ಪಂಪಭಾರತ : ಗದ್ಯಾನುವಾದ - ಅನುಬಂಧ

 ಅನುಬಂಧ
ಪಂಪನು ತನ್ನ ಭಾರತದ ಪ್ರಾರಂಭದಲ್ಲಿ ತನ್ನ ಪೋಷಕನಾದ ಅರಿಕೇಸರಿಯ ವಂಶವೃಕ್ಷವನ್ನು ವಿಸ್ತಾರವಾಗಿ ಕೊಟ್ಟಿದ್ದಾನೆ. ಇದು ಐತಿಹಾಸಿಕ ದೃಷ್ಟಿಯಿಂದ ಬಹು ಉಪಯುಕ್ತವಾಗಿದೆ. ಅದರ ವಿವರ ಈ ರೀತಿ ಇದೆ.

ಶ್ರೀಮಚ್ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನೆಂಬಂತೆ ಕಾಂತಿಯಿಂದ ಕೂಡಿ ಈ ಭೂಮಿಯಲ್ಲಿ ತನ್ನ ಕುಲಕ್ಕೆ ಶಿಖಾಮಣಿಯಾದ ಯುದ್ಧಮಲ್ಲನು ಪ್ರಸಿದ್ಧನಾದನು. ಪ್ರಬಲನಾದ ಆತನು ತೋಳಬಲದ ಖ್ಯಾತಿಯನ್ನು ಪಡೆದು ಅನೇಕ ರಾಜರ ರತ್ನಕಿರೀಟಗಳ ಕಾಂತಿಯಿಂದ ತನ್ನ ಪಾದಗಳು ಬೆಳಗುವಂತೆ ಮಾಡಿ ಸಪಾದ ಲಕ್ಷಕ್ಷಿತಿಯನ್ನು ಆಳಿದನು. ಇವನು ಬೋದನವೆಂಬ ತನ್ನ ರಾಜಧಾನಿಯಲ್ಲಿ ಪ್ರತಿದಿನವೂ ಬಾವಿಗಳಲ್ಲಿ ಎಣ್ಣೆಯನ್ನು ತುಂಬಿ ಐನೂರು ಆನೆಗಳನ್ನು ಸ್ನಾನಮಾಡಿಸುವನು. ಈ ಯುದ್ಧಮಲ್ಲ ಮಹೀಪತಿಗೆ ಸುಂದರಾಂಗನಾದ ಅರಿಕೇಸರಿಯು ರಾಜನಿಗೆ ಕೀರ್ತಿ ಹುಟ್ಟುವಂತೆ ಹುಟ್ಟಿ ಮಂತ್ರಿಗಳಿಂದ ಕೂಡಿ ತನ್ನ ಕಿತ್ತ ಕತ್ತಿಯಿಂದ ವಿರೋರಾಜರ ಅಮೂಲ್ಯವಾದ ವಸ್ತುಗಳನ್ನೂ ಆನೆ ಕುದುರೆಗಳನ್ನೂ ಗೆದ್ದು ನಿರುಪಮನೆಂಬ ರಾಜನ ಆಳ್ವಿಕೆಯಲ್ಲಿ ಮೂರು ಕಳಿಂಗ ದೇಶಗಳೊಡನೆ ವೆಂಗಿಮಂಡಲವನ್ನೂ ಗೆದ್ದು ದಿಗ್ಭಿತ್ತಿಗಳಲ್ಲಿ ಗರ್ವದಿಂದ ತನ್ನ ಹೆಸರನ್ನು ಬರೆಯಿಸಿದನು. ಕ್ಷತ್ರಿಯ ಗುಣಗಳು ಆ ಕುಲದಲ್ಲಿ ಈತನಿಂದಲೇ ನೆಲಸಿ ನಿಂದುವು, ಅಲ್ಲದೆ ಅರಿಕೇಸರಿಯು ಮಾಡಿದ ಕಾರ್ಯಗಳು ಮೂರು ಲೋಕದಲ್ಲಿಯೂ ಪ್ರಖ್ಯಾತರಾದ ಆದಿ ಕ್ಷತ್ರಿಯರಲ್ಲಿಯೂ ಇಲ್ಲವೆನ್ನುವಷ್ಟು ಪ್ರಸಿದ್ಧಿಯಾದುವು. ಅರಿಕೇಸರಿಗೆ ನರಸಿಂಹ, ಭದ್ರದೇವ ಎಂಬಿಬ್ಬರು ಮಕ್ಕಳಾದರು. ಶತ್ರುರಾಜರ ತಲೆಗಳನ್ನು ಸೀಳುವಷ್ಟು ಭಯಂಕರವಾದ ಕತ್ತಿಗಳನ್ನುಳ್ಳ ಬಾಹುಬಲವುಳ್ಳವರವರು. ಅವರಲ್ಲಿ ಹಿರಿಯನಾದ ನರಸಿಂಹನಿಗೆ ಯುದ್ಧಮಲ್ಲನೆಂಬುವನು ಹಿರಿಯ ಮಗ, ಭುವನಪ್ರದೀಪನೂ ಅವಾರ್ಯವೀರ್ಯನೂ ಆದ ಯುದ್ಧಮಲ್ಲನಿಗೆ ಬದ್ದೆಗನು ಹಿರಿಯ ಮಗ. ಇವನು ಹುಟ್ಟಿದೊಡನೆಯೇ ಜ್ಞಾನವೂ ಜ್ಞಾನದೊಡನೆ ಐಶ್ವರ್ಯವೂ ಅದರೊಡನೆ ಅತ್ಯತಿಶಯವಾದ ಪರಾಕ್ರಮವೂ ಹುಟ್ಟಿದುವು. ತನ್ನ ವಿಶೇಷ ಶಕ್ತಿಯಿಂದ ಶತ್ರುರಾಜರನ್ನು ಚದುರಿಸಿ ರಣರಂಗದಲ್ಲಿ ತನ್ನ ಪರಾಕ್ರಮವನ್ನು ಕೊಂಡಾಡುವ ಹಾಗೆ ನಲವತ್ತೆರಡು ಕಾಳಗಗಳಲ್ಲಿ ಜಯವನ್ನು ಸಂಪಾದಿಸಿದನು. ಸಮುದ್ರ ಮುದ್ರಿತವಾದ ಈ ಭೂಮಂಡಲದಲ್ಲಿ ಯಾರಿಗೂ ಸೋಲದವನು ಇವನೇ ಎಂಬ ಖ್ಯಾತಿಯನ್ನು ಸಂಪಾದಿಸಿದುದಲ್ಲದೆ ಬದ್ದೆಗನು ಭೀಮನೆಂಬ ರಾಜನನ್ನು ಬಹಳ ಗರ್ವದಿಂದ ನೀರಿನಲ್ಲಿ ಮೊಸಳೆಯನ್ನು ಹಿಡಿಯುವಂತೆ ಒತ್ತಿ ಹಿಡಿದನು, ಮುಗಿಲನ್ನು ಮುಟ್ಟಿದ ಪೆಂಪು, ಪೆಂಪನ್ನು ಒಳಕೊಂಡ ಉದ್ಯೋಗ, ಉದ್ಯೋಗದ ಫಲವಾದ ಆಜ್ಞಾಫಲ, ಆಜ್ಞೆಯಿಂದ ಭಯಪಟ್ಟು ಬಾಗಿ ನಿಂತ ಶತ್ರುರಾಜರ ಸಮೂಹ ಇವು ತನ್ನ ಕೀರ್ತಿ ಯಶಸ್ಸಿಗೆ ಆಶ್ರಯವಾಗಿರಲು ಬದ್ದೆಗನು ತನ್ನ ಹುಬ್ಬನ್ನು ಹಾರಿಸುವುದರಿಂದಲೇ ಕೋಟ್ಯಂತರ ಜನವನ್ನು ಅನಮಾಡಿಕೊಳ್ಳುವನು. ಅವನ ಭಂಡಾರದಲ್ಲಿ ಮೇರುಪರ್ವತದ ಚಿನ್ನವಿದೆ. ಕಲ್ಪವೃಕ್ಷಗಳ ತೋಟವಿದೆ, ಸಿದ್ಧರಸದ ಒರತೆಯಿದೆ, ಸ್ಪರ್ಶಶಿಲೆಯ ಗಣಿಯಿದೆ, ತಡೆಯಿಲ್ಲದೆ ದಾನಮಾಡುವವರಲ್ಲಿ ಬದ್ದೆಗನನ್ನು ಹೋಲುವವರಾದ್ದಾರೆ! ಆ ಭದ್ರದೇವನ ತ್ಯಾಗಕ್ಕೆ ಹೊರಗಾದುದಾವುದೂ ಇರಲಿಲ್ಲ.

