ದುರಾಸೆಯ ದಾರಿಹೋಕ

           ಬೋಧಿಸತ್ವನ ಅನೇಕ ಅವತಾರಗಳಲ್ಲಿ, ಬ್ರಹ್ಮದತ್ತ ಎಂಬ ಚಂದಿರನಂತೆ ಹೊಳೆವ ಬಿಳಿ ಬಣ್ಣದ ಆನೆಯೂ ಒಂದು. ತನ್ನ ಸಹಪಾಟಿ ಆನೆಗಳು ಮರವನ್ನು ಮುರಿಯುವುದು, ಇತರ ಪ್ರಾಣಿಗಳನ್ನು ಹಿಂಸಿಸುವುದು ಮುಂತಾದ ಕಾರ್ಯಗಳನ್ನು ಮಾಡುತಿದ್ದರೆ, ಬ್ರಹ್ಮದತ್ತ ಮಾತ್ರ ಯಾರಿಗೂ ತೊಂದರೆ ಕೊಡದೆ, ಬದಲಿಗೆ ಎಲ್ಲರಿಗೂ ತನ್ನ ಕೈಲಾದ ಸಹಾಯ ಮಾಡುತ್ತಾ ಬದುಕುತಿತ್ತು.
       ಒಮ್ಮೆ ದಾರಿಹೋಕನೊಬ್ಬ ಬ್ರಹ್ಮದತ್ತನಿದ್ದ ಕಾಡನ್ನು ದಾಟಬೇಕಾಗಿತ್ತು. ಕಾಡನ್ನು ದಾಟುವಾಗ ದಾರಿ ತಪ್ಪಿದ ದಾರಿಹೋಕ, ಭಯಭೀತನಾಗಿ ದಾರಿ ಹುಡುಕುತಿದ್ದಾಗ, ಬ್ರಹ್ಮದತ್ತ ಎದುರಿಗೆ ಬಂದ. ಬ್ರಹ್ಮದತ್ತನನ್ನು ಕಂಡ ದಾರಿಹೋಕ, ಎದ್ನೋ ಬಿದ್ನೋ ಎಂದು ಓಡಲು ಆರಂಭಿಸಿದ. ಬ್ರಹ್ಮದತ್ತ ಕೂಡಾ ದಾರಿಹೋಕನನ್ನು ಹಿಂಬಾಲಿಸಿದ.
ಸ್ವಲ್ಪ ಹೊತ್ತಿಗೆ ಅನೆ ತನ್ನನ್ನು ಅಟ್ಟಿಸಿಕೊಂಡು ಬರುತ್ತಿಲ್ಲ ಬದಲಿಗೆ ಹಿಂಬಾಲಿಸುತ್ತಿದೆ ಎಂಬುದು ದಾರಿಹೋಕನ ಅರಿವಿಗೆ ಬಂತು. ಪರೀಕ್ಷಿಸಲು ದಾರಿಹೋಕ ನಿಂತ, ಆನೆ ಕೂಡಾ ನಿಂತಿತು. ದಾರಿಹೋಕ ನಡೆದರೆ ಅನೆ ಕೂಡಾ ನಡೆಯಲಾರಂಭಿಸಿತು. ಕೊನೆಗೆ ಧೈರ್ಯ ಮಾಡಿ ದಾರಿಹೋಕ ಆನೆಗೆ ಎದುರಾಗಿ ನಿಂತ. ಅವನ ಆಶ್ಚರ್ಯಕ್ಕೆ ಪಾರವೇ ಇಲ್ಲದಂತೆ, ಆನೆ ಮಾತಾಡಿತು.
“ನೀನು ಹೆದರಿರುವಂತಿದೆ, ನನ್ನಿಂದ ಏನಾದರೂ ಸಹಾಯ ಬೇಕೇ?” ಎಂದು ಆನೆ ಕೇಳಿತು.
ದಾರಿಹೋಕ, “ಈ ಕಾಡಿನಲ್ಲಿ ನನ್ನ ದಾರಿ ತಪ್ಪಿದೆ, ನಾನು ಕಾಶಿಗೆ ಹೋಗಬೇಕಾಗಿದೆ”, ಎಂದನು.
“ನನ್ನ ಜೊತೆ ನನ್ನ ಮನೆಗೆ ಬಂದು ವಿಶ್ರಾಂತಿ ತೆಗೆದುಕೋ, ನಂತರ ನಾನು ನಿನ್ನ ಕಾಶಿಯ ದಾರಿಯನ್ನು ತೋರಿಸುವೆ”, ಎಂದಿತು ಬಿಳಿ ಆನೆ.
        ಅನೆ ತನ್ನ ಗುಹೆಯಲ್ಲಿ ದಾರಿಹೊಕನಿಗೆ ಹಣ್ಣು ಹಂಪಲು ಗಳನ್ನೂ ಇತ್ತು, ಆತನ ಉಟವಾದ ಮೇಲೆ ಮಲಗಲು ಏರ್ಪಾಟು ಮಾಡಿಕೊಟ್ಟಿತು. ಸ್ವಲ್ಪ ದಿನ ಆನೆಯ ಗುಹೆಯಲ್ಲಿ ವಾಸವಾಗಿದ್ದು, ನಂತರ ನಾನು ವಾರಣಾಸಿಗೆ ಹೋರಾಡಬೇಕು ಎಂದು ಹೇಳಿದಾಗ, ಆನೆ ತನ್ನ ಬೆನ್ನ ಮೇಲೆ ಆತನನ್ನು ಕೂರಿಸಿಕೊಂಡು, ವಾರಣಾಸಿಯ ದಾರಿಯ ತನಕ ಕರೆದೊಯ್ದು ದಾರಿಹೋಕನನ್ನು ಬೀಳ್ಕೊಟ್ಟಿತು.ದಾರಿಹೋಕ ಆನೆಯ ಬೆನ್ನ ಮೇಲೆ ಸವಾರಿ ಮಾಡುತ್ತಾ, ಆನೆಯ ಗುಹೆಯ ಮಾರ್ಗವನ್ನು ಮನಸ್ಸಿನಲ್ಲಿ ಗುರುತು ಹಾಕಿಕೊಂಡಿದ್ದ. ಆನೆಗೆ ಧನ್ಯವಾದಗಳನ್ನು ತಿಳಿಸುತ್ತ ಹೊರಡಲು ಅನುವಾದಾಗ, ಆನೆ, “ನನ್ನ ಇರುವನ್ನು ಬೇರೆ ಯಾರಿಗೂ ತಿಳಿಸಬೇಡ” ಎಂದು ಕೇಳಿಕೊಂಡಿತು. ಆಗಲಿ ಎಂದು ದಾರಿಹೋಕ ವಾರಣಾಸಿಯ ದಾರಿ ಹಿಡಿದ.
ವಾರಣಾಸಿಯಲ್ಲಿ ದಾರಿಹೋಕ ಒಮ್ಮೆ ದಂತದ ವ್ಯಾಪಾರಿಯೊಬ್ಬನನ್ನು ಭೇಟಿಯಾಗಬೇಕಾದ ಪ್ರಸಂಗ ಒದಗಿತು.ಮಾತು ಮಾತಿನಲ್ಲಿ ದಂತದ ಬೆಲೆಯನ್ನು ಅರಿತ ದಾರಿಹೋಕ, ವ್ಯಾಪರಿಯನ್ನು, ಜೀವಂತ ಆನೆಯ ದಂತಕ್ಕೆ ಎಷ್ಟು ಬೆಲೆ, ಎಂದು ಕೇಳಿದಾಗ, ವ್ಯಾಪಾರಿಯು, ಜೀವಂತ ಆನೆಯ ದಂತ ಸತ್ತ ಆನೆಯ ದಂತಕ್ಕಿಂತ ಹೆಚ್ಚು ಬೆಲೆಬಾಳುತ್ತದೆ ಎಂದು ಉತ್ತರಿಸಿದನು.
