಿಬೀಳುವುದಿದ್ದಕಿದ್ದಂತಟವಿ ಮೌನಂ !
ಮರುದಿನಗಳೇಳುವುವು ಕೋವಿಯೀಡುಗಳಂತೆ
ಕೊಡಲಿಯೇಟುಗಳಾ. ವಿಹಂಗಮಂ ಚೀತ್ಕರಿಸಿ
ಪಾರಿದಪುದೊರಲುವುದು ಕಾಡು ಹೋ ಹೋ ಎಂದು,   ೮೧೦
ಕೊಲೆಗಬ್ಬರಿಸುವಂತೆ. ತಲೆಯನಿನಿತೊಲೆಯದೆಯೆ
ನಿಲ್ವುದಾ ಸುಸ್ಥಿರಂ ಮರಂ. ಬಹುಳ ಬಲಯುತಂ
ಬಹುಸಂಖ್ಯೆ ಪರಶುಘಾತಕೆ ಸಿಡಿಯುವುದು ಕೆಲಕೆ
ತೊಗಟೆ. ಬೀಳ್ವುದು ರಾಶಿರಾಶಿ ದೂರಕೆ ತೂರಿ
ಸುತ್ತುಲುಂ. ಕೆಂಪು ಸೊನೆ ಸೋರುತಿರೆ ಹಸಿಗಂಪು
ಹಸರುವುದು, ಕಡಿವಾ ಬಡಗಿಗಳ್ಗೆ ಹಾಲ್ಮಡ್ಡಿ
ಹೊಗೆ ಧೂಪವಾಗಿ, ಕಡಿದಪರಿನ್ನುಮುರ್ಕುತ್ತೆ !
ತೊಗಲಂ ಸುಲಿಯೆ ಬಾಡು ತೋರ್ಪಂತೆ ಮಿದುಗೆಮ್ಟು
ಕಾಣಿಸಲದಂ ಕಡಿಯೆ, ಗೋಚರಿಸಿತೆನೆ ಮೂಳೆ,
ಕಡುಗೆಂಚುಕಡುಪು ಕೊಡಲಿಯ ಬಾಯ್ಗೆ ಕಲ್ಲಾಯ್ತು.       ೮೨೦
ಬಾಯಳಿಯಲೊರ್ಕೊಡಲಿ ಕಡಿದುದೆಂತುಂ ಬಿಡದೆ
ಪೊಸ ಕೊಡಲಿ. ಮಧ್ಯಾಹ್ನದೂಟಮಂ ಬುತ್ತಿಯಂ
ತಿಂದು ಬಂದಿನ್ನೊಮ್ಮೆ ತೊಡಗಲ್ಕೆ, ಮರನೆತ್ತಿ
ಅದೊ ನಡುಗುತಿಹುದಲ್ತೆ ? ದಿಟಮೈಸೆ ! ಅಯ್ಯೊ ಹಾ
ಮುಪ್ಪುದಲೆಯಂತೆ ಕೊಡಲಿಯ ಹತಿಗೆ ಕಂಪಿಸಿದೆ
ಕಾಣದೊ ಬೃಹನ್ಮಸ್ತಕಂ ! ಹಿಗ್ಗುತಿರಲಾಳ್ಮಂದಿ,
ಕುಗ್ಗುತಿರಲಾ ಮಲೆಯ ಪೆಮೆ, ತೂಗಿತ್ತೆಡಕೆ ;
ತೂಗಿತದೊ ಬಲಕೆ ; ಹಿಂದಕೆ ತೊನೆಯಿತದೊ ; ಮತ್ತೆ
ತೊನೆಯುತಿದೊ ಮುಂದಕ್ಕೆ ! ಕೇಳ್ದುದದೊ ನಿರಿಲೆಂದು
ಲರಿಲರಿ ಮುರಿವ ರಾವಮುಂ ! ದೂರಕೋಡಿದರ್        ೮೩೦
ನೋಡಿದರು ವನವೈಭವದ ಕಲಶಗೋಪುರಂ
ಕೆಡೆದು ಬೀಳುವ ವೈಭವದ ಭೀಮ ರಮಣೀಯ