ಆ ಬದ್ದೆಗನಿಗೆ ವೈರಿಗಳೆಂಬ ಕತ್ತಲೆಗೆ ಸೂರ್ಯನೂ ಭೂಮಿಯನ್ನು ಗೆಲ್ಲಲು ಸಮರ್ಥವಾದ ವಿಜಯ ಭುಜಬಲವುಳ್ಳವನೂ ಆದ ಯುದ್ಧಮಲ್ಲನು ಮಗ. ಇವನ ಮಗ ನರಸಿಂಹನು ನಹುಷ ಪೃಥು, ಭಗೀರಥ, ನಳರೆಂಬ ಮಹಾಪುರುಷರನ್ನು ಕಡೆಗಾಣಿಸಿದ ಮಹಿಮೆಯುಳ್ಳವನೂ ಜ್ಞಾನದಲ್ಲಿ ಪರಮಾತ್ಮನಂತಿದ್ದವನೂ ಆಗಿ ಹಿರಿಯರ ಆಜ್ಞೆಯನ್ನು ಉಲ್ಲಂಘನೆ ಮಾಡದೆ ಶತ್ರುಸೈನ್ಯವನ್ನು ಅಡಗಿಸಿಕೊಳ್ಳುವುದರಲ್ಲಿ ಅವನ ಕೋಪವು ತಡೆಯಿಲ್ಲದುದಾಗಿದ್ದಿತು. ನರಸಿಂಹನು ಲಾಟದೇಶದ ಮೇಲೆ ನುಗ್ಗಿ ಯುದ್ಧಮಾಡಿದ ವಿಷಯವನ್ನು ಕೇಳಿ ಆ ದೇಶದವರು ಆಗ ಸತ್ತವರಿಗೆ ಈಗಲೂ ತರ್ಪಣವನ್ನು ಕೊಡುತ್ತಿರುವರು. ಸಿಂಹದಂತೆ ಕೆರಳಿ ನರಸಿಂಹನು ಯುದ್ಧಮಾಡಿದಾಗ ಚಿಮ್ಮಿದ ರಕ್ತವು ಈಗಲೂ ಆಕಾಶದಲ್ಲಿ ಕೆಂಗುಡಿಯು ಮುಸುಕಿದಂತಿದೆ, ಸಪ್ತ ಮಾಲವಗಳನ್ನು ಸುಟ್ಟು ಕರಿಕೇರಿಸಿದ ಜ್ವಾಲೆಗಳು ಅವನ ತೇಜಸ್ಸಿನ ಬಿಳಲುಗಳನ್ನು ಅನುಕರಿಸಿದವು. ವಿಜಯಗಜಗಳೊಡನೆ ಘೂರ್ಜರ ರಾಜ್ಯವನ್ನು ಮುತ್ತಿ ಅದನ್ನು ಗೆದ್ದು ವಿಜಯನನ್ನು ತಿರಸ್ಕರಿಸಿದ್ದಾನೆ. ಸಿಡಿಲೆರಗುವಂತೆ ಹಾಗೆ ಎರಗಿದ ನರಸಿಂಹನ ಸೈನ್ಯಕ್ಕೆ ಹೆದರಿ ಮಹಿಪಾಲನೆಂಬ ರಾಜನು ಉಂಡೆಡೆಯಲ್ಲಿ ಉಣ್ಣದೆ ಕೆಡೆದೆಡೆಯಲ್ಲಿ ಕೆಡೆಯದೆ ಓಡಿಹೋದನು. ಅಲ್ಲದೆ ನರಸಿಂಹನು ತನ್ನ ಕುದುರೆಯನ್ನು ಗಂಗಾನದಿಯಲ್ಲಿ ಮೀಯಿಸಿ ಕಾಳಪ್ರಿಯದಲ್ಲಿ ತನ್ನ ಭುಜವಿಜಯಗರ್ವದಿಂದ ವಿಜಯಸ್ತಂಭವನ್ನು ಸ್ಥಾಪಿಸಿದನು.