ಆ ರಾತ್ರಿಯೆಲ್ಲಾ ದಾರಿಹೊಕನಿಗೆ ನಿದ್ದೆ ಬರಲಿಲ್ಲ, ಬರಿ ಆನೆಯ ದಂತ, ಹಾಗು ಅದನ್ನು ಮಾರಿದರೆ ಬರುವ ಹಣ, ಹಣದಿಂದ ತಾನು ಕೊಳ್ಳಬಹುದಾದ ವಸ್ತುಗಳು, ಇವು ಆತನ ಮನಸ್ಸಿನಲ್ಲಿ ಕೊರೆಯಲಾರಂಭಿಸಿದವು. ಬೆಳಿಗ್ಗೆ ಎದ್ದವನೇ, ಗರಗಸವನ್ನು ತನ್ನ ಜೋಳಿಗೆಗೆ ಹಾಕಿಕೊಂಡು ಕಾಡಿನ ಹಾದಿ ಹಿಡಿದ.
          ದಾರಿಹೋಕನನ್ನು ಕಂಡ ಬ್ರಹ್ಮದತ್ತ, ಆಶ್ಚರ್ಯದಿಂದ, “ಏನಿಲ್ಲಿ ಮತ್ತೆ?” ಎಂದು ಕೇಳಿದಾಗ, ದಾರಿಹೋಕ, “ಏನು ಹೇಳಲಿ, ಮೈತುಂಬಾ ಸಾಲ, ನಿನ್ನಿಂದ ಸ್ವಲ್ಪ ಸಹಾಯ ವಾಗಬೇಕಲ್ಲಾ” ಎಂದು ಕೇಳಿಕೊಂಡನು
ಅದಕ್ಕೆ ಬ್ರಹ್ಮದತ್ತ, “ಏನು ಬೇಕಾಗಿತ್ತು?” ಎಂದು ಕೇಳಿದಾಗ,
ದಾರಿಹೋಕ, “ನಿನ್ನ ದಂತ ಒಂದು ಚೂರು ಬೇಕಾಗಿತ್ತು” ಎಂದು ಕೇಳುತ್ತಾನೆ.
ಅದಕ್ಕುತ್ತರವಾಗಿ ಬ್ರಹ್ಮದತ್ತ,”ನನಗೇನು ತೊಂದರೆಯಿಲ್ಲ, ಆದರೆ ನೀನೆ ನನ್ನ ದಂತವನ್ನು ಕತ್ತರಿಸಿ ಕೊಳ್ಳಬೇಕು” ಎಂದಾಗ, ದಾರಿಹೋಕ, “ಓಹೋ ನಾನಾಗಲೇ ಅದಕ್ಕೆ ಸಜ್ಜಾಗಿ ಬಂದಿದ್ದೇನೆ” ಎಂದು ಜೋಳಿಗೆಯಿಂದ ಗರಗಸವನ್ನು ತೆಗೆದು ಎರಡೂ ದಂತಗಳಿಂದ ಚೂರು ಭಾಗವನ್ನು ಕತ್ತರಿಸಿಕೊಂಡು, ವಾರಣಾಸಿಯ ದಾರಿ ಹಿಡಿಯಲು ಅನುವಾದ. ಆತ ಹೊರಡುವ ಮುನ್ನ ಆನೆ, “ಇದು ಬರಿ ದಂತದ ಚೂರಲ್ಲ, ಇದರಲ್ಲಿ ಸಮಸ್ತ ವಿವೇಕವೂ ಅಡಗಿದೆ”, ಎಂದು ಹೇಳಿ ಬೀಳ್ಕೊಟ್ಟಿತು.
