ಬಿ.ಆರ್.ಲಕ್ಷ್ಮಣರಾವ್ ರವರ ಭಾವಗೀತೆಗಳು - Lyrics of B.R.Lakshmanarao



ಶ್ರುತಿ ಮೀರಿದ ಹಾಡು / Shruthi meerida haadu

ಶ್ರುತಿ ಮೀರಿದ ಹಾಡು
ಪ್ರೇಮ ಸುಳಿವ ಜಾಡು
ಅಂದು ಕನಸಿನರಸ
ಇಂದು ಏನೋ ವಿರಸ
ಹಳಸಿತೆ ಆ ಒಲವು
ತಳೆಯಿತೆ ಈ ನಿಲುವು 

ಯಾರಿವಳೀ ಹುಡುಗಿ?
ಹೊಸ ಹರೆಯದ ಬೆಡಗಿ
ಸಾವಿನ ನಾಡಿನೊಳು
ಜೀವರಸದ ಹೊನಲು

ಮಗುವಿನ ನಗೆಯವನು
ಮಿಡಿಯುವ ಬಗೆಯವನು
ಬಾಗಿಲ ಬಡಿಯುವನು
ಇಂದು ಯಾರೊ ಇವನು

ತೆರೆಗಳ ಮೊರೆತದಲಿ
ಆಳದ ಮೌನದಲಿ
ಹೊರಳು ದಾರಿಗಳಲಿ
ನನ್ನ ಮೂಕ ಅಳಲು


ಉಸಿರಿಲ್ಲದ ಬಾನಿನಲ್ಲಿ / Usirillada baaninalli

ಉಸಿರಿಲ್ಲದ ಬಾನಿನಲ್ಲಿ
ನಿಶೆಯೇರಿದೆ ಬಿಸಿಲು,
ಕೆಂಡದಂತೆ ಸುಡುತಿದೆ
ನಡು ಹಗಲಿನ ನೊಸಲು.

ಒಂದೊಂದು ತೊರೆಯೂ
ಒಣಗಿ ಬಿರಿದ ಪಾತ್ರ
ಪ್ರತಿಯೊಂದೂ ಮರವೂ
ಎಳೆ ಕಳಚಿದ ಗಾತ್ರ.
ಮುಗಿಲಿಲ್ಲದ ಬಾನಿನಲ್ಲಿ
ಭುಗಿಲೆನ್ನುವ ಗಾಳಿಯಲ್ಲಿ
ಧಗಧಗಿಸಿತೊ ಎಂಬಂತಿದೆ
ಮುಕ್ಕಣ್ಣನ ನೇತ್ರ

ಬಿಸಿಲಲ್ಲೂ ಅಲೆಯುತ್ತಿವೆ
ಕೊಬ್ಬಿದ ಮರಿಗೂಳಿ
ಎಮ್ಮೆ ಹಿಂಡು ಸಾಗಿದೆ
ಮೇಲೆಬ್ಬಿಸಿ ಧೂಳಿ.
ದಾರಿ ಬದಿಯ ಬೇಲಿ
ಮಾಡುತ್ತಿದೆ ಗೇಲಿ
ನೋಡುತ್ತಿದೆ ಸಾಕ್ಷಿಯಾಗಿ
ಆಕಾಶದ ನೀಲಿ.


ನಾ ಚಿಕ್ಕವನಾಗಿದ್ದಾಗ / Naa chikkavanaagiddaaga

ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡಾ ಮರಿ
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆ ಗಿಡ ತುಂಬ ಚಂದ
ನಿಂಬೆಯ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳೀ ಕಹಿ

ಯೌವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯ ಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ.

ನಿಂಬೆಯ ಗಿಡದ ರೆಂಬೆ ರೆಂಬೆಯಲು ನೂರು ನೂರು ಮುಳ್ಳು
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ಧಿ ಬಂತೆ ಎಂದು.


ಬಂದಂತೆ ಮರು ವಸಂತ / Bandante maruvasanta

ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ.

ಕೈ ಸೋಕಿ, ನಿನ್ನ ಬಿಸಿ ತಾಕಿ,
ಚಿಮ್ಮಿದೆ ಹೊಸ ಚಿಗುರು;
ನಗೆಯಂತೆ, ನಿನ್ನ ಬಗೆಯಂತೆ
ಅರಳಿದೆ ಹೂವುಗಳು;
ನಿನ್ನ ಪ್ರೀತಿಯ ಪ್ರಖರತೆಗೆ
ಮಾಗಿಯ ಮಂಜು ತೆರೆ
ಕರಗಿ, ಸೊರಗಿ, ಮರೆಯಾಗಲು
ಜಗವೇ ಝಗಝಗಿಸಿದೆ.

ಕಂದಿದ್ದ ಕಣ್ಣಿಗೆ ಹೊಸ ಹೊಳಪು
ನೀ ತಂದೆ ಹೊಸ ನೋಟವ,
ಎಂದೆಂದೂ ಜೋಡಿ ನಾನೆಂದು
ನೀಡಿದೆ ಒಡನಾಟವ;
ನಿನ್ನ ಒಲವೆಂಬ ಸಂಜೀವಿನಿ
ಹೊಸ ಶಕ್ತಿ ತೋಳಿಗೆ,
ಧೃತಿಯ ತಂದಿಹುದು ಹೆಜ್ಜೆಗೆ,
ಭರವಸೆಯ ಬದುಕಿಗೆ.


ಮನದ ಹಂಬಲದ / Manada Hambalada


ಮನದ ಹಂಬಲದ ಕನಸೆಲ್ಲವೂ
ಮಂಜಂತೆ ಕರಗಿ ಮರೆಯಾಯಿತೆ.

ಸೆಲೆ ಬತ್ತಿತೆ ಪ್ರೀತಿಯ ಹೊಳೆ
ಜೊಳ್ಳಾಯಿತೆ ಸ್ನೇಹದ ಬೆಳೆ
ಏಕಾಂತವೇ ಬಾಳಿನ ನೆಲೆ
ಮನಸು ವಿಷಾದಕೆ ಸೆರೆಯಾಯಿತೆ

ಎರಗಿ ಬಿರುಗಾಳಿ, ಬಡಿದು ಸಿಡಿಲು
ನಡುಗಡಲಿನಲ್ಲಿ ಒಡೆದ ಹಡಗು
ನೆರವಿರದೆ ಸೋತು, ತೇಲು ಮುಳುಗು
ಬದುಕು ಹತಾಶೆಗೆ ವಶವಾಯಿತೆ.

ಬಾಳಿಗುಂಟೆ ಮರುವಸಂತ
ಪಯಣಕುಂಟೆ ಹೊಸ ದಿಗಂತ
ಬೆಳಕು ಮೂಡೀತೆ ಇರುಳು ಕಳೆದು
ಹೊಸ ಅಂಕಕಾಗಿ ತೆರೆ ಸರಿವುದೆ.


ಬಾ, ಮಳೆಯೇ ಬಾ / Baa maleye baa


ಬಾ, ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ
ನಲ್ಲೆ, ಹಿಂತಿರುಗಿ ಹೋಗದಂತೆ

ಓಡು, ಕಾಲವೇ,ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ ನಿಲ್ಲು, ಕಾಲವೇ ನಿಲ್ಲು
ತೆಕ್ಕೆ ಸಡಿಲಾಗದಂತೆ
ನಮ್ಮ ತೆಕ್ಕೆ ಸಡಿಲಾಗದಂತೆ

ಬೀಸು ಗಾಳಿಯೇ ಬೀಸು, ನನ್ನೆದೆಯ ಆಸೆಗಳ
ನಲ್ಲೆ ಹೃದಯಕ್ಕೆ ತಲುಪಿಸು
ಹಾಸು ಹೂಗಳ ಹಾಸು, ಅವಳು ಬಹ ದಾರಿಯಲ್ಲಿ
ಕಲ್ಲುಗಳು ತಾಗದಂತೆ
ಪಾದ ಕಲ್ಲುಗಳು ತಾಗದಂತೆ.