ದೃಶ್ಯಮಂ : ಕೊಂಬೆಯನಲಂಕರಿಸಿ ಜೋಲ್ದಿರ್ದ
ಹುಟ್ಟಿಯಿಂ ಭೋರೆನುತ್ತೆದ್ದುವದೊ ಹೆಜ್ಜೇನುಗಳ್
ಹಿಂಡು ! ಬೆಳ್ಳನೆ ಹಲ್ಲೆಯಿಂ ಸುರಿಯುತಿದೆ ಚೆಂಜೇನ
ಸವಿಸೋನೆ ! ಕಾಣ್ ! ಬಳಿಯ ಮರವದೊ ಮುರಿಯುತಿದೆ ! ಮಲೆಯೆ
ಬಾಯ್ಬಡಿದುಕೊಂಡು ಗೋಳಿಟ್ಟಿತೆನೆ ಸದ್ದೊದರಿ
ಬಿದ್ದುದಾ ಪೆರ್ಮರಂ, ಪಳುವೆ ಬಯಲೆದ್ದವೋಲ್
ಬೆಳಕಿಳಿದು ನೆಲಕಾಯ್ತೊ ಯುಗಯುಗದನಂತರಂ
ಗಗನ ಸಂದರ್ಶನಮೆನಲ್ಕೆ : ಸಂಧ್ಯಾದೇವಿ     ೮೪೦
ಎಂದಿನೋಲೈತಂದು ನೋಡಿದರೆ, ಹಾ ಎಲ್ಲಿ ಹೇಳ್
ವಿಪಿನ ಸಾಮ್ರಾಜ್ಯದಾ ತರುಚಕ್ರವರ್ತಿ ? ಅದೊ
ಕಳ್ತರಿಸಿದಂಗಾಂಗದಿಂದುರುಳಿಹನ್ ಸೋಲ್ತ ಪಡೆ
ಕಡಕಡಿ ಕೆಡೆದುರುಳ್ದ ಕಣದಂತೆ !
ಖರಸೂದನಂ
ಕಂಡನಾ ಕಡಿದ ಪೆರ್ಮರನ ತೆರನ ಜಟಾಯು
ಖಗವರನ. ಪಿತೃವಯಸ್ಕನ ದಾರುಣಸ್ಥಿತಿಗೆ
ಮರುಗುತಿರ್‌ಕೈಗಳಿಂ ರಕ್ತಮಯ ಕಂಠಮಂ
ಸ್ನೇಹದಿಂ ತಳ್ಕೈಸಿದನ್, ತೋಳ್ಗಳೆರಡುಮುಂ
ತುಂಬುವೋಲ್ : “ಏನಿದಯ್, ವಿಹಗೇಂದ್ರ, ಏನಿದೀ
ಸ್ಥಿತಿ ನಿನಗೆ ? ಪೂಜ್ಯನೆ, ಪರಾಭವಂ ನಿನಗೆಂತೊ ?
ಪೇಳಾವನಿಂದಾದುದೀ ಘೋರಕೃತಿ ? ಏಕೆ ?
ನಿನ್ನ ಮಗಳೆಲ್ಲಿ ? ಪೇಳಯ್ಯ, ದಶರಥ ಮಿತ್ರ,
ರಘುಕುಲದರಸಿಯೆಲ್ಲಿ ? ರಾಮನ ಮಡದಿಯೆಲ್ಲಿ ?
ಪೇಳೆತ್ತವೋದಳೊ ನನ್ನ ಮನದನ್ನೆ ? ರಾಜರ್ಷಿ
ಜನಕದೇವನ ಧರಾಕನ್ಯೆ ?” ಇಕ್ಷ್ವಾಕುಜಂ
ರೋದಿಸುತ್ತೆಂತೆಂತೊ ಪಳಯಿಸುತ್ತಿರಲಿಂತು,
ಸೋಂಕಿಗೊಯ್ಯನೆ ಸಂಜ್ಞೆ ಸಂಜನಿಸಿತಾ ಶ್ಯೇನಿ
ಸೂನುವಿಗೆ. ತೆರೆದುದೆವೆ. ಮೂಡಿದುದುಸಿರ ಸುಯ್ಲು.