ವಾರಣಾಸಿಯಲ್ಲಿ ದಂತವನ್ನು ಮಾರಿದಾಗ, ತಾನು ಎಣಿಸಿದ್ದಕ್ಕಿಂತ ಹೆಚ್ಚು ಹಣ ದೊರೆತಾಗ ಕುಶಿಯಾಗಿ, ತನಗೆ ಬೇಕಾದಂತೆ ಹಣವನ್ನು ಕರ್ಚು ಮಾಡಲಾರಂಭಿಸಿದ. ಕುಳಿತು ಉಣ್ಣುವವನಿಗೆ ಕುಡಿಕೆ ಹಣ ಸಾಲದು ಎಂಬಂತೆ, ದಾರಿಹೋಕ, ಕೆಲವು ದಿನಗಳಲ್ಲಿ ತನ್ನಲ್ಲಿದ್ದ ಹಣವನ್ನು ಕಳೆದುಕೊಂಡಿದ್ದ. ಆ ದಿನ ರಾತ್ರಿ ದಾರಿಹೂಕನಿಗೆ ಮತ್ತೆ ನಿದ್ರೆ ಬರಲಿಲ್ಲ, ದುರಾಸೆಯಿಂದ ಆನೆಯ ಉಳಿದ ದಂತವನ್ನು ಪಡೆಯುವ ಹಂಚಿಕೆ ಹೂಡಿದ. ಬೆಳಿಗ್ಗೆ ಎದ್ದು ಕಾಡಿನ ಹಾದಿ ಹಿಡಿದ.
       ದಾರಿಹೋಕನನ್ನು ಕಂಡು ಬ್ರಹ್ಮದತ್ತ, ಮತ್ತೆ ಬರಲು ಕಾರಣ ಕೇಳಿತು. ದಾರಿಹೋಕ ಎಂದಿನಂತೆ, ತನ್ನ ಸಾಲದ ಮಾತನ್ನು ಮುಂದೊಡ್ಡಿ, ಆನೆಯ ಉಳಿದ ದಂತವನ್ನು ಬೇಡಿದ. ಅನೆ ಸಂತೋಷದಿಂದ, ತನ್ನ ದಂತವನ್ನು ದಾರಿಹೋಕನ ಗರಗಸಕ್ಕೆ ಒಡ್ಡಿಕೊಂಡಿತು. ಆನೆಗೆ ನೋವಾಗುತಿದ್ದರೂ, ಕೊಂಚವೂ ದಂತವನ್ನು ಬಿಡದಂತೆ, ಅದರ ಬುಡದವರೆಗೆ ಕತ್ತರಿಸಿದ. ಇನ್ನು ಕೊಡಲು ಏನೂ ಇಲ್ಲದ ಅನೆಯಿಂದ ತನಗೇನೂ ಲಾಭವಿಲ್ಲದುದನ್ನು ಅರಿತು, ನೋವಿನಿಂದ ಮಲಗಿದ್ದ ಆನೆಗೆ ಧನ್ಯವಾದ ಕೂಡಾ ಹೇಳದೆ ಮನೆಯ ಹಾದಿ ಹಿಡಿದ.
          ಆದರೆ, ದಾರಿಹೋಕನ ಸಂತೋಷ ಹೆಚ್ಚು ಕ್ಷಣ ಉಳಿಯಲಿಲ್ಲ. ಕಾಡಿನ ಹಾದಿಯಲ್ಲಿ, ಇದ್ದಕ್ಕಿದ್ದಂತೆ ಹರಡಿದ ಕಾಳ್ಗಿಚ್ಚಿನಲ್ಲಿ ಸಿಕ್ಕಿದ. ತಾನು ಮಾಡಿದ ಪಾಪ ಅರಿವಾದರೂ ಸಮಯ ಮೀರಿದ್ದರಿಂದ ಕಾಳ್ಗಿಚ್ಚಿನಲ್ಲಿ ಸುಟ್ಟು ಭಸ್ಮವಾಗಿ ಹೋದ.
ಇತ್ತ ಬ್ರಹ್ಮದತ್ತ, ಕೆಲ ದಿವಸ ನೋವಿನಲ್ಲಿ ಕಳೆದು ನಂತರ ತನ್ನ ಎಂದಿನ ದೈನಂದಿನ ಜೀವನಕ್ಕೆ ಮರಳಿ ಸುಖವಾಗಿತ್ತು.

ಕಾಮೆಂಟ್‌ಗಳಿಲ್ಲ: