ಭಗವದ್ಗೀತೆ ಅಧ್ಯಾಯ-7 (ಶ್ಲೋಕ-16 ರಿಂದ 30)

 ಭಗವದ್ಗೀತೆ ಅಧ್ಯಾಯ-7 (ಶ್ಲೋಕ-16 ರಿಂದ 30)

·  ಶ್ಲೋಕ - 16
ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋSರ್ಜುನ
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ ೧೬॥
ಚತುರ್ವಿಧಾಃ ಭಜಂತೇ ಮಾಮ್ ಜನಾಃ ಸುಕೃತಿನಃ ಅರ್ಜುನ
ಆರ್ತಃ ಜಿಜ್ಞಾಸುಃ ಅರ್ಥ ಅರ್ಥೀ ಜ್ಞಾನೀ ಚ ಭರತ ಋಷಭ-ಓ ಭರತ ವಂಶದ ವೀರ ಅರ್ಜುನ, ಪುಣ್ಯವಂತರಾದ ನಾಲ್ಕು ಬಗೆಯ ಜನರು ನನ್ನಲ್ಲಿ ಭಕ್ತಿ ಇಡುತ್ತಾರೆ: ಸಂಕಟದಲ್ಲಿರುವವರು, ಸಿರಿಯನ್ನು ಬಯಸುವವರು, ತಿಳಿಯ ಬಯಸುವವನು ಮತ್ತು ತಿಳಿದವನು.
ದುಷ್ಕೃತಿಗಳ ಬಗ್ಗೆ ಮೊದಲು ವಿವರಿಸಿದ ಕೃಷ್ಣ ಈ ಶ್ಲೋಕದಲ್ಲಿ ಸುಕೃತಿಗಳ ಬಗ್ಗೆ ವಿವರಿಸುತ್ತಾನೆ. ಭಗವಂತನ ಕಡೆಗೆ ಸಾಗುವುದು ಒಂದು ಸರಳರೇಖೆಯ ದಾರಿ ಇದ್ದಂತೆ. ಅದು ಕವಲು ದಾರಿ ಅಲ್ಲ. ಈ ಸರಳರೇಖೆಯಲ್ಲಿ ಭಗವಂತನಿಗೆ ಬೆನ್ನು ಹಾಕಿ ಸಾಗುವವರು ಸ್ವಭಾವತಃ ದುಷ್ಕೃತಿಗಳು, ಭಗವಂತನಿಗೆ ಬೆನ್ನು ಹಾಕಿ ಸಾಗಿ, ನಂತರ ಅರಿವು ಮೂಡಿ ಪುನಃ ಭಗವಂತನತ್ತ ಮುಖ ಹಾಕುವವರು ದುಷ್ಕೃತಿಗಳಾಗಿದ್ದು ಸುಕೃತಿಗಳಾಗುವವರು, ಇನ್ನು ಭಗವಂತನತ್ತ ಮುಖ ಮಾಡಿ ಸಾಗುವವರು ಸ್ವಭಾವತಃ ಸುಕೃತಿಗಳು. ಇವರು ಭಗವಂತನನ್ನು ಭಜಿಸುವವರು. ಈ ಸುಕೃತಿಗಳಲ್ಲಿ ನಾಲ್ಕು ವಿಧ: (೧) ಆರ್ತಃ (೨) ಜಿಜ್ಞಾಸುಃ (೩) ಅರ್ಥ ಅರ್ಥೀ (೪) ಜ್ಞಾನಿ.
ಕೃಷ್ಣ ಹೇಳುತ್ತಾನೆ ನನ್ನನ್ನು ನಾಲ್ಕು ವಿಧದಲ್ಲಿ ಭಜಿಸುವ ಸುಕೃತ ಜನರಿದ್ದಾರೆಎಂದು. ಇಲ್ಲಿ ಭಜಿಸುವುದು ಅಥವಾ ಭಜನೆಅಂದರೆ ಭಕ್ತಿಯಿಂದ ಭಗವಂತನನ್ನು ಆರಾದಿಸುವುದುಎಂದರ್ಥ. ಭಜ ಸೇವಾಯಾಂ ಧಾತು. ಭಗವಂತನನ್ನು ಎಲ್ಲವುದಕ್ಕಿಂತ ಹಿರಿದಾಗಿ ಮತ್ತು ಹೆಚ್ಚಾಗಿ ಪ್ರೀತಿಸಿ, ಆ ಪ್ರೀತಿಗೆ ತಕ್ಕಂತೆ ನಡೆದುಕೊಳ್ಳುವುದು ಭಜನೆ. ಈ ರೀತಿ ಭಜಿಸುವವರಲ್ಲಿ ಮೊದಲನೆಯವರು ಆರ್ತರು.
ಮನುಷ್ಯ ಯಾವುದೋ ಒಂದು ತೊಂದರೆಗೆ ಸಿಕ್ಕಿಕೊಂಡಾಗ, ದುಃಖಕ್ಕೊಳಗಾದಾಗ, ಪರಿಹಾರ ಕೋರಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾನೆ. ಇದು ಆರ್ತಃ ಭಕ್ತಿ. ಈ ಭಕ್ತಿಯಲ್ಲಿ ಅತ್ಯಂತ ಕೆಳ ಮಟ್ಟದಿಂದ ಅತ್ಯಂತ ಶ್ರೇಷ್ಠ ಮಟ್ಟನ್ನು ಕಾಣಬಹುದು. ಕಷ್ಟ ಬಂದಾಗ ದೇವರನ್ನು ಆರ್ತನಾಗಿ ಭಜಿಸಿ ಸುಖ ಬಂದಾಗ ಸಂಪೂರ್ಣ ಮರೆತರೆ ಸಂಕಟ ಬಂದಾಗ ವೆಂಕಟರಮಣಎನ್ನುವಂತೆ ಅದು ಅತ್ಯಂತ ಕೆಳಮಟ್ಟದ ಆರ್ತಭಕ್ತಿಯಾಗುತ್ತದೆ. ಆರ್ತ ಭಕ್ತಿಯಲ್ಲಿ ಅತ್ಯಂತ ಶ್ರೇಷ್ಠ ಮಟ್ಟದ ಭಕ್ತಿಗೆ ಉತ್ತಮ ದೃಷ್ಟಾಂತ ದ್ರೌಪದಿ. ಸಭೆಯಲ್ಲಿ ಆಕೆಯ ಮಾನಭಂಗ ಪ್ರಸಂಗ ಎದುರಾದಾಗ, ಆಕೆ ಕೃಷ್ಣನನ್ನು ಆರ್ತನಾದದಿಂದ ಕೂಗಿ ಭಜಿಸುತ್ತಾಳೆ.(ಇಲ್ಲಿ ದ್ರೌಪದಿ ಕೃಷ್ಣನನ್ನು ನಿರಂತರ ಭಜಿಸುತ್ತಿದ್ದಳು ಎನ್ನುವುದನ್ನು ನಾವು ಮರೆಯಬಾರದು). ಮೊಸಳೆ ತನ್ನ ಕಾಲನ್ನು ಕಚ್ಚಿ ಹಿಡಿದಾಗ ಗಜೇಂದ್ರ ಮಾಡಿದ್ದೂ ಕೂಡಾ ಆರ್ತ ಭಕ್ತಿ.
ಆರ್ತ ಭಕ್ತಿಯಲ್ಲಿ ಒಂದು ಸಮಸ್ಯೆ ಇದೆ. ಸಾಮಾನ್ಯವಾಗಿ ನಮಗೆ ಸುಖ ಬಂದಾಗ ನಾವು ಭಗವಂತನನ್ನು ಮರೆತುಬಿಡುತ್ತೇವೆ. ನಮ್ಮೆಲಾ ಐಶ್ವರ್ಯ-ಸಂಪತ್ತು ನಮ್ಮ ದುಡಿಮೆಯ ಫಲಅಂದುಕೊಳ್ಳುತ್ತೇವೆ. ಆಗ ನಮಗೆ ದೇವರು ನನಪಿಗೆ ಬರುವುದೇ ಇಲ್ಲ. ಆದರೆ ಒಂದು ವೇಳೆ ಏನಾದರೂ ಸಮಸ್ಯೆ ಬಂದರೆ-ಮೊದಲು ನೆನಪಿಗೆ ಬರುವುದು ದೇವರು. ಎಂದೆಂದೂ ದೇವರು ಸುಖವನ್ನೇಕೆ ಕೊಟ್ಟಎಂದು ಯೋಚಿಸದ ನಾವು, ಕಷ್ಟ ಬಂದಾಗದೇವರು ನನಗೇಕೆ ಹೀಗೆ ಮಾಡಿದಎನ್ನಲಾರಭಿಸುತ್ತೇವೆ! ಸಾಮಾನ್ಯವಾಗಿ ಜನರು ಸಂಕಟ ಬಂದಾಗ ಮೊದಲು ಜೋತಿಷಿಗಳ ಬಳಿ ಹೋಗುತ್ತಾರೆ. ಜೋತಿಷಿಗಳು ಒಂದು ಪರಿಹಾರ ಮಾರ್ಗವನ್ನು ಸೂಚಿಸುತ್ತಾರೆ. ನವಗ್ರಹ ಪೂಜೆ, ನಾಗಾರಾಧನೆ,ಗಣಪತಿ ಪೂಜೆ, ದೇವೀ ಆರಾದನೆ ಇತ್ಯಾದಿ. ಇಲ್ಲಿ ಕೆಲವು ಶಾಸ್ತ್ರ ಜ್ಞಾನವಿಲ್ಲದ ಮತ್ತು ಅಧ್ಯಾತ್ಮದ ಅರಿವಿಲ್ಲದ ಸಾಮಾನ್ಯ ಜೋತಿಷಿಗಳು, ಜನರಿಗೆ ಸರಿಯಾದ ಮಾರ್ಗದರ್ಶನ ಮಾಡದೇ ತಪ್ಪು ಮಾರ್ಗ ತೋರಿಸುವ ಸಾಧ್ಯತೆ ಹೆಚ್ಚು. ಕೆಲವರುನೀನು ವಿಷ್ಣು ಪೂಜೆ ಮಾಡಿದ್ದರಿಂದ ದೇವಿ ಕೊಪಗೊಂಡಿದ್ದಾಳೆ!!!ಎಂಬಿತ್ಯಾದಿ ಅಸಂಬದ್ಧ ಹೇಳಿಕೆ ಕೊಟ್ಟು, ಜನರನ್ನು ದಾರಿತಪ್ಪಿಸುವ ಪ್ರಸಂಗವಿದೆ. ಹೀಗಾದಾಗ ಸಾಮಾನ್ಯ ಜನರು ಎಲ್ಲಾ ದೇವತೆಗಳನ್ನು ಬೇರೆ ಬೇರೆಯಾಗಿ ಪೂಜಿಸಿ, ಏಕಭಕ್ತಿಯಿಂದ ದೂರ ಸರಿಯುತ್ತಾರೆ. ಇದರಿಂದಾಗಿ ಭಗವಂತನನ್ನು ಪ್ರೀತಿಸುವ ಬದಲು ಭಯದಿಂದ ದೇವರಿಂದ ನನಗೆ ಯಾವ ತೊಂದರೆ ಆಗದಿರಲಿಎನ್ನುವಂತೆ ಭಕ್ತಿ ಮಾಡುವ ಸಾಧ್ಯತೆ ಇದೆ! ಈ ಎಲ್ಲ ಕಾರಣದಿಂದ ನಿರಂತರಭಕ್ತಿ ಮತ್ತು ಏಕಭಕ್ತಿ ಆರ್ತಭಕ್ತರಲ್ಲಿ ಇಲ್ಲದೇ ಇರುವ ಸಾಧ್ಯತೆ ಹೆಚ್ಚು.
ಆರ್ತರು ಕಷ್ಟವನ್ನು ನೀಗುವಂತೆ ಭಗವಂತನಲ್ಲಿ ಭಕ್ತಿ ಮಾಡಿದರೆ, ಜಿಜ್ಞಾಸುಗಳು ಜ್ಞಾನಕ್ಕಾಗಿ ಭಗವಂತನಲ್ಲಿ ಭಕ್ತಿ ಮಾಡುತ್ತಾರೆ. ಅದೇ ರೀತಿ ಅರ್ಥಾರ್ಥಿಗಳು ಐಹಿಕ ಸಂಪತ್ತಿಗಾಗಿ, ಐಶ್ವರ್ಯಕ್ಕಾಗಿ, ಏನನ್ನೋ ಪಡೆಯುವುದಕ್ಕಾಗಿ ಭಗವಂತನನ್ನು ಪೂಜಿಸುತ್ತಾರೆ.
ಈ ಮೂರು ಭಕ್ತರಿಗಿಂತ ಭಿನ್ನ ನಾಲ್ಕನೇ ವಿಧದ ಭಕ್ತ. ಆತ ಜ್ಞಾನಿ. ಆತ ಏನೋ ಬೇಕು ಅಥವ ಬೇಡ ಎಂದು ಭಗವಂತನನ್ನು ಪೂಜಿಸುವುದಿಲ್ಲ; ಬದಲಿಗೆ ಭಗವಂತನ ಮಹಿಮೆಯನ್ನು ಸಂಪೂರ್ಣ ತಿಳಿದ ಆತ ಸಹಜವಾಗಿ ಭಗವಂತನನ್ನು ಅನನ್ಯವಾಗಿ ಪ್ರೀತಿಸುತ್ತಿರುತ್ತಾನೆ. ಈತನಲ್ಲಿ ಏಕಭಕ್ತಿ ಮತ್ತು ನಿರಂತರ ಭಕ್ತಿ ಇರುತ್ತದೆ. ಯಾವುದೇ ಐಹಿಕ ಫಲಾಪೇಕ್ಷೆಯಿಂದ ಈತ ಭಗವಂತನನ್ನು ಭಜಿಸುವುದಿಲ್ಲ.
ಮುಂದಿನ ಶ್ಲೋಕಕ್ಕೆ ಹೋಗುವ ಮೊದಲು ಇಲ್ಲಿ ನಾವು ಏಕಭಕ್ತಿ ಅಂದರೆ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿದಿರಬೇಕು. ಏಕಭಕ್ತಿ ಎಂದರೆ ಎಲ್ಲಾ ದೇವತೆಗಳನ್ನು, ಗುರು-ಹಿರಿಯರನ್ನು ನಿರ್ಲಕ್ಷಿಸಿ ಕೇವಲ ಭಗವಂತನನ್ನು ಪೂಜಿಸುವುದಲ್ಲ. ಒಂದು ವೇಳೆ ನಾವು ಹೀಗೆ ಮಾಡಿದರೆ ಅದು ಭಗವಂತನನ್ನು ಅವಮಾನ ಮಾಡಿದಂತೆ. ಉದಾಹರಣೆಗೆ ನಮಗೆ ಯಾವುದೋ ತೊಂದರೆ ಬಂದಾಗ ಜೋತಿಷಿಯೊಬ್ಬರು ನವಗ್ರಹ ಶಾಂತಿಮಾಡಿಸಿ ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ. ಹೀಗೆ ಹೇಳಿದಾಗ ನಾವು ಅದನ್ನು ನಿರ್ಲಕ್ಷಿಸಿ ಕೇವಲ ಭಗವಂತನನ್ನು ಮಾತ್ರ ನಾನು ಭಜಿಸುತ್ತೇನೆ, ಭಗವಂತನ ಅಧೀನ ದೇವತೆಯ ಪೂಜೆಯ ಅಗತ್ಯವೇನು ಎಂದು ತಿಳಿದುಕೊಂಡರೆ ಅದು ತಪ್ಪಾಗುತ್ತದೆ. ನವಗ್ರಹಗಳ ಪರಿವಾರ ಸಹಿತನಾಗಿ ಕೂತ ಭಗವಂತನಿಗೆ ಮಾಡುವ ಪೂಜೆನವಗ್ರಹ ಪೂಜೆ’. ಇದು ಯಾವುದರಿಂದ ಸಮಸ್ಯೆ ಬಂತೋ ಅದರ ಮುಖಂಡನಾಗಿ ಕುಳಿತ ಭಗವಂತನ ಪೂಜೆ. ಭಗವಂತನ ಸಮಸ್ತ ಪರಿವಾರದ ವೈಭವನ್ನು ನೆನೆಸಿಕೊಂಡು ಯಾವುದೇ ಪೂಜೆ ಮಾಡಿದರೂ ಅದು ಶ್ರೇಷ್ಠ ಪೂಜೆ ಎನಿಸುತ್ತದೆ. ಸಮಸ್ತ ದೇವತೆಗಳ ಸಹಿತನಾದ ಭಗವಂತನ ಉಪಾಸನೆಯೇ ಏಕಭಕ್ತಿ. ಭಗವಂತ ಏಕಾಕಿ ಅಲ್ಲ. ಆತ ಅನಂತ ಪ್ರಜಾಪತಿ. ಆದ್ದರಿಂದ ಭಗವಂತನನ್ನು ಪ್ರಧಾನವಾಗಿಟ್ಟುಕೊಂಡು ಇತರ ದೇವತೆಗಳನ್ನು ಭಗವಂತನ ಪರಿವಾರವಾಗಿ ತಿಳಿದು ನಿಷ್ಠೆಯಿಂದ ಪೂಜಿಸಬೇಕು. ಇದು ದೇವರನ್ನು ಸೇರಲು ನಮಗೆ ಮಾರ್ಗದರ್ಶನ ಮಾಡುವ ದೇವತೆಗಳೂ ಇಷ್ಟಪಡುವ ಅತಿಶ್ರೇಷ್ಠ ಭಕ್ತಿ. ಒಂದು ವೇಳೆ ನಾವು ಭಗವಂತನನ್ನು ಮರೆತು ಕೇವಲ ಒಂದು ದೇವತೆಯನ್ನು ಪೂಜಿಸಿದರೆ ಆ ದೇವತೆ ನಮ್ಮ ಪೂಜೆಯನ್ನು ಸ್ವೀಕರಿಸುವುದಿಲ್ಲ. ಪೂಜೆ ಪರಿಪೂರ್ಣವಾಗಬೇಕಾದರೆ ನಾವು ಏಕಭಕ್ತಿಯನ್ನು ಭಗವಂತನಲ್ಲಿ ತೋರಬೇಕು.
ಗುರುಭಕ್ತಿ ಕೂಡಾ ಇದೇ ರೀತಿ. ಗುರುಭಕ್ತಿಯಲ್ಲಿ ನಾವು ಕಾಣಬೇಕಾಗಿರುವುದು ಗುರುವಿನ ಅಂತರಂಗದೊಳಗಿರುವ ಭಗವಂತನನ್ನು. ಜ್ಞಾನಿ ಎಲ್ಲವುದರಲ್ಲೂ ಅದರ ಅಂತರ್ಯಾಮಿಯಾದ ಭಗವಂತನನ್ನು ಕಾಣುತ್ತಾ, ಐಹಿಕ ಫಲಾಪೇಕ್ಷೆ ಇಲ್ಲದ ಏಕಭಕ್ತಿ ಮತ್ತು ನಿರಂತರ ಭಕ್ತಿಯನ್ನು ರೂಢಿಸಿಕೊಂಡಿರುತ್ತಾನೆ.
·  ಶ್ಲೋಕ - 17
ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ ।
ಪ್ರಿಯೋ ಹಿ ಜ್ಞಾನಿನೋSತ್ಯರ್ಥಮಹಂ ಸ ಚ ಮಮ ಪ್ರಿಯಃ ೧೭॥
ತೇಷಾಮ್ ಜ್ಞಾನೀ ನಿತ್ಯಯುಕ್ತಃ ಏಕಭಕ್ತಿಃ ವಿಶಿಷ್ಯತೇ ।
ಪ್ರಿಯಃ ಹಿ ಜ್ಞಾನಿನಃ ಅತ್ಯರ್ಥಮ್ ಅಹಮ್ ಸಃ ಚ ಮಮ ಪ್ರಿಯಃ ಅವರಲ್ಲಿ ತಿಳಿದವನು ಮಿಗಿಲಾದವನು ; ನನ್ನಲ್ಲೇ ಭಕ್ತಿಯನ್ನಿಟ್ಟು, ನನ್ನನೇ ಸದಾ ನೆನೆಯುವವನು. ತಿಳಿದವನಿಗೆ ನಾನೆಂದರೆ ತುಂಬಾ ಇಷ್ಟ, ಅವನೆಂದರೆ ನನಗೂ ತುಂಬಾ ಇಷ್ಟ.
ಮೇಲೆ ಹೇಳಿದ ನಾಲ್ಕು ರೀತಿಯ ಭಕ್ತರಲ್ಲಿ ಜ್ಞಾನಿ ಎಲ್ಲರಿಗಿಂತ ಶ್ರೇಷ್ಠ. ಆತ ಜ್ಞಾನಪೂರ್ವಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಭಗವಂತನನ್ನು ತಿಳಿದು ಸಹಜವಾಗಿ ಪ್ರೀತಿಸುತ್ತಾನೆ. ಹಿಂದಿನ ಅಧ್ಯಾಯಗಳಲ್ಲಿ ನೋಡಿದಂತೆ ನಾವು ಏನನ್ನು ಮಾಡುತ್ತೇವೋ ಅದನ್ನೇ ಪಡೆಯುತ್ತೇವೆ. ಭಗವಂತನನ್ನು ಹೇಗೆ ಕಾಣುತ್ತೇವೋ ಹಾಗೇ ಭಗವಂತ ನಮ್ಮನ್ನು ಕಾಣುತ್ತಾನೆ. ಈ ಕಾರಣದಿಂದ ಜ್ಞಾನಪೂರ್ವಕವಾದ, ಫಲಾಪೇಕ್ಷೆ ಇಲ್ಲದ, ಏಕಭಕ್ತಿಯುಳ್ಳ ಜ್ಞಾನಿ ಭಗವಂತನಿಗೆ ಬಹಳ ಹತ್ತಿರದಲ್ಲಿರುತ್ತಾನೆ.
·  ಶ್ಲೋಕ - 18
ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಮ್ ।
ಆಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ ॥೧೮॥
ಉದಾರಾಃ ಸರ್ವೇ ಏವ ಏತೇ ಜ್ಞಾನೀ ತು ಆತ್ಮಾ ಏವ ಮೇ ಮತಮ್ ।
ಆಸ್ಥಿತಃ ಸಃ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ ಇವರೆಲ್ಲರೂ ದೊಡ್ದವರೇ. ತಿಳಿದವನಂತು ತೀರ ನನ್ನವನು ಎಂದು ನನ್ನ ತೀರ್ಮಾನ. ಏಕೆಂದರೆ ಅವನು ಹಿರಿಯ ನೆಲೆಯಾದ ನನ್ನಲ್ಲೆ ಬಗೆ ನೆಟ್ಟು ನನ್ನಲ್ಲೆ ನೆಲೆಗೊಂಡವನು.
ಕೃಷ್ಣ ಹೇಳುತ್ತಾನೆ ಭಕ್ತಿ ಮಾರ್ಗದಲ್ಲಿ ನಡೆಯುವ ಈ ಎಲ್ಲಾ ರೀತಿಯ ಸುಕೃತಿಗಳೂ ಉತ್ತಮರೆ ; ಆದರೆ ಜ್ಞಾನಿ ಮಾತ್ರ ನನಗೆ ತುಂಬಾ ಹತ್ತಿರದವನು ಮತ್ತು ಆತ್ಮೀಯಎಂದು. ಏಕೆಂದರೆ ನಮಗೆ ತಿಳಿದಂತೆ ಜ್ಞಾನವಿಲ್ಲದ ಭಕ್ತಿ ಪೂರ್ಣಭಕ್ತಿ ಆಗುವುದಿಲ್ಲ. ಜ್ಞಾನಪೂರ್ವಕವಾಗಿ ಭಕ್ತಿ ಮಾಡುವವ ನೇರವಾಗಿ ಭಗವಂತನನ್ನು ಹೋಗಿ ಸೇರುತ್ತಾನೆ. ಆದ್ದರಿಂದ ಅದು ಶ್ರೇಷ್ಠವಾದ ಭಕ್ತಿ.
ಜ್ಞಾನಿಗಳು ಆರ್ತರಾಗಿರಬಹುದು, ಜಿಜ್ಞಾಸುಗಳಾಗಿರಬಹುದು ಅಥವಾ ಅರ್ಥಾರ್ಥಿಗಳಾಗಿರಬಹುದು(ಉದಾಹರಣೆಗೆ ಅರ್ಜುನ). ಆದರೆ ಎಲ್ಲಾ ಆರ್ತರು, ಜಿಜ್ಞಾಸುಗಳು ಮತ್ತು ಅರ್ಥಾರ್ಥಿಗಳು ಜ್ಞಾನಿಗಳಾಗಿರಬೇಕೆಂದೇನಿಲ್ಲ. ಜ್ಞಾನಿಗೆ ಸದೃಶವಾದ ಭಕ್ತಿ ಇನ್ನೊಂದಿಲ್ಲ. ಜ್ಞಾನಿಯ ಮನಸ್ಸು ಸದಾ ಭಗವಂತನಲ್ಲಿ ನೆಟ್ಟಿರುತ್ತದೆ. ಭಕ್ತಿಯ ಮಾರ್ಗದಲ್ಲಿ ಸಾಗುವ ಎಲ್ಲರೂ ದೊಡ್ಡವರಾದರೂ ಕೂಡಾ, ಜ್ಞಾನಿ ಮಾತ್ರ ಭಗವಂತನಿಗೆ ಅತೀ ಆತ್ಮೀಯ.
ಮೇಲೆ ಹೇಳಿದಂತೆ ಜ್ಞಾನಿ ಅರ್ಥಾರ್ಥಿಯಾಗಿರಬಹುದು. ಈ ವಿಚಾರ ನಿಮಗೆ ಸ್ವಲ್ಪ ಗೊಂದಲವೆನಿಸಬಹುದು. ಪ್ರಹ್ಲಾದನ ಜೀವನದ ಒಂದು ಘಟನೆಯನ್ನು ನೋಡಿದರೆ ಈ ವಿಚಾರ ನಮಗೆ ಅರ್ಥವಾಗುತ್ತದೆ. ಪ್ರಹ್ಲಾದನ ಕಥೆ ನಮಗೆಲ್ಲರಿಗೂ ತಿಳಿದಿದೆ. ಆತ ಮಹಾನ್ ಜ್ಞಾನಿ. ಇಂತಹ ಪ್ರಹ್ಲಾದ ತನ್ನ ತಂದೆ ಹಿರಣ್ಯಾಕ್ಷನನ್ನು ಕೊಂದ ನರಸಿಂಹ ರೂಪಿ ಭಗವಂತನಲ್ಲಿ ಒಂದು ಪ್ರಾರ್ಥನೆ ಮಾಡುತ್ತಾನೆ. ನನ್ನ ತಂದೆ ತಿಳುವಳಿಕೆ ಇಲ್ಲದೆ, ನಿನ್ನ ಮಹತ್ವ ಗೊತ್ತಿಲ್ಲದೆ, ನಿನ್ನನ್ನು ನಿಂದೆ ಮಾಡಿದ. ಆ ದೋಷಕ್ಕೆ ಎಂದೂ ಪರಿಹಾರ ಇಲ್ಲ ಎನ್ನುವುದು ನನಗೆ ತಿಳಿದಿದೆ. ಆದರೂ ಅಜ್ಞಾನದಿಂದ ಆತ ಮಾಡಿದ ತಪ್ಪನ್ನು ಕ್ಷಮಿಸುಎಂದು. ಇಲ್ಲಿ ಯಾವುದೇ ಸ್ವಾರ್ಥ ನಮಗೆ ಕಾಣುವುದಿಲ್ಲ. ಆದ್ದರಿಂದ ಇದು ಜ್ಞಾನಿ ಅರ್ಥಾರ್ಥಿ ಹೇಗೆ ಆಗುತ್ತಾನೆ ಎನ್ನುವುದಕ್ಕೆ ಉತ್ತಮ ನಿದರ್ಶನ.
·  ಶ್ಲೋಕ - 19
ಬಹೂನಾಂ ಜನ್ಮನಾಮಂತೇ ಜ್ಞಾನವಾನ್ ಮಾಂ ಪ್ರಪದ್ಯತೇ
ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ೧೯॥
ಬಹೂನಾಮ್ ಜನ್ಮನಾಮ್ ಅಂತೇ ಜ್ಞಾನವಾನ್ ಮಾಮ್ ಪ್ರಪದ್ಯತೇ
ವಾಸುದೇವಃ ಸರ್ವಮ್ ಇತಿ ಸಃ ಮಹಾ ಆತ್ಮಾ ಸು ದುರ್ಲಭಃ -ಬಹಳ ಜನ್ಮಗಳ ಸಾಧನೆಯ ಕೊನೆಯಲ್ಲಿ ಅರಿವು ಪಡೆದು ನನ್ನನ್ನು ಸೇರುತ್ತಾನೆ. ವಾಸುದೇವನೆ ಎಲ್ಲೆಡೆ ತುಂಬಿರುವ ಪೂರ್ಣತತ್ವಎಂದರಿತ ಅಂಥ ಹಿರಿಯ ವ್ಯಕ್ತಿ ತುಂಬ ವಿರಳ.
ಜೀವನದಲ್ಲಿ ಜ್ಞಾನಿ ಎನಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಕೃಷ್ಣ ಹೇಳುತ್ತಾನೆ:ಬಹೂನಾಂ ಜನ್ಮನಾಮಂತೇ ಜ್ಞಾನವಾನ್ ಮಾಂ ಪ್ರಪದ್ಯತೇಎಂದು. ಅಂದರೆ ಅನೇಕಾನೇಕ ಜನ್ಮಗಳ ಸಾಧನೆಯಿಂದ, ಜಿಜ್ಞಾಸೆಯಿಂದ, ಅಧ್ಯಯನದಿಂದ ಜ್ಞಾನ ಬರುತ್ತದೆ ಮತ್ತು ಇಂತಹ ಜ್ಞಾನಿ ಸಹಜವಾಗಿ ನನಗೆ ಶರಣಾಗುತ್ತಾನೆ”. ಹಿಂದಿನ ಅಧ್ಯಾಯಗಳಲ್ಲಿ ಹೇಳಿದಂತೆ ಜ್ಞಾನ ಸಂಪಾದನೆ ಒಂದು ಜನ್ಮದ ಸಾಧನೆ ಅಲ್ಲ. ಆದರೆ ಒಂದು ಜನ್ಮದಲ್ಲಿ ಮಾಡಿದ ಅಧ್ಯಾತ್ಮ ಸಾಧನೆ ಎಂದೂ ನಷ್ಟವಾಗುವುದಿಲ್ಲ. ಹುಟ್ಟುವಾಗಲೇ ನಾವು ನಮ್ಮ ಹಿಂದಿನ ಜನ್ಮದ ಅಧ್ಯಾತ್ಮ ಸಾಧನೆಯ ಜ್ಞಾನವನ್ನು ಹೊತ್ತು ಹುಟ್ಟುತ್ತೇವೆ. ಇದು ಮಾನವನಿಗೆ ಭಗವಂತನ ಮಹಾ ಪ್ರಸಾದ. ಜ್ಞಾನ ಎನ್ನುವುದು ನೂರಾರು ಜನ್ಮಗಳ ಸಂಚಯನ. ಇದು ಒಂದು ಜನ್ಮದಲ್ಲಿ ಪಡೆಯಬಹುದಾದ ವಿಷಯವಲ್ಲ. ನಾವು ಎಷ್ಟು ತಿಳಿದಿದ್ದರೂ ಕೂಡಾ ಅದು ಕಡಿಮೆಯೇ. ಭಗವಂತನೇ ಹೇಳುವಂತೆ ವೇದದ ಪೂರ್ಣ ಅರ್ಥವನ್ನು ಭಗವಂತನಲ್ಲದೆ ಇನ್ಯಾರೂ ತಿಳಿದಿಲ್ಲ.
ಹೀಗೆ ಯಾರು ಜನ್ಮ ಜನ್ಮಗಳ ಸಾಧನೆಯಿಂದ ಜ್ಞಾನಿ ಎನಿಸುತ್ತಾನೋ ಆತ ಸರ್ವಸ್ವವನ್ನೂ ವಾಸುದೇವನಲ್ಲಿ ಅರ್ಪಿಸಿ ಮೋಕ್ಷ ಪಡೆಯುತ್ತಾನೆ. ಇಲ್ಲಿ ವಾಸುದೇವ ಎನ್ನುವ ಭಗವಂತನ ನಾಮಕ್ಕೆ ವಿಶೇಷ ಅರ್ಥವಿದೆ. ವಾಸು+ದೇವ-ವಾಸುದೇವ. ಭಗವಂತ ವಾಸು, ಅಂದರೆ ತನ್ನನ್ನು ತಾನು ಮುಚ್ಚಿಕೊಂಡವನು. ಯಾವಾಗ ನಾವು ಜ್ಞಾನವನ್ನು ಪಡೆದು, ಹದಿನೈದು ಬೇಲಿಗಳನ್ನು ದಾಟಿ, ಸಮಾದಿ ಸ್ಥಿತಿಯಿಂದ ಆಳಕ್ಕಿಳಿದು, ಹದಿನಾರನೇ ಜೀವಸ್ವರೂಪವನ್ನು ಕಾಣುತ್ತೇವೋ, ಆಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ; ಈ ಸ್ಥಿತಿಯಲ್ಲಿ ಮುಚ್ಚಿಕೊಂಡ ಭಗವಂತ ದೇವನಾಗಿ ತೆರೆದುಕೊಳ್ಳುತ್ತಾನೆ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮನ್ನು ಕಾಣಬೇಕು. ನಮ್ಮ ಅರಿವೇ ನಮಗಿಲ್ಲದೆ ಭಗವಂತನನ್ನು ಕಾಣುವುದು ಅಸಾಧ್ಯ. ನಾವು ನಮ್ಮ ಜೀವಸ್ವರೂಪವನ್ನು ಕಂಡಾಗ, ಅದರೊಳಗಿನಿಂದ ಸಾಕ್ಷಾತ್ಕಾರವಾಗುವ ಭಗವಂತ ದೇವಃ. ನಾವು ನಮ್ಮ ಪಂಚಕೋಶಗಳ ಪರದೆಯಲ್ಲಿದ್ದಾಗ ವಾಸುವಾಗಿ; ಜ್ಞಾನ ಸಂಪಾದನೆಯಿಂದ ಪರದೆಯಿಂದಾಚೆಗೆ ಬಂದು ಜೀವ ಸ್ವರೂಪವನ್ನು ಕಂಡಾಗ ದೇವನಾಗಿ ದರ್ಶನ ಕೊಡುವ ಭಗವಂತ ವಾಸುದೇವಃ.
ಹೀಗೆ ಅನೇಕ ಜನ್ಮಗಳ ಸಾಧನೆಯಿಂದ ಜ್ಞಾನ ಸಂಪಾದಿಸಿ, ಭಗವಂತನನ್ನು ತಿಳಿದು, ಭಗವಂತನಲ್ಲಿ ಶರಣಾಗುವ ಜ್ಞಾನಿ ಬಹಳ ಹಿರಿಯ. ಜಗತ್ತಿನಲ್ಲಿ ಇಂತವರು ಬಹಳ ವಿರಳ ಎನ್ನುತ್ತಾನೆ ಕೃಷ್ಣ.
ಇಲ್ಲಿ ನಾವು ನಾಲ್ಕು ಬಗೆಯ ಭಕ್ತರನ್ನು ಮತ್ತು ಅವರಲ್ಲಿ ಜ್ಞಾನಿಯ ಶ್ರೇಷ್ಠತೆಯನ್ನು ನೋಡಿದೆವು. ಈ ನಾಲ್ಕು ಬಗೆಯಲ್ಲೂ ಸೇರದೆ ಪಂಚಮರಾಗಿ ಹೊರಗುಳಿಯುವ ಜನರು ಏಕೆ ಹಾಗಿರುತ್ತಾರೆ ಎನ್ನುವ ವಿಚಾರವನ್ನೂ ಕೃಷ್ಣ ವಿವರಿಸಿದ. ಮನುಷ್ಯ ನಿಜವಾದ ಅಧ್ಯಾತ್ಮ ಮಾರ್ಗದಲ್ಲಿ ನಡೆಯದೆ ಎಲ್ಲಿ ಎಡವುತ್ತಾನೆ ಎನ್ನುವ ಅಂಶಗಳನ್ನು ಕೃಷ್ಣ ಈ ಅಧ್ಯಾಯದ ಮುಂದಿನ ಭಾಗದಲ್ಲಿ ವಿವರಿಸುತ್ತಾನೆ.
·  ಶ್ಲೋಕ - 20
ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇSನ್ಯದೇವತಾಃ ।
ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ॥೨೦॥
ಕಾಮೈಃ ತೈಃ ತೈಃ ಹೃತ ಜ್ಞಾನಾಃ ಪ್ರಪದ್ಯಂತೇ ಅನ್ಯ ದೇವತಾಃ ।
ತಮ್ ತಮ್ ನಿಯಮಮ್ ಆಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ-ಯಾವ ಯಾವುದೋ ಬಯಕೆಗಳಿಂದ ಅರಿವು ಅಳಿದವರು ತಮ್ಮ ಸ್ವಭಾವ ಸಂಸ್ಕಾರಗಳಿಗೆ ತಕ್ಕಂತೆ ಆಯಾ ಕಟ್ಟಲೆಗಳಿಗೆ ಕಟ್ಟುಬಿದ್ದು ಬೇರೆ ಬೇರೆ ದೇವತೆಗಳಿಗೆ ಮೊರೆಹೋಗುತ್ತಾರೆ.
ಕೃಷ್ಣ ಹಿಂದಿನ ಅಧ್ಯಾಯಗಳಲ್ಲಿ ಹೇಳಿರುವ ವಿಚಾರವನ್ನು ಮತ್ತೆ ಒತ್ತು ಕೊಟ್ಟು ಇಲ್ಲಿ ವಿವರಿಸುತ್ತಾನೆ. ಮನುಷ್ಯ ಅಧ್ಯಾತ್ಮ ಮಾರ್ಗದಿಂದ ದೂರ ಸರಿಯಲು ಮೂಲ ಕಾರಣ ಅವನ ಹುಚ್ಚು ಬಯಕೆಗಳು. ಇದು ನಮ್ಮ ಅರಿವಿಗೆ ದೊಡ್ಡ ಅಡ್ಡಗೋಡೆ. ಬಯಕೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ, ಮನುಷ್ಯ ಅಧ್ಯಾತ್ಮದ ಬೆನ್ನುಹತ್ತುವ ಬದಲು ಬಯಕೆಗಳ ಬೆನ್ನು ಹತ್ತುತ್ತಾನೆ. ಬಯಕೆಗಳ ಈಡೇರಿಕೆಗೋಸ್ಕರ ಮಾಡಬಾರದ್ದನ್ನು ಮಾಡುತ್ತಾ ಹೋಗುತ್ತಾನೆ ಮತ್ತು ಅಧಃಪಾತವನ್ನು ಹೊಂದುತ್ತಾನೆ.
ಬಯಕೆಗಳ ಬೆನ್ನುಹತ್ತಿದಾಗ ಬಯಕೆ ಅರಿವನ್ನು ನಿಯಂತ್ರಿಸಲಾರಂಭಿಸುತ್ತದೆ. ಈ ಸಮಯದಲ್ಲಿ ಯಾರಾದರೂ ನಿನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ದೇವಾಲಯಕ್ಕೆ ಹೋಗುಎಂದರೆ ಆತ ಅಲ್ಲಿಗೆ ಹೋಗುತ್ತಾನೆ . ಹೀಗೆ ಇಷ್ಟಾರ್ಥ ಸಿದ್ಧಿ ಎಲ್ಲಿ ಸಾಧ್ಯ ಎಂದು ಸುದ್ದಿ ಬಂತೋ ಅಲ್ಲಿಗೆ ಭೇಟಿ ಕೊಡಲಾರಂಭಿಸುತ್ತಾನೆ. ಇದರಿಂದಾಗಿ ಆತ ಮೂಲ ಅಧ್ಯಾತ್ಮ ತತ್ವವನ್ನು ಬಿಟ್ಟು, ಏಕಭಕ್ತಿಯಿಂದ ದೂರ ಸರಿದು, ಎಲ್ಲಿ ತನ್ನ ಅಪೇಕ್ಷೆ ಈಡೇರುತ್ತದೋ ಅಲ್ಲಿ, ಆಯಾ ದೇವತೆಗಳನ್ನು ತನ್ನ ಭೌತಿಕ ಬಯಕೆಗಳನ್ನು ಈಡೇರಿಸುವಂತೆ ಬೇಡಿ ಪೂಜಿಸಲಾರಂಭಿಸುತ್ತಾನೆ. ಅದಕ್ಕಾಗಿ ಯಾವುದ್ಯಾವುದೋ ವೃತಾಚರಣೆ ಮಾಡಲಾರಂಭಿಸುತ್ತಾನೆ. ಇದರಿಂದಾಗಿ ಆತ ನಿಜವಾದ ಭಗವಂತನ ಉಪಾಸನೆಯ ಮಾರ್ಗದಿಂದ ದೂರ ಸರಿಯುತ್ತಾನೆ. ಏಕಭಕ್ತಿ ಉಪಾಸನೆಯಿಂದ ರೀತಿಯ ಅಲ್ಪ ಬಯಕೆ ಎಂದೂ ಈಡೇರುವುದಿಲ್ಲ. ಏಕೆಂದರೆಯದನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂಭಕ್ತರ ಸಂಪತ್ತನ್ನು ಇಲ್ಲದಂತೆ ಮಾಡಿ, ಪರೀಕ್ಷಿಸಿ, ನಂತರ ಅವರನ್ನು ಉದ್ಧರಿಸುವುದೇ ಭಗವಂತನ ಸಂಕಲ್ಪ. ನಮಗೆ ಏನು ಬೇಕು ಎನ್ನುವುದು ನಮಗಿಂತ ಚನ್ನಾಗಿ ಭಗವಂತನಿಗೆ ಗೊತ್ತು. ಆತನ ಅನುಗ್ರಹ ಮಹಾ ಪ್ರಸಾದ. ಈ ಅರಿವು ಬಯಕೆಗಳ ಬೆನ್ನು ಹತ್ತಿದವರಿಗೆ ಇರುವುದಿಲ್ಲ ಮತ್ತು ಇದರಿಂದ ಅವರು ಭಗವಂತನ ಅನುಗ್ರಹದಿಂದ ವಂಚಿತರಾಗುತ್ತಾರೆ.
ಏಕೆ ಹೀಗೆ? ಏಕೆ ಎಲ್ಲರೂ ಒಂದೇ ರೀತಿಯಾಗಿ ಭಗವಂತನನ್ನು ಪೂಜಿಸುವುದಿಲ್ಲ? ಇದಕ್ಕೆ ಕೃಷ್ಣ ಹೇಳುತ್ತಾನೆ ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ”. “ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಪ್ರಕೃತಿ ಇದೆಎಂದು. [ಇಲ್ಲಿ ಹೇಳಿರುವಪ್ರಕೃತಿಅಂದರೆ ಒಂದು ಜೀವ ಸ್ವಭಾವಹಾಗು ಇನ್ನೊಂದು ಪರಿಸರ ಮತ್ತು ಹುಟ್ಟಿಬಂದ ಮನೆತನದ ಸಂಸ್ಕಾರ(genes and environmental force)’ ] ಮನುಷ್ಯನ ಈ ಜೀವಸ್ವಭಾವವನ್ನು ಎಂದೂ ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ತರ. ಈ ಕಾರಣದಿಂದ ಏಕರೂಪ ಸ್ವಭಾವ ಈ ಜಗತ್ತಿನಲ್ಲಿಲ್ಲ. ಈ ಭೂಮಿಯ ಮೇಲೆ ಎಷ್ಟೋ ಭಾರಿ ಭಗವಂತ ಮತ್ತು ಅನೇಕ ಮಹಾತ್ಮರು ಅವತರಿಸಿ ಬಂದು ಸತ್ಯವನ್ನು ಭೋಧನೆ ಮಾಡಿದರೂ ಕೂಡಾ, ಏಕ ಧರ್ಮ ಸ್ಥಾಪನೆ ಆಗಲಿಲ್ಲ. ಕಾರಣ ಏನೆಂದರೆ ಸ್ವತಃ ಭಗವಂತನೇ ಬಂದು ಹೇಳಿದರೂ ಕೂಡಾ-ಸತ್ಯವನ್ನು ತಿಳಿಯಬಲ್ಲ ಜೀವಸ್ವಭಾವವುಳ್ಳ ಜೀವ ಮಾತ್ರ ಆ ಸತ್ಯವನ್ನು ಗ್ರಹಿಸಿ ಒಪ್ಪುತ್ತದೆ. ಉಳಿದ ಜೀವಗಳು ಈ ಸತ್ಯವನ್ನು ಗ್ರಹಿಸಲಾರವು. ಇದು ತೀರಾ ಸಹಜ. ಆದ್ದರಿಂದ ಕೃಷ್ಣ ಹೇಳುತ್ತಾನೆ ಸತ್ಯವನ್ನು ಒಪ್ಪುವುದಕ್ಕೂ ಕೂಡಾ ಜೀವಕ್ಕೆ ಯೋಗ್ಯತೆ ಬೇಕುಎಂದು. ಹೀಗೆ ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಅವರವರಿಗೆ ಇಷ್ಟವಾಗುವ ದೇವತಾ ಉಪಾಸನೆ ಪ್ರಪಂಚದಲ್ಲಿ ನಡೆಯುತ್ತದೆ. ಈ ಕಾರಣದಿಂದ ಪ್ರಪಂಚದಲ್ಲಿ ಎಲ್ಲರೂ ನಿಜವಾದ ಭಗವದ್ ಭಕ್ತರಾಗಲು ಸಾಧ್ಯವಿಲ್ಲ, ಅದು ಕೇವಲ ಸಾತ್ವಿಕ ಚೇತನಕ್ಕೆ ಮಾತ್ರ ಸಾಧ್ಯ.
·  ಶ್ಲೋಕ - 21
ಯೋಯೋ ಯಾಂಯಾಂ ತನುಂ ಭಕ್ತಃ ಶ್ರದ್ಧಯಾSರ್ಚಿತುಮಿಚ್ಛತಿ ।
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ ೨೧॥
ಯಃ ಯಃ ಯಾಮ್ ಯಾಮ್ ತನುಮ್ ಭಕ್ತಃ ಶ್ರದ್ಧಯಾ ಅರ್ಚಿತುಮ್ ಇಚ್ಛತಿ ।
ತಸ್ಯ ತಸ್ಯ ಅಚಲಾಮ್ ಶ್ರದ್ಧಾಮ್ ತಾಮ್ ಏವ ವಿದಧಾಮಿ ಅಹಮ್-ಯಾರು ಯಾವ ದೇವತಾರೂಪವನ್ನು ಭಕ್ತಿಯಿಟ್ಟು ಶ್ರದ್ಧೆಯಿಂದ ಪೂಜಿಸಬಯಸುತ್ತಾನೆ ಅವರಿಗೆ ಅಂಥದೇ ಶ್ರದ್ಧೆಯನ್ನು ನಾನು ಗಟ್ಟಿಗೊಳಿಸುತ್ತೇನೆ.
ಭಗವಂತನೆಂಬ ಅಸಾಧಾರಣ ಶಕ್ತಿ ತನ್ನ ದೇವತಾ ಪರಿವಾರದೊಂದಿಗೆ ಈ ಜಗತ್ತನ್ನು ನಿಯಂತ್ರಿಸುತ್ತಿದೆ ಎನ್ನವ ಎಚ್ಚರ ಇಲ್ಲದೆ, ಭಗವಂತನ ಮೇಲಿನ ಏಕಭಕ್ತಿ ಬಿಟ್ಟು, ಕೇವಲ ಒಂದು ದೇವತೆಯನ್ನು ಶ್ರದ್ಧೆಯಿಂದ ಪೂಜೆ ಮಾಡಲು ಆಯ್ಕೆ ಮಾಡಿಕೊಂಡವರಿಗೆ –“ಯಾವ ದೇವತೆಯ ಮೇಲೆ ಭಕ್ತಿ ಇದೆಯೋ ಅದನ್ನೇ ಆಚಲವಾಗಿಸುತ್ತೇನೆಎನ್ನುತ್ತಾನೆ ಕೃಷ್ಣ!
ಮನುಷ್ಯ ಶ್ರದ್ಧೆಯ ಸ್ವರೂಪ. ಯಾವುದರ ಬಗೆಗೆ ಶ್ರದ್ಧೆ ಮೂಡಿತೋ ಅದೇ ಅವನಲ್ಲಿ ಬೆಳೆದುಕೊಂಡು ಹೋಗುತ್ತದೆ. ಯಾವ ದೇವತಾ ಶಕ್ತಿಯನ್ನು ಶ್ರದ್ಧೆಯಿಂದ ಆರಾಧನೆ ಮಾಡಿದೆವೋ ಅದೇ ನಂಬಿಕೆ ನಮ್ಮಲ್ಲಿ ಗಟ್ಟಿಯಾಗುತ್ತಾ ಹೋಗುತ್ತದೆ ಮತ್ತು ಆ ಶ್ರದ್ಧೆ ನಿಶ್ಚಲವಾಗುತ್ತದೆ. ಅದನ್ನು ಬದಲಿಸುವುದು ಬಹಳ ಕಷ್ಟ. ಈ ಕಾರಣಕ್ಕಾಗಿ ನಾವು ದೇವರ ಬಗ್ಗೆ ತಿಳಿದುಕೊಳ್ಳಬೇಕು. ದೇವರು ಮತ್ತು ದೇವತಾ ಪರಿವಾರ ಎಂದರೆ ಮಾನವರಂತೆ ಒಬ್ಬರನೊಬ್ಬರು ದ್ವೇಷಿಸುವ ಆಸೂಹೆ ಪಡುವ ಸಂಸ್ಕ್ರತಿ ಉಳ್ಳ ಒಂದು ಗುಂಪು ಎಂದು ನಾವು ತಿಳಿದಿದ್ದರೆ ಅದು ನಮ್ಮ ಮೌಡ್ಯತೆಯ ಪರಮಾವದಿ. ಹಿಂದೆ ಹೇಳಿದಂತೆ ಭಗವಂತ ಅನ್ನುವುದು ಏಕಶಕ್ತಿ. ಆತ ಸದಾ ತನ್ನ ದೇವತಾ ಪರಿವಾರದೊಂದಿಗೆ ಅಭಿವ್ಯಕ್ತವಾಗುತ್ತಾನೆ. ನಾವು ಗಣಪತಿ ಅಥವಾ ಇನ್ನ್ಯಾವುದೇ ದೇವತೆಯ ಆರಾಧನೆ ಮಾಡುವಾಗ ನಮಗೆ ಆ ಏಕ ಶಕ್ತಿಯ ಎಚ್ಚರ ಇದ್ದು ಮಾಡಿದರೆ ಆ ಪೂಜೆ ಮಹಾ ಪೂಜೆಯಾಗುತ್ತದೆ. ಅದನ್ನು ಬಿಟ್ಟು ಗಣಪತಿಯೇ(ಅಥವಾ ಇನ್ಯಾವುದೇ ದೇವತೆ) ಬೇರೆ, ಅವನೊಬ್ಬನೇ ದೇವರು ಎಂದು ತಿಳಿದು ಅದರಲ್ಲೇ ಶ್ರದ್ಧೆ ಬೆಳೆಸಿಕೊಂಡರೆ ಆಗ ಆ ಶ್ರದ್ಧೆಯ ಬೇಲಿಯಲ್ಲಿ ನಾವು ಸಿಕ್ಕಿ ಹಾಕಿಕೊಳ್ಳುತ್ತೇವೆ. ಇದು ಕಲ್ಲಿನ ಮೂರ್ತಿಯನ್ನು ದೇವರೆಂದು ಪೂಜಿಸಿದಂತಾಗುತ್ತದೆ. ನಿಜವಾಗಿ ನಾವು ಪೂಜಿಸುವುದು ಕಲ್ಲಿನ ಮೂರ್ತಿಯನ್ನಲ್ಲ ಅದರಲ್ಲಿನ ಭಗವಂತನ ಪ್ರತೀಕವನ್ನು. ಕಲ್ಲಿನ ಮೂರ್ತಿ ಕೇವಲ ದೇವತಾ ಪ್ರತೀಕ. ಸರ್ವಶಕ್ತ ಭಗವಂತ ಆ ಮೂರ್ತಿಯೊಳಗೆ ಅಂತರ್ಗತನಾಗಿದ್ದಾನೆ. ಆದ್ದರಿಂದ ಯಾವುದೇ ದೇವತಾ ಪ್ರತೀಕವನ್ನು ಪೂಜಿಸುವಾಗಲೂ ಕೂಡಾ ಭಗವಂತ ಒಬ್ಬನೆ, ಆತ ಈ ದೇವತೆಯ ಪ್ರತೀಕದಲ್ಲಿ ಅಂತರ್ಗತನಾಗಿ, ತನ್ನ ಸಮಸ್ತ ದೇವತಾ ಪರಿವಾರದ ಮೂಲಕ ನಮ್ಮನ್ನು ರಕ್ಷಿಸುತ್ತಿದ್ದಾನೆಎನ್ನುವ ಅನುಸಂಧಾನ ಬಹಳ ಮುಖ್ಯ. ಈ ಅನುಸಂಧಾನದಿಂದ ಗಣಪತಿಯನ್ನಾಗಲಿ, ವೀರಭದ್ರನನ್ನಾಗಲಿ, ಕೋಟಿ ಚನ್ನಯ್ಯನನ್ನಾಗಲಿ, ಅಥವಾ ಇನ್ಯಾವುದೇ ದೇವತೆಯನ್ನು ಪೂಜಿಸಿದರೂ ಕೂಡ ಅದು ಪರಮಾತ್ಮ ಮೆಚ್ಚುವ ಮಹಾ ಪೂಜೆಯಾಗುತ್ತದೆ. ನಾವು ಮಾಡುವ ವ್ರತ-ಅನುಷ್ಠಾನ ಕೂಡಾ ಇದೇ ರೀತಿಯಾಗಿರಬೇಕು. ಅದು ಏಕಾದಶಿಯ ಉಪವಾಸವಾಗಿರಲಿ ಅಥವಾ ಸಂಕಷ್ಟಹರ ಚತುರ್ಥಿಯ ಉಪವಾಸವಾಗಿರಲಿ, ಎಲ್ಲವೂ ಕೂಡಾ ಆ ಭಗವದ್ ಪ್ರೀತ್ಯರ್ಥವಾಗಿರಬೇಕು. ಭಗವಂತ ಸರ್ವ ಶಬ್ದವಾಚ್ಯ-ಆದ್ದರಿಂದ ಯಾವ ಹೆಸರಿನಿಂದ ಕರೆದರೂ ಅದು ಭಗವಂತನ ಹೆಸರು; ಭಗವಂತ ಸರ್ವ ಸಮರ್ಥ-ಆದ್ದರಿಂದ ಆತ ಕಲ್ಲಿನಲ್ಲೂ ಇರಬಹುದು ಕಂಬದಲ್ಲೂ ಇರಬಹುದು; ಭಗವಂತ ಸರ್ವಾಂತರ್ಯಾಮಿ-ಸರ್ವ ದೇವತೆಗಳ ಅಂತರ್ಯಾಮಿಯಾಗಿದ್ದು ನಮ್ಮನ್ನು ರಕ್ಷಿಸುವವನು ಆ ಭಗವಂತ. ಈ ಅನುಸಂಧಾನದಿಂದ ಮಾಡುವ ಭಕ್ತಿ ಶ್ರೇಷ್ಠ ಭಕ್ತಿ ಎನಿಸುತ್ತದೆ. ಇದನ್ನು ಬಿಟ್ಟು ಅಂಧಶ್ರದ್ಧೆಯನ್ನು ಬೆಳೆಸಿಕೊಂಡರೆ ಅದೇ ನಮ್ಮಲ್ಲಿ ಗಟ್ಟಿಯಾಗಿ ನಮ್ಮನ್ನು ಅಧಃಪಾತಕ್ಕೆ ತಳ್ಳಬಹುದು!
·  ಶ್ಲೋಕ - 22
ಸ ತಯಾ ಶ್ರದ್ಧಯಾ ಯುಕ್ತಸ್ತಸ್ಯಾSರಾಧನಮೀಹತೇ ।
ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿ ತಾನ್ ॥೨೨॥
ಸಃ ತಯಾ ಶ್ರದ್ಧಯಾ ಯುಕ್ತಃ ತಸ್ಯ ಆರಾಧನಮ್ ಈಹತೇ ।
ಲಭತೇ ಚ ತತಃ ಕಾಮಾನ್ ಮಯಾ ಏವ ವಿಹಿತಾನ್ ಹಿ ತಾನ್-ಅವನು ಶ್ರದ್ಧೆಯನ್ನೆ ಆತುಕೊಂಡು ಆಯಾ ದೇವತೆಗಳನ್ನು ಪೂಜಿಸತೊಡಗುತ್ತಾನೆ. ಅದರ ಫಲವಾಗಿ ನಾನೇ ಈಡೇರಿಸಿದ ಆಯಾ ಬಯಕೆಗಳನ್ನು ಪಡೆಯುತ್ತಾನೆ.
ಮೇಲೆ ಹೇಳಿದ ಏಕಭಕ್ತಿಯನ್ನು ಪಾಲಿಸದೆ ಯಾವುದೋ ಒಂದು ದೇವತೆಯನ್ನು ಅಚಲವಾಗಿ ಪೂಜಿಸಿ ಫಲ ಪಡೆಯವವರನ್ನು ಪ್ರಪಂಚದಲ್ಲಿ ಕಾಣುತ್ತೇವೆ. ಇಲ್ಲಿ ತಪ್ಪು ಪೂಜಾಕ್ರಮದಿಂದಲೂ ಹೇಗೆ ಫಲ ಸಿಗುತ್ತದೆಎನ್ನುವ ಪ್ರಶ್ನೆ ನಮ್ಮಲ್ಲಿ ಸಹಜವಾಗಿ ಮೂಡುತ್ತದೆ. ಕೃಷ್ಣ ಹೇಳುತ್ತಾನೆ ನೀನು ಯಾರನ್ನು ಉಪಾಸನೆ ಮಾಡಿದರೂ ಕೊನೆಗೆ ಫಲ ಕೊಡುವವನು ನಾನೇಎಂದು. ಶಾಸ್ತ್ರಗಳಲ್ಲಿ ಹೇಳುವಂತೆ "ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ". ಯಾರನ್ನು ಪೂಜೆ ಮಾಡಿದರೂ ಅದು ಸಲ್ಲುವುದು ಅದರೊಳಗಿನ ಭಗವಂತನನ್ನೇ. ಆದರೆ ವ್ಯತ್ಯಾಸ ಒಂದೆ-ತಿಳಿದು ಮಾಡಿದಾಗ ಶಾಶ್ವತವಾದ ಪೂರ್ಣಫಲ’, ತಿಳಿಯದೇ ಫಲ ಕಾಮನೆಯಿಂದ ಮಾಡಿದಾಗಬೌತಿಕವಾದ ಅಲ್ಪಫಲ’.
ನಾವು ಯಾವುದೇ ಆರಾಧ್ಯ ಮೂರ್ತಿಯನ್ನು ಪೂಜಿಸಿದರೂ ಕೂಡಾ ಆ ಆರಾಧ್ಯ ಮೂರ್ತಿಯ ಅಂತರ್ಯಾಮಿಯಾಗಿದ್ದು ಫಲ ಕೊಡುವವನು ಭಗವಂತನೇ. ಆದರೆ ದೇವತಾ ಅಂತರ್ಗತನಾದ ಭಗವಂತ ಕೊಟ್ಟಅನ್ನುವ ಅರಿವು ನಮಗಿರುವುದಿಲ್ಲ ಅಷ್ಟೇ. ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ ಈ ಎಚ್ಚರ ಬಹಳ ಮುಖ್ಯ. ನಾವು ನಮ್ಮ ಪ್ರತಿಯೊಂದು ಅನುಸಂಧಾನವನ್ನು ಭಗವಂತನ ಪೂಜಾ ರೂಪವಾಗಿ ಮಾಡಿ ಭವ್ಯವಾಗಿಸಬೇಕು. ಇಲ್ಲದಿದ್ದರೆ ಮಹಾಫಲದಿಂದ ವಂಚಿತರಾಗಿ ಯಾವುದೋ ಕ್ಷುದ್ರ ಫಲ ನಮ್ಮದಾಗುತ್ತದೆ. [ಇಲ್ಲಿ ಮಯೈವ ವಿಹಿತಾನ್ ಹಿ ತಾನ್ಎಂದರೆ ನಾನೇ ದೇವತೆಯೊಳಗಿದ್ದು ಫಲವನ್ನೂ ಕೊಡುವವನು ಎಂದರ್ಥವಾದರೆ, ‘ಮಯೈವ ವಿಹಿತಾನ್ ಹಿತಾನ್ಎಂದರೆ ನೀನು ಬಯಸಿದ-ನಿನಗೆ ಹಿತವಾದಕ್ಷಣಿಕ ಫಲವನ್ನು ನನ್ನಿಂದ ಪಡೆಯುತ್ತೀಯಎಂದರ್ಥ].
·  ಶ್ಲೋಕ - 23
ಅಂತವತ್ತು ಫಲಂ ತೇಷಾಂ ತದ್ ಭವತ್ಯಲ್ಪಚೇತಸಾಮ್ ।
ದೇವಾನ್ ದೇವಯಜೋ ಯಾಂತಿ ಮದ್ ಭಕ್ತಾ ಯಾಂತಿ ಮಾಮಪಿ ೨೩॥
ಅಂತವತ್ ತು ಫಲಮ್ ತೇಷಾಮ್ ತತ್ ಭವತಿ ಅಲ್ಪಚೇತಸಾಮ್ ।
ದೇವಾನ್ ದೇವಯಜಃ ಯಾಂತಿ ಮತ್ ಭಕ್ತಾಃ ಯಾಂತಿ ಮಾಮ್ ಅಪಿ-ಅಲ್ಪಮತಿಗಳಾದ ಅಂಥವರ ಆ ಫಲಕ್ಕೆ ಅಳಿವುಂಟು. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಸೇರುತ್ತಾರೆ. ನನ್ನ ಭಕ್ತರು ನನ್ನನ್ನು ಸೇರುತ್ತಾರೆ.
ಕೃಷ್ಣನ ಮಾತನ್ನು ಕೇಳಿದಾಗ ನಮ್ಮಲ್ಲಿ ಒಂದು ಭಾವನೆ ಮೂಡಬಹುದು: ಯಾರು ಫಲ ಕೊಟ್ಟರೆ ನಮಗೇನು? ನನಗೆ ನನ್ನ ಇಷ್ಟಾರ್ಥ ಸಿದ್ಧಿಯಾದರೆ ಸಾಕುಎಂದು. ಅದಕ್ಕಾಗಿ ಈ ಶ್ಲೋಕದಲ್ಲಿ ಕೃಷ್ಣ ಎಚ್ಚರಿಕೆಯ ನುಡಿಯನ್ನಾಡುತ್ತಾನೆ. ಕೃಷ್ಣ ಹೇಳುತ್ತಾನೆ ಅಂತವತ್ತು ಫಲಂ ತೇಷಾಂ ತದ್ ಭವತ್ಯಲ್ಪಚೇತಸಾಮ್ಎಂದು. ಅಂದರೆ ಯಾವುದೋ ಒಂದು ಕ್ಷುದ್ರ ಫಲ ಸಿಕ್ಕಿತು ಎಂದು ಹಿಗ್ಗುವವರು ಅಲ್ಪಮತಿಗಳು. ಈ ರೀತಿಯಾಗಿ ಸಿಗುವ ಫಲ ಎಂದೂ ಶಾಶ್ವತ ಅಲ್ಲ, ಅದು ಕ್ಷಣಿಕ. ನೀವು ಯಾವ ದೇವತೆಯನ್ನು ಪೂಜಿಸುತ್ತೀರೋ ಆ ದೇವತೆಯನ್ನು ಸೇರುತ್ತೀರಿ ಹೊರತು ಮೊಕ್ಷವನ್ನಲ್ಲಎನ್ನುತ್ತಾನೆ ಕೃಷ್ಣ. ಯಾವ ದೇವತೆಗಳೂ ಕೂಡ ಅನಂತ ಕಾಲದ ತನಕ ನಮ್ಮನ್ನು ಅವರ ಲೋಕದಲ್ಲಿ ಇರಗೊಡುವುದಿಲ್ಲ. ಆದ್ದರಿಂದ ನಾವು ಮಾಡಿದ ಕರ್ಮದ ಅವದಿ ಮುಗಿದಾಕ್ಷಣ ಮರಳಿ ಈ ಮೃತ್ಯುಲೋಕಕ್ಕೆ ಬರಬೇಕಾಗುತ್ತದೆ. ಈ ಕಾರಣದಿಂದ ಭಗವಂತನ ಅರಿವಿಲ್ಲದ ಕೇವಲ ದೇವತಾ ಉಪಾಸನೆ ಶಾಶ್ವತ ಮೋಕ್ಷವನ್ನು ಕೊಡಲಾರದು.
ಭಗವಂತನಲ್ಲಿ ಮನವಿಟ್ಟು, ಏಕಭಕ್ತಿಯಿಂದ ಭಗವಂತನನ್ನು ಭಜಿಸಿದರೆ ಆಗ ತದ್ಧಾಮಂ ಪರಮಂ ಮಮ’- ಎಲ್ಲಿಂದ ಎಂದೂ ಮರಳಿ ಬರಬೇಕಾಗಿಲ್ಲವೋ ಅಂಥಹ ಶಾಶ್ವತವಾದ ಮೋಕ್ಷವನ್ನು ಪಡೆಯುತ್ತಾರೆ. ಭಗವಂತನನ್ನು ಪ್ರೀತಿಸುವುದರಿಂದ ಯಥಾರ್ಥ ಜ್ಞಾನ ಸಿದ್ಧಿಯಾಗುತ್ತದೆ. ಇದರಿಂದ ಎಂದೆಂದೂ ದುಃಖವಿಲ್ಲದ ಭಗವದ್ ಪ್ರಾಪ್ತಿ ರೂಪವಾದ ಮೋಕ್ಷವನ್ನು ಪಡೆಯುಬಹುದು.
ಇಲ್ಲಿ ಕೆಲವರಿಗೆ ಒಂದು ಗೊಂದಲವಾಗಬಹುದು. ದೇವರು ಏಕೆ ಹೊಗಳುವಿಕೆಯನ್ನು ಇಷ್ಟಪಡುತ್ತಾನೆ? ಆತ ಏಕೆ ತನ್ನನ್ನು ಹೊಗಳುವವರನ್ನು ಮಾತ್ರ ಉದ್ಧರಿಸಿ ಉಳಿದವರನ್ನು ಉದ್ಧರಿಸುವುದಿಲ್ಲ?” ಎಂದು. ದೇವರು ಪ್ರೀತಿಸುವುದು ಹೊಗಳಿಕೆಯನ್ನಲ್ಲ-ಸತ್ಯವನ್ನು. ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮದಲ್ಲಿ ದೇವರು ಅಂದರೆ ಏನು ಆತನ ಮಹಾತ್ಮೆ ಏನು(etymologically) ಎನ್ನುವ ಸತ್ಯ ಅಡಗಿದೆ. ಭಗವಂತ ಯಾರು ಸತ್ಯವನ್ನು ತಿಳಿಯುತ್ತಾರೋ ಅವರನ್ನು ಪ್ರೀತಿಸುತ್ತಾನೆ. ಆತನಿಗೆ ವೈಯಕ್ತಿಕ ಇಷ್ಟಾನಿಷ್ಟವಿಲ್ಲ. ಆತ ಇಷ್ಟ ಪಡುವುದು ಯಥಾರ್ಥ ಜ್ಞಾನವನ್ನು. ಯಥಾರ್ಥ ಜ್ಞಾನ-ಭಕ್ತಿ ರೂಪದಲ್ಲಿದೆ. ನಿಜವಾದ ಭಕ್ತಿ-ಯಥಾರ್ಥ ಜ್ಞಾನದಲ್ಲಿದೆ. ಯಥಾರ್ಥದ ಅರಿವು ಭಗವಂತನಿಗೆ ಇಷ್ಟ ಮತ್ತು ಇದು ಮೋಕ್ಷವನ್ನು ತಲುಪಲು ಬೇಕಾದ ಅರ್ಹತೆ. ಆದ್ದರಿಂದ ಭಗವಂತ ತನ್ನನ್ನು ಹೊಗಳುವವರನ್ನು ಉದ್ಧರಿಸುವುದಲ್ಲ. ಆತ ಯಥಾರ್ಥವನ್ನು ತಿಳಿದವರನ್ನು ಉದ್ಧರಿಸುತ್ತಾನೆ ಮತ್ತು ಅರ್ಹತೆ ಉಳ್ಳವರಿಗೆ ಮೋಕ್ಷ ಕರುಣಿಸುತ್ತಾನೆ.
ಶಾಶ್ವತ ಫಲವನ್ನು ಕೊಡತಕ್ಕಂತಹ ಅಂತರ್ಯಾಮಿಯ ಉಪಾಸನೆಯಲ್ಲಿ ಗಟ್ಟಿಯಾಗಿ-ಮೋಕ್ಷವನ್ನು ಪಡೆಎನ್ನುವುದು ಇಲ್ಲಿ ಕೃಷ್ಣನ ಸಂದೇಶ.
·  ಶ್ಲೋಕ - 24
ಭಗವಂತನನ್ನು ತಿಳಿಯಬೇಕು ಎಂದು ಭಕ್ತಿ ಮತ್ತು ಜ್ಞಾನ ಮಾರ್ಗದಲ್ಲಿ ಸಾಗಿದವರಿಗೂ ಕೂಡ ಭಗವಂತನನ್ನು ತಿಳಿಯುವುದು ಎಷ್ಟು ಕಷ್ಟ ಎನ್ನುವುದನ್ನು ಕೃಷ್ಣ ಈ ಅಧ್ಯಾಯದಲ್ಲಿ ಇನ್ನೂ ವಿವರಿಸುತ್ತಾನೆ.
ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ ।
ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಮ್ ೨೪॥
ಅವ್ಯಕ್ತಮ್ ವ್ಯಕ್ತಿಮ್ ಅಪನ್ನಮ್ ಮನ್ಯಂತೇ ಮಾಮ್ ಅಬುದ್ಧಯಃ ।
ಪರಮ್ ಭಾವಮ್ ಅಜಾನಂತಃ ಮಮ ಅವ್ಯಯಮ್ ಅನುತ್ತಮಮ್-ಅಳಿವಿರದ, ಮಿಗಿಲಿರದ ನನ್ನ ಮಹಿಮೆಯ ಹಿರಿಮೆಯನ್ನರಿಯದ ತಿಳಿಗೇಡಿಗಳು ದೇಹದಿಂದ ಹುಟ್ಟಿಬರದ ನನ್ನನ್ನು ಹುಟ್ಟಿಬಂದೆ ಎಂದು [ಭಗವಂತನೇ ಜೀವಭಾವ ಪಡೆದನೆಂದು ] ತಿಳಿದುಬಿಡುತ್ತಾರೆ.
ಸಾಮಾನ್ಯವಾಗಿ ಭಗವಂತನ ಬಗೆಗೆ ಸರಿಯಾದ ತಿಳುವಳಿಕೆ ಗಳಿಸುವುದು ಕಷ್ಟ. ಆದರೆ ತಪ್ಪು ಗ್ರಹಿಕೆ ಸುಲಭ. ಇಲ್ಲಿ ಕೃಷ್ಣ ಹೇಳುತ್ತಾನೆ ನಾನು ವಸ್ತುತಃ ಅವ್ಯಕ್ತಎಂದು. ಜೀವ ವ್ಯಕ್ತ ಆಗುವುದು ಅದಕ್ಕೆ ಪಾಂಚಭೌತಿಕ ಶರೀರ ಬಂದಾಗ. ಆದ್ದರಿಂದ ಸ್ಥೂಲವಾದ ಶರೀರವುಳ್ಳದ್ದನ್ನು ವ್ಯಕ್ತ ಎನ್ನುತ್ತಾರೆ. ಭಗವಂತನಿಗೆ ಒಂದು ದಿನ ನಾಶವಾಗುವ ಪಾಂಚಭೌತಿಕ ಶರೀರ ಇಲ್ಲ- ಆತ ಸರ್ವದಾ ಅವ್ಯಕ್ತ. ಇಂತಹ ಅವ್ಯಕ್ತ ಭಗವಂತ ತನ್ನ ಅವತಾರದಲ್ಲಿ ತನ್ನ ಸ್ವತಃ ಇಚ್ಛೆಯಿಂದ ಒಂದು ರೂಪದಲ್ಲಿ ಎಲ್ಲರಿಗೂ ಕಾಣಿಸಿಕೊಳ್ಳುತ್ತಾನೆ. ಶಾಸ್ತ್ರೀಯವಾಗಿ ಭಗವಂತನ ಸ್ವರೂಪದ ಅರಿವಿಲ್ಲದ ಜನ ತಮಗೆ ಕಾಣುವ ಅವತಾರರೂಪಿ ಭಗವಂತನಿಗೆ ತಮ್ಮಂತೆ ಪಾಂಚಭೌತಿಕ ಶರೀರವಿದೆ ಮತ್ತು ಭಗವಂತ ಒಂದು ದಿನ ದೇಹತ್ಯಾಗ ಮಾಡುತ್ತಾನೆ ಎಂದು ತಿಳಿಯುತ್ತಾರೆ. ವ್ಯಕ್ತವಾದ, ಸ್ಥೂಲವಾದ, ನಶ್ವರವಾದ, ಪ್ರಾಕೃತವಾದ ಶರೀರ ಇಲ್ಲದ ಭಗವಂತನನ್ನು ಅಂತಹ ಸ್ಥೂಲವಾದ ಶರೀರದೊಳಗೆ ಬದ್ಧನಾಗಿರುವವನು ಎನ್ನುವ ಅರ್ಥದಲ್ಲಿ ಅವರು ತಿಳಿದುಕೊಳ್ಳುತ್ತಾರೆ. ಹೀಗೆ ತಿಳಿದುಕೊಳ್ಳುವವರು ಬುದ್ಧಿಶೂನ್ಯರುಎನ್ನುತ್ತಾನೆ ಕೃಷ್ಣ.
·  ಶ್ಲೋಕ - 25
ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ
ಮೂಢೋSಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಮ್ ೨೫॥
ನ ಅಹಮ್ ಪ್ರಕಾಶಃ ಸರ್ವಸ್ಯ ಯೋಗ ಮಾಯಾ ಸಮಾವೃತಃ
ಮೂಢಃ ಅಯಮ್ ನ ಅಭಿಜಾನಾತಿ ಲೋಕಃ ಮಾಮ್ ಅಜಮ್ ಅವ್ಯಯಮ್-ನನ್ನ ಸಾಮರ್ಥ್ಯ ಮತ್ತು ಪ್ರಕೃತಿಯ ಮಾಯೆಯಿಂದ ಮುಚ್ಚಿಕೊಂಡಿರುವ ನಾನು ಎಲ್ಲರಿಗೂ ಬಯಲಾಗಲಾರೆ. ಹುಟ್ಟಿರದ ಸಾವಿರದ ನನ್ನನ್ನು ಈ ತಿಳಿಗೇಡಿ ಮಂದಿ ತಿಳಿಯಲಾರರು.
ಭಗವಂತ ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ. ಆತನ ಅನಂತ ಗುಣದ ಸ್ಪಷ್ಟ ಚಿತ್ರ ಯಾರಿಗೂ ಬರುವುದು ಸಾಧ್ಯವಿಲ್ಲ. ಮನುಷ್ಯನ ಚಿಂತನೆಗೆ ಒಂದು ಮಿತಿ ಇದೆ, ಆದರೆ ಭಗವಂತ ಆ ಮಿತಿಯ ಒಳಗಿಲ್ಲ. ಆದ್ದರಿಂದ ನಮ್ಮ ಬುದ್ಧಿ ಆತನ ಅನಂತವಾದ ಜ್ಞಾನವನ್ನು, ಅನಂತವಾದ ಶಕ್ತಿಯನ್ನೂ, ಆನಂತ ರೂಪವನ್ನು ಗ್ರಹಿಸಲಾರದು. ನಾವು ಇಚ್ಛೆಪಟ್ಟಾಗ ಭಗವಂತ ಕಾಣುವುದಿಲ್ಲ. ಆದರೆ ಕಾಲ ಪಕ್ವವಾದಾಗ ತನ್ನ ಇಚ್ಛೆಯಂತೆ ಭಗವಂತ ಜ್ಞಾನಾನಂದ ಸ್ವರೂಪವಾದ ಮನಸ್ಸು ಮತ್ತು ಜ್ಞಾನಾನಂದ ಸ್ವರೂಪವಾದ ಇಂದ್ರಿಯಗಳಿಗೆ ಯಥಾಶಕ್ತಿ ಗೋಚರವಾಗಬಲ್ಲ.
ಈ ಲೋಕದಲ್ಲಿ ಅಜ್ಞಾನದ ಮೋಹಕ್ಕೆ ಒಳಗಾದ ಜೀವಜಾತ ಎಂದೂ ಭಗವಂತನನ್ನು ಗ್ರಹಿಸಲಾರದು. ಜೀವನಿಗೂ ಮತ್ತು ಭಗವಂತನಿಗೂ ನಡುವೆ ಇರುವ ಅಜ್ಞಾನವೆಂಬ ಮಾಯಾ ಪರದೆಯಿಂದಾಗಿ ಭಗವಂತ ನಮಗೆ ಕಾಣುವುದಿಲ್ಲ.
·  ಶ್ಲೋಕ - 26
ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ
ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ ॥೨೬॥
ವೇದ ಅಹಮ್ ಸಮತೀತಾನಿ ವರ್ತಮಾನಾನಿ ಚ ಅರ್ಜುನ
ಭವಿಷ್ಯಾಣಿ ಚ ಭೂತಾನಿ ಮಾಮ್ ತು ವೇದ ನ ಕಶ್ಚನ- ಅರ್ಜುನ , ನಾನು ತಿಳಿದಿದ್ದೇನೆ-ಹಿಂದಿದ್ದ ಜೀವಿಗಳನ್ನು, ಈಗಿರುವವರನ್ನು,ಮುಂದೆ ಬರುವವರನ್ನು ಕೂಡ. ನನ್ನನ್ನು ಮಾತ್ರ ಯಾರೂ ತಿಳಿದಿಲ್ಲ.
ಜೀವ ಮತ್ತು ಭಗವಂತನ ನಡುವಿನ ವೆತ್ಯಾಸವನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತಾ ಕೃಷ್ಣ ಹೇಳುತ್ತಾನೆ ಹಿಂದೆ ಆಗಿ ಹೋದ ಭೂತಗಳು, ಈಗ ಇರುವ ಭೂತಗಳು, ಮತ್ತು ಮುಂದೆ ಬರಲಿರುವ ಭೂತಗಳು ಈ ಎಲ್ಲವನ್ನೂ ನಾನು ತಿಳಿದಿದಿದ್ದೇನೆಎಂದು. ಇಲ್ಲಿ ಭೂತ ಎನ್ನುವ ಪದಕ್ಕೆ ಅನೇಕ ಅರ್ಥವಿದೆ. ಪಂಚಭೂತಗಳು, ಅದರಿಂದ ನಿರ್ಮಾಣವಾದ ಬ್ರಹ್ಮಾಂಡ, ಅದರಿಂದ ರೂಪುಗೊಂಡ ಸಮಸ್ತ ವಸ್ತುಗಳು ಮತ್ತು ಸಮಸ್ತ ಜೀವಜಾತಗಳು ಎಲ್ಲವೂ ಭೂತಗಳು. ಈ ಹಿಂದೆ ಸೃಷ್ಟಿಯಾದ ಅನಂತ ಬ್ರಹ್ಮಾಂಡ, ಈಗಿರುವ ಬ್ರಹ್ಮಾಂಡ, ಮುಂದೆ ಸೃಷ್ಟಿಯಾಗಲಿರುವ ಅನಂತ ಬ್ರಹ್ಮಾಂಡ, ಹಿಂದೆ ಇದ್ದ ಅನಂತ ಜೀವಜಾತಗಳು, ಈಗಿರುವ ಅನಂತ ಜೀವಜಾತಗಳು ಮತ್ತು ಮುಂದೆ ಸೃಷ್ಟಿಯಾಗಲಿರುವ ಅನಂತ ಜೀವಜಾತಗಳನ್ನು ತಿಳಿದವನು ಆ ಅನಂತಕೋಟಿ ಬ್ರಹ್ಮಾಂಡ ನಾಯಕ ಭಗವಂತನೊಬ್ಬನೆ. ಕೃಷ್ಣ ಹೇಳುತ್ತಾನೆ ಮಾಮ್ ತು ವೇದ ನ ಕಶ್ಚನಎಂದು. ಅಂದರೆನನ್ನನ್ನು ಬಿಟ್ಟು ಇನ್ನ್ಯಾರೂ ಇದನ್ನು ಪೂರ್ಣವಾಗಿ ತಿಳಿದಿಲ್ಲ’ . ಭಗವಂತನನ್ನು ಪೂರ್ಣವಾಗಿ ತಿಳಿದವರಿಲ್ಲ ಹಾಗು ತಿಳಿಯುವುದು ಸಾಧ್ಯವಿಲ್ಲ. ಆತ ಸ್ವತಂತ್ರ, ಪೂರ್ಣ ಮತ್ತು ನಿತ್ಯ ಸತ್ಯ. ಜೀವ ಅಪೂರ್ಣ, ಅಸ್ವತಂತ್ರ ಮತ್ತು ಅನಿತ್ಯಸತ್ಯ.
·  ಶ್ಲೋಕ - 27
ಭಗವಂತನನ್ನು ಪೂರ್ಣವಾಗಿ ತಿಳಿಯುವುದು ಅಸಾಧ್ಯ, ಆದರೆ ತಮ್ಮ ಯಥಾಶಕ್ತಿ ಅರಿಯಲು ಎಲ್ಲರಿಗೂ ಏಕೆ ಸಾಧ್ಯವಾಗುವುದಿಲ್ಲ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ ।
ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂತಪ ೨೭॥
ಇಚ್ಛಾ ದ್ವೇಷ ಸಮುತ್ಥೇನ ದ್ವಂದ್ವ ಮೋಹೇನ ಭಾರತ ।
ಸರ್ವ ಭೂತಾನಿ ಸಮ್ಮೋಹಮ್ ಸರ್ಗೇ ಯಾಂತಿ ಪರಂತಪ-ಓ ಅರಿಗಳನ್ನು ತರಿದವನೆ, ಭರತ ವಂಶದ ಕುಡಿಯೆ, ಒಲವು-ಹಗೆತನಗಳಿಂದ ಹುಟ್ಟಿದ ಸುಖ-ದುಃಖ ಮುಂತಾದ ದ್ವಂದ್ವಗಳ [ಜೀವೇಶ್ವರರು ಮುಂತಾದ ದ್ವಂದ್ವಗಳ] ತಪ್ಪು ಗ್ರಹಿಕೆಯಿಂದ ಎಲ್ಲ ಜೀವಿಗಳೂ ಹುಟ್ಟಿನಿಂದಲೆ ಸುಳ್ಳಿನ ಕೆಟ್ಟದಾರಿ ಹಿಡಿದಿವೆ.
ನಾವು ಹುಟ್ಟುವಾಗಲೇ ಹುಟ್ಟಿನ ಜೊತೆಗೆ ಇಚ್ಛಾ-ದ್ವೇಷಸೇರಿಸಿಕೊಂಡು ಹುಟ್ಟುತ್ತೇವೆ. ಶರೀರ ಬೆಳೆದಂತೆ ಅದು ಬೆಳೆಯುತ್ತಾ ಹೋಗುತ್ತದೆ. ಇದರಿಂದ ಇಬ್ಬಂದಿತನ(ದ್ವಂದ್ವ)ದ ಗೊಂದಲ. ಯಾವುದರಿಂದ ಸುಖ, ಯಾವುದರಿಂದ ದುಃಖ ಎಂದು ಗೊತ್ತಿಲ್ಲದೆ ದುಃಖವನ್ನೇ ಸುಖ ಎಂದು ತಿಳಿದು ಅದರ ಬೆನ್ನು ಹತ್ತಿ ಕೊನೆಗೆ ದುಃಖ ಬಂದಾಗ ಅಯ್ಯೋ ಎನ್ನುತ್ತೇವೆ. ಸುಳ್ಳನ್ನೇ ಸತ್ಯ ಎಂದು ನಂಬುವುದು, ಜ್ಞಾನ-ಅಜ್ಞಾನದ ಗೊಂದಲ, ಸತ್ಯ-ಅಸತ್ಯದ ಗೊಂದಲ, ಹೀಗೆ ದ್ವಂದ್ವ ಮೋಹಕ್ಕೆ ಒಳಗಾದವರನ್ನು ತಿದ್ದುವುದು ಬಹಳ ಕಷ್ಟ. ಇದು ಬರಿಯ ಮೋಹ ಮಾತ್ರವಲ್ಲ, ಇದೊಂದು ಸಮ್ಮೋಹ! ನಾನು ತಿಳಿದಿರುವುದೇ ಸರಿ ಎನ್ನುವ ಹಠ, ತನ್ನದೇ ಸರಿ ಎನ್ನುವ ಆಗ್ರಹ. ಇದರಿಂದ ಮನುಷ್ಯ ಸತ್ಯವನ್ನು ಅರಿಯದೆ ಅಜ್ಞಾನಿಯಾಗುತ್ತಾನೆ. ಹೀಗೆ ಅಜ್ಞಾನದಿಂದ ಮೋಹ, ಮೋಹದಿಂದ ಸಮ್ಮೋಹ. ಗೊತ್ತಿಲ್ಲದೇ ಇರುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸದೆ ಇದ್ದಾಗ ಅದರಿಂದ ವಿಪರೀತ ಜ್ಞಾನ-ನಂತರ ನಾನು ನಂಬಿದ್ದೇ ಸರಿ ಎನ್ನುವ ಆಗ್ರಹ. ಇದು ಸಾಮಾನ್ಯವಾಗಿ ನಾವು ಕಾಣುವ ಮನುಷ್ಯನ ದೌರ್ಬಲ್ಯ. ಈ ಪ್ರಪಂಚದಲ್ಲಿ ಪ್ರತಿಯೊಬ್ಬ ದಡ್ಡನೂ ಕೂಡಾ ತಾನು ಎಲ್ಲರಿಗಿಂತ ಬುದ್ಧಿವಂತ ಎಂದು ತಿಳಿದಿರುತ್ತಾನೆ! ಆದ್ದರಿಂದ ಇಡೀ ಜಗತ್ತಿನ ವ್ಯವಹಾರವನ್ನು ತನ್ನ ಬುದ್ಧಿಯ ಮಾನದಂಡದಿಂದ ಅಳೆದು ದಾರಿತಪ್ಪುತ್ತಾನೆ. ಇದನ್ನು ಮಹಾಭಾರತದಲ್ಲಿ ಹೀಗೆ ಹೇಳಿದ್ದಾರೆ:ಸರ್ವೋಹಿ ಮನ್ಯತೇ ಲೋಕ ಆತ್ಮಾನಂ ಬುದ್ಧಿಮತ್ತರಂಎಂದು. ತಾನು ಬುದ್ಧಿವಂತ, ನನ್ನ ತೀರ್ಮಾನವೇ ಸರಿ, ಉಳಿದವರಿಗೆ ನನ್ನಷ್ಟು ತಿಳುವಳಿಕೆ ಇಲ್ಲ ಅನ್ನುವ ತಪ್ಪು ಕಲ್ಪನೆಯಿಂದ ಮನುಷ್ಯ ಸಮ್ಮೋಹದತ್ತ ಸಾಗುತ್ತಾನೆ. ಈ ಅಪಾಯದಿಂದ ಯಾರು ಹೇಗೆ ಪಾರಾಗುತ್ತಾರೆ ಎನ್ನುವುದನ್ನು ಮುಂದಿನ ಶ್ಲೋಕ ವಿವರಿಸುತ್ತದೆ.
ಇಲ್ಲಿ ಕೃಷ್ಣ ಅರ್ಜುನನ್ನು ಭಾರತಮತ್ತು ಪರಂತಪಎನ್ನುವ ವಿಶೇಷಣಗಳಿಂದ ಸಂಬೋಧಿಸಿದ್ದಾನೆ. ಭಗವಂತನ ಅರಿವು ಪಡೆಯಬೇಕಾದರೆ ನಾವು ಭಾರತ-ಪರಂತಪರಾಗಬೇಕು. ಬೆಳಕಿನ ದಾರಿಯಲ್ಲಿ ರಥನಾಗಿ ಸಾಗಿ(ಭಾರತ), ಪರತತ್ವದ ನಿರಂತರ ಚಿಂತನೆ(ಪರಂತಪ) ಮಾಡಿದಾಗ ಮಾತ್ರ ನಮಗೆ ಭಗವಂತನ ಛಾಯೆ ತಿಳಿದೀತು ಎನ್ನುವುದು ಈ ವಿಶೇಷಣದ ಅರ್ಥವಿಶೇಷ.
·  ಶ್ಲೋಕ - 28
ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್ ।
ತೇ ದ್ವಂದ್ವ ಮೋಹನಿರ್ಮುಕ್ತಾ ಭಜಂತೇ ಮಾಂ ದೃಢವ್ರತಾಃ ೨೮॥
ಯೇಷಾಮ್ ತು ಅಂತಗತಮ್ ಪಾಪಮ್ ಜನಾನಾಮ್ ಪುಣ್ಯಕರ್ಮಣಾಮ್ ।
ತೇ ದ್ವಂದ್ವ ಮೋಹ ನಿರ್ಮುಕ್ತಾಃ ಭಜಂತೇ ಮಾಮ್ ದೃಢವ್ರತಾಃ ಪುಣ್ಯವಂತರಾದ ಯಾವ ಜನರ ಪಾಪ ಕೊನೆಗೊಂಡಿದೆ ಅವರು ದ್ವಂದ್ವಗಳ ತಪ್ಪರಿವಿನಿಂದ ಕಳಚಿಕೊಂಡು ನಿಷ್ಠೆಯ ನೇಮದಿಂದ ನನ್ನನ್ನು ಸೇವಿಸುತ್ತಾರೆ.
ಹಿಂದಿನ ಶ್ಲೋಕದಲ್ಲಿ ಕೃಷ್ಣ ದ್ವಂದ್ವ ಮೋಹದ ಬಗ್ಗೆ ಹೇಳಿದ. ಇದಕ್ಕೆ ಮೂಲಭೂತವಾಗಿ ಎರಡು ಕಾರಣ. ಒಂದು ಜೀವ ಸ್ವರೂಪ(ಉದಾ: ದುರ್ಯೋಧನ, ಶಕುನಿ). ಇನ್ನೊಂದು ಪ್ರರಾಬ್ಧ ಕರ್ಮ(ಉದಾ: ಕರ್ಣ, ಅಜಾಮಿಳ, ಪಿಂಗಳೆ). ಜೀವ ಸ್ವರೂಪವೇ ಇಂತಹ ಗತಿಯಲ್ಲಿದ್ದರೆ ಅದಕ್ಕೆ ಯಾವುದೇ ಪರಿಹಾರ ಮಾರ್ಗವಿಲ್ಲ. ಆದರೆ ಯಾವುದೋ ಕಾರಣದಿಂದ ಕೆಟ್ಟ ದಾರಿಯಲ್ಲಿ ಸಾಗುವ ಸಾತ್ವಿಕ ಜೀವಕ್ಕೆ ಜ್ಞಾನದ ಮಾರ್ಗವಿದೆ. ಯಾವುದೋ ಒಂದು ದುರಂತದಿಂದ ಕೆಲವೊಮ್ಮೆ ಅಪರೋಕ್ಷ ಜ್ಞಾನಿಗಳೂ ದಾರಿ ತಪ್ಪುತ್ತಾರೆ. ಇಂತವರ ಪಾಪ ಕರ್ಮ ತೊಳೆದು ಹೋಗುವ ತನಕ ಅವರು ಸರಿ ದಾರಿಗೆ ಬರಲಾಗುವುದಿಲ್ಲ. ಆದರೆ ಕೆಲವೊಮ್ಮೆ ಜೀವನದಲ್ಲಿ ನಡೆಯುವ ಕೆಲವು ದುರಂತ ಅಥವಾ ಆಘಾತ ಇಂತವರನ್ನು ಮರಳಿ ಸತ್ಯದ ಮಾರ್ಗಕ್ಕೆ ಕರೆತರುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಭಾವನೆಯಿಂದ ದೇವರಲ್ಲಿ ಅಗಾಧವಾದ ಭಕ್ತಿ ಮೂಡುತ್ತದೆ.
ಪಶ್ಚಾತ್ತಾಪಕ್ಕಿಂತ ಶ್ರೇಷ್ಠವಾದ ಪ್ರಾಯಶ್ಚಿತ ಇನ್ನೊಂದಿಲ್ಲ. ಎಂತಹ ಪಾತಕವನ್ನೂ ಕೂಡ ಪಶ್ಚಾತ್ತಾಪದಿಂದ ತಿದ್ದಿಕೊಳ್ಳಬಹುದು. ನಾವು ನಮ್ಮ ಜೀವನದಲ್ಲಿ ನಮಗೆ ತಿಳಿದೋ ತಿಳಿಯದೆಯೋ ತಪ್ಪು ಮಾಡುತ್ತಿರುತ್ತೇವೆ. ಮಾನಸಿಕವಾಗಿ, ದೈಹಿಕವಾಗಿ, ವಾಚಕವಾಗಿ ನಮಗೆ ತಿಳಿಯದೆಯೇ ನಮ್ಮಿಂದ ತಪ್ಪು ನಡೆಯುತ್ತಿರುತ್ತದೆ. ಆದರೆ ತಪ್ಪಿನ ಅರಿವಾದಾಗ ಹೃದಯದಿಂದ ಮೂಡುವ ಪಶ್ಚಾತ್ತಾಪ ಇಂತಹ ತಪ್ಪಿಗೆ ಪ್ರಾಯಶ್ಚಿತ. ವೈದಿಕ ಸಂಪ್ರದಾಯದಲ್ಲಿ ದೇವತಾರ್ಚನೆಯ ನಂತರ ನಮಸ್ಕಾರ ಮಾಡುವಾಗ ಹೇಳಿಕೊಳ್ಳುವ ಶ್ಲೋಕ ಒಂದಿದೆ.
ಪಾಪೋಽಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವ |
ತ್ರಾಹಿ ಮಾ ಕೃಪಯಾ ದೇವ ಸರ್ವಪಾಪಹರೋ ಭವ ||
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ |
ತಸ್ಮಾತ್ ಕಾರುಣ್ಯಭಾವೇನ ರಕ್ಷ ಮಾಂ ಜಗದೀಶ್ವರ ||
ಇಲ್ಲಿ ನಾವು ಆ ಭಗವಂತನಲ್ಲಿ ನಾನು ತಿಳಿದೋ ತಿಳಿಯದೆಯೋ ಮಾಡಿದ ತಪ್ಪನ್ನು ಕ್ಷಮಿಸುಎಂದು ಬೇಡುತ್ತೇವೆ. ನಾನು ಹುಟ್ಟಿನಿಂದ ಪಾಪವನ್ನು ಹೊತ್ತು ಬಂದಿದ್ದೇನೆ, ಅದರಿಂದ ತಪ್ಪು ಮಾಡುತ್ತಿದ್ದೇನೆ, ಆದ್ದರಿಂದ ನನ್ನನ್ನು ಕ್ಷಮಿಸಿ ಈ ಪಾಪದಿಂದ ನನ್ನನ್ನು ಪಾರು ಮಾಡುಎಂದು ದೇವರಲ್ಲಿ ಶರಣಾಗುವುದು ಈ ಶ್ಲೋಕದ ಮೂಲಕ ನಾವು ದೇವರಲ್ಲಿ ಮಾಡುವ ಪ್ರಾರ್ಥನೆ. ಇಲ್ಲಿ ಕೃಷ್ಣ ಹೇಳುತ್ತಾನೆ ತೇ ದ್ವಂದ್ವ ಮೋಹನಿರ್ಮುಕ್ತಾ ಭಜಂತೇ ಮಾಂ ದೃಢವ್ರತಾಃಎಂದು. ಅಂದರೆ ಒಮ್ಮೆ ಇಂತಹ ಪಾಪ ಕರ್ಮದಿಂದ ಆಚೆ ಬಂದರೆ, ಎಲ್ಲಾ ದ್ವಂದ್ವ ಮೋಹಗಳೂ ಪರಿಹಾರವಾಗಿ ಭಗವಂತನಲ್ಲಿ ಗಾಢವಾದ ಭಕ್ತಿ ನೆಲೆ ನಿಲ್ಲುತ್ತದೆ. ಈ ರೀತಿ ಪಾಪದ ಅರಿವಾಗಿ ಪಶ್ಚಾತ್ತಾಪದಿಂದ ಭಗವಂತನೆಡೆಗೆ ತಿರುಗಿದವರು ಬಹಳ ಬೇಗ ಭಗವಂತನ ದಾರಿಯಲ್ಲಿ ಸಾಗುತ್ತಾರೆ.
·  ಶ್ಲೋಕ - 29
ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ ।
ತೇ ಬ್ರಹ್ಮ ತದ್ ವಿದುಃ ಕೃತ್ಸ್ನಮಧ್ಯಾತ್ಮಂ ಕರ್ಮ ಚಾಖಿಲಮ್ ॥೨೯॥
ಜರಾ ಮರಣ ಮೋಕ್ಷಾಯ ಮಾಮ್ ಆಶ್ರಿತ್ಯ ಯತಂತಿ ಯೇ ।
ತೇ ಬ್ರಹ್ಮ ತತ್ ವಿದುಃ ಕೃತ್ಸ್ನಮ್ ಅಧ್ಯಾತ್ಮಮ್ ಕರ್ಮ ಚ ಅಖಿಲಮ್-ಮುಪ್ಪು-ಸಾವುಗಳಿಂದ ಪಾರಾಗಲೆಂದು ನನ್ನನ್ನು ಮೊರೆಹೊಕ್ಕು ಸಾಧನೆಗೆಳಸುವವರು ಆಬ್ರಹ್ಮತತ್ವವನ್ನು ತಿಳಿಯಬಲ್ಲರು; ಸಮಗ್ರವಾದ ಅಧ್ಯಾತ್ಮವನ್ನು ಮತ್ತು ಎಲ್ಲಕರ್ಮವನ್ನು ಕೂಡ.
ಭಗವಂತನೆಡೆಗೆ ತಿರುಗಿದವರು ಮುಪ್ಪು-ಸಾವಿನಿಂದ ಪಾರಾಗುವುದಕ್ಕೊಸ್ಕರ, ಈ ಸಂಸಾರ ಬಂಧದಿಂದ ಬಿಡುಗಡೆ ಬಯಸಿ ಭಗವಂತನ ಮೊರೆ ಹೋಗುತ್ತಾರೆ ಮತ್ತು ಸಾಧನೆ ಮಾಡುತ್ತಾರೆ. ಸಾಮಾನ್ಯವಾಗಿ ಏನನ್ನೂ ಬಯಸದೇ ಇರುವುದು ಶ್ರೇಷ್ಠ, ಆದರೆ ಬಯಸುವುದೇ ಜೀವನ ಧರ್ಮವಾಗಿದ್ದಾಗ ಇನ್ನೇನನ್ನೋ ಬಯಸದೆ ಮೋಕ್ಷವನ್ನು ಬಯಸುವುದು ಶ್ರೇಷ್ಠ. ಈ ಶ್ಲೋಕದಲ್ಲಿ ಕೃಷ್ಣ ಮೋಕ್ಷಕ್ಕೆ ಹೋಗುವ ಸಾಧಕನ ಪ್ರಯತ್ನ ಏನು, ಜ್ಞಾನದ ದಾರಿಯಲ್ಲಿ ಹೇಗೆ ಸಾಗಬೇಕು ಅನ್ನುವ ಅದ್ಭುತ ವಿಚಾರವನ್ನು ವಿವರಿಸುತ್ತಾನೆ.
ಅಧ್ಯಾತ್ಮದಲ್ಲಿ ತಿಳಿದುಕೊಳ್ಳಬೇಕಾದ ಸಂಗತಿ ಬ್ರಹ್ಮಎನ್ನುತ್ತಾನೆ ಕೃಷ್ಣ. ಬ್ರಹ್ಮ ಎನ್ನುವ ಪದ ಅವ ವೃದ್ದೋಅನ್ನುವ ದಾತುವಿನಿಂದ ಬಂದಿದೆ. ಅವತಿ ಎಂದರೆ ಎಲ್ಲಕ್ಕಿಂತ ದೊಡ್ಡದು ಅದು ಓಂ. ಅಂದರೆ ಅನಾಧಿನಿತ್ಯ, ಸರ್ವ ಗುಣಪೂರ್ಣ, ಸರ್ವಗತ, ಸರ್ವಸಮರ್ಥ ಭಗವಂತ ಬ್ರಹ್ಮ- ಅವನೇ ಓಂ. ಮುಖ್ಯವಾಗಿ ಈ ಶ್ಲೋಕದಲ್ಲಿತೇ ಬ್ರಹ್ಮ ತದ್ ವಿದುಃಅಂದರೆ ಎಲ್ಲಾ ಕಡೆ ಇರುವ ಭಗವಂತನನ್ನು ತಿಳಿಯುತ್ತಾರೆಎಂದರ್ಥ. ಭಗವಂತನ ಸರ್ವಗತತ್ವದ ಸಾಕ್ಷಾತ್ಕಾರವೇ ಬ್ರಹ್ಮಸಾಕ್ಷಾತ್ಕಾರ. ಬಿಂಬಸಾಕ್ಷಾತ್ಕಾರ ಅಂದರೆ ನಮ್ಮೊಳಗಿರತಕ್ಕಂತಹ ಅಣೋರಣೀಯವಾಗಿರುವ ಭಗವಂತನ ಸಾಕ್ಷಾತ್ಕಾರ. ಇಂತಹ ಬಿಂಬರೂಪಿ ಭಗವಂತನೇ ಇಡೀ ವಿಶ್ವದಲ್ಲಿ ವ್ಯಾಪ್ತನಾಗಿ ತುಂಬಿದ್ದಾನೆ ಎನ್ನುವುದು ಬ್ರಹ್ಮಸಾಕ್ಷಾತ್ಕಾರ. ಭಗವಂತನ ವ್ಯಾಪ್ತ ರೂಪವನ್ನು ನಾವು ಕಾಣಲು ಸಾಧ್ಯವಿಲ್ಲ. ಆದರೆ ಆ ವ್ಯಾಪ್ತಿಯ ಅರಿವು ಬಹಳ ಮುಖ್ಯ. ಸೌರಶಕ್ತಿಯಲ್ಲಿ ತುಂಬಿ ಇಡೀ ಪ್ರಪಂಚವನ್ನು ಬೆಳಗಿಸುವವನೂ ಅವನೆ, ನನ್ನೊಳಗಿದ್ದು ಬೆಳಗಿಸುವವನೂ ಅವನೆ ಎನ್ನುವ ಅರಿವು ಆತ್ಮ ಸಾಕ್ಷಾತ್ಕಾರ. ಬಲಿಚಕ್ರವರ್ತಿಗೆ ಆದ ಅನುಭವ ಕೂಡಾ ಇದೇ. ನಿಮಗೆ ತಿಳಿದಿರುವಂತೆ ವಾಮನ ರೂಪಿ ಭಗವಂತ, ಮಹಾ ದಾನಿ ಬಲಿಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಶುಕ್ರಾಚಾರ್ಯರ ವಿರೋಧವನ್ನು ಲೆಕ್ಕಿಸದೆ ಬಲಿ ವಾಮನನಿಗೆ ದಾನ ಮಾಡಲು ಮುಂದಾಗುತ್ತಾನೆ. ಆಗ ವಾಮನನು ತನ್ನ ಮೊದಲ ಹೆಜ್ಜೆಯಿಂದ ಭೂಮಿಯನ್ನೂ ಮತ್ತು ಎರಡನೇ ಹೆಜ್ಜೆಯಿಂದ ಆಕಾಶವನ್ನು ಆವರಿಸಿದಾಗ , ಮೂರನೇ ಹೆಜ್ಜೆಗೆ ಬಲಿ ತನ್ನ ತಲೆಯನ್ನು ಅರ್ಪಿಸಿ ಪಾತಳವನ್ನು ಸೇರಿ ಉದ್ದಾರವಾಗುತ್ತಾನೆ. ಈ ಕಥೆಯನ್ನು ನಾವು ಸ್ವಲ್ಪ ಆಳವಾಗಿ ವಿಶ್ಲೇಷಿಸಿದರೆ ಕಥೆಯಲ್ಲಿ ಅಡಗಿರುವ ಸಾರ ತಿಳಿಯುತ್ತದೆ. ಸಂಸಾರ ಸಾಗರದಲ್ಲಿ ಮುಳುಗಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಬಲಿಗಳು. ಭಗವಂತನ ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆದ್ಯಾತ್ಮಿಕವಾಗಿ ಬಲಿಷ್ಟರಾಗಬೇಕು. ಉಪಾಸನೆಯಲ್ಲಿ ಪ್ರಮುಖವಾಗಿ ಮೂರೂ ಹೆಜ್ಜೆಗಳಿವೆ. ಮೊದಲನೆಯದು ಭಗವಂತನ ಪುಟ್ಟ (ವಾಮನ) ಮೂರ್ತಿಯನ್ನು ದೇವರು ಎಂದು ಆರಾದಿಸುವುದು. ಎರಡನೆಯದು ಉಪಾಸನೆ ಮಾಡುತ್ತಾ ಮಾಡುತ್ತಾ , ಭಗವಂತ ಕೇವಲ ಮೂರ್ತಿಯಲ್ಲಿ ಅಲ್ಲದೆ, ಇಡೀ ಲೋಕದಲ್ಲಿ ವ್ಯಾಪಿಸಿರುವ ಶಕ್ತಿ ಎಂದು ತಿಳಿಯುವುದು. ಪ್ರಮುಖವಾದ ಮೂರನೇ ಹೆಜ್ಜೆ- ಭಗವಂತ ಸರ್ವಾಂತರ್ಯಾಮಿ, ಆತ ನನ್ನೊಳಗೂ ತುಂಬಿದ್ದಾನೆ ಎಂದು ತಿಳಿದು, ಆ ಪರಶಕ್ತಿಗೆ ತಲೆಬಾಗುವುದು. ಆಗ ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ, ಹಾಗು ಭಗವಂತ ನಮ್ಮನ್ನು ಉದ್ದರಿಸುತ್ತಾನೆ. ಬಲಿ ಭಗವಂತ ನನ್ನೊಳಗೆ ಅಂತರ್ಯಾಮಿ(ಆತ್ಮನಿ ವೇದನಂ) ಎಂದು ತಿಳಿದು ಭಗವಂತನಿಗೆ ತನ್ನನ್ನು ಅರ್ಪಿಸಿಕೊಂಡ(ಆತ್ಮ ನಿವೇದನಂ)ಅಥವಾ ತನ್ನ ತಲೆಯನ್ನು ಕೊಟ್ಟ. ಇದು ಮೂರು ಹೆಜ್ಜೆಯ ಪರಿಕಲ್ಪನೆ.
ಭಗವಂತ ಸರ್ವಗತ-ಸರ್ವಸಮರ್ಥ, ಅವನು ಎಲ್ಲವುದರ ಒಳಗೂ ಇದ್ದು ಎಲ್ಲವನ್ನು ಮಾಡುತ್ತಿದ್ದಾನೆ. ಅವನ ಅಧೀನವಾಗಿರತಕ್ಕ ಪ್ರತಿಬಿಂಬ ಈ ಜೀವ ಎನ್ನುವ ಸತ್ಯ ತಿಳಿದಾಗ ಎಲ್ಲ ಕರ್ಮದ ರಹಸ್ಯ ತಿಳಿಯುತ್ತದೆ. ಆದ್ದರಿಂದ ಅಧ್ಯಾತ್ಮದಲ್ಲಿ ತಿಳಿಯಬೇಕಾದ ಮೊದಲ ಮೂರು ವಿಚಾರ ಎಂದರೆ ಭಗವಂತನ ಪ್ರತಿಬಿಂಬವಾದ ಜೀವ, ಪರಿಪೂರ್ಣ ಮತ್ತು ಸರ್ವಸಮರ್ಥನಾದ ಬ್ರಹ್ಮ, ಆ ಅನಂತ ಸಾಮರ್ಥ್ಯದಿಂದ ನಡೆಯುವ ಕರ್ಮ. ಇದೇ ಬ್ರಹ್ಮ-ಕರ್ಮ-ಅಧಿಆತ್ಮ. ಈ ಮೂರು ವಿಚಾರವಲ್ಲದೆ ಇನ್ನೂ ಮೂರು ವಿಷಯಗಳನ್ನೂ ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
·  ಶ್ಲೋಕ - 30
ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ ।
ಪ್ರಯಾಣಕಾಲೇSಪಿ ಚ ಮಾಂ ತೇ ವಿದುರ್ಯುಕ್ತಚೇತಸಃ ೩೦॥
ಸ ಅಧಿ ಭೂತ ಅಧಿದೈವಮ್ ಮಾಮ್ ಸ ಅಧಿಯಜ್ಞಮ್ ಚ ಯೇ ವಿದುಃ ।
ಪ್ರಯಾಣ ಕಾಲೇ ಅಪಿ ಚ ಮಾಮ್ ತೇ ವಿದುಃ ಯುಕ್ತ ಚೇತಸಃ ಯಾರು ಅಧಿಭೂತ’ –‘ಅಧಿದೈವದ ಜತೆಗೆ ನನ್ನನ್ನು ತಿಳಿಯುತ್ತಾರೆ ; ತಿಳಿದು ಕೊನೆಯ ಕ್ಷಣದಲ್ಲು ನನ್ನನ್ನು ನೆನೆಯುತ್ತಾರೆ, ನನ್ನಲ್ಲೆ ಬಗೆಯಿಟ್ಟ ಅಂಥವರೆ ನನ್ನನ್ನು ಬಲ್ಲವರು.
ಭಗವಂತನ ಅರಿವು ಮೂಡಬೇಕಾದರೆ ಮೊದಲು ಭೌತವಿಜ್ಞಾನ(ಅಧಿಭೂತ)ದ ಅರಿವಿರಬೇಕು. ಪಂಚ ಭೂತಗಳು, ಈ ದೇಹ, ಬ್ರಹ್ಮಾಂಡ, ಪಿಂಡಾಂಡ, ಇಲ್ಲಿರುವ ದ್ರವ್ಯಗಳ ಅರಿವು ಸಾಧನೆಯ ಮೊದಲ ಹೆಜ್ಜೆ. ಅಧಿಭೂತದ ನಂತರ ಅಧಿದೈವದ ಅರಿವು. ನಮ್ಮ ಪಂಚಭೂತಾತ್ಮಕವಾದ ಶರೀರದಲ್ಲಿನೋಡುವುದು, ಕೇಳುವುದು, ಅನುಭವಿಸುವುದುಇತ್ಯಾದಿ ಕ್ರಿಯೆ ನಿಯಮಬದ್ಧವಾಗಿ ಹೇಗೆ ನಡೆಯುತ್ತದೆ? ಜಡದಲ್ಲಿ ಕ್ರಿಯೆ ಇಲ್ಲ, ಬದಲಿಗೆ ಅದರ ಹಿಂದಿರುವ ಅಭಿಮಾನಿ ದೇವತೆಗಳು ಒಂದೊಂದು ಇಂದ್ರಿಯದಲ್ಲಿದ್ದು ಒಂದೊಂದು ಕ್ರಿಯೆಯನ್ನು ನಿಯಂತ್ರಿಸುತ್ತಿದ್ದಾರೆ-ಇದು ಅಧಿದೈವದ ತಿಳುವಳಿಕೆ. ಇಂತಹ ಸಹಸ್ರಾರು ದೇವತೆಗಳನ್ನು ನಿಯಂತ್ರಿಸುವ ಅಧ್ಯಕ್ಷ ಆ ಭಗವಂತ. ಈ ಪ್ರಪಂಚದಲ್ಲಿ ಅಥವಾ ಪಿಂಡಾಂಡದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆ ಒಂದು ಯಜ್ಞ. ಆ ಯಜ್ಞವನ್ನು ಅಧ್ಯಕ್ಷನಾಗಿ ನಡೆಸುವವನು ಅಧಿಯಜ್ಞ. ಆತ ಸಮಸ್ತ ದೇವತೆಗಳ ನಿಯಾಮಕನಾದ ಭಗವಂತ.
ಒಟ್ಟಿನಲ್ಲಿ ನಾವು ಆರು ವಿಚಾರವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ೧. ಅಧಿಭೂತ-ಭೌತಿಕ ಪ್ರಪಂಚ.; ೨. ಅಧಿಆತ್ಮ-ಜೀವಾತ್ಮ ; ೩. ಅಧಿದೈವ-ಸಮಸ್ತ ತತ್ವಾಭಿಮಾನಿ ದೇವತೆಗಳು ; ೪. ಅಧಿಯಜ್ಞ-ಸರ್ವ ನಿಯಾಮಕ ಭಗವಂತ; ೫. ಬ್ರಹ್ಮ ಸಾಕ್ಷಾತ್ಕಾರ -ಅಂತರ್ಯಾಮಿಯಾಗಿರುವ ಬಿಂಬ ರೂಪಿ ಭಗವಂತನೇ ಎಲ್ಲಾ ಕಡೆ ತುಂಬಿದ್ದಾನೆ ಎನ್ನುವ ಅರಿವು; ೬. ಎಲ್ಲಾ ಕರ್ಮಗಳೂ ಆ ಭಗವಂತನ ಅಧೀನವಾಗಿ ನಡೆಯುತ್ತವೆ ಎನ್ನುವ ಸತ್ಯ.
ಈ ಆರು ವಿಚಾರಗಳೂ ನಮ್ಮ ಜೀವನದ ಕೊನೆಯ ಕ್ಷಣದಲ್ಲಿ(ದೇಹ ತ್ಯಾಗ ಮಾಡುವಾಗ)ಕೂಡ ನಮ್ಮ ಮನದಲ್ಲಿ ಗಾಢವಾಗಿ ನಿಂತಿರಬೇಕು. ನಾವು ದೇಹ ತ್ಯಾಗ ಮಾಡುವಾಗ ನಮ್ಮ ಮನದಲ್ಲಿ ಯಾವುದು ಗಾಢವಾಗಿ ನಿಂತಿರುತ್ತದೋ ಅದು ನಮ್ಮ ಮುಂದಿನ ಜನ್ಮವನ್ನು ನಿರ್ಧರಿಸುತ್ತದೆ. ಇದಕ್ಕಾಗಿ ಜೀವಮಾನದಲ್ಲಿ ಭಗವಂತನ ಅರಿವು ಬಹಳ ಮುಖ್ಯ. ಸಾಧನೆಯಲ್ಲಿ ಎಂದೂ ಯಾವುದೇ ಮೋಹಕ್ಕೊಳಗಾಗದೆ, ಅಂತ್ಯಕಾಲದಲ್ಲೂ ಸದಾ ಭಗವಂತನನ್ನು ಚಿಂತಿಸುವವನು ನನ್ನನ್ನು ಸೇರುತ್ತಾನೆಎನ್ನುತ್ತಾನೆ ಕೃಷ್ಣ.
ಹೀಗೆ ಈ ಅಧ್ಯಾಯದಲ್ಲಿ ಜ್ಞಾನದ ವೈಭವವನ್ನು ನಮ್ಮ ಮುಂದೆ ತೆರೆದಿಟ್ಟ ಕೃಷ್ಣ, ಮುಂದಿನ ಅಧ್ಯಾಯದಲ್ಲಿ ಅಧಿಭೂತ, ಅಧಿದೈವ, ಅಧಿಆತ್ಮ, ಅಧಿಯಜ್ಞ, ಬ್ರಹ್ಮ, ಕರ್ಮ ಇದರ ವಿಸ್ತಾರವಾದ ವಿವರಣೆಯನ್ನು ವಿವರಿಸುತ್ತಾನೆ.
ಇತಿ ಸಪ್ತಮೋSಧ್ಯಾಯಃ
ಏಳನೆಯ ಅಧ್ಯಾಯ ಮುಗಿಯಿತು

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.