ಈ ನರಸಿಂಹ ಮನೋನಯನಪ್ರಿಯೆ ಜಾಕವ್ವೆ, ಚಂಚಲವಾದ ಕರಿಯ ಮುಂಗುರುಳುಳ್ಳವಳೂ ಚಂದ್ರನಂತೆ ಮುಖವುಳ್ಳವಳೂ ಆದ ಇವಳು ಕುಲದಲ್ಲಿಯೂ ಶೀಲದಲ್ಲಿಯೂ ಸೀತಾದೇವಿಗಿಂತ ಸೀತಾದೇವಿಗಿಂತ ಅಗ್ಗಳವಾದವಳು. ಹೊಸದಾಗಿ ಅರಳಿತ ತಾವರೆಯೆಸಳ

ಮೇಲಿರುವ ಲಕ್ಷ್ಮಿಯೂ ಈ ಜಾಕವ್ವೆಯ ಪಕ್ಕದಲ್ಲಿ ಕಾಂತಿಹೀನಳಾಗುತ್ತಾಳೆ ಎಂದ ಮೇಲೆ ಉಳಿದ ಸಾಮಾನ್ಯಸ್ತ್ರೀಯರು ಈಕೆಗೆ ಸಮನಾಗುತ್ತಾರೆಯೇ.

ಆ ಜಾಕವ್ವೆಗೂ ಆ ಭೂವಲ್ಲಭ ನರಸಿಂಹನಿಗೂ ಅತಿವಿಶದ ಯಶೋವಿತಾನನಾದ ಅರಿಕೇಸರಿ ತನ್ನ ತೇಜೋಗ್ನಿಯಲ್ಲಿ ಮಗ್ನರಾದ ರಿಪುಶಲಭವನ್ನುಳ್ಳವನಾಗಿ ಮಗನಾಗಿ ಹುಟ್ಟಿದನು. ಅವನು ಹುಟ್ಟಿದಾಗ ಆನೆಯ ಮದೋದಕವನ್ನೇ ಬೆಚ್ಚುನೀರಾಗಿ ತಳಿದರು. ಆನೆಯ ಅಂಕುಶದಿಂದ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದರು, ಆನೆಯ ದಂತದ ತೊಟ್ಟಿಲಿನಲ್ಲಿಟ್ಟು ತೂಗಿದರು. ಆದುದರಿಂದ ಈ ಬಾಲ್ಯದಿಂದಲೇ ಅರಿಕೇಸರಿಯು ಗಜಪ್ರಿಯನೆಂಬುದನ್ನು ತೋರಿಸಿದನು. ತಾನೇ ಪ್ರತ್ಯಕ್ಷ ಇಂದ್ರನೆಂಬಂತೆ ಪ್ರಕಾಶಿಸಿದ ಇಂದ್ರನ ತೋಳೇ ತೊಟ್ಟಿಲಾಗಿ ಬೆಳೆದನು, ಅಮೇಯ ಬಲಶಾಲಿಯೂ ಮನುಜಮಾರ್ತಾಂಡನೂ ಆದ ಇವನಿಗೆ ಬುದ್ಧಿಶಕ್ತಿಯಿಂದಲೂ ಪೌರುಷ ಶಕ್ತಿಯಿಂದಲೂ ಶಾಸ್ತ್ರಪಾರವೂ ಶತ್ರುಸೈನ್ಯಪಾರವೂ ಜೊತೆಯಲ್ಲಿಯೇ ಸಿದ್ಧಿಸಿದುವು. (ನಡುವಿನ) ಉಡುವಣಿ ಹರಿಯುವುದಕ್ಕೆ ಮುಂಚೆಯೇ ಛಲದಿಂದ ಶತ್ರುಸೈನ್ಯವನ್ನು ಚದುರಿಸಿ ಶತ್ರುಸೈನ್ಯದ ರಕ್ತ ಸಮುದ್ರದಲ್ಲಿ ಜಿಗುಳೆ ಬೆಳೆಯುವ ತೆರದಲ್ಲಿ ಬೆಳೆದನು. ಪ್ರತಿಭಟಿಸಿದ ಸೈನ್ಯವು ಕೋಟಿಸಂಖ್ಯೆಯನ್ನು ಮೀರಿರಲು ಪರಸ್ತ್ರೀಯು ಊರ್ವಶಿಗಿಂತ ಮೇಲಾಗಿದ್ದರೂ ಎಂದು ಅವನ ಕಣ್ಣು ಸೋಲುವುದಿಲ್ಲ. ಯುದ್ಧದಲ್ಲಿ ಮೂರುಲೋಕವು ನಿಂತಿದ್ದರೂ ದಾನಮಾಡುವಾಗ ಮೇರುಪರ್ವತವೇ ಎದುರಿಗಿದ್ದರೂ ತನ್ನ ಶೌರ್ಯಕ್ಕೂ ಔದಾರ್ಯಕ್ಕೂ ಇದು ಸಾಲದೆಂದು ಪ್ರಿಯಗಳ್ಳನು ಚಿಂತಿಸುವನು. ಇತರ ಮಹಾಸಾಮಂತರು ಸ್ವಸ್ತ್ಯಾದಿ ಬಿರುದುಗಳನ್ನು ಹೊಗಳಿಸಿಕೊಳ್ಳುವುದರಲ್ಲಿ ಸಮಾನರಾಗುತ್ತಾರೆಯೇ ವಿನಾ ಗುಣದಲ್ಲಿ ಸಮಾನರಾಗಲಾರರು.