ಬಾವಿಯಾಳದಿ ನಿಂತು ನುಡಿವವನ ದನಿಯವೋಲ್
ಮಾತು ಹೊಮ್ಮಿತು ಕೊರಳ ಗುಹೆಯಿಂದೆ. ಗದ್ಗದಿಸಿ     ೮೬೦
ತಡೆತಡೆದು ನುಡಿದನಸ್ಪಷ್ಟಮಂ : “ದೇವಿಯಂ …..
ನೈ …. ಋ …. ತ್ಯ …. ವಿತ್ತೇಶನವರಜಂ ….” ತೆಕ್ಕನೆಯೆ
ಮಾತು ನಿಂದಿತ್ತು. ಕುತ್ತಿಗೆ ಕಾರಿದುದು ಮುದ್ದೆ
ನೆತ್ತರಂ. ಪತ್ತಿದುದೆ ಹಾ ಅಯೋಧ್ಯೆಯ ಮೆಯ್ಗೆ
ಪಳಿಯೆನಲ್ಕಪ್ಪಿರ್ದ ರಾಮಂಗೆ ಮೆತ್ತಿದತ್ತಾ
ಸ್ನೇಹಾರುಣಂ !” “ಮುಂದೆ ಹೇಳಯ್ಯ ; ನಿಲ್ಲಯ್ಯ.
ಖಗವರ್ಯ !” ರಾಮನೆನುತಿರೆ, ಕೊರಲ್ ಜೋಲ್ದತ್ತು :
ಕಣ್ಮಲರ್ ಮುಚ್ಚಿದುದು ; ಸಂಪಾತಿ ಸೋದರನ
ಹರಣ ಹಾರಿತು ಹಸ್ತದೊಳೆ ದಶರಥನ ಸುತನಾ !
ಬೈಗಿನಡವಿಯ ಕಿವಿಗೆ ರಾಮಲಕ್ಷ್ಮಣರಳುವ    ೮೭೦
ದನಿ ಬಂದುದತಿದಾರುಣಂ. ಶೋಕಿಸಿತು ಸಂಧ್ಯೆ
ತಾನುಮಾರಣ್ಯಾದ್ರಿ ಸಾಂದ್ರ ಸಾಯಂ ಧ್ವನಿಯ
ಮುದ್ರದಿಂ. ಖಗಚಕ್ರವರ್ತಿಯ ಕಳೇಬರದ
ದಹನ ಸಂಸ್ಕಾರದಾ ಶವಧೂಮಮಂ ಕಂಡು
ಬೆದರಿದಳ್ ದಿನಲಕ್ಷ್ಮಿ. ನೆಗೆದಳಸ್ತಾದ್ರಿಯಿಂ ;
ಮರೆವೊಕ್ಕಳಂಬುಧಿಗೆ. ದಿನವನಿತೆ ಧುಮ್ಮಿಕ್ಕೆ
ಪಶ್ಚಿಮ ಸಮುದ್ರಕ್ಕೆ, ಚಿಮ್ಮಿದುವು ರತ್ನಾಳಿ
ತಳದಿಂ ನಭೋಂಗಣಕೆ. ಮೇಣ್ ಮೇಲಿಂದೆ ಬೀಳುತಿರೆ
ಸಿಲ್ಕಿದುವೆನಲ್ಕೆ ರಜನಿಯ ಕುರುಳ ಧಮ್ಮಿಲ್ಲಕ್ಕೆ
ಪೂವರಿಲ್ಗಳಂತೆವೋಲಲ್ಲಲ್ಲಿ ತೋರ್ದುವಯ್  ೮೮೦
ಮಿನುಗುವ ಮಿಸುನಿ ತಾರೆ ! ನರಳ್ವ ನೆರಳುಗಳಂತೆ
ಮಸಣದಿಂ ಮರಳಿದರು, ಮತ್ತೊಂದು ಮಸಣಕೆನೆ,
ಪರ್ಣಶಾಲೆಯ ಶವದ ಶೂನ್ಯಕ್ಕೆ, ಜನಕಜಾ
ಶೂನ್ಯರಾ ದೀನದುಃಖಿಗಳಣ್ಣತಮ್ಮದಿರು !
ನಿದ್ರೆಯಿನ್ನೆತ್ತಣಿಂ ? ನಿದ್ರೆ ಸತ್ತುದೊ ರಾಮ
ಭದ್ರಂಗೆ : ಅಯ್ಯೊ ಮೈದೋರ್ದುದಾ ರಾತ್ರಿ ! ಹಾ,
ಚಂದ್ರ ಸುಂದರ ದಿವ್ಯರಾತ್ರಿ ! ಉನ್ಮಾದಕ್ಕೆ
ಮದಿರೆಯಂ ಪೊಯ್ದುದಾ ಸಾಂದ್ರ ಚಂದ್ರಿಕೆ ಸೂರ್ಯ
ವಂಶಜಗೆ : ಪ್ರಿಯೆಯೊಡನೆ ಪವಡಿಸಿದ ಪಳ್ಕೆಯಂ
ತಳ್ಕೈಸಿ ಕುಳಿತು ಕಳೆದನ್ ಜಾವಮಂ, ಶೈಲತಾ        ೮೯೦
ಮೌನದಿಂ. ನಟ್ಟಿರುಳೊಳೆದ್ದೋಡಿದನ್ “ಸೀತೆ !
ಓ ಲಕ್ಷ್ಮಣಾ, ಸೀತೆಯಂ ನೋಡಲ್ಲಿ, ನೋಡಲ್ಲಿ !”
ಎಂದೆಂದು ಕೂಗಿ : ಹೊದರಂ ತಬ್ಬಿದಣ್ಣನಂ
ತಮ್ಮನೆಂತಾನುಮೆತ್ತಿತಂದನು ಕುಟಿಗೆ. ಮೇಣ್,
ಪುಲಿಯಬ್ಬರಂ ದೂರದಡವಿಯಿಂ ಕೇಳೆ : “ಓ
ಲಕ್ಷ್ಮಣಾ, ಸತಿಯನಸುರಂ ಕೊರಳ್ಮುರಿವನದೊ !
ಕೂಗುತಿಹಳಯ್ಯೊ ! ಕೋಮಲೆ, ಹೆದರದಿರು ; ಬಂದೆ !”
ಎಂದು ಧನುವಂ ತುಡುಕುತೆದ್ದೋಡುವಾತನಂ
ಬಿಗಿಯಪ್ಪಿ ಪಿಡಿದು ಸಂತೈಸಿದನು ಸೋದರಂ,
ತಾನುಂ ಸುಯ್ಯುತಳುತೆ. ಮತ್ತೆ ತಿಂಗಳ್ವಕ್ಕಿ   ೯೦೦
ತೇನೆ, ತನ್ನೆಣೆವಕ್ಕಿಯಂ ಕರೆದು ಕೂಗುತ್ತೆ
ಜೊನ್ನಂಬರದೊಳಲೆವುದಂ ನಿಮಿರ್‌ಗೇಳ್ದು : “ಓ
ಲಕ್ಷ್ಮಣಾ, ನಿನ್ನನಯ್ಯೋ ಕರೆವಳದೊ ದೇವಿ !
ಏಕೆ ಕಲ್ಲೆರ್ದೆಯಾಗಿ ಕೆಮ್ಮನಿಹೆ ? ಓಡು ನಡೆ,
ಓಡು ನಡೆ !” ಎನುತೆ ಹಣೆಬಡಿದುಕೊಂಡುರುಳಿದಾ
ಅಗ್ರಜಗೆ, ಕೇಳ್, ಗಾಳಿಬೀಸುವ ಊರ್ಮಿಳೇಶನಾ
ಬಗೆಯ ಬಣ್ಣಿಸೆ ಬಾಯಿಹುದೆ ಹಾ ಕವಿಯ ಕಲ್ಪನೆಗೆ ?