ಬೀರು, ದೀಪವೇ, ಬೀರು, ನಿನ್ನ ಹೊಂಬಳಕಲ್ಲಿ
ನೋಡುವೆನು ನಲ್ಲೆ ರೂಪ
ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲಿ
ನಾಚಿ ನೀರಾಗದಂತೆ
ನಲ್ಲೆ ನಾಚಿ ನೀರಾಗದಂತೆ

ಹೋಗು, ನಿದ್ದೆಯೇ, ಹೋಗು, ನಿನಗಿಲ್ಲಿ ಎಡೆಯಿಲ್ಲಿ
ಪ್ರೇಮಿಗಳ ಸೀಮೆಯಲ್ಲಿ;
ನಾವೀಗ ಅನಿಮಿಷರು, ನಮ್ಮ ಮಿಲನ
ಗಂಧರ್ವ ವೈಭೋಗದಂತೆ
ಮಿಲನ, ಗಂಧರ್ವ ವೈಭೋಗದಂತೆ.


ಬಣ್ಣಿಸಲೇ, ಹೆಣ್ಣೇ ? / Bannisale henne

ಬಣ್ಣಿಸಲೇ, ಹೆಣ್ಣೇ ?
ಏನು ಬಣ್ಣಿಸಲೇ, ಹೆಣ್ಣೇ,
ನಿನ್ನ ಮಹಿಮೆಯನು ?
ಏನೆಂದು ಬಣ್ಣಿಸಲೇ ?

ಗೋಲು ಹೊಡೆದಂತೆ ಮರಡೋನ
ತಪ್ಪಿಸಿ ಎಲ್ಲರನು
ಮಿಂಚು ನೋಟದಲ್ಲೆ
ನನ್ನೆದೆಯ ಹೊಕ್ಕೆಯಲ್ಲೆ!

ಕಪಿಲನ ಸಿಕ್ಸರಿನಂತೆ
ನಮ್ಮ ಪ್ರೇಮ ಕೂಡ
ದಾಟಿ ಹಾರಿತಲ್ಲೆ
ಈ ಜಗದ ಎಲ್ಲ ಎಲ್ಲೆ!

ಸೋತಳು ನಿನಗೆ ಪಿ.ಟಿ.ಉಷಾ
ಅಡೆ ತಡೆಗಳ ದಾಟಿ
ಓಡುವ ವೇಗದಲಿ
ನನ್ನ ಕೂಡುವ ತವಕದಲಿ!

ಮೀರಿದೆ ನಾನು ಗವಾಸ್ಕರನ
ನೂರುಗಳ ದಾಖಲೆ
ನಿನಗಿತ್ತ ಮುತ್ತಿನಲ್ಲಿ
ಪಡೆದ ಸಿರಿ ಸಂಪತ್ತಿನಲಿ

ಎಲ್ಲ ಆಟಗಳೂ ತೀರಿದವು
ಈಗ ಕಣ್ಣಾಮುಚ್ಚಾಲೆ
ಎಲ್ಲಡಗಿದೆ, ನಲ್ಲೆ ?
ಇನ್ಯಾರ ತೆಕ್ಕೆಯಲ್ಲೆ ?

ಉಳಿಸಿ ಹೋದೆಯಾ ನನಗೆ
ಮುಗಿಯದ ಹುಡುಕಾಟ!
ಒಲವೇ, ನೀನೆಲ್ಲಿ ?
ಇನ್ಯಾವ ಹೆಣ್ಣಿನಲ್ಲಿ?


ಸುಬ್ಬಾಭಟ್ಟರ ಮಗಳೇ.../ Subba bhattara magale

ಸುಬ್ಬಾಭಟ್ಟರ ಮಗಳೇ, ಇದೆಲ್ಲ ನಂದೇ ತಗೊಳ್ಳೇ.
ನೀಲಿ ನೈಲೆಕ್ಸಿನ ಮೆಘವಿನ್ಯಾಸದ ಆಕಾಶದ ಸೀರೆ,
ದಿಗಂತಗಳೇ ಮೇರೆ.
ಮುಂಜಾವಿನ ಬಂಗಾರದ ಬೆಟ್ಟ, ಬೆಳದಿಂಗಳ ಬೆಳ್ಳಿ.
ನಿನ್ನ ಭಾಗ್ಯಕೆ ಎಣೆಯೆಲ್ಲಿ ||

ರಾತ್ರಿ ತೆರೆಯುವುದು ಅದೂ ನನ್ನದೇ
ಜಿಗಿ ಜಿಗಿ ಒಡವೆ ದುಕಾನು,
ಆರಿಸಿಕೋ ಬೇಕೇನು.
ಚಿಕ್ಕೆ ಮೂಗುತಿ, ಚಂದ್ರ ಪದಕಕ್ಕೆ,
ನೀಹಾರಿಕೆ ಹಾರ, ನನ್ನ ಸಂಪತ್ತೆಷ್ಟು ಅಪಾರ ||

ನಸುಕಲಿ ಹಿತ್ತಲ ಹುಲ್ಲಿನ ಮೇಲೆ
ರಾಶಿ ರಾಶಿ ಮುತ್ತು,
ಎಂದೂ ನಿನ್ನ ಸೊತ್ತು
ಸುಗಂಧ ತೀಡುವ ವಸಂತ ಪವನ,
ಸಪ್ತವರ್ಣದ ಕಮಾನು,
ನಿನಗೇ ಹೌದು!

ಪಾತರಗಿತ್ತಿಯ ಪಕ್ಕವನೇರಿ,
ಧೂಪದ ಕಾನಿಗೆ ಹಾರಿ,
ಪ್ರಾಯದ ಮಧು ಹೀರಿ,
ಜುಳು ಜುಳು ಹರಿಯುವ ಕಾಲದ ಹೊಳೆಯಲಿ,
ತೇಲುವ ಮುಳುಮುಳುಗಿ,
ನಿನ್ನ ಹೊಸತನದಲಿ ಬೆಳಗಿ ||


ಗೋಪಿ ಮತ್ತು ಗಾಂಡಲೀನ / gopi mattu gandaleena

ಜಾಲಿಬಾರಿನಲ್ಲಿ ಕೂತು ಪೋಲಿ ಗೆಳೆಯರು,
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು.

'ಗುಂಡು ಹಾಕೋ ಗೋಪಿ',
'ನಂಗ್ ಸಾಕಪ್ಪ ಕಾಪಿ',
'ಚಿಕ್ಕನ್ ಬಿರಿಯಾನಿ',
'ಏಕ್ ಲೋಟ ಥ೦ಡ ಪಾನಿ'.

ಜಾಸ್ ಗಾನದ ಹೊಳೆಗೆ ತೇಲಿ ಬಂದಳು ಕ್ಯಾಬರಿ
ಬಾಂಗೋತಾನದ ಅಲೆಗೆ ತೂಗಿ ಅರೆ ದಿಗಂಬರಿ
ಗಾಂಡಲೀನಲು,
ಮಧುಭಾಂಡದಂಥವಳು 
ಬಿಟ್ಟ ಕಣ್ಣು ಬಾಯಿ ಗೋಪಿ ಗುಮ್ಮಾದನು
ಅವಳು ಜಗಿಯುತಿದ್ದ ಚ್ಯೂಯಿಂಗ್ ಗಮ್ಮಾದನು.

ಗುಂಡು ಗುಂಡು ಗಾಂಡಲೀನ ಕ್ಯಾಬರಿಸುತ್ತ
ತನ್ನ ಅಂಗೋಪಾಂಗಗಳ ತಾನೇ ನೇವರಿಸುತ್ತಾ
ನಿಧ-ನಿಧಾನವಾಗಿ,
ವಿಧ-ವಿಧಾನವಾಗಿ,
ಬತ್ತಲಾಗುತಿರಲು ಗೋಪಿ ಕಲ್ಲಾದನು.
ರಂಭೆಯನ್ನು ಕಂಡ ಋಷಿಯ ಸ್ಟಿಲ್ಲಾದನು.

ಗಾಂಡಲೀನ ಗೋಪಿಯ ಬಳಿ ತೊನೆದು ಬಂದಳು
ಅವನ ಹಂಡೆ ಹೊಟ್ಟೆಯನ್ನು ಬಳಸಿ ನಿಂದಳು
ಚೊಂಬು ಕೆನ್ನೆ ಮೇಲೆ,
ತುಟಿ ಬಿಂಬಿಸಿದಳು ಬಾಲೆ
ಬುರ ಬುರ ಬುರ ಊದಿ ಗೋಪಿ ಬೋಂಡವಾದನು.
ಮಾದ್ರಿಯಪ್ಪಿದಾಗಿನಂಥ ಪಾಂಡುವಾದನು.

ಕಟ್ಟಕಡೆಯ ತುಟ್ಟತುದಿಯ ಶಿಖರ ನೋಟದಲ್ಲಿ
ನಡುವಿನ ಗಡಿ ಮೀರಿ ಮಾನ ಜಾರುವಷ್ಟರಲ್ಲಿ
ಹಾ, ವೆಂಕಟಸುಬ್ಬಿ!
ಹೆಂಡತಿ ನೆನಪು ದಬ್ಬಿ,
ಗಾಂಡಲೀನಳ ಪಾದಪದ್ಮಕಡ್ಡ ಬಿದ್ದನೋ.
ಪರನಾರಿ ಸಹೋದರನು ಕಾಮ ಗೆದ್ದನೋ.


ಅಮ್ಮ ನಿನ್ನ ಎದೆಯಾಳದಲ್ಲಿ / Amma ninna edeyaaladalli

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು 
ಮಿಡುಕಾಡುತಿರುವೆ ನಾನು |
ಕಡಿಯಲೋಲ್ಲೆ ನೀ ಕರುಳ ಬಳ್ಳಿ ಒಲವೂಡುತಿರುವ ತಾಯೆ 
ಬಿಡದ ಭುವಿಯ ಮಾಯೆ ||

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ 
ದೂಡು ಹೊರಗೆ ನನ್ನ |
ಓಟ ಕಲಿವೆ ಒಳನೋಟ ತಿಳಿವೆ ನಾ ಕಲಿವೆ ಊರ್ಧ್ವಗಮನ 
ಓ ಅಗಾಧ ಗಗನ ||

ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ 
ಬ್ರಹ್ಮಾಂಡವನ್ನೇ ಬೆದಕಿ |
ಇಂಧನ ತೀರಲು ಬಂದೇ ಬರುವೆ ಮತ್ತೆ ನಿನ್ನ ತೊಡೆಗೆ 
ಮೂರ್ತ ಪ್ರೇಮದೆಡೆಗೆ || 

                                                       - ಬಿ. ಆರ್. ಲಕ್ಷ್ಮಣ ರಾವ್

1 ಕಾಮೆಂಟ್‌:

Unknown ಹೇಳಿದರು...

ತುಂಬ ಧನ್ಯವಾದಗಳು ಸರ್,, ಭಾವಗೀತೆಗಳಿಗಾಗಿ ಹುಡುಕಾಡಬೇಕಾಗಿದೆ.