ಈ ಗುಣಾರ್ಣವನು ತ್ಯಾಗದ ಕಂಭವನ್ನು ನಿಲ್ಲಿಸಿ ವೀರದ ಶಾಸನವನ್ನು ಸ್ಥಾಪಿಸಿ ಅನರಾಗದ ರಾಜರನ್ನು ವಶಪಡಿಸಿಕೊಂಡು ಮೂರು ಲೋಕಗಳಲ್ಲಿ ಯಶಸ್ಸಿಗೆ ಆಕರರಾಗಿದ್ದ ಬದ್ದೆಗದೇವ ಮತ್ತು ನರಸಿಂಹರಿಗಿಂತ ತ್ಯಾಗದಲ್ಲಿಯೂ ವೀರದಲ್ಲಿಯೂ ನಾಲ್ಕು ಬೆರಳಷ್ಟು ಉನ್ನತನಾಗಿದ್ದಾನೆ. ಪಂಪನ ಪ್ರಕಾರ ಚಾಳುಕ್ಯ ವಂಶವೃಕ್ಷವನ್ನು ಈ ರೀತಿ ಗುರುತಿಸಬಹುದು.

೧. ಯುದ್ಧಮಲ್ಲ-ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು, ಪ್ರತಿದಿನವೂ ಐನೂರು ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.

೨. ಅರಿಕೇಸರಿ, ವೆಂಗಿಯ ಪ್ರಧಾನನೊಡನೆ ನಿರುಪಮರಾಜ್ಯವನ್ನು ಮುತ್ತಿದನು.

೩. ನರಸಿಂಹ

೪. ಭದ್ರದೇವ

೫. ದುಗ್ಧಮಲ್ಲ- ಯುದ್ಧಮಲ್ಲ

೬. ಬದ್ದೆಗ-ಭದ್ರದೇವ
೪೨ ಕಾಳಗಗಳನ್ನು ಜಯಿಸಿದನು.
ಸೋಲದ ಗಂಡನೆಂಬ ಬಿರುದನ್ನುಳ್ಳವನು.
ಭೀಮನನ್ನು ನೀರಿನಲ್ಲಿ ನುಗ್ಗಿ ಹಿಡಿದನು.

೭. ದುಗ್ಧಮಲ್ಲ (ಯುದ್ಧಮಲ್ಲ.)

೮. ನರಸಿಂಹ- ಕಲಿನರಸಿಂಹ- ನರಸಿಂಹ- ನರಗ.
ಸುಭದ್ರ ಮುನಿಯ ಪ್ರತಿಬಿಂಬ
ಲಾಳನನ್ನು ಅಡಿಗೆರಗಿಸಿದನು
ಸಪ್ತಮಾಲದ ಮುಖ್ಯರನ್ನು ಸೋಲಿಸಿದನು
ಘೂರ್ಜರ ರಾಜ ಸೈನ್ಯವನ್ನು ಸೋಲಿಸಿ ಗಂಗಾ ಜಲದಲ್ಲಿ ಕುದುರೆಯನ್ನು ಮೀಯಿಸಿದನು.
ಮಹೀಪಾಲನನ್ನು ಓಡಿಸಿದನು
ಇವನ ಮಿತ್ರನಾದ ಸಂಗನನ್ನು ನಾಶಪಡಿಸಿದನು.
ಇವನ ಹೆಂಡತಿ ಜಾಕವ್ವೆ

೯. ಅರಿಕೇಸರಿ- ಅರಿಗ- ಗೊಜ್ಜಿಗನಿಂದ ವಿಜಯಾದಿತ್ಯನನ್ನು ರಕ್ಷಿಸಿದ

೧೦. ಬದ್ದೆಗ- ಅರಿಕೇಸರಿಯ ಹಿರಿಯ ಮಗ, ರಾಜಧಾನಿ ಗಂಗಾಧಾರಾ (ಯಶಸ್ತಿಲಕದಿಂದ) ಫ್ಲೀಟರು ಇದರಲ್ಲಿ ಉಕ್ತವಾಗಿರುವ ಕೆಲವು ಸಂಗತಿಗಳಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಸೂಚಿಸಿದ್ದಾರೆ. (vIಒಟಿoಔಓಟಿ ಈS oWಓ ಒIಒಟಓಟಿಓ ಔಟಿoಟಔoಟಿ) ಎಂಬ ಗ್ರಂಥದಲ್ಲಿ. ಅವುಗಳನ್ನು ಹೀಗೆ ಸಂಗ್ರಹಿಸಬಹುದು: ನರಸಿಂಹ ಭದ್ರದೇವರು ಏಕವ್ಯಕ್ತಿಗಳು- (ಮುಂದಿನ ಶಂಶೋಧನೆಯಿಂದ ಇದು ಸರಿಯಲ್ಲವೆಂದು ಸಿದ್ಧಾಂತವಾಗಿದೆ) ವಂಶವೃಕ್ಷದಲ್ಲಿ ಬರುವ ನರಸಿಂಹನು ಲಾಳನನ್ನು ಸೋಲಿಸಿದುದನ್ನು ಅವರು ಹೇಳಿಲ್ಲ. ಸಂಗನನ್ನು ಸೋಲಿಸಿದುದೂ ಅವರಿಂದ ಉಕ್ತವಾಗಿಲ್ಲ. ಆದರೆ ರೈಸರು ತಮ್ಮ ಪಂಪಭಾರತದ ಪೀಠಿಕೆಯ ನಾಲ್ಕನೆಯ ಪುಟದ ಅಡಿಟಿಪ್ಪಣಿಯಲ್ಲಿ ಇದನ್ನು ನಮೂದಿಸಿದ್ದಾರೆ. ಫ್ಲೀಟರು ಇವನ ಹೆಂಡತಿಯು ‘ಚಂದ್ರಾನನೆ’ ಎಂದು ಹೇಳುತ್ತಾರೆ. ರೈಸರು ‘ಜಾತವ್ವೆ’ ಎಂದಿದ್ದಾರೆ (ಪಂ.ಭಾ.ಪೀಠಿಕೆ). ರಾ. ನರಸಿಂಹಾಚಾರ್ಯರು ಜಾಕವ್ವೆ ಎಂದೇ ಹೇಳಿದ್ದಾರೆ. ಮೂಲದಲ್ಲಿ ಆ ಭಾಗವು ಉಕ್ತವಾಗಿದೆ. ಚಂದ್ರಾನನಾ ಎಂಬುದು ವಿಶೇಷಣವಿರಬಹುದು. ಅರಿಕೇಸರಿಯ ತಂದೆಯ ಹೆಸರು ಯುದ್ಧಮಲ್ಲನೆಂದು ಫ್ಲೀಟರು ಹೇಳುತ್ತಾರೆ. ಇದು ಸರಿಯಲ್ಲ. ಏಕೆಂದರೆ ಪಂಪಭಾರತ, ಪರಭಣಿ ತಾಮ್ರಶಾಸನ ವೇಮಲುವಾಡಶಾಸನಗಳಲ್ಲಿ ‘ನರಸಿಂಹ’ ಎಂದೇ ಹೇಳಿದೆ- ಬದ್ದೆಗನು ಅರಿಕೇಸರಿಯ ಮೊದಲನೆಯ ಮಗನೆಂದು ಸೋಮದೇವನು ತನ್ನ ‘ಯಶಸ್ತಿಲಕಚಂಪು’ವಿನಲ್ಲಿ ತಿಳಿಸಿದ್ದಾನೆ. ಆದುದರಿಂದ ಇವನಿಗೆ ಇನ್ನೂ ಇತರ ಮಕ್ಕಳಿದ್ದಿರಬಹುದೆಂದು ಊಹಿಸಲು ಅವಕಾಶವಿದೆ. ಆದರೆ ಪರಭಣಿಯ ತಾಮ್ರ ಶಾಸನದಲ್ಲಿ ಭದ್ರದೇವನು ಅರಿಕೇಸರಿಯ ಒಬ್ಬನೇ ಮಗನೆಂದು ಉಕ್ತವಾಗಿದೆ.

ಪಂಪಭಾರತದಲ್ಲಿ ಬರುವ ಚಾಳುಕ್ಯವಂಶವೃಕ್ಷಕ್ಕೆ ಒಂದನೇ ಅರಿಕೇಸರಿಯ ಕೊಲ್ಲೇಪಾರಾ ದಾನಪತ್ರವೂ ಎರಡನೆಯ ಅರಿಕೇಸರಿಯ ವೇಮಲವಾಡ ಶಿಲಾ ಲೇಖನವೂ ಮೂರನೆಯ ಅರಿಕೇಸರಿಯ ಪರಭಣಿ ತಾಮ್ರಶಾಸನವೂ ಉಪಷ್ಟಂಭಕವಾಗಿವೆ. ಇವುಗಳಲ್ಲಿರುವ ಈ ಭಾಗವನ್ನು ಮುಂದಿನ ರೀತಿಯಲ್ಲಿ ಚಿತ್ರಿಸಬಹುದು.

ಪರಭಣಿಯ ತಾಮ್ರಶಾಸನ
ಚಾಳುಕ್ಯವಂಶ (ಆದಿತ್ಯಭವ)

೧. ಯುದ್ಧಮಲ್ಲ
ಸಪಾದಲಕ್ಷ ರಾಜ್ಯವನ್ನು ಆಳುತ್ತಿದ್ದನು.
ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
ಕಲಿಂಗತ್ರಯದೊಡನೆ ವೆಂಗಿಯನ್ನು ಸಂರಕ್ಷಿಸಿದನು.

೨. ಅರಿಕೇಸರಿ

೩. ನರಸಿಂಹ

೪. ಭದ್ರದೇವ

೫. ಯುದ್ಧಮಲ್ಲ

೬. ಬದ್ದೆಗ
ಸಂಗಮನಿಗೆ ತೊಂದರೆ ಕೊಟ್ಟನು
ಭೀಮನನ್ನು ಜಲಯುದ್ಧದಲ್ಲಿ ಸೋಲಿಸಿದನು

೭. ಯುದ್ಧಮಲ್ಲ

೮. ನರಸಿಂಹ

೯. ಅರಿಕೇಸರಿ- ಇವನ ಹೆಂಡತಿ ಪ್ರಖ್ಯಾತ ರಾಷ್ಟ್ರಕೂಟರ ಲೋಕಾಂಬಿಕೆ

೧೦. ಭದ್ರದೇವ-ಬದ್ದೆಗ-ಶುಭದಾಮ ಜಿನಾಲಯವನ್ನು ಕಟ್ಟಿಸಿದನು

೧೧. ಅರಿಕೇಸರಿ
ರಾಜಧಾನಿ ಲೆಂಬುಳಪಾಟಕ
ಸೋಮದೇವಸೂರಿಗೆ ದಾನ ಕೊಟ್ಟನು

ವೇಮಲವಾಡ ಶಿಲಾಶಾಸನ
ಚಾಲುಕ್ಯಕುಲ

೧. ವಿನಯಾದಿತ್ಯ ಅಥವಾ ಯುದ್ಧಮಲ್ಲ
ಸಪಾದ ಲಕ್ಷ ರಾಜ್ಯವನ್ನು ಆಳುತ್ತಿದ್ದನು
ಆನೆಗಳನ್ನು ಎಣ್ಣೆಯಲ್ಲಿ ಮೀಯಿಸುತ್ತಿದ್ದನು.
ಚಿತ್ರಕೂಟವನು ವಶಮಾಡಿಕೊಂಡನು.

೨. ಅರಿಕೇಸರೀಶ-ಬಲದಿಂದ ವೆಂಗಿ ದೇಶವನ್ನು ತೆಗೆದುಕೊಂಡನು

೩. ನರಸಿಂಹವರ್ಮ- ಅಥವಾ ರಾಜಾದಿತ್ಯ (?)

೪. ಯುದ್ಧಮಲ್ಲ

೫. ನರಸಿಂಹ ದೇವ-ಗುರ್ಜರಾಜ ಸೈನ್ಯವನ್ನು ಜಯಿಸಿದನು, ಏಳು ರಾಜರನ್ನು ಜಯಿಸಿದನು

೬. ಅರಿಕೇಸರಿ-ಗೋವಿಂದ (ಗೊಜ್ಜಿಗ) ನಿಂದ ಬಿಜ್ಜನನ್ನು ರಕ್ಷಿಸಿದನು. ಹೆಂಡತಿ ರೇವಕ್ಕ (?)

ಕೊಲ್ಲೋಪಾರಾ ದಾನಪತ್ರ
ಚಾಳುಕ್ಯ ವಂಶ

ರಣವಿಕ್ರಮಸತ್ಯಾಶ್ರಯ ಪೃಥ್ವೀಪತಿ ಮಹಾರಾಜ ವಿನಯಾದಿತ್ಯ ಯುದ್ಧಮಲ್ಲ ಅರಿಕೇಸರಿ

ಮಧ್ಯಯುಗದ ಇತಿಹಾಸದಲ್ಲಿ ನಾಲ್ಕು ಚಾಲುಕ್ಯ ಕುಲಗಳಿದ್ದವು. ಒಂದನೆಯದು ಬಾದಾಮಿಯದು. ಎರಡನೆಯದು ಕಲ್ಯಾಣಿಯದು. ಮೂರನೆಯದು ವೆಂಗಿಯದು. ನಾಲ್ಕನೆಯದು ಪಂಪ ಮತ್ತು ಸೋಮದೇವರಿಂದ ಉಕ್ತವಾದುದು. ಇವುಗಳಲ್ಲಿ ಬಾದಾಮಿಯ ಚಾಳುಕ್ಯಕುಲದಿಂದ ವೆಂಗಿಯ ಚಾಳುಕ್ಯಕುಲವು ಉತ್ಪನ್ನವಾಯಿತು. ಕಲ್ಯಾಣಿಯ ಚಾಲುಕ್ಯರು ಬಾದಾಮಿಯ ಚಾಲುಕ್ಯರ ವಂಶಜರೆಂದು ತಾವೇ ಹೇಳಿಕೊಂಡಿದ್ದಾರೆ. ಬಾದಾಮಿಯ ಚಾಲುಕ್ಯರ ಕಾಲ ಮತ್ತು ಕಲ್ಯಾಣಿಯ ಚಾಲುಕ್ಯರ ಕಾಲಗಳಿಗೆ ಮಧ್ಯೆ ರಾಷ್ಟ್ರಕೂಟರು ಆಳಿದರು. ಈ ಎರಡು ಕುಲಗಳನ್ನು ಜೋಡಿಸಿದವನು ಯಾರು ಎಂಬುದು ನಿಶ್ಚಿತವಾಗಿ ತಿಳಿಯದಿದ್ದರೂ ಈ ಎರಡು ಕುಲಗಳಿಗೂ ಸಂಬಂಧವಿತ್ತೆಂದು ಹೇಳುವುದಕ್ಕೆ ಆಧಾರ ಸಿಗುತ್ತದೆ. ವೆಂಗಿಯೂ ಇವುಗಳ ಶಾಖೆಗೇ ಸೇರಿರಬಹುದು. ಇವರ ಸ್ಥಳವೂ ಲಕ್ಷ್ಮೀಶ್ವರಕ್ಕೆ ಅಕ್ಕಪಕ್ಕದಲ್ಲಿದ್ದಿರಬಹುದು.
***********


**************

ಕಾಮೆಂಟ್‌ಗಳಿಲ್ಲ: